Apr 27, 2008

ಮುಳುಗು


ಭಾಸ್ಕರ ಒಂದು ಯಂತ್ರದಂತೆ ಕೆಲಸ ಮಾಡಲು ತೊಡಗಿ ಮೂರು ವರ್ಷಗಳ ಮೇಲಾಗಿತ್ತು. ಅವನು ಈಗಿರುವ ಉದ್ಯೋಗಕ್ಕೆ ಸೇರಿದ ದಿನಾಂಕ ಕೂಡ ಅವನಿಗೆ ಮರೆತು ಹೋಗಿತ್ತು. ''ಈ ಆಫೀಸಿಗೆ ನಾನು ಎಡಗಾಲಿಟ್ಟು ಬಂದಾಗಲೇ ನನ್ನ ಬದುಕಿನ ಕೆಟ್ಟ ದಿನಗಳು ಪ್ರಾರಂಭವಾದವು.'', ಎಂದುಕೊಂಡಿದ್ದಾನೆ ಹಲವಾರು ಬಾರಿ. ಅವನು ಮಾಡುತ್ತಿದ್ದ ಕೆಲಸದಲ್ಲಿ ಅವನ ಮನಸ್ಸಿಗೆ ಒಗ್ಗುವ ಅಂಶಗಳು ಲವಲೇಶವೂ ಇರಲಿಲ್ಲ. ಅವರಿವರು ಹೇಳಿದಂತೆ, ಯಾರು ಯಾರನ್ನೋ ಉದ್ಧಾರ ಮಾಡಲಿಕ್ಕಾಗಿ ಹಗಲೂ ರಾತ್ರಿ ದುಡಿಯುತ್ತಿದ್ದದ್ದು ಕೆಲವೊಮ್ಮೆ ಅವನಿಗೇ ನಾಚಿಕೆ ಬರಿಸುತ್ತಿತ್ತು. ಅದೇ ಕೆಲಸವನ್ನು ಮತ್ತೆ ಕೆಲವರು ಸಂತೋಷದಿಂದ ಮಾಡುತ್ತಿದ್ದರೂ ಕೂಡ, ಭಾಸ್ಕರನಿಗೆ ಮನಸ್ಸಿಗೆ ಒಗ್ಗದ ಕೆಲಸವಾದ ಕಾರಣ, ಅವರ ಸಂತೋಷದ ಮೂಲ ಏನಿರಬಹುದೆಂಬ ಕುತೂಹಲವೂ ಉಳಿದಿಲ್ಲ. ಕೆಲಸ ಬದಲಾಯಿಸುವ ಬಗ್ಗೆ ಆಗೀಗ ತುಂಬಾ ಗಂಭೀರವಾಗಿ ಯೋಚಿಸುತ್ತಿದ್ದ ಅವನು, ಅಸಲಿಗೆ ತನ್ನ ಮನಸ್ಸಿಗೆ ಒಗ್ಗುವ ಕೆಲಸ ಜಗತ್ತಿನಲ್ಲಿದೆಯೇ ಎಂಬ ಅನುಮಾನ ಬಂದ ಮೇಲೆ, ಆ ಪ್ರಯತ್ನವನ್ನೂ, ಚಿಂತೆಯನ್ನೂ ಮಿದುಳಿಂದ ಹೊರ ತಳ್ಳಿದ್ದಾನೆ.

ಈ ಮುಂಜಾನೆ ಸ್ನಾನ ಮುಗಿಸಿ ಬಂದು ಕೋಣೆಯಲ್ಲಿ ಕನ್ನಡಿಯ ಮುಂದೆ ನಿಂತಾಗ, ಅಪರೂಪಕ್ಕೆಂಬಂತೆ ತನ್ನ ಪ್ರತಿಬಿಂಬವನ್ನು ದಿಟ್ಟಿಸಿ ನೋಡಿದ. ಕನ್ನಡಿಯಲ್ಲಿ ಮೂಡಿರುವ ಬಿಂಬ ತನ್ನದೇ ಅಲ್ಲವೇ ಎಂಬಷ್ಟರ ಮಟ್ಟಿಗೆ ತನಗೆ ತಾನೇ ಅಪರಿಚಿತನಾಗಿದ್ದೇನೆನ್ನಿಸಿತು. ತನ್ನ ಕಣ್ಣುಗಳು ಇಷ್ಟು ನಿರ್ಜೀವವಾಗಿ ಕಾಣಿಸುತ್ತವೆ ಎಂಬ ಯೋಚನೆಯೇ ಅವನನ್ನು ಬೆಚ್ಚಿ ಬೀಳಿಸಿತು. ಹಾಗೆಯೇ ಯೋಚಿಸುತ್ತಾ ಛಾವಣಿಯತ್ತ ನೋಡಿದಾಗ ಕಾಣಿಸಿದ ಗಿರಗಿರನೆ ತಿರುಗುತ್ತಿದ್ದ ಫ್ಯಾನಿನಂತೆ ತಾನೂ ತಿರುಗತೊಡಗಿದ್ದೇನೆ, ಉದ್ಯೋಗವೆಂಬ ಛಾವಣಿಗೆ ಜೋತು ಬಿದ್ದು, ಎಂದೆನಿಸಿತು. ಮತ್ತೆ ಕಛೇರಿಗೆ ತಡವಾಗುತ್ತಿದೆಯೆಂಬ ಯೋಚನೆ ಬಂದದ್ದೇ ಮತ್ತಷ್ಟು ವೇಗವಾಗಿ ತಿರುಗತೊಡಗಿದ. ಭಾಸ್ಕರ!
ಕಛೇರಿಯಲ್ಲಿ ಸದ್ದಿಲ್ಲದೆ ವೇಗವಾಗಿ ತಿರುಗುತ್ತಿದ್ದವನು ಮಧ್ಯಾಹ್ನ ಊಟಕ್ಕೆಂದು ಕುಳಿತಾಗ ತನ್ನೊಂದಿಗೆ ತಿರುಗುತ್ತಿರುವ ಸೀಲಿಂಗ್ ಫ್ಯಾನುಗಳು ಎಷ್ಟಿವೆ ಎಂದು ಸುತ್ತಲೂ ನೋಡತೊಡಗಿದ. ವಿವಿಧ ಬಣ್ಣ, ಆಕಾರ, ಗಾತ್ರಗಳ ಫ್ಯಾನ್ ಗಳನ್ನು ಕಂಡು ನಗು ಬಂತು. ತನ್ನದೇ ಯೋಚನೆಯಲ್ಲಿ ಮುಳುಗಿದ್ದವನಿಗೆ ಸಹೋದ್ಯೋಗಿ ರಾಜೀವ ತನ್ನ ಮುಖವನ್ನು ದಿಟ್ಟಿಸಿ ಏನೋ ಹೇಳುತ್ತಿದ್ದಾನೆಂದೆನಿಸಿದಾಗ ಅವನತ್ತ ಗಮನ ಹರಿಸಿದ.
''ಈ ವೀಕೆಂಡ್ ಎಲ್ಲಾದರೂ ಟ್ರಿಪ್ ಹೋಗಿ ಬರೋಣ?'', ರಾಜೀವ ಕೇಳಿದ. ಭಾಸ್ಕರ ಮಾತಾಡಲಿಲ್ಲ. ಆಸಲಿಗೆ ಭಾಸ್ಕರನಿಗೆ ವಾರಾಂತ್ಯದ ರಜೆಯಲ್ಲಿ ಮಾಡಲು ಏನೂ ಕೆಲಸವಿರಲಿಲ್ಲವಾದರೂ ಪ್ರವಾಸ ಹೋಗುವಷ್ಟು ಇಚ್ಛಾಶಕ್ತಿಯಾಗಲಿ, ಜೀವನ ಪ್ರೀತಿಯಾಗಲಿ ತನ್ನಲ್ಲಿದೆಯೇ ಎಂಬ ಅನುಮಾನ ಕಾಡಿತಾದ್ದರಿಂದ ''ಬರಲಾಗುವುದಿಲ್ಲ'', ಎನ್ನಬೇಕೆನಿಸಿತು. ರಾಜೀವ ಬಿಡದೆ ಕಾಡಿದ, ''ಹೋಗಿ ಬರೋಣ, ಇಲ್ಲೀ ೪೦ ಕಿ.ಮೀ. ದೂರದಲ್ಲಿ ಒಂದು ಜಲಪಾತವಿದೆ, ಫ್ಯಾನ್ಟಾಸ್ಟಿಕ ಜಾಗ.'' ಕೊನೆಗೆ ಇಲ್ಲ ಎನ್ನಲೂ ಇಚ್ಛಾಶಕ್ತಿ ಸಾಲದೆ ಭಾಸ್ಕರ ಪ್ರವಾಸ ಹೋಗಲು ಒಪ್ಪಿಕೊಂಡ.
************************************************************************************
ಶನಿವಾರ ಮುಂಜಾನೆ ಭಾಸ್ಕರ, ರಾಜೀವ ಮತ್ತು ಅವನ ಮತ್ತಿಬ್ಬರು ಸ್ನೇಹಿತರಾದ ಸಮೀರ್ ಮತ್ತು ಶ್ರೀಕಾಂತರು ಎರಡು ಬೈಕುಗಳಲ್ಲಿ ಜಲಪಾತದತ್ತ ಹೊರಟರು. ಉಳಿದವರ ಉತ್ಸಾಹ ಭಾಸ್ಕರನಲ್ಲಿ ಕುತೂಹಲ ಮೂಡಿಸುತ್ತಿತ್ತು. ಇವರೆಲ್ಲರೂ ತಾನು ಬದುಕುತ್ತಿರುವ ಪ್ರಪಂಚದ ಭಾಗವೇ ಅಲ್ಲವೇನೋ ಎನಿಸುತ್ತಿತ್ತು. ''ಇಷ್ಟು ಸಂತೋಷ ಪಡಲಿಕ್ಕೆ ಕಾರಣವಾದರೂ ಏನಿದೆ ಬಾಳಿನಲ್ಲಿ!'' ''ಹೆಸರಿಲ್ಲದ ಜಲಪಾತಕ್ಕೆ ಹೊರಟ ನಾಲ್ವರು ಅನಾಮಿಕರು'' ಎಂಬ ವಿಷಯದ ಬಗ್ಗೆ ಏನಾದರೂ ಬರೆಯಬೇಕೆನಿಸಿತು. ಕಥೆ, ಕವನ ಬರೆಯುವ ತನ್ನ ಅಭ್ಯಾಸ ಈ ಉದ್ಯೋಗ ಸೇರಿದ ಮೇಲೆ ಸತ್ತು ಹೋಗಿದ್ದು ಹೇಗೆ ಎಂದು ಯೋಚಿಸತೊಡಗಿದ. ಹೇಳಿಕೊಳ್ಳುವಂಥ ಯಾವ ಕಾರಣವೂ ಹೊಳೆಯಲಿಲ್ಲ. ಅದರ ಬಗ್ಗೆ ಯೋಚಿಸುವಷ್ಟು ತಾಳ್ಮೆ ತನ್ನಲ್ಲಿಲ್ಲ ಎನಿಸಿ ಮತ್ತೆ ತನ್ನ ಜೊತೆಗಾರರತ್ತ ನೋಡಿದ. ಮತ್ತೆ ಅವರ ಉತ್ಸಾಹಕ್ಕೆ ಕಾರಣವೇನಿರಬಹುದೆಂದು ಯೋಚಿಸತೊಡಗಿದ.

ಜಲಪಾತ ತಲುಪಲು ಒಂದು ಕಿಲೋ ಮೀಟರಿನಷ್ಟು ದೂರ ನಡೆಯಬೇಕಿತ್ತು, ಬೈಕು ಕೂಡ ಹೋಗದಷ್ಟು ಇಕ್ಕಟ್ಟಾದ ರಸ್ತೆಯಿತ್ತು. ಇವರು ನಾಲ್ವರು ನಡೆಯತೊಡಗಿದರು. ಸಮೀರ ಉತ್ಸಾಹದಿಂದ ದನಿಯೆತ್ತರಿಸಿ ಮಾತನಾಡುತ್ತಿದ್ದ, ದಾರಿಯಲ್ಲಿದ್ದ ಇತರ ಪ್ರವಾಸಿಗರ ಬಗ್ಗೆ ತಮಾಷೆ ಮಾಡಿಕೊಳ್ಳುತ್ತ ನಡೆದಿದ್ದ. ಅವನೊಂದಿಗೆ ಉಳಿದವರು ಸೇರಿಕೊಂಡರು. ಭಾಸ್ಕರ ಮಾತ್ರ ಮಾತಾಡದೆ ಹೆಜ್ಜೆ ಹಾಕುತ್ತಿದ್ದ. ಜಲಪಾತದ ಬಳಿ ತಲುಪಿದಾಗ ಉಳಿದವರು ಕೇಕೆ ಹಾಕುತ್ತ ಓಡಿದರು. ಅವರ ಉತ್ಸಾಹ ಭಾಸ್ಕರನಿಗೆ ಕೊಂಚ ಮಟ್ಟಿಗೆ ಹರಡಿತಾದರೂ ಅವನು ಸದ್ದಿಲ್ಲದೆ ಜಲಪಾತದತ್ತ ನಡೆದ.

ಭಾಸ್ಕರ ಜಲಪಾತದ ಬಳಿ ತಲುಪುವಷ್ಟರಲ್ಲಿ ಉಳಿದವರು ನೀರಿಗಿಳಿದಾಗಿತ್ತು. ಭಾಸ್ಕರ ಅವರನ್ನೇ ನೋಡುತ್ತ ನಿಂತ. ನೀರು ಹೆಚ್ಚು ರಭಸವಿಲ್ಲದೆ ನಯವಾಗಿ ಬೀಳುತ್ತಿತ್ತು. ಸುಮ್ಮನೆ ನಿಂತು ಧುಮ್ಮಿಕ್ಕುತ್ತಿದ್ದ ನೀರನ್ನೇ ದಿಟ್ಟಿಸುತ್ತಿದ್ದ ಭಾಸ್ಕರನಿಗೆ ಒಮ್ಮೆಗೆ ವೇಷ ಕಳಚಿ ನೀರಿಗಿಳಿವ ಆಸೆ ಹುಟ್ಟಿತು. ಕೂಡಲೇ ಶರಟು ಕಳಚಿ, ಪರ್ಸ್, ಮೊಬೈಲ್ ಫೋನ್ ಮುಂತಾದವನ್ನು ಜೊತೆಗೆ ತಂದಿದ್ದ ಬ್ಯಾಗಿನಲ್ಲಿಟ್ಟು ನೀರಿನತ್ತ ನಡೆದ ಭಾಸ್ಕರ. ನೀರು ಬೀಳುತ್ತಿದ್ದ ಸ್ಥಳಕ್ಕೆ ಕೊಂಚ ಹೆಚ್ಚೇ ಅನ್ನಿಸುವಷ್ಟು ಉತ್ಸಾಹದಿಂದ ಓಡಿದ ಭಾಸ್ಕರ ಇನ್ನೇನು ಅಲ್ಲಿಗೆ ತಲುಪಬೇಕು ಅನ್ನುವಷ್ಟರಲ್ಲಿ ಕಾಲು ಜಾರಿ ಅವನಿಗಿಂತ ಆಳಕ್ಕಿದ್ದ ಗುಂಡಿಗೆ ಬಿದ್ದು ಬಿಟ್ಟ. ಬಿದ್ದವನ ಕೈ ಮಾತ್ರ ನೀರಿನ ಮೇಲೆ ಕಾಣಿಸುತ್ತಿತ್ತು. ಸಮೀರ ಕೂಡಲೆ ಓಡಿ ಬಂದು ಭಾಸ್ಕರನ ಕೈ ಹಿಡಿದುಕೊಳ್ಳಲು ಪ್ರಯತ್ನಿಸಿದ. ಆದರೆ ಭಾಸ್ಕರ ಕೊಸರಾಡಿ ಕೈ ಬಿಡಿಸಿಕೊಂಡ! ಎಲ್ಲರೂ ಗಾಬರಿಯಿಂದ ಸುತ್ತಲೂ ನೆರೆದು ತೇಲುತ್ತಾ ಮುಳುಗುತ್ತಾ ಒದ್ದಾಡುತ್ತಿದ್ದ ಭಾಸ್ಕರನನ್ನು ನೋಡುತ್ತಿದ್ದರು.

ನೀರಿನಲ್ಲಿ ಮುಳುಗಿದ್ದ ಭಾಸ್ಕರನಿಗೆ ಹೊಸತೊಂದು ಲೋಕಕ್ಕೆ ಕಾಲಿಟ್ಟಂತೆನಿಸಿತು. ಉಸಿರುಗಟ್ಟಿದಂತೆನಿಸಿದರೂ ಕೂಡ ಯಾವುದೋ ಹೊಸ ಶಕ್ತಿ ತನ್ನನ್ನು ಆವರಿಸಿದಂತೆ, ವರ್ಷಗಳಿಂದ ಮೈಯಲ್ಲಿದ್ದ ಯಾವುದೋ ಬೇನೆ ದೂರಾದಂತೆ.... ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ನಿಂತು ಹೋದಂತೆ....

ಎರಡು ನಿಮಿಷಗಳಲ್ಲಿ ಒಮ್ಮೆಗೆ ಮೇಲಕ್ಕೆದ್ದ ಭಾಸ್ಕರ ಪಕ್ಕದಲ್ಲಿದ್ದ ಕಲ್ಲನ್ನು ಹಿಡಿದುಕೊಂಡು ನೀರಿನಿಂದ ತನ್ನ ದೇಹವನ್ನು ಹೊರಗೆಳೆದುಕೊಂಡ. ಮೇಲಕ್ಕೆದ್ದವನೇ ಎಲ್ಲರೂ ಅವನತ್ತ ಬಂದು, ''ಏನೂ ಆಗಿಲ್ಲ ತಾನೇ?'' ಎಂದು ವಿಚಾರಿಸಿಕೊಳ್ಳುತ್ತಿದ್ದರೂ ಗಮನ ಕೊಡದೆ, ರಾಜೀವನತ್ತ ನಡೆದು, ''ತುಂಬಾ ಥ್ಯಾಂಕ್ಸ್ ಕಣೊ, ಇಲ್ಲಿಗೆ ಕರೆದುಕೊಂಡು ಬಂದಿದ್ದಕ್ಕೆ!'' ಎಂದ. ನಂತರ ಹರಿಯುತ್ತಿದ್ದ ಜಲಪಾತದ ಕೆಳಗೆ, ಪುಟಿಯುತ್ತಿದ್ದ ಹೊಸ ನೀರಿಗೆ ಮೈ ಮುಖ ಒಡ್ಡಿ ಮುಗುಳ್ನಗುತ್ತ ನಿಂತ, ಯಾವುದೋ ರಹಸ್ಯ ತನಗೆ ಮಾತ್ರ ತಿಳಿದಿದೆ ಎನ್ನುವಂತೆ, ಉಳಿದವರೆಲ್ಲರೂ ಗಾಬರಿ, ಆಶ್ಚರ್ಯದಿಂದ ಇವನನ್ನೇ ನೋಡುತ್ತಿದ್ದಂತೆ!

Apr 19, 2008

ಹಾಗಲಕಾಯಿ

"ಮತ್ತದೇ ಹಾಗಲಕಾಯಿ ಪಲ್ಯ, ಥತ್! " - ವಿಶ್ವ ಮುಖ ಸಿಂಡರಿಸಿಕೊಂಡರೆ, ತಾಯಿ ರೇಣುಕಮ್ಮ ಮುಗುಳ್ನಕ್ಕರು. "ಮನೆಯಲ್ಲಿ ಒಬ್ಬರಿಗೆ ಡಯಾಬಿಟಿಸ್ ಬಂದರೆ ಮನೆಯವರಿಗೆಲ್ಲ ಮದ್ದು ಮಾಡುವುದು ಯಾವ ನ್ಯಾಯ?", ವಿಶ್ವ ದನಿಯೆತ್ತರಿಸಿ ಕೇಳಿದ, ಮನೆಯಲ್ಲಿ ತಂದೆಯಿಲ್ಲ ಎಂಬ ಧೈರ್ಯದಲ್ಲಿ!
"ಗೊತ್ತಿಲ್ವಾ ನಿನಗೆ? ಅಪ್ಪನಿಗೆ ಡಯಾಬಿಟಿಸ್ ಹಿಡಿತಕ್ಕೆ ಬರಲು ಪಥ್ಯ ಮಾಡಬೇಕಂತ", ರೇಣುಕಮ್ಮ ವಿಶ್ವನನ್ನು ಗದರಿಸುವಂತೆ ಕೇಳಿದರು. "ಅದಕ್ಕೆ ಮನೆಯವರಿಗೆಲ್ಲ ಮದ್ದು ಮಾಡ್ಬೇಕಾ?", ವಿಶ್ವ ಪುನಃ ಕೇಳಿದ, ವಿಪರೀತ ಕೋಪಗೊಂಡವನಂತೆ. ಅಷ್ಟರಲ್ಲಿ ಹೊರಗೆ ಸದ್ದಾದ್ದರಿಂದ ತಂದೆಯ ಆಗಮನವಾಗಿದೆ ಎಂದು ಊಹಿಸಿದ ವಿಶ್ವ ಸದ್ದಿಲ್ಲದೆ ಊಟ ಮಾಡತೊಡಗಿದ. ರೇಣುಕಮ್ಮ ಪುನಃ ಮುಗುಳ್ನಕ್ಕು ಸುಮ್ಮನಾದರು.
ತಂದೆ ಗೋವಿಂದಯ್ಯ ಊಟಕ್ಕೆ ಕುಳಿತಾಗ ವಿಶ್ವ ಕುಳಿತಲ್ಲೇ ಮಿಸುಕಾಡಿ ತಂದೆಗೆ ಗೌರವ ಸೂಚಿಸಿದಂತೆ ಮಾಡಿದ! ಗೋವಿಂದಯ್ಯ ನಿರ್ಲಿಪ್ತ ಭಾವದಿಂದ ಹಾಗಲಕಾಯಿ ಪಲ್ಯದಲ್ಲಿ ಊಟ ಮಾಡುತ್ತಿದ್ದರೆ ವಿಶ್ವ ಅನ್ನ ಕಲೆಸುವವನಂತೆ ನಾಟಕವಾಡುತ್ತ ಕುಳಿತ. ಗೋವಿಂದಯ್ಯನವರು ಊಟ ಮುಗಿಸಿ ಎದ್ದಾಗ ಇನ್ನೂ ಕುಳಿತೇ ಇದ್ದ ವಿಶ್ವನನ್ನು ನೋಡಿ ನಗುತ್ತಾ, "ಇನ್ನೂ ಆಗ್ಲಿಲ್ವಾ?", ಎಂದು ಕೇಳಿದರೆ ವಿಶ್ವ ಕುಳಿತಲ್ಲೇ ಮಿಸುಕಾಡಿದ.

**** ********************************************************************************
"ನಿತ್ಯ ಹಾಗಲಕಾಯಿ ತಿಂದು ತಿಂದು ವಿಶ್ವನಿಗೆ ಸಾಕುಸಾಕಾಗಿ ಹೋಗಿದೆಯಂತೆ." - ರೇಣುಕಮ್ಮ ಮೆಲ್ಲಗೆ ವಿಷಯ ಪ್ರಸ್ತಾಪಿಸಿದರು, ಒಂದು ಸಂಜೆ. "ನಾವೆಲ್ಲ ಅದನ್ನೇ ತಾನೇ ತಿನ್ನುವುದು? ಅವನೊಬ್ಬನದೇನು ಸ್ಪೆಷಲ್ಲು?", ಗೋವಿಂದಯ್ಯ ವಿಷಯಕ್ಕೆ ಯಾವ ಮಹತ್ವವನ್ನೂ ಕೊಡದೆ ಕೇಳಿದರು, "ಎಲ್ಲಿ ಅವನು?". "ಫ್ರೆಂಡ್ಸ್ ಜೊತೆ ಎಲ್ಲೋ ಹೊರಗೆ ಹೋಗಿದ್ದಾನೆ.", ರೇಣುಕಮ್ಮ ಉತ್ತರಿಸಿದರು. ಒಮ್ಮೆಗೆ ಸಿಡಿದ ಗೋವಿಂದಯ್ಯ, '' ಹಾಳು ಫ್ರೆಂಡ್ಸ್ ಜೊತೆ ಸೇರಿ ಪೋಲಿ ಬಿದ್ದು ಹೋಗ್ತಾನೆ! ಮತ್ತೆ ನಮ್ಮ ಹಿಡಿತಕ್ಕೆ ಸಿಗೋದಿಲ್ಲ.'', ಎಂದರು ಕೈಯಲ್ಲಿದ್ದ ಪತ್ರಿಕೆಯನ್ನು ಟೀಪಾಯಿಯಯತ್ತ ಬೀಸುತ್ತ. ಪತಿರಾಯರು ಒಮ್ಮೆಗೆ ಸಿಡಿದದ್ದನ್ನು ಕಂಡು ಒಂದು ಕ್ಷಣ ಗಲಿಬಿಲಿಗೊಂಡ ರೇಣುಕಮ್ಮ ಮರುಕ್ಷಣ ಚೇತರಿಸಿಕೊಂಡು ಹೇಳಿದರು, "ಹಾಗೇನಿಲ್ಲ. ಅವನಿಗೆ ಅಂಥ ಸ್ನೇಹಿತರು ಇಲ್ಲ." ಗೋವಿಂದಯ್ಯನವರ ಸಿಟ್ಟು ಮತ್ತೂ ಏರಿತು, "ಗೊತ್ತುಂಟು, ಗೊತ್ತುಂಟು! ", ಎಂದು ಮುಂದೇನು ಹೇಳಬೇಕೆಂದು ತೋಚದೆ ಸುಮ್ಮನೆ ಭುಸುಗುಟ್ಟತೊಡಗಿದರು. ರೇಣುಕಮ್ಮ ಸುಮ್ಮನಾದರು.
ಅಷ್ಟರಲ್ಲಿ ಯಾವುದೋ ಹಾಡು ಗುನುಗುತ್ತಾ ವಿಶ್ವ ಒಳಬಂದವನು ತಂದೆಯಿರುವುದನ್ನು ಕಂಡು ಒಮ್ಮೆಗೆ ಹಾಡು ನಿಲ್ಲಿಸಿ ಸಾಧು ಹಸುವಿನಂತೆ ತನ್ನ ಕೋಣೆಯತ್ತ ಹೆಜ್ಜೆ ಹಾಕಿದ. "ಎಲ್ಲಿ ಹೋಗಿದ್ದೆ?", ಗೋವಿಂದಯ್ಯನವರು ದನಿಯೆತ್ತರಿಸಿ ಸಿಟ್ಟಿನಿಂದ ಕೇಳಿದರು. ವಿಶ್ವ ಏನು ಹೇಳಲೂ ತೋಚದೆ, ''ಅದು... ಫ್ರೆಂಡ್ಸ್ ಜೊತೆ...", ಎಂದನಷ್ಟೆ ಹೆದರುತ್ತ. ಗೋವಿಂದಯ್ಯನವರು ಮತ್ತೊಮ್ಮೆ ಸಿಡಿದರು, "ಅವರ ಸಹವಾಸ ಮಾಡ್ಬೇಡ. ಜಾತಿಗೆಟ್ಟ ಪೋಲಿಗಳು!".
ವಿಶ್ವನಿಗೆ ಸಿಟ್ಟು ನುಗ್ಗಿ ಬಂದರೂ ಅದನ್ನು ಮಾತುಗಳಲ್ಲಿ ವ್ಯಕ್ತಪಡಿಸಲಾಗದೆ ಹಲ್ಲು ಕಡಿಯುತ್ತ, ತಂದೆಯನ್ನು ದುರುಗುಟ್ಟುತ್ತ

ನಿಂತ. "ಹಾಗಲಕಾಯಿ ತಿನ್ನಲಿಕ್ಕಾಗೋದಿಲ್ವಂತೆ ನಿನಗೆ?", ಗೋವಿಂದಯ್ಯ ವ್ಯಂಗ್ಯಭರಿತ ದನಿಯಲ್ಲಿ ಕೇಳಿದರು. "ಯಾವಾಗಲಾದರೊಮ್ಮೆಯಾದರೆ ಸರಿ. ನಿತ್ಯ ಅದನ್ನೇ ತಿನ್ಲಿಕ್ಕೆ ನನಗಾಗೋದಿಲ್ಲ. ", ವಿಶ್ವ ಸಿಟ್ಟಿನಲ್ಲಿ ಒಂದೇ ಉಸಿರಿಗೆ ಹೇಳಿಬಿಟ್ಟ. "ನಾನು ತಿನ್ನುತ್ತಿಲ್ವಾ?", ರಭಸದಲ್ಲಿ ಕೇಳಿದರು ಗೋವಿಂದಯ್ಯ. ಅದೇ ರಭಸದಲ್ಲಿ ವಿಶ್ವ ಉತ್ತರಿಸಿದ, "ನನಗೆ ಡಯಾಬಿಟಿಸ್ ಇಲ್ವಲ್ಲ?" ಏರುತ್ತಿದ್ದ ಗೋವಿಂದಯ್ಯನವರ ಸಿಟ್ಟು ತಾರಕಕ್ಕೇರಿತ್ತು. ಅದು ಒಮ್ಮೆಗೆ ಸ್ಫೋಟಿಸಿತು. ಕಚ್ಚಿದ ಸೊಳ್ಳೆಯತ್ತ ಕೈ ಬೀಸುವಂತೆ ಗೋವಿಂದಯ್ಯನವರು ರಪ್ಪನೆ ವಿಶ್ವನ ಕಪಾಳಕ್ಕೆ ಬೀಸಿದರು ತಮ್ಮ ಅಂಗೈಯನ್ನು. ಗೋವಿಂದಯ್ಯನವರ ಬಲಗೈ ವಿಶ್ವನ ಎಡಗೆನ್ನೆಯನ್ನು ಅಪ್ಪಳಿಸಿತು. ಒಂದು ಕ್ಷಣ ಎಲ್ಲಕ್ಕೂ ಫುಲ್ ಸ್ಟಾಪ್ ಬಿದ್ದಂತೆನಿಸಿತು ವಿಶ್ವನಿಗೆ. ರೇಣುಕಮ್ಮ ಮುಸು ಮುಸು ಅಳತೊಡಗಿದರು, ''ವಯಸ್ಸಿಗೆ ಬಂದ ಮಗನ ಮೇಲೆ ಯಾರಾದ್ರೂ ಕೈ ಮಾಡ್ತಾರ?". ಗೋವಿಂದಯ್ಯ ಮಾತಾಡಲಿಲ್ಲ. ಒಮ್ಮೆಗೆ ತಮ್ಮ ಹಾಗೂ ಮನೆಯವರ ನಡುವೆ ಗೋಡೆಯೊಂದು ಬೆಳೆದಂತೆ ಅನ್ನಿಸತೊಡಗಿತು ಅವರಿಗೆ. ಸುಮ್ಮನೆ ಕುರ್ಚಿಯಲ್ಲಿ ಕುಳಿತು ಆಲೋಚಿಸತೊಡಗಿದರು, ''ನನ್ನೆದುರು ಬಾಯಿ ಮಾಡುವಷ್ಟಕ್ಕಾಗಿದ್ದಾನ ಅವನು? ಕೊಟ್ಟದ್ದು ಸಾಲದು ಅವನಿಗೆ. ಇನ್ನೊಂದೆರಡು ಬಾರಿಸಬೇಕಿತ್ತು. '' , ಕುರ್ಚಿಯಿಂದ ಮೀಲೆದ್ದು ವಿಶ್ವನನ್ನು ದುರುಗುಟ್ಟಿ ಏನು ಮಾಡುವುದೆಂದು ಗೊತ್ತಾಗದೇ ಮತ್ತೆ ದೊಪ್ಪನೆ ಕುರ್ಚಿಯಲ್ಲಿ ಕುಳಿತರು! ******************************************************************************* ಮರುದಿನವೂ ವಾತಾವರಣ ತಿಳಿಯಾಗಿರಲಿಲ್ಲ. ಯಾರೂ ಯಾರೊಂದಿಗೂ ಮಾತಾಡಿರಲಿಲ್ಲ. ಸಂಜೆ ಗೋವಿಂದಯ್ಯನವರು ತಮ್ಮ ಕೋಣೆಯನ್ನು ಪ್ರವೇಶಿಸಿದಾಗ ಮೇಜಿನ ಮೇಲೆ ಪತ್ರವೊಂದು ಅವರಿಗಾಗಿ ಕಾಯುತ್ತಿತ್ತು. ಪತ್ರವನ್ನು ತೆರೆದು ವಿಶ್ವನ ಕೈ ಬರೆಹವನ್ನು ಗುರುತಿಸಿದ ಗೋವಿಂದಯ್ಯ ಕೂಡಲೇ ರೇಣುಕಮ್ಮನಲ್ಲಿ, '' ವಿಶ್ವ ಎಲ್ಲಿದ್ದಾನೆ ?", ಎಂದು ಕೇಳಿದರು ದನಿಯೆತ್ತರಿಸಿ. ತಾವಿದ್ದಲ್ಲಿಂದಲೀ ರೇಣುಕಮ್ಮನವರು, ''ಹೊರಗೆಲ್ಲೋ ಹೋಗಿದ್ದಾನೆ.'', ಎಂದರು ತಾವೂ ದನಿಯೆತ್ತರಿಸಿ. ಅವಸರ ಹಾಗೂ ಒಂದು ರೀತಿಯ ವಿಚಿತ್ರವಾದ ಗಾಬರಿಯಿಂದ ಗೋವಿಂದಯ್ಯನವರು ಪತ್ರವನ್ನೋದತೊಡಗಿದರು. --- ಪೂಜ್ಯ ತಂದೆಯವರಿಗೆ, ಈ ಪತ್ರವನ್ನು ನಾನು ಯಾವ ಸಿಟ್ಟಿನ ಭರದಲ್ಲೂ ಬರೆಯುತ್ತಿಲ್ಲ. ನಿನ್ನೆ ರಾತ್ರಿಯೆಲ್ಲಾ ನಿದ್ದೆಗೆಟ್ಟು ಆಲೋಚಿಸಿದ್ದೇನೆ. ನೀವು ಮೊನ್ನೆ ಮೊನ್ನೆಯವರೆಗೆ, ನಿಮಗೆ ಡಯಾಬಿಟಿಸ್ ಹಿಡಿದುಕೊಳ್ಳುವವರೆಗೆ , ರುಚಿರುಚಿಯಾದ ಅಡುಗೆ ತಿನ್ನುತ್ತಿರಲಿಲ್ಲವೇ? ನಿಮ್ಮ ಯೌವನದಲ್ಲಿ ಸ್ನೇಹಿತರ ಜೊತೆ ಓಡಾಡಿಲ್ಲವೇ, ಅವರ ಸಖ್ಯವನ್ನು ಆನಂದಿಸಿಲ್ಲವೇ? ತೀರ ಇತ್ತೀಚೆಗೆ ತಾನೇ ನೀವು ಸ್ನೇಹಿತರನ್ನೆಲ್ಲ ದೂರ ಮಾಡಿದ್ದು? ಅದೂ ಕೂಡ, ಅವರಿಂದ ಉಂಟಾಗುವ ವ್ಯಾವಹಾರಿಕ ತೊಂದರೆಗಳನ್ನು ಕಂಡಲ್ಲವೇ ನೀವು ಅವರನ್ನೆಲ್ಲ ದೂರ ಮಾಡಿದ್ದು? ಆದರೆ ನನಗಿನ್ನೂ ಇಪ್ಪತ್ತೈದರ ಆಸುಪಾಸು. ನಾನು ಈಗಿಂದೀಗಲೇ ನಿಮ್ಮ ಹಂತಕ್ಕೆ ಏರಬೇಕೆ? ಇಪ್ಪತ್ತೈದರ ನನ್ನ ಹಂತದಿಂದ ಅರವತ್ತರ ಹಂತಕ್ಕೆ ಹಾರಬೇಕೆ? Should I skip the stages between? ಎಲ್ಲಕ್ಕೂ ನನ್ನನ್ನು restrict ಮಾಡುವುದು ಸರಿಯೆಂದು ನಿಮಗೇ ಅನಿಸುತ್ತದೆಯೇ? - ಇದೆಲ್ಲ ಉತ್ತರ ಬಯಸಿ ಕೇಳಿದ ಪ್ರಶ್ನೆಗಳಲ್ಲ, ನನ್ನೊಳಗಿನ ಹಲುಬಿಕೆಗಳು ಅಷ್ಟೇ. - ಗೋವಿಂದಯ್ಯಪತ್ರವನ್ನು ಮಡಚಿ ಅದಿದ್ದಲ್ಲೇ ಇಟ್ಟರು. ನಂತರ ಕುರ್ಚಿಯಲ್ಲಿ ಕುಳಿತು ಆಲೋಚಿಸತೊಡಗಿದರು.

ಅಷ್ಟರಲ್ಲಿ ವಿಶ್ವ ಅವಸರವಸರವಾಗಿ ಗೋವಿಂದಯ್ಯನವರ ಕೋಣೆಯನ್ನು ಪ್ರವೇಶಿಸಿದವನೇ ಅಲ್ಲಿ ತಂದೆಯನ್ನು ಕಂಡು ಏನು ಮಾಡುವುದೆಂದು ತಿಳಿಯದೇ ನಿಂತುಕೊಂಡ. ಯಾವುದೂ ಉದ್ವೇಗದಲ್ಲಿ ಪತ್ರ ಬರೆದಿಟ್ಟ ವಿಶ್ವ ಅದನ್ನು ತಂದೆ ಓದುವ ಮೊದಲೇ ಹರಿದು ಹಾಕಲೆಂದು ಬಂದಿದ್ದ. ಆದರೀಗ ತಂದೆ ಪತ್ರ ಓದಿದ್ದು ಸ್ಪಷ್ಟವಾಗಿತ್ತು. ಗೋವಿಂದಯ್ಯ ಮಾತಾಡಲಿಲ್ಲ. ವಿಶ್ವ ಯಾವುದೂ ಚಿಂತೆಯಲ್ಲಿ ತನ್ನ ಕೋಣೆಯತ್ತ ನಡೆದ. ಸ್ವಲ್ಪ ಸಮಯದ ನಂತರ ಗೋವಿಂದಯ್ಯ ಚೀಲ ಹಿಡಿದು ಹೊರಗೆ ನಡೆದದ್ದು ಕಾಣಿಸಿತು ವಿಶ್ವನಿಗೆ.
**********************************************************************************
ರೇಣುಕಮ್ಮ ಅಳುಮುಖ ಹೊತ್ತು ಅಡುಗೆ ಮನೆಯಲ್ಲಿ ಕುಳಿತಿದ್ದರು. ಗೋವಿಂದಯ್ಯ ಅಡುಗೆ ಮನೆ ಹೊಕ್ಕು, "ಒಂದು sugerless ಕಾಫಿ ಕೊಡು. ", ಎಂದರು 'Sugerless' ಎನ್ನುವುದನ್ನು ಒತ್ತಿ ಹೇಳುತ್ತ. ರೇಣುಕಮ್ಮ ಗೂವಿಂದಯ್ಯನನನ್ನೇ ಸಿಟ್ಟಿನಿಂದ ದಿಟ್ಟಿಸುತ್ತ್ತಿದ್ದವರು ಅವರು ಹೇಳಿದ್ದು ಕೇಳಿ ಆಶ್ಚರ್ಯಗೊಂಡರು - ''ಸಿಹಿಗುಂಬಳ ತಂದಿದ್ದೇನೆ, ಸಾರು ಮಾಡು. ನನಗೆ ಸ್ವಲ್ಪ ಹಾಗಲಕಾಯಿ ಪಲ್ಯ ಇರಲಿ." ಹೇಳಿ ಮುಗಿಸಿ ಗೋವಿಂದಯ್ಯ ಮೆತ್ತಗೆ ಅಡುಗೆ ಮನೆಯಿಂದ ಹೊರ ನಡೆದರು, ರೇಣುಕಮ್ಮ ಆಶ್ಚರ್ಯದಿಂದ ಅವರನ್ನೇ ದಿಟ್ಟಿಸುತ್ತಿದ್ದಂತೆ!

ಕೊರತೆ

ಸುರಿವ ಮಳೆಯಲ್ಲಿ
ಎಷ್ಟು ದೂರ ನಡೆದರೂ
ಮನಸ್ಸು ತಂಪಾಗಲಿಲ್ಲ!

ಕೋಣೆಯ ತುಂಬಾ
ಜಗಮಗಿಸುವ ಬೆಳಕಿದ್ದರೂ
ಕತ್ತಲು ದೂರಾಗಲಿಲ್ಲ!

ಪಟದ ಮೇಲೆ
ಎಷ್ಟು ಬಣ್ಣ ಬಳಿದರೂ
ಚಿತ್ರ ಏಕೋ ಮೂಡುತ್ತಿಲ್ಲ!

ಶಬ್ದ ಹುಡುಕಿ
ಎಷ್ಟು ಸಾಲು ಗೀಚಿದರೂ
ಈ ಕವಿತೆ ಪೂರ್ಣವಾಗುವುದಿಲ್ಲ!