Jul 10, 2012

ಆಶ್ರಮದ ಹಾವುಗಳು

ಹಿಂದೊಂದು ಕಾಲದಲ್ಲಿ ಆಶ್ರಮವೊಂದಿತ್ತು. ಆಶ್ರಮದ ತುಂಬೆಲ್ಲ ಗಡ್ಡ ಬಿಟ್ಟುಕೊಂಡ ಸನ್ಯಾಸಿಗಳೇ ತುಂಬಿದ್ದರು. ಹೊರಗಿನಿಂದ ನೋಡುವವರಿಗೆ ಆಶ್ರಮ ಸುಂದರವಾಗಿಯೇ ಕಾಣುತ್ತಿತ್ತು. ಆಶ್ರಮವಾಸಿಗಳು ಒಬ್ಬರಲ್ಲೊಬ್ಬರು ಮಾತನಾಡುತ್ತಿರಲಿಲ್ಲ. ಎಲ್ಲರೂ ಯಂತ್ರಗಳಂತಿದ್ದರು. ಪ್ರತಿಯೊಬ್ಬರೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅಲ್ಲಿ ಎದುರಿಸುವ ಮತ್ತು ಅನುಸರಿಸುವ ಪ್ರಶ್ನೆಯೇ ಇರಲಿಲ್ಲ. ಒಬ್ಬರ ಪರಿಧಿ ಇನ್ನೊಬ್ಬರ ಪರಿಧಿಯೊಂದಿಗೆ ಘರ್ಷಣೆಗೊಳಗಾಗುವ ಸಂಭವವೇ ಇರಲಿಲ್ಲ. ಎಲ್ಲರೂ ಶಾಂತ, ಮೌನ ತಪಸ್ವಿಗಳಾಗಿದ್ದರು. ಬಿಡುವಿನ ವೇಳೆಯಲ್ಲಿ ತಮ್ಮ ಮನಸ್ಸಿಗೆ ಬಂದ ಸ್ಥಳದಲ್ಲಿ ಕುಳಿತುಕೊಂಡು ಧ್ಯಾನಿಸುತ್ತಿದ್ದರು, ಜಪಿಸುತ್ತಿದ್ದರು.

ಆ ಆಶ್ರಮದ ಈಶಾನ್ಯ ಮೂಲೆಯಲ್ಲಿ ಆಲದ ಮರವೊಂದಿತ್ತು. ಆ ಮರದ ಕೆಳಗೆ ಎಷ್ಟೋ ವರ್ಷಗಳಿಂದ ನಾಶವಾಗದೇ ಉಳಿದ ಹಂಡೆಯೊಂದಿತ್ತು. ಅದರಲ್ಲಿ ಮಾಯೆಯಿಂದಲೋ ಎಂಬಂತೆ ಸದಾಕಾಲ ನೀರು ತುಂಬಿರುತ್ತಿತ್ತು. ಆ ನೀರಿನ ಸ್ಥಿತಿಯನ್ನು ಯಾರೂ ಕೆಣಕಲು ಹೋಗಿರಲಿಲ್ಲ. ಪ್ರಶ್ನಿಸುವ ಮನೋಭಾವವೇ ಇಲ್ಲದ ಆಶ್ರಮವಾಸಿಗಳು ಇದರ ಕುರಿತು ತಲೆ ಕೆಡಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆಶ್ರಮವಾಸಿಗಳು ಇದ್ದದ್ದನ್ನು ಇದ್ದಂತೆ ಒಪ್ಪಿಕೊಳ್ಳುತ್ತಿದ್ದರು. ಅದು ಏಕೆ ಹಾಗಾಗಬೇಕು, ಹೀಗೇಕಾಗಬಾರದು ಎಂದು ಪ್ರಶ್ನಿಸುವ ಸ್ವಭಾವ ಅವರದಲ್ಲ. ಪ್ರಶ್ನೆಗಳಿಂದ ಅಲೆಗಳು ಏರ್ಪಡುತ್ತವೆ, ಅಲೆಗಳು ಸರ್ವನಾಶಕ್ಕೆ ಕಾರಣವಾಗುತ್ತವೆ - ಎಂಬುದು ಅವರು ಯಾರಲ್ಲೂ ಹೇಳದ, ಆದರೆ ಮನಸ್ಸಿನಲ್ಲೇ ಒಪ್ಪಿಕೊಂಡ ಸಿದ್ಧಾಂತವಾಗಿತ್ತು.

ಆಶ್ರಮವಾಸಿಗಳು ಮುಂಜಾನೆ ಎದ್ದಂತೆ ಹಲ್ಲುಜ್ಜಿಕೊಳ್ಳುತ್ತಿದ್ದರು. ಮಾವಿನ ಎಲೆಯಿಂದ ಇದ್ದಲಿನವರೆಗೆ ಯಾವುದಾದರೊಂದು ವಸ್ತುವಿನಿಂದ ಅವರು ಹಲ್ಲುಜ್ಜಿಕೊಳ್ಳುತ್ತಿದ್ದರು. ನಾಗರೀಕ ಮಾನವರಂತೆಯೇ ಅವರು ನಾಲಗೆಯ 'ಅಗ್ರ'ವನ್ನೂ ತೆಗೆಯುತ್ತಿದ್ದರು.ಅವರು ಮುಖ ತೊಳೆದುಕೊಳ್ಳುವ ರೀತಿ ವಿಚಿತ್ರವಾಗಿತ್ತು. ಮುಖಕ್ಕೆ ನೀರು ಹಾಕಿಕೊಂಡು ಅಪ್ರದಕ್ಷಿಣಾಕಾರವಾಗಿ ಮುಖವನ್ನು ಕೈಯಿಂದ ತಿಕ್ಕಿಕೊಳ್ಳುತ್ತಿದ್ದರು. ಮುಖ ತೊಳೆದಾದ ನಂತರ ಪುನಃ ಬಾಯಿ ಮುಕ್ಕಳಿಸುತ್ತಿದ್ದರು.

 ಹಲ್ಲುಜ್ಜಿಯಾದ  ನಂತರ ಅವರು ಸ್ನಾನ ಮಾಡುತ್ತಿದ್ದರು. ನಂತರ ಕಸ ಕಡ್ಡಿ ಸೇರಿಸಿ ಕಲ್ಲು ಕುಟ್ಟಿ ಬೆಂಕಿಯುರಿಸುತ್ತಿದ್ದರು. ಆಗ ತಾನೇ ಕಿತ್ತು ತಂದ ಹಣ್ಣುಗಳನ್ನೂ ತಿನ್ನುವಂಥ ಸೊಪ್ಪುಗಳನ್ನೂ ಸೇರಿಸಿ ಬೇಯಿಸುತ್ತಿದ್ದರು. ಬೆಂದದ್ದು ಸಂಪೂರ್ಣವಾಗಿ ಆರಿದ ಬಳಿಕ ಪದ್ಮಾಸನದಲ್ಲಿ ಕುಳಿತು ತಿನ್ನುತ್ತಿದ್ದರು. ಮಧ್ಯಾಹ್ನದ ಆಹಾರವೂ ಇದೇ ಆಗಿತ್ತು. ರಾತ್ರಿ - ಉಪವಾಸ. ಅವರು ಮಲಗಿಕೊಳ್ಳುವ ಹೊತ್ತಿಗೆ ಅಮಾವಾಸ್ಯೆಯ ದಿನವೂ ಚಂದ್ರ ಕಾಣಿಸಿಕೊಳ್ಳುತ್ತಿದ್ದ. ಇವರನ್ನು ನಿಯಂತ್ರಿಸುವವರು ಯಾರೂ ಇರಲಿಲ್ಲವಾದರೂ ಅವರು ತಮ್ಮ ಮೇಲೆ ಸ್ವಯಂಪ್ರೇರಿತ  ನಿರ್ಭಂದವನ್ನು ಹೇರಿಕೊಂಡಿದ್ದರು. ಅವರಲ್ಲಿ ಭಾವನೆಗಳಿರಲಿಲ್ಲ, ವಿಕಾರಗಳಿರಲಿಲ್ಲ. ಏಕೆಂದರೆ ಸಂತೋಷಪಡಲಾಗಲಿ, ದುಃಖಿಸಲಿಕ್ಕಾಗಲಿ ಅವರಿಗೆ ಕಾರಣಗಳಿರಲಿಲ್ಲ.

ಒಂದು ಸುಪ್ರಭಾತದಲ್ಲಿ ಆಶ್ರಮವಾಸಿಗಳು ಹಲ್ಲುಜ್ಜುತ್ತಿದ್ದಾಗ ಒಂದು ಘಟನೆ ನಡೆಯಿತು - ಅದುವರೆಗೆ ಹಕ್ಕಿಗಳ ಕಿಚಪಿಚ ಹಾಗೂ ಪ್ರಾಣಿಗಳ 'ಗೊರ ಗೊರ', 'ಬೌ ಬೌ', 'ಮಿಯಾಂವ್'ಗಳನ್ನೂ ಮಾತ್ರ ಕೇಳಿದ್ದ ಆಶ್ರಮವಾಸಿಗಳು ಮೊದಲ ಬಾರಿಗೆ ಮನುಷ್ಯನ ದನಿ ಕೇಳಿದರು. ಸುಮುಖನೆಂಬ ಆಶ್ರಮವಾಸಿ ಜೋರಾಗಿ  ಕಿರುಚಿದ್ದನು. ಮೊಟ್ಟ ಮೊದಲ ಬಾರಿಗೆ ತನ್ನ ಎತ್ತರಿಸಿದ ದನಿಯನ್ನು ಕೇಳಿದ ಸುಮುಖನಿಗೆ ಆಶ್ಚರ್ಯವಾಯಿತು. ತನ್ನ  ದನಿಗೆ ಹೆದರಿ ಹೆದರಿ ಹಕ್ಕಿಗಳು ಗಲಿಬಿಲಿಗೊಂಡು ಹಾರಿದ್ದನ್ನೂ, ಆಶ್ರಮದ ಬೆಕ್ಕುಗಳೂ ನಾಯಿಗಳೂ ಬೆದರಿದ ದನಿ ಹೊರಡಿಸಿದ್ದನ್ನೂ ಕಂಡ ಸುಮುಖನಿಗೆ ತನ್ನ ದನಿಗಿರುವ ಶಕ್ತಿಯ ಅರಿವಾಯಿತು. ಇಂಥ ಅದ್ಭುತವನ್ನು ಅಡಗಿಸಿಟ್ಟು ಬದುಕುತ್ತಿರುವ ತಮ್ಮ ಮೇಲೆ ಆತನಿಗೆ ಮರುಕ ಹುಟ್ಟಿತು. ಆತ ಪುನಃ ಪುನಃ ಕಿರುಚಿದ! ಹುಚ್ಚನಂತೆ ದನಿಯೆತ್ತರಿಸಿ ನಕ್ಕ!
 "ನಮಗೆ ಮಾತನಾಡಲು ಗೊತ್ತಿಲ್ಲವೇ? ನಾವೇನು ಮೂಗರೇ! ನಮಗೆ ಭಾಷೆ ಗೊತ್ತಿಲ್ಲವೇ? ನಾವೇಕೆ ಮೌನವಾಗಿರಬೇಕು?" - ಆತ ತನಗೆ ತಾನೇ ಪ್ರಶ್ನಿಸಿಕೊಂಡ.

ಜನ ಸೇರಿದರು. ಅದ್ಭುತವೆಂಬಂತೆ ಎಲ್ಲರೂ ಮಾತನಾಡತೊಡಗಿದರು! "ಏನಾಯಿತು? ಏನಾಯಿತು?" - ಎಲ್ಲರೂ ಕೇಳಿದರು.

ಸುಮುಖನಿಗೆ ಒಮ್ಮೆಗೆ ಎಚ್ಚರವಾಯಿತು. ತಾನು ಕಿರುಚಿದ್ದೇಕೆ ಎಂದು ಯೋಚಿಸಿದ. ಅದೇಕೆಂದು ನೆನಪಾದಾಗ ಆಲದ ಮರದತ್ತ ನಡೆದ. ಅದರ ಕೆಳಗಿದ್ದ ಹಂಡೆಯಲ್ಲಿ ನಾಲ್ಕು, ಐದು, ಹತ್ತು ... ಲೆಕ್ಕವಿಲ್ಲದಷ್ಟು ಹಾವುಗಳು ಹುಟ್ಟಿಕೊಂಡಿದ್ದವು! ಬಾಲವಿಲ್ಲದ, ಅಗಲ ಹೆಡೆಯ ಹಾವುಗಳು!

"ಹಾವು!" - ಆಶ್ಚರ್ಯವೆಂಬಂತೆ ಎಲ್ಲರೂ ಮಾತು ಕಲಿತಿದ್ದರು! ಎಲ್ಲರಿಗೂ ಆಶ್ಚರ್ಯವಾಗಿತು. ಯಂತ್ರಗಳಂತಿದ್ದವರು ಮನುಷ್ಯರಾಗಲು ಕಲಿತಿದ್ದರು.

ಆ ಹಾವುಗಳಿಂದ ಯಾರಿಗೂ ತೊಂದರೆಯಾಗಲಿಲ್ಲ. ಅವುಗಳು ಅಮಲಿನಲ್ಲಿದ್ದಂತಿದ್ದವು. ಏಲಕ್ಕಿ ತೋಟದ ಚೇಳುಗಳು ಕುಟುಕುವುದಿಲ್ಲ (ಅಂತೆ). ಅಂತೆಯೇ ಈ ಹಾವುಗಳು ವಿಷಪೂರಿತ ಹಾವುಗಳೆಂದೆನಿಸಿದರೂ ಯಾರಿಗೂ ಅದರ ಅನುಭವವಾಗಲಿಲ್ಲ ಅರ್ಥಾತ್ ಅದು ಯಾರಿಗೂ ಕಚ್ಚಿರಲಿಲ್ಲ.

ಸುಮುಖ ಪ್ರತಿದಿನ ಆ ಹಾವುಗಳನ್ನು ನೋಡುತ್ತಿದ್ದ. ಅವು ಅವನ ಕುತೂಹಲವನ್ನು ಕೆರಳಿಸಿದ್ದವು. ಆಹಾರವಿಲ್ಲದೆ ಅವು ಹೇಗೆ ಬದುಕುತ್ತವೆ ಎಂಬುದು  ಸುಮುಖನ ಮುಂದಿದ್ದ ಪ್ರಶ್ನೆ.

ಒಂದು ಮುಂಜಾನೆ ಸುಮುಖ ಹಾವುಗಳನ್ನು ನೋಡಲು ಬಂದಾಗ ಅವನಿಗೆ ಆಶ್ಚರ್ಯ ಕಾದಿತ್ತು. ಹಾವುಗಳ ಹೆಡೆಯಲ್ಲಿ, ಎರಡು ಕಣ್ಣುಗಳ ಮಧ್ಯೆ ಮೂರನೆಯ ಕಣ್ಣಿನಂತಿದ್ದ, ವಜ್ರದಂತೆ ಹೊಳೆಯುವಂಥದ್ದೇನೋ ಕಂಡಿತು! ಕೊಂಚ ಸಮಯ ವೀಕ್ಷಿಸಿದ ನಂತರ ಸುಮುಖನಿಗೆ ತಾನು ಕಾಣುತ್ತಿರುವುದು ನಿಜಕ್ಕೂ ವಜ್ರವೆಂಬುದು ಅರಿವಾಯಿತು. ಸುಮುಖ ವಜ್ರವನ್ನೇ ವೀಕ್ಷಿಸುತ್ತಾ ನಿಂತ.

ಇದಾದ ಕೆಲವು ತಿಂಗಳುಗಳ ನಂತರದ ಕಥೆಯನ್ನು ವರ್ತಮಾನ ಕಾಲವೆಂದು ಭಾವಿಸುವುದಾದರೆ, ಈಗ ಆಶ್ರಮಕ್ಕೆ ನಾಗರಿಕತೆಯ ದಾಳಿ ಶುರುವಾಗಿದೆ. ಸುಮುಖನು ಹಾವುಗಳ ತಲೆಯಲ್ಲಿದ್ದ ವಜ್ರಗಳನ್ನೆಲ್ಲ ಪೇಟೆಯಲ್ಲಿ ಮಾರಿ ಮುಗಿಸಿದ್ದಾನೆ! ನಿರ್ವಿಕಾರಿಗಳಾಗಿದ್ದ ಆಶ್ರಮವಾಸಿಗಳೆಲ್ಲರೂ ಸ್ವಾರ್ಥಿಗಳಾಗಿದ್ದಾರೆ. ಎಲ್ಲರೂ ಮಾತನಾಡುತ್ತಾರೆ. ಎಲ್ಲರ ಮನಗಳಲ್ಲಿದ್ದ ವಿಕಾರ ಹೊರ ಬಂದಿದೆ. ಆಶ್ರಮದ ಶಾಂತಿಭಂಗವಾಗಿದೆ. ಹಳೆಯ ಪರಂಪರೆಯವರು ಇದನ್ನೆಲ್ಲಾ ಕಂಡು ವ್ಯಥೆಪಡುತ್ತಿದ್ದಾರೆ.

ಮಾತನಾಡುತ್ತಾ, ಆಶ್ರಮವಾಸಿಗಳಲ್ಲಿ ಅಭಿಪ್ರಾಯ ವ್ಯತ್ಯಾಸ ಕಂಡುಬಂದು ಅವರಲ್ಲಿ ಗುಂಪುಗಾರಿಕೆ ಪ್ರಾರಂಭವಾಯಿತು. ಗುಂಪುಗಳಾದಾಗ ನಾಯಕನ ಅವಶ್ಯಕತೆ ಕಂಡು ಬಂದಿತು. ಆಗ ಚುನಾವಣೆಗಳ ಅವಶ್ಯಕತೆ ಕಂಡು ಬಂದಿತು. ಚುನಾವಣೆಗಳಾದಾಗ ಆಮಿಷ, ಬೆದರಿಕೆ, ದಬ್ಬಾಳಿಕೆಗಲೆಲ್ಲವೂ ಪ್ರಾರಂಭವಾದವು.

ಸುಮುಖ ತನ್ನ ಗುಂಪಿಗೆ ನಾಯಕನಾದ. ಆತ ಮಾತಾಡಿದ, "ನಮ್ಮ ಅಭಿವೃದ್ಧಿಗೆ ನಮ್ಮ ಆಶ್ರಮದ ಈಶಾನ್ಯ ಮೂಲೆಯಲ್ಲಿರುವ ಹಾವುಗಳೇ ಕಾರಣ. ನಮ್ಮ ವಿರೋಧಿ ಬಣದವರು ಆ ಹಾವುಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಆಕಾಶದಲ್ಲಿ ಹಾರಾಡುತ್ತಿದ್ದರೂ ನಾವು ನಮ್ಮ ಬೇರುಗಳನ್ನು ಮರೆಯಬಾರದು."

ಸುಮುಖನ ವಿರೋಧಿ ಬಣದ ನಾಯಕ ದುರ್ಮುಖ ಮಾತನಾಡಿದ,"ನಾವಿನ್ನೂ ಅಭಿವೃದ್ಧಿ ಹೊಂದದಿರಲು ನಮ್ಮ ಆಶ್ರಮದ ಈಶಾನ್ಯ ಮೂಲೆಯಲ್ಲಿರುವ ಹಾವುಗಳೇ ಕಾರಣ. ನಮ್ಮ ವಿರೋಧಿ ಬಣದವರು ಆ ಹಾವುಗಳನ್ನು ನಾಶಪಡಿಸಬಾರದೆಂದು ಹೇಳುತ್ತಿದ್ದಾರೆ. ಬಂಧನವನ್ನು ಕಳಚಿಕೊಂಡ ಹಕ್ಕಿಗಳು ಆಗಸದೆತ್ತರಕ್ಕೆ ಹಾರುತ್ತವೆ, ನಾವು ಮನುಷ್ಯರು ಇನ್ನೂ ಭೂಮಿಗಂಟಿಕೊಂಡಿದ್ದೇವೆ." ಇವರಿಬ್ಬರ ಮಾತುಗಳಿಗೂ ಅವರವರ ಬಣದವರು ತಲೆಯಾಡಿಸಿದರು.

ಈಗ ಇದು ಗುಂಪು-ಗುಂಪುಗಳ ಘರ್ಷಣೆಯಾಗಿರದೆ, ಸುಮುಖ-ದುರ್ಮುಖರ ನಡುವಿನ ಯುದ್ಧವಾಗಿತ್ತು. ಕ್ರಮೇಣ ಗುಂಪುಗಳ ಸದಸ್ಯರ ಅಭಿಪ್ರಾಯಗಳು ಗೌಣವಾಗಿ ಸುಮುಖ-ದುರ್ಮುಖರ ಅಭಿಪ್ರಾಯಗಳಂತೆಯೇ ಅವರವರ ಬಣಗಳು ನಡೆಯತೊಡಗಿದವು.

ಈ ಸ್ಥಿತಿ ಮುಂದುವರೆದಾಗ ಸುಮುಖ-ದುರ್ಮುಖರಲ್ಲಿ ಒಂದು ಒಪ್ಪಂದವಾಯಿತು. ಅದರಂತೆ ಇವರಿಬ್ಬರಲ್ಲಿ ಒಬ್ಬರ ಆಡಳಿತ ಮಾತ್ರ ನಡೆಯಬೇಕಿತ್ತು ಅರ್ಥಾತ್ ಯಾವ ಗುಂಪಿಗೆ ಬಹುಮತವಿತ್ತೋ ಆ ಗುಂಪು ಆಶ್ರಮದ ಆಡಳಿತವನ್ನು ನೋಡಿಕೊಳ್ಳಬೇಕಿತ್ತು.

ಚುನಾವಣೆಯ ದಿನ ನಿಶ್ಚಯವಾಯಿತು. ಸುಮುಖ-ದುರ್ಮುಖರಿಬ್ಬರೂ ಪ್ರಚಾರ ನಡೆಸಿದರು. ಚುನಾವಣೆಗೆ ಎರಡು ವಾರಗಳ ಹಿಂದೆ ಎರಡೂ ಗುಂಪುಗಳಿಗೆ ಘರ್ಷಣೆಯಾಯಿತು. ಇದರ  ಫಲವಾಗಿ ಸುಮುಖಾನ ಗುಂಪಿನ ಇಬ್ಬರು ಹಾಗೂ ದುರ್ಮುಖನ ಗುಂಪಿನ ಒಬ್ಬನ ಕೊಲೆಯಾಯಿತು. ಇದರಿಂದಾಗಿ ಘರ್ಷಣೆ-ಮರುಘರ್ಷಣೆಗಳಾದವು. ಈ ಎರಡು ಇಸಮ್ಮುಗಳ ಘರ್ಷಣೆಯನ್ನು ಕಂಡು ರೋಸಿ ಹೋದ ಯುವಕನೊಬ್ಬನಿದ್ದ. ಚುನಾವಣೆಗೆ ಒಂದು ವಾರ ಬಾಕಿ ಉಳಿದಿದ್ದಾಗ ಆತನಿಗೆ ಗುಂಪುಗಾರಿಕೆ ಹಾಗೂ ಅದರ ಫಲಗಳನ್ನು ಸಹಿಸಲು ಅಸಾಧ್ಯವಾಯಿತು. ಆತ ತನ್ನ ಚೀಲವನ್ನು ಹೊರತೆಗೆದು ಅದರ ಒಳಗಿದ್ದುದನ್ನೆಲ್ಲವನ್ನೂ ಹೊರ ಸುರಿದ. ಅದರಲ್ಲಿದ್ದ ಚೂರಿಯನ್ನು ತೆಗೆದು ಅದರ ಹರಿತವನ್ನು ಪರೀಕ್ಷಿಸಿದ.

ಆತ ಆಶ್ರಮದ ಈಶಾನ್ಯ ಮೂಲೆಯತ್ತ ನಡೆದ. ಮಬ್ಬುಗತ್ತಲಿನಲ್ಲಿ ದಾರಿ ಕಾಣಲಿಲ್ಲವಾದರೂ, ತಡವರಿಸಿಕೊಂಡು ಹಂಡೆಯ ಬಳಿ  ತಲುಪಿದ. ಚೂರಿಯ ಹರಿತವಿರುವ ತುದಿಯಿಂದೊಮ್ಮೆ ಹಂಡೆಯನ್ನು ಸವರಿ ಅದನ್ನು ಹಿಂದಕ್ಕೆಳೆದು ಪುನಃ ಹಂಡೆಯತ್ತ ಬೀಸಿದ.  ಹಂಡೆಯಲ್ಲಾದ ಗಾಯದಿಂದಾಗಿ ನೀರೆಲ್ಲವೂ ಹೊರಗೆ ಸೋರಿ ಹೋಯಿತು. ಅದರ ಕೆಳಗಿದ್ದ ಹಾವುಗಳು ವಿಲವಿಲನೆ ಒದ್ದಾಡತೊಡಗಿದವು. ಯುವಕ ಒದ್ದ ರಭಸಕ್ಕೆ ಹಂಡೆಯೊಳಗಿದ್ದ ಹಾವುಗಳು ಹೊರ ಬಿದ್ದವು. ಒಂದೊಂದನ್ನೇ ಪರೀಕ್ಷಿಸಿ  ಚೂರಿಯಿಂದ ಚುಚ್ಚತೊಡಗಿದ ಯುವಕ. ಹಾವುಗಳು ತುಂಡುತುಂಡಾಗಿ ವಿಲವಿಲನೆ ಒದ್ದಾಡಿದವು. ರಕ್ತ ಸಮುದ್ರವಾಗಿ ಹರಿಯಿತು - ರುಧಿರ ಪ್ರವಾಹ! ಎಲ್ಲೆಲ್ಲೂ ರಕ್ತ! ಯುವಕ ಗಾಬರಿಗೊಂಡ. ತಾನು ರಕ್ತದಲ್ಲಿ  ತೇಲುತ್ತಿದ್ದೇನೆಂದು ಅರಿವಾಯಿತು. ಆಶ್ರಮ ರಕ್ತದಲ್ಲಿ ಮುಳುಗಿತು. ಮಲಗಿದ್ದವರೆಲ್ಲರೂ ಅದೇ ಭಂಗಿಯಲ್ಲಿ ರಕ್ತದಲ್ಲಿ ತೇಲುತ್ತಿದ್ದರು!

ಇದೀಗ ಯುವಕನಿಗೆ ಹೃದಯಾಘಾತವಾಗುವಂಥ ಘಟನೆ ನಡೆಯಿತು-ಕತ್ತರಿಸಲ್ಪಟ್ಟ ಪ್ರತಿಯೊಂದು ಹಾವಿನ ಹೆಡೆಯಿಂದ ಮೂರು  ಚೇಳುಗಳು, ಹೊಟ್ಟೆಯ ಭಾಗದಿಂದ ಆರು ಗೂಬೆಗಳು, ಚಿಕ್ಕ ಬಾಲದ ತುದಿಯಿಂದ ಹನ್ನೆರಡು ಕರಿಬೆಕ್ಕುಗಳು ಹುಟ್ಟಿಕೊಳ್ಳತೊಡಗಿದವು! ಯುವಕ ಕಿರುಚತೊಡಗಿದ - "ಏಳಿ! ಎದ್ದೇಳಿ, ಎಲ್ಲರೂ ಮುಳುಗಲಿದ್ದೀರಿ!" - ಯಾರೋ ಏಳಲಿಲ್ಲ, ಎಲ್ಲರೂ ಯಾವುದೊ ಅಮಲಿನಲ್ಲಿದ್ದಂತಿತ್ತು.

ಯುವಕ ಆಗಸದತ್ತ ನೋಡಿದ - ಸುಮುಖ ದುರ್ಮುಖರು ಪುಷ್ಪಕ ವಿಮಾನದಲ್ಲಿ ಕುಳಿತು ಪ್ರವಾಹವನ್ನು ವೀಕ್ಷಿಸುತ್ತಿದ್ದರು - ಈಗ ಅವರಿಬ್ಬರೂ ಒಂದಾಗಿದ್ದರು! "ಜನರೇ! ಎದ್ದೇಳಿ! ನಮ್ಮ ನಾಯಕರು ನಮಗೆ ಮೋಸ ಮಾಡಿದರು. ಅವರು ನಮ್ಮ ಸ್ಥಿತಿಯನ್ನು ನೋಡಿ ಗಹಗಹಿಸಿ ನಗುತ್ತಿದ್ದಾರೆ! ಎದ್ದೇಳಿ! ಪ್ರತಿಭಟಿಸಿ!" - ಯುವಕ ಕಿರುಚತೊಡಗಿದ, ಕಿರುಚುತ್ತಲೇ ಇದ್ದ. ಯಾರೂ ಎಚ್ಚರಗೊಳ್ಳಲಿಲ್ಲ.