ಮೂರನೆಯ ತರಗತಿಯಲ್ಲಿದ್ದಾಗೊಮ್ಮೆ ಜೋರು ಮಳೆ ಸುರಿಯುತ್ತಿದ್ದಾಗ ನನಗೆ ಒಮ್ಮೆಗೆ ದೇವರ ಜೊತೆ ನೇರವಾಗಿ ಮಾತಾಡಬೇಕೆಂದು ಅನ್ನಿಸಿತು. ನಾನು ದೇವರಲ್ಲಿ, 'ಈ ಮಳೆ, ಗುಡುಗು, ಸಿಡಿಲು - ಏನು ಇದೆಲ್ಲ?', ಎಂದು ಬಹಳ ಗಂಭೀರವಾದ ಪ್ರಶ್ನೆಗಳನ್ನು ದೇವರ ಮುಂದಿಟ್ಟೆ. ದೇವರು ಉತ್ತರಿಸಲಿಲ್ಲ. ತುಂಬ ಹೊತ್ತು ಈ ಸಂವಾದ ನಡೆಯಿತು. ಕೊನೆಗೆ ಯಾರೋ ನಕ್ಕದ್ದು ಕೇಳಿಸಿ ತಿರುಗಿ ನೋಡಿದರೆ ಅಮ್ಮ ನನ್ನ ಹುಚ್ಚಾಟವನ್ನು ನೋಡಿ ಕೊನೆಗೊಮ್ಮೆ ತಡೆಯಲಾಗದೆ ನಕ್ಕು ಬಿಟ್ಟಿದ್ದರು. ಇದರಿಂದಾಗಿ ದೇವರು ಪ್ರತ್ಯಕ್ಷವಾಗಿ ನನ್ನ ಜಟಿಲ ಪ್ರಶ್ನೆಗಳಿಗೆಲ್ಲ ಉತ್ತರಿಸುವುದು ಸ್ವಲ್ಪದರಲ್ಲೇ ತಪ್ಪಿ ಹೋಯಿತು!
ನಮ್ಮ ಊರಿನಲ್ಲಿ ಮಳೆ ಜೋರು. ಒಂದಿಪ್ಪತ್ತು ವರ್ಷ ಹಿಂದೆ ಇನ್ನೂ ಜೋರಿತ್ತು. ಕೆಲವು ಸಲ ಶುರು ಹಚ್ಚಿಕೊಂಡರೆ ದಿವಸಗಟ್ಟಲೆ ಮಳೆ ಸುರಿಯುತ್ತಲೇ ಇರುತ್ತಿತ್ತು. ಒದ್ದೆ ಬಟ್ಟೆಯನ್ನು ಬಚ್ಚಲಿನ ಒಲೆಯ ಬೆಂಕಿಯ ಬಿಸಿಯಲ್ಲಿ ಒಣಗಿಸಿಕೊಂಡು ಶಾಲೆಗೆ ಹೋಗುತ್ತಿದ್ದದ್ದು ನೆನಪು. ಆ ಬಟ್ಟೆಯಲ್ಲಿ ಹೊಗೆಯ ವಾಸನೆಯೂ ಅಲ್ಲದ, ಪರಿಮಳವೂ ಅಲ್ಲದ ಒಂದು ವಾಸನೆ ಬೆರೆತಿರುತ್ತಿತ್ತು! ಶಾಲೆಗೆ ನಾವು ನಡೆದುಕೊಂಡು ಹೋಗುತ್ತಿದ್ದೆವು. ಗದ್ದೆಯ ಕಾಲುದಾರಿಯೊಂದಿತ್ತು. ಒಮ್ಮೆ ಕುಂಭದ್ರೋಣ ಮಳೆ ಎಂದೇ ಕರೆಯಬಹುದಾದ ಮಳೆ ಹೊಡೆದಾಗ ಗದ್ದೆಯೆಲ್ಲ ನೀರಲ್ಲಿ ಮುಳುಗಿ ಮಕ್ಕಳಾದ ನಮ್ಮ ಮಂಡಿಯವರೆಗೆ ನೀರು ಬಂದು ಬಿಟ್ಟಿತ್ತು. ದಾರಿಯೇ ಗೊತ್ತಾಗದಷ್ಟು ನೀರು! ಜಲಪ್ರಳಯವಾದರೆ ಹಾಗೆಯೇ ಇರಬಹುದು ಸ್ಥಿತಿ ಎಂದು ಅದು ನೆನಪಾದಾಗಲೆಲ್ಲ ಅನ್ನಿಸುತ್ತದೆ.
ಚಿಕ್ಕವನಿದ್ದಾಗ ಮಳೆಯಲ್ಲಿ ಕೊಡೆ ಹಿಡಿದುಕೊಂಡು ನಡೆಯುತ್ತಾ ನನ್ನದೇ ಪ್ರಪಂಚದಲ್ಲಿ ಕಳೆದುಹೋಗುವುದು ನನಗೆ ಇಷ್ಟವಾದ ಕೆಲಸವಾಗಿತ್ತು. ಕೊಡೆಯ ಮೇಲೆ ಬೀಳುವ ಮಳೆಹನಿಯ ರಪರಪ ಸದ್ದು ಆಲೋಚನೆಗಳಿಗೊಂದು ಹಿನ್ನೆಲೆ ಸಂಗೀತ ಒದಗಿಸಿ ಬೇರೆ ಸದ್ದುಗಳನ್ನೆಲ್ಲ ನುಂಗಿ ಹಾಕುತ್ತಿತ್ತು. ಆ ಸದ್ದಿನ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ, ಮನಸಲ್ಲಿ ಏನೇನೋ ಆಲೋಚಿಸುತ್ತಾ ನಡೆಯುವುದರಲ್ಲಿ ಒಳ್ಳೆ ಮಜಾ ಇತ್ತು!
ಮುಂದೆ ನಾನು ಬೆಳೆದಂತೆಲ್ಲ ನಮ್ಮ ಊರಿನಲ್ಲಿ ಮಳೆ ಕಡಿಮೆಯಾಗುತ್ತಾ ಹೋಯಿತು ಎಂದನ್ನಿಸುತ್ತದೆ. ಮಳೆಯೂ ನನಗೆ ಅಭ್ಯಾಸವಾಗಿ ಹೋಯಿತು, ಅದರ ಬಗ್ಗೆ ಇದ್ದ ಬೆರಗು ಕಡಿಮೆಯಾಗುತ್ತಾ ಹೋಯಿತು. ಸುಳಿವೇ ಕೊಡದೆ ಮಳೆ ಬಂದಾಗ ಒದ್ದೆಯಾಗುವ ಲೆದರ್ ಶೂಸುಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳುವ, ಮಳೆ ಬರಬಹುದು ಎಂದನ್ನಿಸಿದ ದಿನ ಉದ್ದನೆಯ 'ಗನ್ ಬೂಟು'ಗಳನ್ನು ಹಾಕಿಕೊಂಡು ಹೋಗುವ ತಲೆಬಿಸಿಗಳು ಅಂಟಿಕೊಂಡವು.
ನಾನು ಹೈಸ್ಕೂಲಿನಲ್ಲಿ ಓದುತ್ತಿರುವಾಗ ಮನೆಗೆ 'ಕರೆಂಟು' ಬಂತು. ಇದಾದ ಬಳಿಕ ಮಳೆ ಬರುವ ಹಾಗಿದ್ದರೆ, 'ಅಯ್ಯೋ, ಕರೆಂಟು ಹೋಗಿಬಿಡುತ್ತೆ.', ಎಂಬ ಭಯ ಶುರುವಾಯಿತು. ಈ ಭಯ ಇವತ್ತಿಗೂ ಮುಂದುವರೆದಿದೆ. ಅದೂ ನಮ್ಮ ಊರಿನಲ್ಲಂತೂ ಜೋರಾಗಿ ಒಮ್ಮೆ ಗಾಳಿ ಬೀಸಿದರೆ ಸಾಕು, ಮುನ್ನೆಚ್ಚರಿಕೆ ಕ್ರಮವಾಗಿ ಪವರ್ ತೆಗೆದು ಬಿಡುತ್ತಾರೆ. ದಿವಸಗಟ್ಟಲೆ ಬರದೆ ಇರುವುದೂ ಇದೆ. ಹೀಗೆ ಮಳೆಯ ಬೆರಗಿಗಿಂತ ವಾಸ್ತವದ ಕಿರಿಕಿರಿಗಳ ಬಗ್ಗೆ ಮನಸ್ಸು ಹೆಚ್ಚು ಯೋಚಿಸುತ್ತಿದೆ ಎಂದರಿವಾಗುವಷ್ಟರಲ್ಲಿ ಬಾಲ್ಯ ಕಳೆದುಬಿಟ್ಟಿರುತ್ತದೆ.
ಮುಂದೆ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ನಾನು ಬೆಂಗಳೂರಿಗೆ ಪ್ರಾಜೆಕ್ಟ್ ಕೆಲಸಕ್ಕೆಂದು ಬಂದೆ. ಬೆಂಗಳೂರಿನ ಮಳೆ ನನಗೆ ಬಹಳ ಹಿಡಿಸಿಬಿಟ್ಟಿತ್ತು. ಥಟ್ಟನೆ ಬಂದು ಹೆಚ್ಚು ತೊಂದರೆ ಕೊಡದೆ ಹೋಗಿಬಿಡುವ ಮಳೆ! ಒಣಗಲು ಹಾಕಿದ ಬಟ್ಟೆಯನ್ನೂ ಒದ್ದೆ ಮಾಡದೆ ಹೋಗುವ ಶಿಷ್ಟ ಮಳೆ. ನಗರದ ಮಂದಿಯಷ್ಟೇ ಶಿಸ್ತು ಕಲಿತ ಮಳೆ - ಎಂದೆಲ್ಲ ಅಂದುಕೊಂಡಿದ್ದೆ. ಆದರೆ ಮುಂದೆ ಓದು ಮುಗಿಸಿ ಇಲ್ಲೇ ಕೆಲಸ ಹಿಡಿದ ಮೇಲೆ ಇಷ್ಟೇ ಇಷ್ಟು ಮಳೆಯನ್ನೂ ತಡೆದುಕೊಳ್ಳಲು ಸಾಧ್ಯವಾಗದ ಹಾಗೆ ನಮ್ಮ ನಗರಗಳನ್ನು ಕಟ್ಟಿದ್ದಾರೆ ಎಂದು ಗೊತ್ತಾಯಿತು! ನಾನು ಬೆಂಗಳೂರಿಗೆ ಬಂದ ವರ್ಷವೇ ಸಿಲ್ಕ್ ಬೋರ್ಡಿನ ಬಳಿ ರಸ್ತೆಯಲ್ಲೆಲ್ಲ ನೀರು ಸೇರಿಕೊಂಡು ಆಫೀಸುಗಳಿಗೆ ಹೋಗುವವರೆಲ್ಲ ಎರಡು-ಮೂರು ದಿನ ಪಡಬಾರದ ತೊಂದರೆ ಪಟ್ಟಿದ್ದೆವು. ಅದರ ನಡುವೆಯೂ ನಾನು ಖುಷಿ ಪಡುವ ವಿಷಯವೊಂದಿತ್ತು - ಏನೇ ವಿದ್ಯೆಯನ್ನು ಕಲಿತಿದ್ದರೂ, ಸದ್ಯ ಮನುಷ್ಯ ಇನ್ನೂ ಪ್ರಕೃತಿಯನ್ನು ಜಯಿಸಿಲ್ಲ!
ಶುರುವಿನಲ್ಲಿ ಆಫೀಸಿಗೆ ಕೊಡೆ ತೆಗೆದುಕೊಂಡು ಹೋಗುವ ಅಭ್ಯಾಸ ನನಗಿರಲಿಲ್ಲ. ಒಂದೆರಡು ಸಲ ತೆಗೆದುಕೊಂಡು ಹೋಗಿ, ಕೊಡೆ ಇರದ ದಿನ ಮಳೆ ಬಂದದ್ದರಿಂದ ರೋಸಿ ಹೋಗಿ ಕೊಡೆ ತೆಗೆದುಕೊಂಡು ಹೋಗುವುದನ್ನೇ ನಿಲ್ಲಿಸಿದ್ದೆ. ಸಂಜೆ ಮಳೆ ಬಂದರೆ ಮಳೆಯಲ್ಲಿ ನೆನೆಯುತ್ತಾ ಮನೆಗೆ ನಡೆಯುವುದು ಅಭ್ಯಾಸವಾಯಿತು. ನಮ್ಮ ಊರಿನಲ್ಲಿ ಬರುವ ಮಳೆಯೇ ಇಲ್ಲೂ ಬರುವಂತೆ, ಆ ಮಳೆಯಲ್ಲಿ ನಾನು ನೆನೆದಂತೆ... ಮಳೆ ಬಂದ ಮರುದಿನ ಗಾಳಿಯಲ್ಲಿ ಬೆರೆತ ಮಣ್ಣಿನ ವಾಸನೆ, ಥೇಟ್ ನಮ್ಮ ಊರಿನ ಹಾಗೆಯೇ! 'ಹೋದ ಜನ್ಮದಲ್ಲಿ ಕಪ್ಪೆ ಆಗಿದ್ನೇನೋ.. ಮಳೆ ಬಂದ್ರೆ ತುಂಬ ಖುಷಿ ಆಗುತ್ತೆ.', ಎಂದು ತಮಾಷೆ ಮಾಡಿಕೊಳ್ಳುತ್ತಿದ್ದೆ. ಮಳೆ ಬಂದ ಮರುದಿನ ತುಂಬ ಫ್ರೆಶ್ ಅನ್ನಿಸುತ್ತಿತ್ತು. ಎಲ್ಲವೂ ಹೊಸದಾಗಿರುವಂತೆ ಅನ್ನಿಸುತ್ತಿತ್ತು. ನಿನ್ನೆಯವರೆಗಿನದ್ದೆಲ್ಲ ಮಳೆಯಲ್ಲಿ ಕೊಚ್ಚಿ ಹೋದ ಹಾಗೆ, ಎಲ್ಲವೂ ಮತ್ತೆ ಹುಟ್ಟಿದ ಹಾಗೆ...!
ಮತ್ತೊಂದಷ್ಟು ವರ್ಷ ಕಳೆದ ಮೇಲೆ ಮಳೆಯ ಬಗ್ಗೆ ಇದ್ದ ಈ ರೋಮಾಂಚನವೂ ಕಡಿಮೆಯಾಗಿ ಮಳೆ ಎಂದರೆ ಟ್ರಾಫಿಕ್ಕು, ಆಫೀಸು ಬಸ್ಸಿನೊಳಗೆ ಕುಳಿತು ಒಗ್ಗಟ್ಟಾಗಿ ಮಳೆಯನ್ನು ಬಯ್ದುಕೊಳ್ಳುವುದಷ್ಟೆ ನೆನಪುಳಿಯುವಂತಾಯಿತು. 'ಇಲ್ಲಿ ಯಾಕೆ ಸುರಿಯುತ್ತದೆ ಹಾಳು ಮಳೆ! ಯಾವುದಾದರೂ ಹಳ್ಳಿಯಲ್ಲಾದರೂ ಸುರಿದರೆ ರೈತರಿಗಾದರೂ ಪ್ರಯೋಜನವಾಗುತ್ತಿತ್ತು.', ಎನ್ನುವ ಕಪಟ ಕಾಳಜಿಯ ಸಿನಿಕತನದ ಮಾತುಗಳು ಅಭ್ಯಾಸವಾಗಿಬಿಟ್ಟಿತು. ಎಷ್ಟೋ ಸಲ ಆಫೀಸಿನಿಂದ ಹೊರಗೆ ಬಂದಾಗಷ್ಟೆ ಮಳೆ ಬಂದು ಹೋಗಿದೆ ಎಂದು ಗೊತ್ತಾಗುವ ಹಾಗಾಯಿತು. 'ಎಲ್ಲೋ ಮಳೆಯಾಗಿದೆ' ಎಂದು ತಂಗಾಳಿಯಿಂದ ಹೇಳಿಸಿಕೊಳ್ಳುವ ಭಾಗ್ಯ ಇಲ್ಲದ, ಮನೆ ತಲುಪಿದಾಗ ಮರುದಿನಕ್ಕೆ ಬೇಕಾದ ಬಟ್ಟೆಗಳು ಒದ್ದೆಯಾಗದೆ ಉಳಿದಿರಲಿ ಎಂಬ ಕೋರಿಕೆಯ ಆಚೆ ಮಳೆಯ ಬಗ್ಗೆ ಬೇರೇನೂ ಅನ್ನಿಸದ ಹಲವಾರು ಜನರಲ್ಲಿ ನಾನೂ ಒಬ್ಬನಾಗಿಬಿಟ್ಟಿದ್ದೇನೆ.
ಈ ಬುದ್ಧಿಯನ್ನು ಮರೆತು ಮತ್ತೆ ಮಳೆಯಲ್ಲಿ ನೆನೆಯಬೇಕಿದೆ. ಮಳೆಯ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಬೇಕು. ಮಳೆಯಲ್ಲಿ ನಡೆಯುತ್ತಾ ನನ್ನದೇ ಪ್ರಪಂಚದಲ್ಲಿ ಕಳೆದುಹೋಗಬೇಕು. ಅಥವಾ ಹೊರಗೆ ಮಳೆ ಸುರಿಯುವಾಗ ಸುಮ್ಮನೆ ಕುಳಿತು ಮಳೆಯನ್ನು ಮನಸಿನೊಳಕ್ಕೆ ತೆಗೆದುಕೊಳ್ಳಬೇಕು. ಮತ್ತೆ ಮಳೆ ನನ್ನೊಳಗೆ ಹುಟ್ಟುಹಾಕುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಮಳೆ ಬಂದ ಮರುದಿನ ಕಪ್ಪೆಯ ಹಾಗೆ ಸಂತೋಷ ಪಡುವುದನ್ನು ಮತ್ತೆ ಕಲಿಯಬೇಕು. ಹಳೆಯದೆಲ್ಲವೂ ಮಳೆಯ ಸ್ಪರ್ಶ ಮಾತ್ರದಿಂದ ಹೊಸಜೀವ ಪಡೆದು ನಳನಳಿಸುವುದನ್ನು ನೋಡಬೇಕು. ಮಣ್ಣಿನ ವಾಸನೆ ಇನ್ನೂ ಹಾಗೆಯೇ ಇದೆಯೇ? ನೋಡಬೇಕಿದೆ. ಹಾಗೆಯೇ ಮಳೆ ಸುರಿಯುತ್ತಿರುವಾಗ ಮೂರನೆ ಕ್ಲಾಸಿನ ಮುಗ್ಧನಂತೆ, 'ಈ ಮಳೆ, ಗುಡುಗು, ಮೋಡ, ಗಾಳಿ... ಏನು ಇದೆಲ್ಲ?', ಎಂದು ಬೆರಗಾಗುವುದನ್ನು ನೆನಪಿಸಿಕೊಳ್ಳಬೇಕಿದೆ! ಎಲ್ಲಕ್ಕೂ ಉತ್ತರ ಸಿಕ್ಕವನಂತೆ ನಟಿಸುವುದನ್ನು ನಿಲ್ಲಿಸಿ ನನ್ನೊಳಗಿನ ಮಳೆಯ ಸದ್ದಿಗೆ ಕಿವಿಯಾಗಬೇಕು!
No comments:
Post a Comment