ಮುಂಬಾಗಿಲಲ್ಲಿ 'ಸತೀಶ್ weds ಸುಷ್ಮಾ' ಎಂಬ ಶೃಂಗಾರಗೊಂಡ ಫಲಕವಿತ್ತು. ಚೌಲ್ಟ್ರಿ ಪ್ರವೇಶಿಸುವವರಿಗೆ ಪನ್ನೀರು ಚಿಮುಕಿಸಿ, ಪ್ಲಾಸ್ಟಿಲ್ ನಗೆ ನಕ್ಕು, 'ಬನ್ನಿ', ಎಂದು ಸ್ವಾಗತಿಸುತ್ತಿದ್ದ ಯುವತಿ ಇದೇ ಮೊದಲ ಬಾರಿಗೆ ಸೀರೆ ಉಟ್ಟವಳಂತೆ ಕಂಡಳು. ಸ್ವಾಗತಿಸುವ ಕೆಲಸವಾದರೆ, ಸೀರೆ ಉಟ್ಟು ನಡೆದಾಡುವ ಕೆಲಸವಿಲ್ಲವೆಂದು ಅದನ್ನು ವಹಿಸಿಕೊಂಡಂತಿದ್ದಳು. ಒಳ ಹೋಗುತ್ತಿದ್ದಂತೆಯೇ ಹುಡುಗನ ಚಿಕ್ಕಪ್ಪ ನಮಸ್ಕರಿಸುತ್ತಿದ್ದರೆ, ಪಕ್ಕದಲ್ಲಿಯೇ ಹುಡುಗನೊಬ್ಬ ನಿಂತು ಎಲ್ಲರಿಗೂ ಒತ್ತಾಯಿಸಿ ಜ್ಯೂಸ್ ಕುಡಿಸುತ್ತಿದ್ದ.
ಗಂಡು-ಹೆಣ್ಣನ್ನು ಕ್ಯಾಮೆರಾ ಬೆಳಕು ಬೆಂಕಿಯಂತೆ ಸುಡುತ್ತಿತ್ತು. ಹುಡುಗಿ ಪ್ರತಿ ಫೊಟೋಗೂ ಫಳ್ಳನೆ ನಗೆ ಮಿಂಚು ಕೊಡುತ್ತಿದ್ದರೆ ಹುಡುಗನಿಗೆ ನಗು ಬರದೆ ಒದ್ದಾಡಿ ಸಾಕಾಗಿತ್ತು. ನಿಯಮಿತವಾಗಿ ಫೊಟೋಗ್ರಾಫರ್, 'Sir, smile please.', ಎಂದು ಹುಡುಗನನ್ನು ಒತ್ತಾಯಿಸುತ್ತಿದ್ದರೆ, ಅವನಿಗೆ ನಗು ಬರದೆ ಬರೀ ಬೆವರಷ್ಟೆ ಬಂದು ಬೆವರು ಒರೆಸಿ ಸುಸ್ತಾಗಿತ್ತು.
ನೆಂಟರು ಇಷ್ಟರು ಸುಖಾಸೀನರಾಗಿ ಹುಡುಗಿಯ ಸೀರೆ, ಹುಡುಗನ ಉದುರಿದ ಕೂದಲುಗಳ ಬಗ್ಗೆ ಮಾತಾಡುತ್ತಿದ್ದರು. ಹುಡುಗಿಯ ಸೋದರತ್ತೆ, 'ನಮ್ಮ ಕಡೆ ಎಷ್ಟೋ ಒಳ್ಳೆಯ ಹುಡುಗರಿದ್ದರು.', ಎನ್ನುತ್ತಿದ್ದಳು. ಅತ್ತ ಬೇರೆ ಸಾಲಿನಲ್ಲಿ ಹುಡುಗನ ಚಿಕ್ಕಮ್ಮ, 'ನಾನು ತುಂಬ ಒಳ್ಳೆಯ ಹುಡುಗಿಯರ ಫೋಟೋ ತೋರಿಸಿದ್ದೆ. ಎಲ್ಲ reject ಮಾಡಿ ಕಟ್ಕೊಂಡಿರೋ ಹುಡುಗಿ ನೋಡಿ, ಹೀಗಿದ್ದಾಳೆ.', ಎನ್ನುತ್ತಿದ್ದಳು. ಹುಡುಗ-ಹುಡುಗಿಯರು ಇದರ ಪರಿವೆ ಇಲ್ಲದೆ ಫೋಟೋಗಳಿಗೆ smile ಕೊಡುವುದನ್ನು ಮುಂದುವರೆಸಿದ್ದರು.
ಅತ್ತ ಆರ್ಕೆಸ್ಟ್ರಾದವರ ಅಬ್ಬರ ಜೋರಿತ್ತು. ಡಾ| ರಾಜ್ ಕುಮಾರರ ದನಿಯನ್ನು ಅನುಕರಿಸಿ, ಅನುಕರಿಸಿ ತನ್ನದೇ ದನಿಯನ್ನು ಮರೆತು ಹೋದಂತಿದ್ದ ಗಾಯಕ, ಏರುದನಿಯಲ್ಲಿ ಕಿರುಚಿ ಶ್ರೇಯಾ ಘೋಶಾಲಳನ್ನು ಮೀರಿಸಿದೆನೆಂದುಕೊಂಡ ಗಾಯಕಿ, ಮತ್ತು ಇವರ ನಡುವೆ ತಾವೇನು ಕಡಿಮೆ ಎಂದು ಹಿನ್ನೆಲೆ ಸಂಗೀತದ ಹುಡುಗರು. ಇವರೆಲ್ಲರ ದೆಸೆಯಿಂದ ಮದುವೆಗೆ ಬಂದಿದ್ದ ಮಧ್ಯವಯಸ್ಕರು, 'ಊಟ ಮಾಡಿ ಹೋಗೋಣ ಬೇಗ.', ಎಂದು ಮಗ-ಸೊಸೆಯನ್ನು ಒತ್ತಾಯಿಸತೊಡಗಿದ್ದರು.
ಸ್ಟೇಜಿನಲ್ಲಿ ಹುಡುಗಿಯ ಚಿಕ್ಕಪ್ಪನ ಮಗಳು ಮಿರಮಿರನೆ ಮಿಂಚುವ designer ಸೀರೆ ಉಟ್ಟು ಬಂದವರಿಗೆಲ್ಲ ನಮಸ್ಕರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಳು. ಅವಳ ಮನೆಯವರೇ ಅವಳಿಗೆ ಹಾಗೆ ಮಾಡಲು ಹೇಳಿದ್ದರು. ಈಗಾಗಲೇ ಮದುವೆಗೆ ಬಂದಿದ್ದ ಹಲವರು, 'ನಮ್ಮ ಕಡೆ ಒಬ್ಬ ಒಳ್ಳೆಯ ಹುಡುಗ ಇದ್ದಾನೆ.', ಎಂದು ಈ ಹುಡುಗಿಯ ಜಾತಕದ ಪ್ರತಿಯನ್ನು ಪಡೆದುಕೊಂಡಿದ್ದರು. ಕೆಲವು ಹುಡುಗರು ಕೆಲಸವಿಲ್ಲದೆ ಸ್ಟೇಜಿನ ಬಳಿ ಸುಳಿದಾಡತೊಡಗಿದ್ದರು.
ಇವೆಲ್ಲದರ ಮಧ್ಯೆ ಎಲ್ಲೋ ಮದುವೆಯ ಹುಡುಗಿಯನ್ನು ವರ್ಷಗಳ ಕಾಲ ಮನಸಲ್ಲಿ ಹೊತು ನಡೆದ ಹುಡುಗ ಕೈಯಲ್ಲಿ gift ಹಿಡಿದುಕೊಂಡು ಕುಳಿತಿದ್ದ. ತನ್ನ ಕನಸಿನ ಕನ್ಯೆಯನ್ನು ವರಿಸುತ್ತಿರುವ ಗಂಡನ್ನು ತನ್ನೊಂದಿಗೆ ಹೋಲಿಸಿಕೊಳ್ಳತ್ತಾ ತನ್ನ ಬದುಕನ್ನು ಹಳಿದುಕೊಳ್ಳುತ್ತಾ, ಜೀವನದ ಬಗ್ಗೆ ತನ್ನದೇ ಸಿದ್ಧಾಂತಗಳನ್ನು ರೂಪಿಸಿಕೊಳ್ಳುತ್ತಾ ಅವನು ಕುಳಿತಿದ್ದ.
ಊಟದ hall ನಲ್ಲಿ ಜನ ತುಂಬಿ ತುಳುಕುತ್ತಿದ್ದರು. ಅಲ್ಲೂ ಒಂದು T.V. ಹಾಕಿ ಮೇಲೆ ಸ್ಟೇಜಿನಲ್ಲಿ ನಡೆಯುತ್ತಿರುವುದನ್ನು ನೇರ ಪ್ರಸಾರ ಮಾಡುತ್ತಿದ್ದರು. ಅಲ್ಲದೆ ಅದನ್ನೆಲ್ಲ edit ಮಾಡಿ ಹುಡುಗ-ಹುಡುಗಿ ಯಾವುದೋ ಸಿನಿಮಾದ ನಾಯಕ-ನಾಯಕಿ ಎಂಬಂತೆ ತೋರಿಸುತ್ತಿರುವುದನ್ನು ಹುಡುಗನ ಸ್ನೇಹಿತರು ಹಾಸ್ಯ ಮಾಡಿಕೊಳ್ಳುತ್ತ ಪಲಾವ್-ಮೊಸರು ಬಜ್ಜಿಯನ್ನು ಸವಿದರು. ಊಟ ಮುಗಿಸಿದವರು 'ಮನೆಗೆ ಹೋಗಿ ಮಜ್ಜಿಗೆ ಮಾಡಿಕೊಂಡು ಕುಡೀಬೇಕು, ಎಲ್ಲಾ items ಗು ವಿಪರೀತ ಮಸಾಲೆ ಹಾಕಿದ್ರು.', ಎಂದುಕೊಳ್ಳುತ್ತಿದ್ದವರು, ಹುಡುಗನ ಅಪ್ಪ, 'ಊಟ ಚೆನ್ನಾಗಿತ್ತಾ?', ಎಂದು ಕೇಳಿದರೆ, 'Super ಆಗಿತ್ತು. ಇನ್ನು ಎರಡು ದಿವ್ಸ ಏನೂ ತಿನ್ಬೇಕಿಲ್ಲ, ಅಷ್ಟು batting ಮಾಡ್ದೆ.', ಎಂದು ಪ್ರಿಯವಾದ ಸುಳ್ಳನ್ನು ಹೇಳಿದರು.
ಹೆಣ್ಣಿನ ಅಪ್ಪ ಮುಖದಲ್ಲಿ ನಗು ತುಂಬಿಕೊಂಡು ಒಳಗೆ ನಡೆಯುತ್ತಿದ್ದ ಚಂಡಮಾರುತವನ್ನು ಮೆಟ್ಟಿ ನಿಂತಿದ್ದ. ಹೆಚ್ಚಿದ ಸಾಲದ ಹೊರೆಯ ಚಿಂತೆಯಲ್ಲಿ ಅವನಿಗೆ ಮಗಳು ಮನೆ ಬಿಟ್ಟು ಹೋಗುತ್ತಿರುವ ದುಃಖವೂ ನೆನಪಾಗಲಿಲ್ಲ. ಯಾರಲ್ಲಿಯೂ ಹೇಳಿಕೊಳ್ಳಲಾಗದೆ ಒಳಗೊಳಗೇ ಬೇಯುತ್ತಾ ಹೊರಗೆ ನಗು ಸೂಸುತ್ತ ಓಡಾಡುತ್ತಿದ್ದ.
ರಾತ್ರಿ ಹತ್ತೂವರೆಯ ಹೊತ್ತಿಗೆ ಇದೆಲ್ಲ ಸಂಭ್ರಮ ಮುಗಿದು, reception ಗೆ ಬಂದಿದ್ದ ಮಕ್ಕಳು ಸ್ಟೇಜಿನ ಶೃಂಗಾರಕ್ಕೆ ಬಳಸಿದ್ದ ಹೂಗಳನ್ನೆಲ್ಲ ಕಿತ್ತು ಹಾಳು ಮಾಡಿ ಆಗಿತ್ತು. ಹುಡುಗನೊಳಗಿದ್ದ ತತ್ವಜ್ಞಾನಿ, 'ಇದೆಲ್ಲ ಯಾವ ಖುಷಿಗೆ?', ಎಂದು ಪ್ರಶ್ನಸಿಕೊಳ್ಳತೊಡಗಿದ್ದ. ಮೂರು ಗಂಟೆಯ ಸಡಗರಕ್ಕಾಗಿ ಎಷ್ಟೆಲ್ಲ ವೆಚ್ಚವೆಂದು ತನ್ನಲ್ಲೇ ಅಂದುಕೊಳ್ಳುತ್ತಿದ್ದ. ಆದರೆ ತನ್ನ ಸ್ನೇಹಿತರು, ಸಹೋದ್ಯೊಗಿಗಳೆಲ್ಲ, 'ಒಳ್ಳೆಯ ವ್ಯವಸ್ಥೆ. Nice stage decoration. ', ಎಂದೆಲ್ಲ ಹೊಗಳಿದ್ದು ನೆನಪಾಗಿ, 'ಪರ್ವಾಗಿಲ್ಲ, ನಾಲ್ಕು ಜನಕ್ಕೆ ಖುಷಿಯಾದರೆ, ಅದಕ್ಕಿಂತ ಇನ್ನೇನು ಬೇಕು.', ಎಂದು ತನ್ನೊಳಗಿದ್ದ ತತ್ವಜ್ಞಾನಿಯ ಬಾಯಿ ಮುಚ್ಚಿಸಿದ.
ಆ ರಾತ್ರಿ ಎಲ್ಲರೂ ನಿದ್ದೆ ಹೋದ ಮೇಲೂ ಮೂವರು ನಿದ್ದೆ ಬರದೆ ಹೊರಳಾಡುತ್ತಿದ್ದರು - ಹೆಣ್ಣಿನ ತಂದೆ, ಹೆಣ್ಣಿನ ತಾಯಿ, ಮತ್ತು ಈ ಹೆಣ್ಣನ್ನು ವರ್ಷಗಳ ಕಾಲ ಮನಸಲ್ಲೇ ಹೊತ್ತು ನಡೆದಿದ್ದನಲ್ಲ, ಆ ಹುಡುಗ!
No comments:
Post a Comment