May 1, 2008

ಸಮಾನತೆ


"ಮಹಿಳಾ ಸಮಾನತೆ ಎನ್ನುವ ಶಬ್ದದಲ್ಲೇ ತಪ್ಪಿದೆ. ಮಹಿಳೆಯನ್ನು isolate ಮಾಡುವ ಪ್ರಯತ್ನ ಇದು. ಮಹಿಳೆಯರು ಪುರುಷರಿಗೆ ಸಮ ಎಂಬುದು ಸತ್ಯವಾಗಿದ್ದರೆ, ಮಹಿಳಾ ಸಮಾನತೆ ಎನ್ನಬೇಕಾದ ಅವಶ್ಯಕತೆ ಏನಿದೆ? ಸಮಾನತೆಯನ್ನು ಪಡೆಯಲು ಹೋರಾಟ ಏಕೆ ಬೇಕು? "- ಖ್ಯಾತ ಸಾಹಿತಿ, ವಿಚಾರವಾದಿ ಲೇಖಕ ಸೋಮಶೇಖರ "ಮಹಿಳಾ ಸಮಾನತೆ: ಒಂದು ಅವಲೋಕನ" ಎಂಬ ವಿಷಯದ ಮೇಲೆ ಅಭಿಪ್ರಾಯವನ್ನು ಮಂಡಿಸುತ್ತಿದ್ದರು, ತಮ್ಮ ಅತಿಥಿ ಭಾಷಣದಲ್ಲಿ.

ಮುಂದಿನ ಸಾಲಿನಲ್ಲಿ ಕುಳಿತಿದ್ದ ಮಹಿಳಾ ಹೋರಾಟಗಾರ್ತಿಯರು ಸೋಮಶೇಖರರ ವಿಚಾರವನ್ನು ಮೆಚ್ಚಿದಂತೆ ಚಪ್ಪಾಳೆ ತಟ್ತುತ್ತಿದ್ದರು.
"ಮಹಿಳೆಯರು ಪುರುಷರ ಸಮವಾಗಿ ಸಾಧನೆಗೈಯುತ್ತಿದಾರೆ. ಇದರಲ್ಲಿ ಎರಡು ಮಾತಿಲ್ಲ.ತೊಡಕಿರುವುದು ಗಂಡಸಿನ ಅಧಿಕಾರ ಮನೋಭಾವದಲ್ಲಿ, ಮತ್ತೊಬ್ಬರ ಅಭಿವೃದ್ಧಿಯನ್ನು ಸಹಿಸದ ಮನುಷ್ಯನ ಮನೋಧರ್ಮದಲ್ಲಿ. ಮನುಷ್ಯ ಸಹನೆ, ತಾಳ್ಮೆಯನ್ನು ಬೆಳೆಸಿಕೊಂಡಾಗ ಮತ್ತೊಬ್ಬನ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ... ", ಸೋಮಶೇಖರರ ಮಾತುಗಳು ಸಭಿಕರಲ್ಲಿ ಪರಿಣಾಮ ಬೀರುತ್ತ್ತಿತ್ತು.
ಕೊನೆಯಲ್ಲಿ, "ಹೆಣ್ಣಿನ ಬಾಳು ನಾಲ್ಕು ಗೋಡೆಗಳ ನಡುವೆ ಹಾಳಾಗಬಾರದು. ಹೀಗಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.", ಎಂದಾಗ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ಮಹಿಳಾ ಹೋರಾಟಗಾರ್ತಿಯರು ಹಾರ ಹಾಕಿ ಸನ್ಮಾನ ಮಾಡಿದರು.

ಸಭೆ ಮುಗಿದ ನಂತರ ಸೋಮಶೇಖರರು ತಮ್ಮ ಕಾರಿನತ್ತ ಹೆಜ್ಜೆ ಹಾಕುತ್ತಿದ್ದಾಗ ಯುವತಿಯೊಬ್ಬಳು, "ಸರ್.. ಒಂದು ನಿಮಿಷ..", ಎಂದದ್ದು ಕೇಳಿಸಿ ತಿರುಗಿ ನೋಡಿದರು. ಆಕೆ ಕೇಳಿದಳು, "ನಮಸ್ಕಾರ ಸರ್.. ನಾನು ಮಾಲಿನಿ, ನಿಮ್ಮ ಅಭಿಮಾನಿ. ನಿಮ್ಮ 'ಜ್ವಾಲೆ', 'ಪ್ರತಿಜ್ಞೆ' ಕಾದಂಬರಿಗಳಲ್ಲಿನ ಹೋರಾಟಗಾರ್ತಿ ಮಹಿಳೆಯರನ್ನು ತುಂಬ ಮೆಚ್ಚಿದ್ದೇನೆ, ಅಂಥ ಸತ್ತ್ವವುಳ್ಳ ಪಾತ್ರಗಳನ್ನು ಸೃಷ್ಟಿಸಿದ ನಿಮ್ಮನ್ನು ಕೂಡ. ಇಂಥ ಗಟ್ಟಿ ಪಾತ್ರಗಳಿಗೆ ಸ್ಫೂರ್ತಿ ಯಾರು ಸರ್?"
ಸೋಮಶೇಖರ , "ನನ್ನ ಹೆಂಡತಿ", ಎಂದರು ಆಕೆಯನ್ನೇ ದಿಟ್ಟಿಸುತ್ತಾ. ಮಾಲಿನಿಯ ಮುಖ ಅರಳಿತು, "You are great sir.", ಎಂದಳು. ಸೋಮಶೇಖರರು ಮರುಮಾತಾಡದೆ ಕಾರಿನೊಳಗೆ ಸೇರಿಕೊಂಡು ಇಂಜಿನ್ ಚಾಲೂ ಮಾಡಿದರು. ಮಾಲಿನಿ ಕಾರ್ ಹೋದತ್ತ ಮೆಚ್ಚುಗೆಯಿಂದ ನೋಡುತ್ತಾ ನಿಂತಳು.

*******************************************************************
ದಾರಿಯುದ್ದಕ್ಕೂ ಸೋಮಶೇಖರರು ಮಹಿಳಾ ಸಮಾನತೆಯ ಬಗ್ಗೆ ಚಿಂತಿಸುತ್ತಿದ್ದರು. 'ಮನುಷ್ಯ ತಾಯಿಯನ್ನು, ಸಹೋದರಿಯನ್ನು ಸಹಿಸಿಕೊಳ್ಳುತ್ತಾನೆ. ಹೆಂಡತಿಯನ್ನು ಸಹಿಸಿಕೊಳ್ಳುವುದು ಅವನಿಗೆ ಅದೇಕೆ ಕಷ್ಟ ಕೊಡುತ್ತದೋ ಗೊತ್ತಿಲ್ಲ. ತಾಯಿಗೆ ಹೆದರುವ ಎಷ್ಟು ಗಂಡಸರನ್ನು ನಾನು ನೋಡಿಲ್ಲ! ಅವರೆಲ್ಲರೂ ಹೆಂಡತಿಯ ಮುಂದೆ ತಮ್ಮ ಪೌರುಷ ತೋರಿಸಿ ತೃಪ್ತಿ ಪಟ್ಟುಕೊಳ್ಳುವವರೇ! ತನ್ನ ಹೆಂಡತಿಗೆ ತನ್ನ ಅರ್ಧದಷ್ಟೂ ಬುದ್ಧಿಯಿಲ್ಲ, ತನ್ನ ವಿಚಾರಗಳು ಆಕೆಗೆ ಅರ್ಥವಾಗುವುದಿಲ್ಲ. ಆಕೆ ಶತ ದಡ್ಡಿ ಎಂದುಕೊಳ್ಳುವುದೇ ಗಂಡಸಿನ ತಪ್ಪು. ತಾನೊಬ್ಬನೇ ಬುದ್ಧಿವಂತ ಎಂದುಕೊಳ್ಳುವ ಗಂಡಸಿಗೆ ಹುಚ್ಚಲ್ಲದೇ ಮತ್ತಿನ್ನೇನು? ಥುತ್!" , ಎಂದು ಗಂಡು ಕುಲಕ್ಕೆ ಉಗಿದುಕೊಂಡರು!

ಕಾರನ್ನು ಶೆಡ್ಡಿನಲ್ಲಿ ನಿಲ್ಲಿಸಿ, ಎಡಗೈಯಲ್ಲಿ ಸನ್ಮಾನದ ಮಾಲೆಯನ್ನು ಹಿಡಿದುಕೊಂಡು, ಬಲಗೈಯಲ್ಲಿ ಕಾಲಿಂಗ್ ಬೆಲ್ ಒತ್ತುತ್ತ್ತಾ, "ಇವಳೇನು ಮಾಡುತ್ತಿದ್ದಾಳೆ? ಕಾರಿನ ಸದ್ದೂ ಕೇಳಿಸಲಿಲ್ಲವೇ?", ಎಂದುಕೊಂಡರು ತಮ್ಮ ಹೆಂಡತಿಯ ಕುರಿತಾಗಿ.
ಬಾಗಿಲು ತೆರೆದ ಸೋಮಶೇಖರರ ಪತ್ನಿ ಪಂಕಜರ ಕಣ್ಣು ಕೆಂಪಾಗಿತ್ತು. "ತಲೆನೋವು ಬಂದು ಮಲಗಿದ್ದೆ. ಬಂದದ್ದು ಗೊತ್ತೇ ಆಗಲಿಲ್ಲ.", ಎಂದರು. ಒಳ ನಡೆದ ಸೋಮಶೇಖರರು, ''ಮಹಿಳಾ ಸಮಾನತೆಯ ಬಗ್ಗೆ ನಾನು ಮಾಡಿದ ಭಾಷಣಕ್ಕೆ ಚಪ್ಪಾಳೆಯ ಸುರಿಮಳೆಯಾಯಿತು." , ಎಂದರು ಉತ್ಸಾಹದ ದನಿಯಲ್ಲಿ. "ಏನು ಹೇಳಿದಿರಿ ಮಹಿಳಾ ಸಮಾನತೆಯ ಬಗ್ಗೆ?", ಪಂಕಜ ಕುತೂಹಲದಿಂದ ಕೇಳಿದರು.
"ಅದೆಲ್ಲ ನಿನಗೆ ಅರ್ಥವಾಗುವುದಿಲ್ಲ. ಹೋಗು, ಕಾಫಿ ತೆಗೆದುಕೊಂಡು ಬಾ.", ಗತ್ತಿನಿಂದ ಹೇಳಿದ ಸೋಮಶೇಖರರು ನಾಲಗೆ ಕಚ್ಚಿಕೊಂಡರು!