Posts

ಅಪೂರ್ಣ ಕಥೆ

ನಮ್ಮ ಊರಿನಲ್ಲಿ ಕಥೆ ಹೇಳುವವನೊಬ್ಬನಿದ್ದ. ದುಡ್ಡು ಕೊಟ್ಟರೆ ಯಾವ್ಯಾವುದೋ ಕಥೆಗಳನ್ನೆಲ್ಲ ಜೋಡಿಸಿ ಹೊಸ ಕಥೆ ಕಟ್ಟಿ ಹೇಳುತ್ತಿದ್ದ. ಕೆಲವು ಸಲ ಕಥೆಯನ್ನು ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿ ರೂಪಾಯಿ ಕೊಟ್ಟರೆ ಮಾತ್ರ ಮುಂದುವರೆಸುತ್ತಿದ್ದ. ಸಣ್ಣಂದಿನಲ್ಲಿ ನಾನು ಕೈಯಲ್ಲಿ ಸ್ವಲ್ಪ ದುಡ್ಡು ಸೇರಿದಾಗ ಹೋಗಿ ಇವನ ಕಥೆ ಕೇಳುತ್ತಿದ್ದೆ. ಎಷ್ಟೋ ಸಲ ದುಡ್ಡು ಖಾಲಿಯಾಗಿ ಅರ್ಧ ಕಥೆ ಕೇಳಿ ವಾಪಾಸು ಬರುತ್ತಿದ್ದೆ. ಒಮ್ಮೆ ಅವನು ಒಂದು ಕಥೆ ಶುರು ಮಾಡಿದ : "ಒಂದಾನೊಂದು ಕಾಲದಲ್ಲಿ ಒಬ್ಬ ಇದ್ದ. ಅವನ ಊರಿನಲ್ಲಿ ಎಲ್ಲರೂ ಅರ್ಥವಿಲ್ಲದ ಮಾತಾಡುತ್ತಿದ್ದರು.  ಗುರಿಯಿಲ್ಲದೆ ಬದುಕುತ್ತಿದ್ದರು. ಎಷ್ಟೋ ಜನ ಏನನ್ನೂ ಮಾಡದೆ ಸುಮ್ಮನೆ ಕುಳಿತಿರುತ್ತಿದ್ದರು. ಈ ಜನರ ರೀತಿ ಅವನಿಗೆ ಬೇಸರ ತರಿಸಿತು. ಅವನು ಆ ಊರನ್ನು ಬಿಟ್ಟು ನಡೆದ. ನಡೆಯುತ್ತಾ ಒಂದು ಹೊಸ ಊರನ್ನು ತಲುಪಿದ. ಈ ಊರಿನಲ್ಲಿ ಎಲ್ಲರೂ ತುಂಬ ಅರ್ಥವತ್ತಾಗಿ ಮಾತಾಡುತ್ತಿದ್ದರು. ಎಲ್ಲರೂ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಿದ್ದರು. ಸೋಮಾರಿತನ ಯಾರಲ್ಲೂ ಇರಲಿಲ್ಲ. ಅವನು ಆ ಊರಲ್ಲೇ ಉಳಿದ. ಆ ಊರು ಅವನಿಗೆ ಬದುಕಲ್ಲೊಂದು ಗುರಿಯನ್ನು ಕಲಿಸಿತು. ಆ ಊರಿನಲ್ಲಿ ಎಲ್ಲರೂ ಎಲ್ಲರನ್ನೂ ಪೂರ್ತಿಯಾಗಿ ಅರ್ಥ ಮಾಡಿಕೊಂಡಿದ್ದರು. ಎಲ್ಲರೂ ಎಲ್ಲರಿಗೂ ಬಹಳ ಮರ್ಯಾದೆ ಕೊಟ್ಟು ಮಾತಾಡುತ್ತಿದ್ದರು. ಬದುಕಿಗೆ ಯಾವುದೋ ಒಂದು ಉದ್ದೇಶ ಇರುವಂತೆಯೂ, ಪ್ರತಿಯೊಬ್ಬರೂ ಒಂದು ಮಹತ್ತರವಾದ ಕಾರಣದ ಸಣ್ಣದೊ…

ಇಂದು ಬೆಳಿಗ್ಗೆ

ಬೋಳು ರಸ್ತೆಯಲ್ಲಿ ಸೈಕಲ್ಲು ತುಳಿಯುತ್ತ ಬಂದ ಪೇಪರಿನವನು, ರಾಕೆಟ್ಟು ಉಡಾಯಿಸಿದ ಸುದ್ದಿ ಹೊತ್ತ ಪತ್ರಿಕೆಯನ್ನು ಮೊದಲನೆ ಮಹಡಿಗೆ ಉಡಾಯಿಸಿ ಮತ್ತೆ ಸೈಕಲ್ಲು ತುಳಿಯುತ್ತ ಹೊರಟ.ರಸ್ತೆಯ ತುದಿಯಲ್ಲಿ ಪ್ರತ್ಯಕ್ಷನಾದ ಅಜ್ಜನ ಚಡ್ಡಿ ಬಹುಷಃ ಮೊಮ್ಮಗನದ್ದಿರಬೇಕು. ತಲೆಗೆ ಹಾಕಿದ ಮಂಕಿ-ಕ್ಯಾಪಿನ ಮೇಲೆ ದುಬಾರಿ ಹೆಡ್-ಫೋನ್ ಸಿಕ್ಕಿಸಿಕೊಂಡಿದ್ದಾನೆ - ಹಾಡು ಕೇಳಲಿಕ್ಕೋ? ಗಾಳಿ ತಡೆಯಲಿಕ್ಕೋ?ಮನೆಗೆ ಬೂದು ಬಣ್ಣದ ಪೈಂಟು ಬಳಿದು ಬ್ರಶ್ಶು ಕ್ಲೀನು ಮಾಡಿದವನ ದಯೆಯಿಂದ ಸಂಪಿಗೆ ಮರವೂ ಬೂದು ಚಡ್ಡಿಯ ಯೂನಿಫಾರ್ಮು ಧರಿಸಿದೆ.ಅಟ್ಟಹಾಸದಿಂದ ಗುಡುಗುತ್ತಾ ಹೊರಟ ಪಕ್ಕದ ಬೀದಿಯವನ ಎನ್ಫೀಲ್ಡಿನ ಜೋರಿಗೆ ಹೆದರಿದ ನೆರೆಮನೆಯವನ ಮಾರುತಿ ಎಂದಿನಂತೆ ತನ್ನ ಒಡೆಯನಿಗೆ ಮೊರೆಯಿಟ್ಟಿತು.ಹೊಸ ದಿನವೊಂದು ಉದಯಿಸಿತು. ಹೊಸ ತಲೆನೋವು, ಹೊಸ ಖುಷಿ, ಹೊಸದೇ ಬೇಜಾರುಗಳನ್ನು ಸರಬರಾಜು ಮಾಡಲು ರವಿ ತಾನು ಖುದ್ದಾಗಿ ನಮ್ಮ ಬಡಾವಣೆಗೆ ಬಂದ.

ಮಂಪರು ಮತ್ತು ಎಚ್ಚರ

ಕೋಣೆಯಲ್ಲಿ ಮಂದ ಬೆಳಕಿತ್ತು. ನಾನು ಮಲಗಿದ್ದೆ. ಅರ್ಧ ಎಚ್ಚರದಲ್ಲಿದ್ದೆ. ವರ್ಷ ತುಂಬದ ನನ್ನ ಮಗ ಇವತ್ತೇಕೋ ಬೇಗನೆ ಎಚ್ಚರವಾಗಿ ಹಾಸಿಗೆಯ ತುಂಬ ಹೊರಳಾಡುತ್ತಿದ್ದ. ಅವನ ಹೊರಳಾಟದಲ್ಲಿ ಆಗಾಗ ನನಗೆ ಗುದ್ದುತ್ತಿದ್ದ. ಅವನು ಗುದ್ದಿದಾಗೆಲ್ಲ ನನ್ನ ಮಂಪರು ಸ್ವಲ್ಪ ಕಡಿಮೆಯಾಗುತ್ತಿತ್ತು. ಅವನು ಅತ್ತ ಹೋಗುತ್ತಿದ್ದಂತೆ ಮಂಪರು ಮತ್ತೆ ಆವರಿಸುತ್ತಿತ್ತು. ಮಂಪರು ಮೂಡುತ್ತಿದ್ದಂತೆ ನನಗೆ ಇದರಲ್ಲೆಲ್ಲ ಯಾವುದೋ ಒಂದು ಕಥೆ ಇರುವಂತೆ ಅನ್ನಿಸತೊಡಗಿತು. ಅದೇನಿರಬಹುದೆಂದು ಯೋಚಿಸಲು ಎಚ್ಚರವಾದರೆ ಆ ಕಥೆ ಮಾಯವಾಗುತ್ತಿತ್ತು. ಆ ಕಥೆ ಬೆಳಗಿನ ಜಾವದ ಇಬ್ಬನಿಯಂತೆ ನನ್ನ ಕಣ್ಣಲ್ಲೇ ಕುಳಿತಂತೆಯೂ, ಕಣ್ಣು ಬಿಟ್ಟರೆ ಬೆಳಕಿನ ಬಿಸಿಗೆ ಅದು ಆವಿಯಾದಂತೆಯೂ ಮಂಪರಿನಲ್ಲಿ ನನಗೆ ಭಾಸವಾಗುತ್ತಿತ್ತು. ನಾನು ಕಣ್ಣು ಮುಚ್ಚಿದಾಗ ಇಲ್ಲೊಂದು ಹೊಸ ಲೋಕವೇ ಸೃಷ್ಟಿಯಾಗಿ, ಕಣ್ಣು ಬಿಟ್ಟ ಕ್ಷಣ ಅದು ನಾಶವಾದಂತೆಯೂ ಅನ್ನಿಸಿತು. ಮಂಪರಿನಲ್ಲಿ ಅದು ಇದ್ದಂತೆ ಅನ್ನಿಸಿ ಎಚ್ಚರದಲ್ಲಿ ಮಾಯವಾಗಿ ಸತಾಯಿಸುತ್ತಿತ್ತು. ಈ ಎಚ್ಚರ ಮತ್ತು ಮಂಪರಿನ ನಡುವಿನ ಯಾವ ಅವಸ್ಥೆಯಲ್ಲಿ ಆ ಕಥೆಯನ್ನು ಹಿಡಿದುಹಾಕಬಹುದೆಂದು ನನ್ನ ಮನಸ್ಸು ಚಿಂತಿಸುತ್ತಿತ್ತು. ನನ್ನ ಮಗ ಹೊರಳಾಡುತ್ತಾ ಬಂದು ನನ್ನ ದವಡೆಗೆ ಒಮ್ಮೆ ಗುದ್ದಿದ. ನಾನು ಏನೋ ಬಯ್ದುಕೊಳ್ಳುತ್ತಾ ಕಣ್ಣು ಬಿಟ್ಟೆ. ಕಥೆ ಮತ್ತೆ ಸುಟ್ಟು ಆವಿಯಾಯಿತು. ನನ್ನ ಮಗ ನಗುತ್ತಾ ಮಗ್ಗುಲಾದ.

ಮಾಸ್ ವರ್ಸಸ್ ಕ್ಲಾಸ್

'ಲುಟೇರಾ' ಮತ್ತು 'ಚೆನ್ನೈ ಎಕ್ಸ್‌ಪ್ರೆಸ್‌' ಬಿಡುಗಡೆಯಾದಾಗ ಕೆಲವರು ಲುಟೇರಾ‌ ಬೋರಿಂಗ್ ಸಿನಿಮಾ ಎಂದೂ ಚೆನ್ನೈ ಎಕ್ಸ್‌ಪ್ರೆಸ್‌ ತುಂಬಾ ಮಜವಾಗಿದೆಯೆಂದೂ ಹೇಳಿದಾಗ ನನಗೆ ತುಂಬಾ ಸಿಟ್ಟು ಬಂದಿತ್ತು. ಚೆನ್ನೈ ಎಕ್ಸ್‌ಪ್ರೆಸ್‌ ಸಿನಿಮಾ ಅಲ್ಲ, ಹಳೆಯ ದರಿದ್ರ ಜೋಕುಗಳ ಸಂಗ್ರಹವೆಂದು ನಾನು ಹೇಳಿದ್ದೆ. ಆಗಲೇ ಫೇಸ್‌ಬುಕ್ಕಿನಲ್ಲಿ ಎರಡೂ ಸಿನಿಮಾವನ್ನು ಹೋಲಿಸಿ ತುಂಬ ದುಃಖದ ಒಂದು ಪೋಸ್ಟ್ ಹಾಕಿದ್ದೆ 😀 ನಿಜಕ್ಕೂ ಎಲ್ಲೆಡೆ ಮಾಸ್ ವರ್ಸಸ್ ಕ್ಲಾಸಿನ ಯುದ್ಧ ನಡೆಯುತ್ತಿದೆಯೆಂದು ನಾನು ತಿಳಿದುಕೊಂಡಿದ್ದೆ.ಈಚೆಗೆ ನಾನು ಬಾಲಿವುಡ್ ನಿರ್ದೇಶಕರ ಕೆಲವು ಹಳೆಯ ಸಂದರ್ಶನಗಳನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಯಾವ ವಿಕ್ರಮಾದಿತ್ಯ ಮೊಟ್ವಾನೆಗೆ ಯಾವ ರೋಹಿತ್ ಶೆಟ್ಟಿಯಿಂದ ಅನ್ಯಾಯವಾಗುತ್ತಿದೆಯೆಂದು ನಾನು ತಿಳಿದುಕೊಂಡಿದ್ದೆನೋ, ಅದೇ ವಿಕ್ರಮಾದಿತ್ಯ ಮೊಟ್ವಾನೆ ಅದೇ ರೋಹಿತ್ ಶೆಟ್ಟಿಯ ಪಕ್ಕ ಕುಳಿತು ತಣ್ಣಗೆ ಹೇಳುತ್ತಾನೆ - 'ಯಾವ ಸಿನಿಮಾ ಕೂಡ ಸುಮ್ಮಸುಮ್ಮನೆ ಗೆಲ್ಲುವುದಿಲ್ಲ. ಒಂದು ಸಿನಿಮಾ ಹಣ ಮಾಡಿದೆಯೆಂದರೆ ಅದರಲ್ಲೇನೋ ಸರಿಯಿದೆಯೆಂದೇ ಅರ್ಥ.' ನನ್ನದು ಉತ್ತಮ ಕಥೆ, ಆದರೂ ಗೆಲ್ಲಲಿಲ್ಲ; ಈ ಮನುಷ್ಯ ಕೆಟ್ಟ ಸಿನಿಮಾ ಮಾಡಿದ್ದರೂ ದೊಡ್ಡ ಹೆಸರು ಮಾಡಿದ - ಎಂಬ ಯಾವ ಸಿಟ್ಟೂ ವಿಕ್ರಮಾದಿತ್ಯನಲ್ಲಿ ಇಲ್ಲ. ವಾಸ್ತವವನ್ನು ತುಂಬ ಸುಲಭವಾಗಿ ಒಪ್ಪಿಕೊಂಡಿದ್ದಾನೆ.ನಾನು ಮತ್ತೂ ಕೆಲವು ಸಂದರ್ಶನಗಳನ್ನು ನೋಡಿದೆ. ಬಾಲಿವ…

ಫೇಸ್ಬುಕ್ ಬರಹಗಳು

ತಾಳ್ಮೆ, ಶಾಂತಿ, ಪರಿಶ್ರಮ ಇತ್ಯಾದಿ...
**************************
ತಾಳ್ಮೆ ತೀವ್ರ ನಿಗಾ ಘಟಕದಲ್ಲಿ ಕೇಳುವವರಿಲ್ಲದೆ ಬಡಕಲಾಗಿದ್ದ. ಯಾರೂ ಮಾತಾಡಿಸಲು ಬಂದಿರಲಿಲ್ಲ. ಬರಲು ಯಾರೂ ಉಳಿದಿಲ್ಲ, ಸಹನೆ ಮೊನ್ನೆಯಷ್ಟೇ ಅಸು ನೀಗಿದ್ದ. ಉಳಿದವಳೊಬ್ಬಳು ಶಾಂತಿ; ಅವಳು ಪ್ರಪಂಚದ ಪ್ರಚಂಡ ನಾಯಕರೆಲ್ಲರೂ ಆಯೋಜಿಸಿದ್ದ ಶೃಂಗಸಭೆಯಲ್ಲೊಮ್ಮೆ ಮುಖ ತೋರಿಸಲು ಹೋಗಿದ್ದಳು. ಅವರೆಲ್ಲರೂ ಕೈ ಕುಲುಕಿ, ಆಲಿಂಗಿಸಿಕೊಳ್ಳುವಾಗ ಅವಳು ಅಲ್ಲಿ ಹಾಜರಿರುವುದು ಅಗತ್ಯ. ಅವರೆಲ್ಲ ಶಾಂತಿಗಾಗಿ ಯುದ್ಧ ಮಾಡುವವರು ಎಂಬ ಮುಲಾಜು ಅವಳಿಗೆ.

ತಾಳ್ಮೆಗೆ ಬದುಕು ಸಾಕಾಗಿತ್ತು. ಮೊದಲು ಅವನು ಬಾಡಿಗೆಗಿದ್ದಲ್ಲಿ, ಮನೆಯ ಯಜಮಾನ ಬಾಡಿಗೆ ಹೆಚ್ಚಿಸಿದಾಗ ಇವನು ಹೊರ ನಡೆದಿದ್ದ. ಈಗ ಅಲ್ಲಿ ಲೋಭ ಮನೆ ಮಾಡಿದ್ದಾನಂತೆ. ಪರಿಶ್ರಮ ಎಂಬ ಹೆಸರಿನ ದೂರದ ಸಂಬಂಧಿಯೊಬ್ಬಳಿದ್ದಳು ತಾಳ್ಮೆಗೆ. ಅವಳೂ ಕೂಡ ಬೀದಿಗೆ ಬಂದಿದ್ದಳು. ಹಿಂದೆಲ್ಲ ಗೆಲುವು ಮತ್ತು ಪರಿಶ್ರಮ ಜೋಡಿ, ಎಲ್ಲಿ ಹೋದರೂ ಜೊತೆಗೇ ಇರುತ್ತಿದ್ದರು. ಏನು ಕೆಟ್ಟಿತೋ ಏನೋ ಗೆಲುವು ಹಲವು ಅನೈತಿಕ ಸಂಬಂಧಗಳನ್ನು ಬೆಳೆಸಿಕೊಂಡು ಪರಿಶ್ರಮಳನ್ನು ಬೀದಿಗೆ ತಳ್ಳಿದ.

ಅದೇನೇ ಇರಲಿ, ತಾಳ್ಮೆಗೂ ಇನ್ನು ಹೆಚ್ಚು ಸಮಯ ಉಳಿದಿಲ್ಲ. ತಾಳ್ಮೆಗೆ ದಯಾಮರಣ ಕೊಡಿಸಬೇಕೆಂದು ಆತುರ ಮತ್ತು ಗಡಿಬಿಡಿ ಎಂಬಿಬ್ಬರು ವಕೀಲರು ನ್ಯಾಯಾಲಯದ ಮೆಟ್ಟಿಲು ಹತ್ತುವವರಿದ್ದಾರೆ. ನ್ಯಾಯಾಧೀಶನಾಗಿ ತಮಗೆ ಬೇಕಾದವನಾದ ಒಡಂಬಡಿಕೆಯನ್ನು ನೇಮಿಸಿಕೊಂಡಿದ್ದಾರೆ. …

Testing blogger android application

This is good.
applicationಬಹಳ ಚೆನ್ನಾಗಿದೆ, simple to use.

Facebook Ramblings - Dec 2014

Image
Dec 28, 2014:

The year looked normal and uninteresting; but when Facebook told me how great it was, WOW!
— feeling blah.

 Dec 21, 2014:


ನಿನ್ನೆಯಿಂದ ಪೀಕೆ ಸಿನಿಮಾದ ಬಗ್ಗೆ ಫೇಸ್ಬುಕ್ಕಿನಲ್ಲಿ ಕೇಳಿ ಬರುತ್ತಿರುವ ವಿವಿಧ ತಪ್ಪು ಅಭಿಪ್ರಾಯಗಳು :
೧. ಇದು ಹಿಂದೂ ಧರ್ಮ ವಿರೋಧಿ ಸಿನಿಮಾ: ಪೀಕೆ ಮನರಂಜನೆಗೋಸ್ಕರ ಮಾಡಿರುವ ಸಿನಿಮಾ. ಮನರಂಜನೆ ನೀಡುತ್ತಲೇ ಮನುಷ್ಯ ಕಟ್ಟಿರುವ ದೇವರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ಆ ಪ್ರಶ್ನೆಗಳು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತವೆ. ಸಿನಿಮಾವನ್ನು ವಿಮರ್ಶೆ ಮಾಡುವ ಬದಲು ಅದರ ನಾಯಕನಟನ ಧರ್ಮವನ್ನು ವಿಮರ್ಶೆ ಮಾಡಹೊರಟರೆ ಇಂಥ ಅಭಿಪ್ರಾಯ ಬರುತ್ತದೆ.
೨. ಪೀಕೆಯಲ್ಲಿ ಹೊಸತೇನೂ ಇಲ್ಲ. ಇದೆಲ್ಲ ನನಗೆ ಮೊದಲೇ ಗೊತ್ತಿತ್ತು: ಒಂದಿಷ್ಟು ಪುಸ್ತಕಗಳನ್ನು ಗಂಭೀರವಾಗಿ ಓದಿದವರಿಗೆ ಸಾಮಾನ್ಯರಿಗೆ ...ತಿಳಿದಿರದ ಎಷ್ಟೋ ವಿಷಯಗಳು ತಿಳಿದಿರುತ್ತದೆ. ಆದರೆ ಆ ಬುದ್ಧಿವಂತಿಕೆಯ ಅಹಂ ಇಟ್ಟುಕೊಂಡು ನೋಡಿದರೆ ಯಾವ ವಿಷಯವೂ ಹೊಸದಾಗಿ ಕಾಣುವುದಿಲ್ಲ. ಎಲ್ಲ ಸಿನಿಮಾಗಳೂ ನಮ್ಮ ಬುದ್ಧಿವಂತಿಕೆಗೆ ಸವಾಲಾಗಿಯೇ ಇರಬೇಕು ಎಂದೇನಿಲ್ಲ. ಇದುವರೆಗೆ ಕೆಲವು ವಿಚಾರವಾದಿಗಳ ಮಾತುಗಳಲ್ಲಿ, ಪುಸ್ತಕಗಳಲ್ಲಿ,ಹಾಗೂ ಕೆಲವರ ಮನಗಳಲ್ಲಿ ಕುಳಿತಿದ್ದ ವಿಚಾರಗಳು ಬಾಲಿವುಡ್ ನಂಥ ಪ್ರಬಲ ಮಾಧ್ಯಮದ ಮೂಲಕ ಮತ್ತಷ್ಟು ಜನರನ್ನು ತಲುಪುವುದಾದರೆ ತಪ್ಪೇನು? 'ಪ್ರೇಮ ಅಮರ' ಎನ್ನುತ್ತ …