Nov 17, 2017

ಅಪೂರ್ಣ ಕಥೆ

ನಮ್ಮ ಊರಿನಲ್ಲಿ ಕಥೆ ಹೇಳುವವನೊಬ್ಬನಿದ್ದ. ದುಡ್ಡು ಕೊಟ್ಟರೆ ಯಾವ್ಯಾವುದೋ ಕಥೆಗಳನ್ನೆಲ್ಲ ಜೋಡಿಸಿ ಹೊಸ ಕಥೆ ಕಟ್ಟಿ ಹೇಳುತ್ತಿದ್ದ. ಕೆಲವು ಸಲ ಕಥೆಯನ್ನು ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿ ರೂಪಾಯಿ ಕೊಟ್ಟರೆ ಮಾತ್ರ ಮುಂದುವರೆಸುತ್ತಿದ್ದ.

ಸಣ್ಣಂದಿನಲ್ಲಿ ನಾನು ಕೈಯಲ್ಲಿ ಸ್ವಲ್ಪ ದುಡ್ಡು ಸೇರಿದಾಗ ಹೋಗಿ ಇವನ ಕಥೆ ಕೇಳುತ್ತಿದ್ದೆ. ಎಷ್ಟೋ ಸಲ ದುಡ್ಡು ಖಾಲಿಯಾಗಿ ಅರ್ಧ ಕಥೆ ಕೇಳಿ ವಾಪಾಸು ಬರುತ್ತಿದ್ದೆ. ಒಮ್ಮೆ ಅವನು ಒಂದು ಕಥೆ ಶುರು ಮಾಡಿದ :

"ಒಂದಾನೊಂದು ಕಾಲದಲ್ಲಿ ಒಬ್ಬ ಇದ್ದ. ಅವನ ಊರಿನಲ್ಲಿ ಎಲ್ಲರೂ ಅರ್ಥವಿಲ್ಲದ ಮಾತಾಡುತ್ತಿದ್ದರು.  ಗುರಿಯಿಲ್ಲದೆ ಬದುಕುತ್ತಿದ್ದರು. ಎಷ್ಟೋ ಜನ ಏನನ್ನೂ ಮಾಡದೆ ಸುಮ್ಮನೆ ಕುಳಿತಿರುತ್ತಿದ್ದರು. ಈ ಜನರ ರೀತಿ ಅವನಿಗೆ ಬೇಸರ ತರಿಸಿತು. ಅವನು ಆ ಊರನ್ನು ಬಿಟ್ಟು ನಡೆದ. ನಡೆಯುತ್ತಾ ಒಂದು ಹೊಸ ಊರನ್ನು ತಲುಪಿದ. ಈ ಊರಿನಲ್ಲಿ ಎಲ್ಲರೂ ತುಂಬ ಅರ್ಥವತ್ತಾಗಿ ಮಾತಾಡುತ್ತಿದ್ದರು. ಎಲ್ಲರೂ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಿದ್ದರು. ಸೋಮಾರಿತನ ಯಾರಲ್ಲೂ ಇರಲಿಲ್ಲ. ಅವನು ಆ ಊರಲ್ಲೇ ಉಳಿದ. ಆ ಊರು ಅವನಿಗೆ ಬದುಕಲ್ಲೊಂದು ಗುರಿಯನ್ನು ಕಲಿಸಿತು. ಆ ಊರಿನಲ್ಲಿ ಎಲ್ಲರೂ ಎಲ್ಲರನ್ನೂ ಪೂರ್ತಿಯಾಗಿ ಅರ್ಥ ಮಾಡಿಕೊಂಡಿದ್ದರು. ಎಲ್ಲರೂ ಎಲ್ಲರಿಗೂ ಬಹಳ ಮರ್ಯಾದೆ ಕೊಟ್ಟು ಮಾತಾಡುತ್ತಿದ್ದರು. ಬದುಕಿಗೆ ಯಾವುದೋ ಒಂದು ಉದ್ದೇಶ ಇರುವಂತೆಯೂ, ಪ್ರತಿಯೊಬ್ಬರೂ ಒಂದು ಮಹತ್ತರವಾದ ಕಾರಣದ ಸಣ್ಣದೊಂದು ಭಾಗವನ್ನಾದರೂ ಪೂರ್ತಿ ಮಾಡುವುದಕ್ಕಾಗಿಯೇ ಪ್ರಪಂಚದಲ್ಲಿ ಹುಟ್ಟಿರುವುದಾಗಿಯೂ ಅವನು ನಂಬಿದ. ಎಷ್ಟೋ ವರ್ಷ ಇದು ನಡೆಯಿತು. ಆದರೆ ಕೊನೆಗೊಂದು ದಿನ ಅವನಿಗೆ ಅರ್ಥವತ್ತಾದ ಬದುಕು ನಿರರ್ಥಕ ಅನ್ನಿಸಿತು. ಅರ್ಥವಿರುವುದೆಲ್ಲವೂ ಭಾರ ಅನ್ನಿಸಿತು, ಬಂಧನ ಅನ್ನಿಸಿತು."

ಇಷ್ಟಕ್ಕೆ ನಿಲ್ಲಿಸಿ, "ಕಾಸು ಕೊಡು.", ಎಂದ. ನನ್ನಲ್ಲಿ ದುಡ್ಡು ಖಾಲಿಯಾಗಿತ್ತು. ಅವತ್ತು ಅವನು ಹೇಳಿದ ಅಪೂರ್ಣ ಕಥೆಯ ಅಂತ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಮನೆಗೆ ನಡೆದೆ. ಇದಾದ ಬಳಿಕ ನಾನು ನನ್ನ ಓದು ಮುಗಿಸುವುದರಲ್ಲಿ ಮತ್ತು ಒಂದು ಉದ್ಯೋಗ ದೊರಕಿಸಿಕೊಳ್ಳುವುದರಲ್ಲಿ ಕಳೆದು ಹೋದೆ. ಉದ್ಯೋಗಕ್ಕಾಗಿ ಊರು ಬಿಟ್ಟೆ. ಊರಿಗೆ ಯಾವತ್ತಾದರೂ ಹೋದಾಗಲೂ ಕಥೆ ಕೇಳಲು ಪುರುಸೊತ್ತಿರುತ್ತಿರಲಿಲ್ಲ. ನಾನು ಆ ಅಪೂರ್ಣ ಕಥೆಯನ್ನು ಮರೆತೆ.

***

ಮತ್ತೆ ಯಾವತ್ತೋ ಆ ಕಥೆ ನನ್ನನ್ನು ಕಾಡತೊಡಗಿತು. ಅರ್ಥವಿರುವುದೆಲ್ಲವೂ ಭಾರವೆಂದನ್ನಿಸಿದವನು ಮುಂದೇನು ಮಾಡಿರಬಹುದು? ಮತ್ತೆ ತನ್ನ ಊರಿಗೆ ವಾಪಾಸು ಹೋಗಿರಬಹುದೇ? ಆ ಊರಿನ ಜನ ಇವನು ವಾಪಾಸು ಹೋದಾಗಲೂ ಹಾಗೆಯೇ ಅರ್ಥವಿಲ್ಲದ ಮಾತಾಡಿಕೊಂಡು ಬದುಕುತ್ತಿದ್ದಿರಬಹುದೇ?

ನಾನು ಊರಿಗೆ ಹೋದಾಗ, ವಾಪಾಸು ಹೊರಡುವ ಸಂಜೆ ಕಥೆ ಹೇಳುವವನ ಮನೆಗೆ ಹೋದೆ. ಈಗ ನನ್ನ ಕೈತುಂಬ ಹಣ ಇತ್ತು. ಕಥೆ ಪೂರ್ತಿಯಾಗುವವರೆಗೂ ರೂಪಾಯಿ ಕೊಡಲು ತಯಾರಿದ್ದೆ. ಆದರೆ ರಾತ್ರಿ ನಾನು ಹೊರಡಲಿದ್ದ ಬಸ್ಸನ್ನು ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ಹಾಗಾಗಿ ಬೇಗ ಬೇಗ ಕಥೆ ಹೇಳಿ ಮುಗಿಸು ಅನ್ನಬೇಕು ಅಂದುಕೊಂಡು ಅವನ ಮನೆಯ ಒಳಗೆ ನಡೆದೆ.

ಅವನು ಹಾಸಿಗೆ ಹಿಡಿದಿದ್ದ. ಏನೋ ಖಾಯಿಲೆ ಹಿಡಿದು ನಿತ್ರಾಣವಾಗಿದ್ದ. ಅವನಿಗೆ ನನ್ನ ಗುರುತು ಹತ್ತಲಿಲ್ಲ. ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಆದರೂ ಒಮ್ಮೆ ಪ್ರಯತ್ನಿಸೋಣವೆಂದು ಅವನಿಗೆ ಆ ಅಪೂರ್ಣ ಕಥೆಯನ್ನು ನೆನಪಿಸಿ ಅದನ್ನು ಪೂರ್ತಿ ಮಾಡಲು ಕೇಳಿಕೊಂಡೆ. " ನನಗೆ ಹೆಚ್ಚು ಸಮಯವಿಲ್ಲ. ಸ್ವಲ್ಪ ಬೇಗ ಬೇಗ ಹೇಳಿದರೆ ಒಳ್ಳೆಯದಿತ್ತು.", ಎಂದೆ.

ಅದಕ್ಕೆ ಅವನು, "ನನಗೂ ಹೆಚ್ಚು ಸಮಯವಿಲ್ಲ.", ಎಂದು ನಕ್ಕ. " ಕಾಸು ಕೊಡು.", ಎಂದು ಕೈ ಚಾಚಿದ. ನಾನು ನೂರು ರೂಪಾಯಿ ಇಟ್ಟೆ.

"ಅರ್ಥವಿರುವುದೆಲ್ಲವೂ ಭಾರ, ಬಂಧನ ಅನ್ನಿಸಿದ ಮೇಲೆ ಅವನು ಆ ಊರನ್ನೂ ಬಿಟ್ಟು ನಡೆದ. ನಡೆಯುತ್ತಾ ಒಂದು ಹೊಸ ಊರು ತಲುಪಿದ. ಈ ಊರಿನಲ್ಲಿ ಮಾತಾಡುವವರೇ ಕಡಿಮೆ ಇದ್ದರು. ಕೆಲವೇ ಕೆಲವು ಜನ ಮಾತಾಡಿದರೆ ಉಳಿದವರು ಅದಕ್ಕೆ ಪ್ರತಿಕ್ರಿಯಿಸದೆ ತಮ್ಮ ಕೆಲಸ ಮಾಡಿಕೊಂಡಿರುತ್ತಿದ್ದರು. ಅವನು ಆ ಊರಲ್ಲಿ ಉಳಿದ. ಅರ್ಥವೇ ಇರದ ಮಾತಾಡತೊಡಗಿದ. ಅವನಿಗೆ ಮನಸ್ಸು ಹಗುರವಾಯಿತು. ಸ್ವಾತಂತ್ರ್ಯ ಸಿಕ್ಕಂತೆ ಅನ್ನಿಸಿತು. ಎಲ್ಲ ಬಂಧನವೂ ಕಳಚಿದಂತೆ ಅನ್ನಿಸಿತು.

" ಅವನ ಮಾತು ಕೇಳಿಸಿಕೊಂಡ ಕೆಲವರು ಅವನು ಬಹಳ ಗೂಢವಾದದ್ದೇನನ್ನೋ ಹೇಳುತ್ತಿದ್ದಾನೆ ಎಂದುಕೊಂಡರು. ಅವನ ಮಾತಲ್ಲಿ ಏನೋ ರಹಸ್ಯವಿರಬೇಕು ಅಂದುಕೊಂಡ ಜನ ಅವನನ್ನು ಒಬ್ಬ ದಾರ್ಶನಿಕ ಎಂದು ಕೊಂಡಾಡಿದರು. ಅವನ ಮಾತಿಗೆ ಒಬ್ಬೊಬ್ಬರು ಒಂದೊಂದು ಅರ್ಥ ಹಚ್ಚಿ ಹೇಳಿದರು. ಅವನ ಮಾತಿಗೆ ಸಾವಿರಾರು ಅರ್ಥಗಳು ಬಂದದ್ದರಿಂದ ಅವನಿಗೂ ಸಂತೋಷವೇ ಆಯಿತು."

ಇಷ್ಟಕ್ಕೆ ನಿಲ್ಲಿಸಿ, "ಕಾಸು ಕೊಡು.", ಎಂದ.

ನಾನು ಐನೂರು ರೂಪಾಯಿ ಇಟ್ಟು, " ಬೇಗ ಹೇಳು. ಸಮಯ ಇಲ್ಲ.", ಎಂದೆ.

ಅವನು, "ಒಮ್ಮೆ ಆ ಊರಿಗೊಬ್ಬ ಹೊಸಬ ಬಂದ. ಬಂದವನು ಅರ್ಥವಿರದ ಮಾತಾಡುತ್ತಿದ್ದ ಇವನ ಮಾತು ಕೇಳಿಸಿಕೊಂಡು ಅದನ್ನೆಲ್ಲ ಎಳೆಯೆಳೆಯಾಗಿ ಬಿಡಿಸಿಟ್ಟ. ಇದಕ್ಕೆ ಇಷ್ಟೇ ಅರ್ಥ, ಇದು ಅರ್ಥವಿಲ್ಲದ್ದು ಎಂದೆಲ್ಲ ವಿಂಗಡಿಸಿ ವಿವರಿಸಿದ. ಇವನು ಎಷ್ಟೇ ಅರ್ಥದ ಸರಹದ್ದು ಮೀರಲು ನೋಡಿದರೂ, ಅವನು ಇವನನ್ನು ಎಳೆದು ತಂದು ಅರ್ಥದ ವ್ಯಾಪ್ತಿಯಲ್ಲಿ ಕಟ್ಟಿ ಹಾಕಿದ. ಕೊನೆಗೆ ಜನರು ಇವನ ಮಾತು ಕೇಳಿಸಿಕೊಳ್ಳುವುದು ನಿಲ್ಲಿಸಿ ಬರೀ ಅವನು ಕೊಡುವ ಟಿಪ್ಪಣಿಯನ್ನಷ್ಟೇ ಕೇಳಿಸಿಕೊಳ್ಳತೊಡಗಿದರು.

" ನೀನೇ ಹೇಳು, ಈಗವನು ಏನು ಮಾಡಬೇಕು?"

ಅವನು ಕೇಳದಿದ್ದರೂ ಸಾವಿರ ರೂಪಾಯಿಯನ್ನು ಅವನ ಕೈಯಲ್ಲಿಟ್ಟು, ಕೈಗಡಿಯಾರ ನೋಡಿಕೊಳ್ಳುತ್ತಾ, "ಹೆಚ್ಚು ಸಮಯ ಇಲ್ಲ. ಬೇಗ ಮುಗಿಸು.", ಎಂದೆ. ಜೇಬಿನಲ್ಲಿ ಇನ್ನೂ ರೂಪಾಯಿ ಇತ್ತು.

ದುಡ್ಡು ಹಿಡಿದ ಅವನ ಕೈ ವಾಲಿತು. ಅವನ ಸಮಯವೇ ಮುಗಿದಿತ್ತು. ಅಪೂರ್ಣ ಕಥೆಯ ಅಂತ್ಯದ ಬಗ್ಗೆ ಯೋಚಿಸಿದೆ. ಕಥೆ ಹೇಳುತ್ತಾ ಅವನು ಸತ್ತದ್ದರಿಂದ ಕಥೆಗೆ ಗಹನವಾದ ಅರ್ಥವೇನೋ ಇರಬೇಕೆಂದು ಭಾಸವಾಗಿ ಆ ಅರ್ಥ ನನ್ನ ಬಳಿ ಬರದೆ ಸತಾಯಿಸುತ್ತಾ ದೂರ ದೂರ ಓಡಿದಂತೆ ಅನ್ನಿಸಿ, ಏನು ಮಾಡುವುದೆಂದು ಅರ್ಥವಾಗದೆ ನಾನು ಅವನ ನಿರ್ಜೀವ ಕಂಗಳನ್ನೇ ದಿಟ್ಟಿಸುತ್ತಾ ನಿಂತೆ.

***

No comments:

Post a Comment