Jun 30, 2012

ಶ್ರೀಧರ ನನಗೆ ಚೆನ್ನಾಗಿ ಗೊತ್ತು....

ಶ್ರೀಧರ ನನಗೆ ಚೆನ್ನಾಗಿ ಗೊತ್ತು. ಕೆಲ ಸಮಯ ಜೊತೆಗೆ ಕೆಲಸ ಮಾಡಿದ್ದೆವು. ಅವನಿಗೆ ಸಂಜೆಯಾದಲ್ಲಿ ಕುಡಿಯುವ ಅಭ್ಯಾಸ. ವೇದಾಂತ ಮಾತಾಡುವ ತೆವಲು. ಸ್ನೇಹಿತರೆಂದರೆ ಮೈಮೇಲೆ ಬಿದ್ದು ಪ್ರೀತಿಸುತ್ತಾನೆ. ಕೆಲಸವೆಂದರೆ ತಲೆಬಿಸಿ ಮಾಡಿಕೊಳ್ಳುತ್ತಾನೆ. ಹಾಡು ಕೇಳುವುದೆಂದರೆ ಬಲು ಪ್ರೀತಿ. ವಿಪರೀತ ತಲೆ ಕೆಟ್ಟರೆ ಸಿಗರೇಟು ಸೇದುತ್ತಾನೆ, ವಿಪರೀತ ವೇಗದಲ್ಲಿ ಗಾಡಿ ಓಡಿಸುತ್ತಾ, ಕೆಟ್ಟ ಕೆಟ್ಟದಾಗಿ ಹಾರ್ನ್ ಬಾರಿಸುತ್ತಾನೆ. ಅವನ ಗೆಳತಿಯರ ಕಥೆಯೆಲ್ಲಾ ನನಗೆ ಗೊತ್ತು.

ಅಜ್ಜಿ ಎಂದರೆ ಬಹಳ ಪ್ರೀತಿ. ತಾಯಿಯಲ್ಲಿ ಗೌರವ. ತಂದೆಯ ಜೊತೆ ಮಾತುಕತೆಯಿಲ್ಲ. ಸೋದರಮಾವನಿಗೆ ಪ್ರಾಣ ಬೇಕಿದ್ದರೂ ಕೊಡುತ್ತಾನೆ. ಮಾವನ ಮಗನೆಂದರೆ ಉರಿದು ಬೀಳುತ್ತಾನೆ. ಬಿಡುವಿನಲ್ಲಿ ಪೆನ್ಸಿಲ್ ಸ್ಕೆಚ್ ಮಾಡುತ್ತಾನೆ. ಆದರೆ ನಿಯತ್ತಿಲ್ಲ, ಔಟ್ ಲೈನ್ ಹಾಕುವಷ್ಟರಲ್ಲಿ ಸುಸ್ತಾಗುತ್ತಾನೆ. ಕುಡಿದು ಮಧ್ಯರಾತ್ರಿ ಗಾಡಿ ಓಡಿಸುತ್ತಾನೆ ಒಮ್ಮೊಮ್ಮೆ. ಅವನ ಅತಿ ಹುಚ್ಚುಗಳೆಲ್ಲ ನನಗೆ ಗೊತ್ತು. ಕಾರಿನಲ್ಲೊಮ್ಮೆ ಗಾಂಜಾ ಹೊಡೆದು ಮೂರು ಗಂಟೆ ಸಮಯ ಓಡಿಸಿದ್ದರೂ ಕಾರು ಹೋಗಿದ್ದು ಒಂದೇ ಕಿಲೋಮೀಟರ್ ಅಂತೆ - ಗಾಂಜಾ ತಲೆಗೇರಿ ಕಾಲ, ದೂರದ ಪ್ರಜ್ಞೆ ಕಳೆದುಕೊಂಡಿದ್ದ. ಇದನ್ನೆಲ್ಲಾ ಹೇಳಿದ್ದಾನೆ ತುಂಬಾ ಸಲ. ಹಾಗಾಗಿ ನನಗೆ ಚೆನ್ನಾಗಿ ಗೊತ್ತು.

ನನಗೆ ಕುಡಿಯಲು ಕಲಿಸಿದವನು ಅವನೇ. ಅವತ್ತು ರಾತ್ರಿ ನಾನು ಅವನ ರೂಮಿಗೆ ಹೋಗಿದ್ದೆ. ಸುಮ್ಮನೆ ಹರಟುತ್ತ ಕುಳಿತಿದ್ದೆವು. ರಾತ್ರಿ ಹತ್ತರ ಸುಮಾರಿಗೆ, "ಎಣ್ಣೆ ಹೊಡಿಯೋಣ?", ಎಂದ. ನನಗೆ ಕುಡಿಯುವ ಅಭ್ಯಾಸ ಇರಲಿಲ್ಲ. ಕುಡಿಯಬಾರದು ಎಂಬ ಮನೋಭಾವವೂ ಅಲ್ಲ ನನ್ನದು. ಸರಿ - ತಪ್ಪುಗಳಲ್ಲೆಲ್ಲ ನಂಬಿಕೆ ಇರಲಿಲ್ಲ. "ನಡಿ" ಎಂದೆ. ಕೂಡಲೇ ಮಡಿವಾಳದ ಯಾವುದೋ ಒಳರಸ್ತೆಯಲ್ಲಿದ್ದ ಅವನ ರೂಮಿನಿಂದ ಮುಖ್ಯರಸ್ತೆಗೆ ಓಡಿದೆವು. ವಾಸನೆ ಹೊಡೆಯುತ್ತಿದ್ದ ಒಂದು ಬಾರಿನಲ್ಲಿ ನಮಗೆ ಬೇಕಾದ್ದನ್ನು ಕೊಂಡುಕೊಂಡ. ಆ ರಾತ್ರಿಯೆಲ್ಲ ವೋಡ್ಕಾಗೆ ಸ್ಪ್ರೈಟ್ ಬೆರೆಸಿ ಕುಡಿಯುತ್ತಾ ಕುಳಿತೆವು. ರಾತ್ರಿಯಲ್ಲೊಮ್ಮೆ ಹೊರಗೆ ಬಂದು ಅವನು ಸಿಗರೇಟು ಹಚ್ಚಿದ. ಸುಮ್ಮನೆ ರಸ್ತೆಯಲ್ಲಿ ನಡೆಯುತ್ತಾ ಹರಟಿದೆವು. ಮಜಾ ಬಂದಾಗೊಮ್ಮೆ ಸಿಗರೇಟು ಹಚ್ಚುವುದು ಅವನ ಅಭ್ಯಾಸ.

ಮತ್ತೊಮ್ಮೆ ಇಂದಿರಾನಗರದ ಪಬ್ ಒಂದರಲ್ಲಿ ರಾತ್ರಿ ಒಂದರವರೆಗೂ ಕುಡಿಯುತ್ತ ಕುಳಿತಿದ್ದೆವು. ಅಂದು ನನಗೆ ವೋಡ್ಕಾದಿಂದ ವ್ಹಿಸ್ಕಿಗೆ ಭಡ್ತಿ ಸಿಕ್ಕಿತ್ತು. ಸ್ವತಃ ಕುಡಿದು ಅಮಲೇರಿದ್ದರೂ ಕೂಡ ನನಗೆ ಸರಿ ಪ್ರಮಾಣದಲ್ಲಿ ವ್ಹಿಸ್ಕಿ ಸೋಡ ಬೆರೆಸಿ ಕೊಡುತ್ತಿದ್ದ. ಪಬ್ ನಿಂದ ಹೊರ ಬಂದಾಗ ನನಗೆ ದೇಹದಲ್ಲಿ ಹಿಡಿತ ಇರಲಿಲ್ಲ. ಮತ್ತೆ ಅವನ ಬೈಕ್ ನಲ್ಲಿ ಸರ್ಜಾಪುರ ರೋಡ್ ನಲ್ಲಿ ವೇಗವಾಗಿ ಹೋದೆವು. ಜೋರಾಗಿ ಕೂಗು ಹಾಕಿದೆವು. ಮತ್ತೆ ಮಡಿವಾಳದ ಅವನ ರೂಂ ನತ್ತ ಹೋಗುತ್ತಾ ದಾರಿಯಲ್ಲಿ ಟೀ ಕುಡಿದೆವು. ಅಂದು ಮಲಗುವ ಮೊದಲು ನಾನು ಅವನಿಗೆ, "ಪ್ರಪಂಚದ ಯಾವ ಕುಡುಕರ ಬಗ್ಗೆಯೂ ನನಗೆ ಯಾವುದೇ ಕಂಪ್ಲೇಂಟ್ ಇಲ್ಲ!", ಎಂದೆ!

ಶ್ರೀಧರ ಒಬ್ಬಳನ್ನು ವಿಪರೀತ ಪ್ರೀತಿಸುತ್ತಿದ್ದ. ಆದರೆ ಆ ಪ್ರೀತಿ ಜಾತಿ-ಮತಗಳ ಇಕ್ಕಳದಲ್ಲಿ ಸಿಕ್ಕಿ ಒದ್ದಾಡುತ್ತಿತ್ತು. ಶ್ರೀಧರನ ಹುಡುಗಿ ಮನೆಯವರನ್ನು ಎದುರಿಸಿ ಇವನ ಜೊತೆ ಬರಲು ತಯಾರಿರಲಿಲ್ಲ. ಇವನಿಗೆ ಸೂಕ್ಷ್ಮಗಳು ಅರ್ಥವಾಗಿ ಅವಳ ಮನೆಯವರ ಜೊತೆ ಮಾತಾಡಿದ. ಆದರೆ ಯಾವುದೂ ಇವನಿಗೆ ಬೇಕಾದಂತೆ ನಡೆಯಲಿಲ್ಲ. ಇದರಲ್ಲಿ ತುಂಬಾ ಒದ್ದಾಡಿದ. ಆಗೊಮ್ಮೆ ನಾನು ಸುಮ್ಮನಿರಲಾರದೆ, "ಏನೋ ಪ್ರೀತಿ ಅಂದ್ರೆ? After all, it's a bio-chemical reaction", ಎಂದು ಬುದ್ಧಿವಂತಿಕೆ ತೋರಿಸ ಹೊರಟು ಅವನಿಂದ ಬೈಸಿಕೊಂಡಿದ್ದೆ!

ಹೀಗೆ ಶ್ರೀಧರ ನನಗೆ ಪರಿಚಯವಾದಾಗಿಂದ ಅವನ ಬದುಕಿನಲ್ಲಿ ನಡೆದದ್ದೆಲ್ಲ ನನಗೆ ಗೊತ್ತು. ಶ್ರೀಧರ ನನಗೆ ಚೆನ್ನಾಗಿ ಗೊತ್ತು.

*                                                                                 *                                                                        *

 ಹೀಗೆಲ್ಲ ಶ್ರೀಧರನ ಬಗ್ಗೆ ನೆನೆಸಿಕೊಳ್ಳುತ್ತಾ ಕೂರಲು ಕಾರಣವಿದೆ. ಈಚೆಗೆ ನನಗೂ ಶ್ರೀಧರನಿಗೂ ಅಷ್ಟಾಗಿ ಮಾತುಕತೆಯಿಲ್ಲ. ಕೊನೆಯ ಬಾರಿ ನಾನು ಭೇಟಿ ಆದಾಗ ಅವನು ಅವನ ಹುಡುಗಿಯದೇ ಗುಂಗಿನಲ್ಲಿದ್ದ. ಅವಳನ್ನು ಮದುವೆಗೆ ಒಪ್ಪಿಸುವುದು ಹೇಗೆಂಬ ಚಿಂತೆ ಅವನ ತಲೆಯನ್ನು ಕೊರೆಯುತ್ತಿತ್ತು. ಅವನ ಮಾತುಗಳೆಲ್ಲ ಅದರ ಸುತ್ತಲೇ ಸುತ್ತುತ್ತಿದ್ದವು. ಅದೇ ದಿವಸ ನಾನು ಪ್ರೀತಿ ಒಂದು bio-chemical reaction ಅಂತ ಹೇಳಿ ಅವನಿಂದ ಬೈಸಿಕೊಂಡಿದ್ದು!

ಮೊನ್ನೆ ನಮ್ಮಿಬ್ಬರ common friend ಒಬ್ಬ ಸಿಕ್ಕಿದವ ಶ್ರೀಧರನ ಬಗ್ಗೆ ನನಗೆ ಗೊತ್ತಿರದ ಕೆಲವು ವಿಷಯಗಳನ್ನು ಹೇಳಿದ. "ನನಗಿಂತ ನಿನಗೆ ಅಲ್ವ close ಅವನು? ಇದೆಲ್ಲ ಗೊತ್ತಿರಲಿಲ್ವ ನಿನಗೆ?", ಎಂದು ಹೀಯಾಳಿಸಿದ. ಅಸಲಿ ವಿಷಯವೇನೆಂದರೆ ಶ್ರೀಧರ ಹುಡುಗಿಯ ಹಿಂದೆ ಬಿದ್ದ ಮೇಲೆ ಕೆಲಸದ ಬಗ್ಗೆ ಬಹಳ ನಿರ್ಲಕ್ಷ್ಯ ತೋರತೊಡಗಿದ್ದನಂತೆ. ಮ್ಯಾನೇಜರ್ ಜೊತೆ ಏನೋ ಕಿತ್ತಾಟ ಮಾಡಿಕೊಂಡನಂತೆ. ಇದು ತೀರ ಅತಿಯಾಗಿ ಅವನ ಮ್ಯಾನೇಜರ್ ತನ್ನ ಮೆಲ್ಲಿನವರಿಗೆ ತಿಳಿಸಿ ಅವನೂ ಶ್ರೀಧರನೊಂದಿಗೆ ಮಾತಾಡಿದರೆ, ಇವನು ಅವರಿಗೂ ತನ್ನ ಅಹಂಕಾರ, ನಿರ್ಲಕ್ಷ್ಯಗಳನ್ನ್ನು ತೋರಿಸಿಬಿಟ್ಟನಂತೆ. ಈ ಇಡೀ ಪ್ರಕರಣದಿಂದಾಗಿ ಶ್ರೀಧರ ತನ್ನ ಕೆಲಸ ಕಳೆದುಕೊಳ್ಳುವ ಮಟ್ಟಿಗೆ ಬಂದಿದ್ದಾನಂತೆ. ಪ್ರತಿದಿನವೂ ಆಫೀಸಿಗೆ ಕಣ್ಣು ಕೆಂಪು (ಬಹುಷಃ ಕುಡಿದು) ಬರುತ್ತಾನಂತೆ. ದಿನಕ್ಕೆ ಹತ್ತು ಸಿಗರೇಟು ಮುಗಿಸುತ್ತಾನಂತೆ!


ಶ್ರೀಧರ ನನಗೆ ಚೆನ್ನಾಗಿ ಗೊತ್ತು. ಹೀಗೆಲ್ಲ ಅನಾವಶ್ಯಕ ರಂಪ ಮಾಡುವವನಲ್ಲ! ತುಂಬಾ ಉತ್ಸಾಹದ ಮನುಷ್ಯ. ಬದುಕಿನಲ್ಲಿ ಏನಾದರೂ ಪ್ರಯೋಜಕ ಕೆಲಸ ಮಾಡಬೇಕೆಂಬ ಹಂಬಲ ಇಟ್ಟುಕೊಂಡವನು.  ಯಾವುದೋ ಸಿಟ್ಟನ್ನು ಯಾರದೋ ಮೇಲೆ ತೋರಿಸಿ ಗಲೀಜು ಮಾಡುವವನಲ್ಲ. ಹಾಡು, ಸಿ, ಭಾವನೆಗಳು - ಯಾವುದರಲ್ಲೇ ಆದರೂ ಒಳ್ಳೆಯ tasteಗಳನ್ನು ಇಟ್ಟುಕೊಂಡ ಮನುಷ್ಯ. ಈಗ ಹೆಂಡ, ಸಿಗರೇಟಿಗೆ ಶರಣಾಗಿದ್ದಾನೆಂದರೆ - ನನಗೆ shock ಆಯಿತು.

ಯೋಚಿಸಿ ತಲೆ ಹಣ್ಣಾಯಿತು. ಅವನೊಂದಿಗೆ ಮಾತಾಡೋಣ ಅನಿಸಿತು. ಹಾಗೆಯೇ ಶ್ರೀಧರನ ನನಗೆ ಗೊತ್ತೇ ಇರದ ಪ್ರಪಂಚವೊಂದರಲ್ಲಿ ತಲೆ ಹಾಕಬೇಕಾಗಿ ಬರುತ್ತದೋ ಏನೋ ಎಂದು ಭಯವೂ ಆಯಿತು! ಚೆನ್ನಾಗಿ ಗೊತ್ತು ಎಂದುಕೊಂಡವನ ಬದುಕಿನ ಗೊತ್ತಿರದ ಮುಖಗಳು ಗೊತ್ತಾದರೆ ಗೊತ್ತಿರುವುದಾದರೂ ಏನು ಅನ್ನಿಸಿ ಬಿಡುತ್ತದೆ!

ಶ್ರೀಧರನಿಗೆ ಫೋನ್ ಹಚ್ಚಿದೆ. ಮೂರು ಬಾರಿ ಪ್ರಯತ್ನಿಸಿದ ನಂತರ ಎತ್ತಿದ. "ಹಲೋ" ಎಂದ ದನಿ ನನಗೆ ಗೊತ್ತಿರುವ ಶ್ರೀಧರನದ್ದೆ ಎಂದು ಗೊತ್ತಾಯಿತು. "ಹೇಗಿದ್ದೀಯ?", ಎಂದೆ. " ನಡೀತಾ ಇದೆ. ನೀನು ಹೇಗಿದ್ದೀಯ?", ಎಂದ. "ಆರಾಮು ಕಣೋ", ಎಂದೆ. ಮುಂದೆ ಮಾತು ಸಿಗದೆ ತಡಕಾಡಿದೆ. ಅವನೂ ಮಾತಾಡಲಿಲ್ಲ! ಮಾತಿಲ್ಲದ ಆ ಕೆಲ ಕ್ಷಣಗಳಲ್ಲಿ ನನಗೆ ಏನೋ ಸಂಕಟವಾಯಿತು. ಏನೇನೋ ಕೇಳಬೇಕು, ಏನಾದರೂ ಹೇಳಬೇಕು ಎಂಬ ಭಾವನೆ ಹುಟ್ಟಿ ಹುಟ್ಟಿ ಸತ್ತು ಹೋಯಿತು! ನಾನು ಚಾಚಿದ ಕೈಯನ್ನು ಅವನು ಅಲಕ್ಷಿಸಿ ಹೋದಂತೆ ಅನಿಸಿತು. ಅವನು ಏಕೆ ಮಾತಾಡಲಿಲ್ಲ ಎಂದು ನನಗೆ ಗೊತ್ತಾಗಲಿಲ್ಲ. ಇನ್ನೂ ತಡಕಾಡುತಿದ್ದ ನನಗೆ ಶ್ರೀಧರ,"ನಾನು ಸ್ವಲ್ಪ busy ಇದ್ದೀನಿ ಕಣೋ. ಏನಾದರೂ urgent ಮಾತಾಡೋದು ಇದ್ಯಾ?", ಎಂದು ಕೇಳಿದ! ಆ ಒಂದು ಕ್ಷಣ ಶ್ರೀಧರ ನನಗೆ ಗೊತ್ತೇ ಇಲ್ಲ ಅನಿಸಿ ಬಿಟ್ಟಿತು. ಇಲ್ಲ, ನನಗೆ ಶ್ರೀಧರನ ಬಗ್ಗೆ ಏನೇನೂ ಗೊತ್ತಿಲ್ಲ. ನನ್ನದೇ ತಪ್ಪು, ನನಗೆ ಗೊತ್ತಿರುವುದಷ್ಟೇ ಶ್ರೀಧರ ಅಂದುಕೊಂಡದ್ದು ನನ್ನದೇ ತಪ್ಪು! ನನಗೆ ಶ್ರೀಧರ ಗೊತ್ತಿಲ್ಲ, ಏನೇನೂ ಗೊತ್ತಿಲ್ಲ. ಫೋನ್ ಕಟ್ ಮಾಡಿ ಜೋರಾಗಿಯೇ ಹೇಳಿಬಿಟ್ಟೆ - "ಶ್ರೀಧರ!  ಯಾರೋ ನನಗೆ ಗೊತ್ತಿಲ್ಲ!".
*                                                                                *                                                                          *
ಗೊತ್ತು ಗೊತ್ತಿಲ್ಲಗಳ ಬಗೆಗಿನ ನನ್ನ ಜಿಜ್ಞಾಸೆ ನಡೆಯುತ್ತಲೇ ಇದೆ. ಯಾರನ್ನೂ ಚೆನ್ನಾಗಿ ಗೊತ್ತು ಎನ್ನುವ ಧೈರ್ಯ ನನಗೆ ಈಗ ಇಲ್ಲ!

Jun 14, 2012

ಈ ಕಾಲ

ನಾವು ನೀವು ಬದುಕುತ್ತಿರುವ ಈ ಕಾಲದಲ್ಲಿ ಯಾವುದಕ್ಕೂ ಬೆಲೆ ಉಳಿದಿಲ್ಲ. ಸತ್ಯ, ನ್ಯಾಯ, ನೀತಿ, ಸಿದ್ಧಾಂತ ಎಂಬುದೆಲ್ಲ ಹಳಸಿದ ಮಾತು. ಹಿಂದೆಲ್ಲ ಚೆನ್ನಾಗಿತ್ತು ಎಂಬುದು ನನ್ನ ಅಭಿಪ್ರಾಯವಲ್ಲ , ಆದರೆ ಇಂದು "ಇದೆಲ್ಲ ಸರಿಯಿಲ್ಲ " ಎಂಬ ಮಾತಿಗೂ ಬೆಲೆ ಇಲ್ಲದಂತಾಗಿದೆ . ಪವಿತ್ರವಾಗಿ , ಪ್ರಶ್ನಾತೀತವಾಗಿ ಯಾವುದೂ ಉಳಿದಿಲ್ಲ.  ದೇವರು ಎಂಬ  ಕಲ್ಪನೆ ಎಷ್ಟು ಮನಗಳಲ್ಲಿ  ಉಳಿದಿದೆಯೋ ಆ ದೇವರೇ  ಬಲ್ಲ! ಆ ದೇವರ  ಹೆಸರಿನಲ್ಲಿ ಎಷ್ಟು ಅವ್ಯವಹಾರಗಳು ನಡೆದಿವೆಯೋ ಅದನ್ನೂ ಅವನೇ ಬಲ್ಲ! ಧರ್ಮವೆಂಬುದು ರಾಜಕೀಯ ದಾಳವಾದದ್ದು ಕೂಡ ಹಳೆಯ ಮಾತು. ಐ.ಎ.ಎಸ್. ಅಧಿಕಾರಿ, ವಕೀಲ, ಸರಕಾರಿ ಉದ್ಯೋಗಿ, ನ್ಯಾಯಾಧೀಶ, ಕೊನೆಗೆ ರಾಷ್ಟ್ರಪತಿಯಂಥ ರಾಷ್ಟ್ರಪತಿ ಕೂಡ ಘನತೆಯನ್ನು ಉಳಿಸಿಕೊಂಡಿಲ್ಲ. ರಾಜಕಾರಣಿ ಮರ್ಯಾದೆ ಕಳೆದುಕೊಂಡು ದಶಕಗಳೇ ಕಳೆದವು. ಇಂಥ ಈ ಕಾಲದಲ್ಲಿ ಯಾರಿಗೂ ಮತ್ತೊಬ್ಬರಿಗೆ ಬುದ್ಧಿ ಹೇಳುವ, ತಿದ್ದುವ ಅರ್ಹತೆ ಇಲ್ಲ. ಎಲ್ಲರೂ ಅವರವರ ಸ್ವಾರ್ಥ ಸಾಧಿಸಿಕೊಳ್ಳುವುದೇ ಸರಿ ಎಂದು ಬದುಕುತ್ತಿದ್ದಾರೆ.

ಸಮಾಜದ ಕಥೆ ಹೀಗಾದರೆ ಖಾಸಗಿ ಜೀವನದ್ದು ಇನ್ನೊಂದು ಕಥೆ. ಸಂಬಂಧಗಳಿಗೆ ಬೆಲೆ ಇಲ್ಲ. ತಂದೆಯ ಮಮತೆ, ತಾಯಿಯ ಪ್ರೀತಿ ಪ್ರಶ್ನಾತೀತವಾದದ್ದು ಎಂದುಕೊಂಡವರು ಎಷ್ಟು ಜನ ಉಳಿದಿದ್ದಾರೋ ಗೊತ್ತಿಲ್ಲ. ಪ್ರೇಮ ಪವಿತ್ರವಾಗಿ ಕಾಣುವುದು ತೀರ ಭಾವುಕವಾಗಿದ್ದಾಗ ಮಾತ್ರ. ನಂತರ ಅದೂ ಕೂಡ ಬೇರೆ ಭಾವಗಳಂತೆ ಮಾಮೂಲಿಯಾಗಿ ಕಾಣತೊಡಗುತ್ತದೆ. ಸ್ವಾರ್ಥದ ಓಟದಲ್ಲಿ ಪ್ರೀತಿ, ಪ್ರೇಮ, ಮಮತೆ, ಸ್ನೇಹ - ಎಲ್ಲವೂ ನಜ್ಜುಗುಜ್ಜಾಗುವುದನ್ನು ಎಲ್ಲರೂ ನೋಡಿದ್ದಾರೆ. ಪ್ರತಿದಿನ ವ್ಯವಹರಿಸುವ ಜನರನ್ನು ಕೂಡ ಅಪರಿಚಿತರಂತೆ ಸಂಶಯದ ದೃಷ್ಟಿಯಿಂದ ನೋಡುವುದನ್ನು ವ್ಯವಹಾರ ಚಾತುರ್ಯ ಎಂದು ಕರೆಯಲಾಗಿದೆ  ಇಂದಿನ ಕಾಲದಲ್ಲಿ. ನಂಬಿಕೆ, ವಿಶ್ವಾಸ, ಆಪ್ತತೆ - ಎಲ್ಲವೂ ಕೆಲವು ಸನ್ನಿವೇಶಗಳಿಗೆ ಅಷ್ಟೆ, ನಂತರ ಅವೂ ಹಳಸಿ ಹೋಗುತ್ತವೆ.

ಇಂಥ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ! ಹೊರಗಿನ ಗದ್ದಲ ಮನಸ್ಸಿಗೂ ಘಾಸಿ ಮಾಡುತ್ತದೆ ಪ್ರತಿದಿನ. ಕೊಳಕು ಸುದ್ದಿಗಳು "ಯಾರನ್ನೂ ನಂಬದಿರು" ಎಂದು ಕಿರುಚುತ್ತವೆ. ಮನುಷ್ಯ ಮನುಷ್ಯನನ್ನು ನಂಬದಿರುವ ಕಾಲ. ಸಂವೇದನೆಗಳಿಗೆ ಜಡವಾಗಿರುವ ನಮ್ಮ ಕಾಲ. ಹೀಗೆಲ್ಲ ಅನಿಸುವುದು ಬದಲಾದ ಕಾಲದಿಂದಲೋ, ಅಥವಾ ಬದಲಾಗಿದ್ದು ನಾನೋ ಎಂಬ ಪ್ರಶ್ನೆಗೆ ಉತ್ತರಿಸಲು ನಾನು ತಕ್ಕ ವ್ಯಕ್ತಿಯಲ್ಲ! ಹಾಗೊಮ್ಮೆ ಬದಲಾದದ್ದು ನನ್ನ ಮನೋಭಾವವಾಗಿದ್ದರೂ ಕೂಡ ಅದರಲ್ಲಿ ನಾನು ಬದುಕುತ್ತಿರುವ ಕಾಲದ್ದೂ ಪಾಲಿದೆ ಎಂಬುದು ಮಾತ್ರ ಸತ್ಯ!


You might also like:
ಹುಡುಕಾಟ

Nothing

The other day, the siren at the Electronic City Phase 2 traffic signal was beeping continuously. Normally, this siren is to indicate that the pedestrians can cross the road. However, this time it was due to a malfunctioning of the system. The beep was still going on when I left that place. The traffic signal displayed the green light for pedestrians, as the vehicles were speeding their way on the road. As everyone knows, these signals are to be followed at one's own risk.

It was good fun to see the traffic police trying to stop the beep. One guy climbed on to the post and tried his skills. Nothing stopped the beep. But the fact is that nobody took the beep seriously. None of the pedestrians relied on the signal while crossing the road there. Needless to say, none of the vehicles cared to slow down looking at the signal.The Electronic city signal provides an option to the pedestrian to turn signal in his favor while crossing the road. He can push a button which will turn green signal to pedestrians, also switching on the beep. (The beep is probably for the visually impaired crossing the road.) My guess is that somebody pressed this button, and the beep started. I am guessing that nobody has done this before, and that the police doesn't know how this system actually works. Probably it is designed to stop after a while, but didn't behave the way it is intended to.

I cross this road everyday, but I had never noticed the button. I had never seen anybody using this. I don't think I will use it in future either!
.

Jun 13, 2012

ವ್ಯರ್ಥ ಹಣ ಕಳೆದದ್ದು

ಈಗ ಒಂದು ವರ್ಷದಿಂದ ವ್ಯರ್ಥ ಹಣ ಕಳೆದದ್ದು ಈ ಕೆಳಗಿನ ಸಿನಿಮಾಗಳಿಗೆ :
 1. ಅಣ್ಣಾ ಬಾಂಡ್
 2. ಗೋವಿಂದಾಯ ನಮಃ 
 3. ಭೀಮಾ ತೀರದಲ್ಲಿ 
 4. ಬ್ರೇಕಿಂಗ್ ನ್ಯೂಸ್ 
 5. ಪರಮಾತ್ಮ
 6. ಜೋಗಯ್ಯ
 7. Shanghai (ಹಿಂದಿ)
 8. Madagascar 3 (ಆಂಗ್ಲ)
 9. ವೇಟೈ (ತಮಿಳು)
 10. ಮಂಕಾತ್ತ (ತಮಿಳು)
ಇಷ್ಟ ಪಟ್ಟು ನೋಡಿದ್ದು -
 1.  ವಿಷ್ಣುವರ್ಧನ
 2. Vicky Donor (ಹಿಂದಿ)