Apr 29, 2017

ಮಂಪರು ಮತ್ತು ಎಚ್ಚರ

ಕೋಣೆಯಲ್ಲಿ ಮಂದ ಬೆಳಕಿತ್ತು. ನಾನು ಮಲಗಿದ್ದೆ. ಅರ್ಧ ಎಚ್ಚರದಲ್ಲಿದ್ದೆ. ವರ್ಷ ತುಂಬದ ನನ್ನ ಮಗ ಇವತ್ತೇಕೋ ಬೇಗನೆ ಎಚ್ಚರವಾಗಿ ಹಾಸಿಗೆಯ ತುಂಬ ಹೊರಳಾಡುತ್ತಿದ್ದ. ಅವನ ಹೊರಳಾಟದಲ್ಲಿ ಆಗಾಗ ನನಗೆ ಗುದ್ದುತ್ತಿದ್ದ. ಅವನು ಗುದ್ದಿದಾಗೆಲ್ಲ ನನ್ನ ಮಂಪರು ಸ್ವಲ್ಪ ಕಡಿಮೆಯಾಗುತ್ತಿತ್ತು. ಅವನು ಅತ್ತ ಹೋಗುತ್ತಿದ್ದಂತೆ ಮಂಪರು ಮತ್ತೆ ಆವರಿಸುತ್ತಿತ್ತು. ಮಂಪರು ಮೂಡುತ್ತಿದ್ದಂತೆ ನನಗೆ ಇದರಲ್ಲೆಲ್ಲ ಯಾವುದೋ ಒಂದು ಕಥೆ ಇರುವಂತೆ ಅನ್ನಿಸತೊಡಗಿತು. ಅದೇನಿರಬಹುದೆಂದು ಯೋಚಿಸಲು ಎಚ್ಚರವಾದರೆ ಆ ಕಥೆ ಮಾಯವಾಗುತ್ತಿತ್ತು. ಆ ಕಥೆ ಬೆಳಗಿನ ಜಾವದ ಇಬ್ಬನಿಯಂತೆ ನನ್ನ ಕಣ್ಣಲ್ಲೇ ಕುಳಿತಂತೆಯೂ, ಕಣ್ಣು ಬಿಟ್ಟರೆ ಬೆಳಕಿನ ಬಿಸಿಗೆ ಅದು ಆವಿಯಾದಂತೆಯೂ ಮಂಪರಿನಲ್ಲಿ ನನಗೆ ಭಾಸವಾಗುತ್ತಿತ್ತು. ನಾನು ಕಣ್ಣು ಮುಚ್ಚಿದಾಗ ಇಲ್ಲೊಂದು ಹೊಸ ಲೋಕವೇ ಸೃಷ್ಟಿಯಾಗಿ, ಕಣ್ಣು ಬಿಟ್ಟ ಕ್ಷಣ ಅದು ನಾಶವಾದಂತೆಯೂ ಅನ್ನಿಸಿತು. ಮಂಪರಿನಲ್ಲಿ ಅದು ಇದ್ದಂತೆ ಅನ್ನಿಸಿ ಎಚ್ಚರದಲ್ಲಿ ಮಾಯವಾಗಿ ಸತಾಯಿಸುತ್ತಿತ್ತು. ಈ ಎಚ್ಚರ ಮತ್ತು ಮಂಪರಿನ ನಡುವಿನ ಯಾವ ಅವಸ್ಥೆಯಲ್ಲಿ ಆ ಕಥೆಯನ್ನು ಹಿಡಿದುಹಾಕಬಹುದೆಂದು ನನ್ನ ಮನಸ್ಸು ಚಿಂತಿಸುತ್ತಿತ್ತು. ನನ್ನ ಮಗ ಹೊರಳಾಡುತ್ತಾ ಬಂದು ನನ್ನ ದವಡೆಗೆ ಒಮ್ಮೆ ಗುದ್ದಿದ. ನಾನು ಏನೋ ಬಯ್ದುಕೊಳ್ಳುತ್ತಾ ಕಣ್ಣು ಬಿಟ್ಟೆ. ಕಥೆ ಮತ್ತೆ ಸುಟ್ಟು ಆವಿಯಾಯಿತು. ನನ್ನ ಮಗ ನಗುತ್ತಾ ಮಗ್ಗುಲಾದ.

Apr 28, 2017

ಮಾಸ್ ವರ್ಸಸ್ ಕ್ಲಾಸ್

'ಲುಟೇರಾ' ಮತ್ತು 'ಚೆನ್ನೈ ಎಕ್ಸ್‌ಪ್ರೆಸ್‌' ಬಿಡುಗಡೆಯಾದಾಗ ಕೆಲವರು ಲುಟೇರಾ‌ ಬೋರಿಂಗ್ ಸಿನಿಮಾ ಎಂದೂ ಚೆನ್ನೈ ಎಕ್ಸ್‌ಪ್ರೆಸ್‌ ತುಂಬಾ ಮಜವಾಗಿದೆಯೆಂದೂ ಹೇಳಿದಾಗ ನನಗೆ ತುಂಬಾ ಸಿಟ್ಟು ಬಂದಿತ್ತು. ಚೆನ್ನೈ ಎಕ್ಸ್‌ಪ್ರೆಸ್‌ ಸಿನಿಮಾ ಅಲ್ಲ, ಹಳೆಯ ದರಿದ್ರ ಜೋಕುಗಳ ಸಂಗ್ರಹವೆಂದು ನಾನು ಹೇಳಿದ್ದೆ. ಆಗಲೇ ಫೇಸ್‌ಬುಕ್ಕಿನಲ್ಲಿ ಎರಡೂ ಸಿನಿಮಾವನ್ನು ಹೋಲಿಸಿ ತುಂಬ ದುಃಖದ ಒಂದು ಪೋಸ್ಟ್ ಹಾಕಿದ್ದೆ 😀 ನಿಜಕ್ಕೂ ಎಲ್ಲೆಡೆ ಮಾಸ್ ವರ್ಸಸ್ ಕ್ಲಾಸಿನ ಯುದ್ಧ ನಡೆಯುತ್ತಿದೆಯೆಂದು ನಾನು ತಿಳಿದುಕೊಂಡಿದ್ದೆ.

ಈಚೆಗೆ ನಾನು ಬಾಲಿವುಡ್ ನಿರ್ದೇಶಕರ ಕೆಲವು ಹಳೆಯ ಸಂದರ್ಶನಗಳನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಯಾವ ವಿಕ್ರಮಾದಿತ್ಯ ಮೊಟ್ವಾನೆಗೆ ಯಾವ ರೋಹಿತ್ ಶೆಟ್ಟಿಯಿಂದ ಅನ್ಯಾಯವಾಗುತ್ತಿದೆಯೆಂದು ನಾನು ತಿಳಿದುಕೊಂಡಿದ್ದೆನೋ, ಅದೇ ವಿಕ್ರಮಾದಿತ್ಯ ಮೊಟ್ವಾನೆ ಅದೇ ರೋಹಿತ್ ಶೆಟ್ಟಿಯ ಪಕ್ಕ ಕುಳಿತು ತಣ್ಣಗೆ ಹೇಳುತ್ತಾನೆ - 'ಯಾವ ಸಿನಿಮಾ ಕೂಡ ಸುಮ್ಮಸುಮ್ಮನೆ ಗೆಲ್ಲುವುದಿಲ್ಲ. ಒಂದು ಸಿನಿಮಾ ಹಣ ಮಾಡಿದೆಯೆಂದರೆ ಅದರಲ್ಲೇನೋ ಸರಿಯಿದೆಯೆಂದೇ ಅರ್ಥ.' ನನ್ನದು ಉತ್ತಮ ಕಥೆ, ಆದರೂ ಗೆಲ್ಲಲಿಲ್ಲ; ಈ ಮನುಷ್ಯ ಕೆಟ್ಟ ಸಿನಿಮಾ ಮಾಡಿದ್ದರೂ ದೊಡ್ಡ ಹೆಸರು ಮಾಡಿದ - ಎಂಬ ಯಾವ ಸಿಟ್ಟೂ ವಿಕ್ರಮಾದಿತ್ಯನಲ್ಲಿ ಇಲ್ಲ. ವಾಸ್ತವವನ್ನು ತುಂಬ ಸುಲಭವಾಗಿ ಒಪ್ಪಿಕೊಂಡಿದ್ದಾನೆ.

ನಾನು ಮತ್ತೂ ಕೆಲವು ಸಂದರ್ಶನಗಳನ್ನು ನೋಡಿದೆ. ಬಾಲಿವುಡ್ಡಿನ ಗಂಭೀರ ನಿರ್ದೇಶಕರೆಲ್ಲರದ್ದೂ ಒಂದೇ ಅಭಿಪ್ರಾಯ - 'ಯಾವತ್ತೂ ಈ ರೀತಿಯೇ ನಡೆಯುತ್ತದೆ. ಮಸಾಲೆ ಸಿನಿಮಾಗಳು ಹಣ ಮಾಡುತ್ತವೆ. ಅದು ಹಣ ಮಾಡಿದರೆ ಒಳ್ಳೆಯದೇ. ಅಲ್ಲಿ ಹುಟ್ಟುವ ಹಣದಿಂದಲೇ ಗಂಭೀರ ಸಿನಿಮಾಗಳನ್ನು ಮಾಡಲು ಬೇಕಾದ ಬಂಡವಾಳ ಹುಟ್ಟುವುದು. ಒಂದು ಸಿನಿಮಾ ದುಡ್ಡು ಮಾಡಿದರೆ ಅದು ನಮ್ಮ ಉದ್ಯಮ ಲಾಭದಲ್ಲಿ ನಡೆಯುತ್ತಿದೆಯೆಂಬುದರ ಸೂಚನೆ. ಅದು ಖುಷಿಯ ವಿಷಯ.'

ಅಂದರೆ ಈ ಕ್ಲಾಸ್ ವರ್ಸಸ್ ಮಾಸ್ ಎಂಬ ಪರಿಕಲ್ಪನೆ ಬೇಕಾಗಿಲ್ಲ. ಒಂದರ ಹಣವನ್ನು ಇನ್ನೊಂದು ಕಿತ್ತುಕೊಳ್ಳುತ್ತಿದೆಯೆಂದೇನೂ ಇಲ್ಲ. ಎಲ್ಲ ರೀತಿಯ ಸಿನಿಮಾಗಳಿಗೂ ಇಲ್ಲಿ ಅವಕಾಶವಿದೆ. ಲುಟೇರಾ ರೀತಿಯ ಸಿನಿಮಾ ಯಾವತ್ತೂ ಚೆನ್ನೈ ಎಕ್ಸ್‌ಪ್ರೆಸ್ ಮಾಡಿದಷ್ಟು ಲಾಭ ಮಾಡಲು ಸಾಧ್ಯವಿಲ್ಲ. ಇದೆರಡರ 'ಟಾರ್ಗೆಟ್‌ ಆಡಿಯನ್ಸ್' ಬೇರೆ ಬೇರೆ. ಈ ಸತ್ಯಗಳೆಲ್ಲ ಅಲ್ಲಿನ ನಿರ್ದೇಶಕರಿಗೆ ಪೂರ್ತಿ ಮನವರಿಕೆಯಾಗಿದೆ. ಹಾಗಾಗಿ ಅವರ ಶಕ್ತಿಯೆಲ್ಲವೂ ತಮಗೆ ಹೇಳಲಿರುವ ಕಥೆಯನ್ನು ಚೆನ್ನಾಗಿ ಹೇಳಲು ಪ್ರಯತ್ನಿಸುವುದಕ್ಕೆ ಖರ್ಚಾಗುತ್ತದೆ. ಈ ಕೆಲಸಕ್ಕೆ ಬಾರದ ಮಾಸ್-ಕ್ಲಾಸಿನ ಯುದ್ಧಗಳಲ್ಲಿ ಅದು ವ್ಯಯವಾಗುವುದಿಲ್ಲ.

ನಿರ್ದೇಶಕ ದಿನಕರ್ ಬ್ಯಾನರ್ಜಿ ಹೇಳುತ್ತಾನೆ - 'ಸಿನಿಮಾ ನೋಡಲು ಬರುವ ಹೆಚ್ಚಿನ ಮಂದಿ ನಿಜ ಬದುಕಿನ ತಲೆನೋವುಗಳಿಂದ ಬಚಾವಾಗಲು ಬರುತ್ತಾರೆ. ಅದು ಅವರಿಗೆ ಎಸ್ಕೇಪ್. ಇವತ್ತಿನ ಭಾರತದಲ್ಲಿ ಈ ರೀತಿಯದೊಂದು ಎಸ್ಕೇಪ್ ನಮಗೆ ಬೇಕು. ಆದರೆ ನೂರರಲ್ಲಿ ಹತ್ತು-ಹನ್ನೆರಡರಷ್ಟು ಗಂಭೀರ ಸಿನಿಮಾಗಳು ಬರಬೇಕು. ಈ ಸಿನಿಮಾಗಳು ಬೇರೆ ಸಿನಿಮಾಗಳು ಹೇಳದ ಕಹಿ ಸತ್ಯಗಳನ್ನು ಹೇಳಬೇಕು. ನೋಡುವವನನ್ನು ಯೋಚಿಸುವಂತೆ ಮಾಡಬೇಕು.' ಹೌದು, ಮನುಷ್ಯನಿಗೆ ವಾಸ್ತವದಿಂದ ಬಚಾವಾಗಲು ಮಸಾಲೆ ಸಿನಿಮಾಗಳು ಬೇಕು. ಬದುಕಿನ ವಾಸ್ತವದಿಂದ ಈಗಾಗಲೇ ಬೇಜಾರಾದವನಿಗೆ ಸಿನಿಮಾದಲ್ಲಿ ಮತ್ತೂ ಕಹಿ ಸತ್ಯಗಳು, ಬೇಸರಗಳು, ಭಾರಿ ತತ್ವಗಳನ್ನು ಬಡಿಸಿದರೆ ಅವನ ಮನಸ್ಸು ಹಗುರವಾಗುವುದಾದರೂ ಹೇಗೆ!

ಹಾಗಾಗಿ ಈ ಸತ್ಯವನ್ನು ಒಪ್ಪಿಕೊಳ್ಳುವುದೇ ಸರಿ - ಮಸಾಲೆ ಸಿನಿಮಾಗಳು ಹೆಚ್ಚು ಹಣ ಮಾಡುತ್ತವೆ. ಮಸಾಲೆ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತವೆ. ಸೂಪರ್ ಸ್ಟಾರುಗಳು ಮಸಾಲೆ ಸಿನಿಮಾಗಳನ್ನು ಮಾಡುತ್ತಾರೆ. ಇದರಲ್ಲಿ ಏನೂ ತಪ್ಪಿಲ್ಲ.

ಕನ್ನಡ ಚಿತ್ರರಂಗದಲ್ಲಿ ಈಗಲೂ ಈ ಸತ್ಯಗಳನ್ನು ಒಪ್ಪಿಕೊಂಡಂತಿಲ್ಲ. ಅನವಶ್ಯವಾಗಿ ಸ್ಟಾರ್ ನಟರನ್ನು ದ್ರೋಹಿಗಳಂತೆ ನಾವು ನೋಡುತ್ತೇವೆ. ನಮಗೆ ನಿಜಕ್ಕೂ ಬೇಕಿರುವುದೇನೆಂದರೆ ನೂರರಲ್ಲಿ ಹತ್ತು ಗಂಭೀರ ಸಿನಿಮಾಗಳನ್ನು ಮಾಡುವ ನಿರ್ದೇಶಕರು. ಮತ್ತು ಸಿನಿಮಾ ಉದ್ಯಮವೂ ಹೌದು, ಕಲೆಯೂ ಹೌದು ಎಂಬುದನ್ನು ತಿಳಿದ ನಿರ್ಮಾಪಕರು. ಲಾಭಕ್ಕಾಗಿ ಮಾಡುವ ಸಿನಿಮಾ ಯಾವುದು, ಕಲೆಗಾಗಿ ಮಾಡುವ ಸಿನಿಮಾ ಯಾವುದೆಂಬುದನ್ನು ಅರಿತ ಜಾಣ ಉದ್ಯಮ ನಮಗೆ ಬೇಕಿರುವುದು. ಹಾಗೆಯೇ ಯಾವ ಸಿನಿಮಾದಿಂದ ಏನನ್ನು ಎದುರುನೋಡಬೇಕೆಂಬುದನ್ನು ಅರಿತ ಜಾಣ ಪ್ರೇಕ್ಷಕ. ಹಾಗೆ ಅವನು ಅಂದಾಜು ಹಾಕಲು ಬೇಕಾಗುವ ಎಲ್ಲ ಮಾಹಿತಿಯೂ ಸಿನಿಮಾದ ಪ್ರಚಾರಕ್ಕೆ ಬಳಸುವ ಟ್ರೈಲರ್, ಹಾಡು ಇತ್ಯಾದಿಗಳಿಂದ ಹಾಗೂ ತಂಡದ ಮಾತುಗಳಿಂದ ಅವನಿಗೆ ಸಿಗಬೇಕು. ಇಷ್ಟನ್ನು ಸರಿಯಾಗಿ ಮಾಡಿದರೆ ಮಾಸ್-ಕ್ಲಾಸಿನ ಈ ನಕಲಿ ಯುದ್ಧದಿಂದ ಎಲ್ಲರೂ ಬಚಾವಾಗಬಹುದು. ಇದೀಗ ಚಿತ್ರರಂಗವನ್ನು ಬದಲಿಸಿಯೇ ಬಿಡುತ್ತೇನೆ ಎಂಬ ಪೊಳ್ಳು ಅಹಂಕಾರದಿಂದ ಸಿನಿಮಾ ಮಾಡಬೇಕಾಗಿ ಬರುವುದಿಲ್ಲ. ಮತ್ತು ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ಕನ್ನಡ ಸಿನಿಮಾವನ್ನು ಉಳಿಸಿ, ಬೆಳೆಸಿ ಎಂಬ ಹಳಸಲು ಮಾತುಗಳನ್ನು ಕೇಳಬೇಕಾಗಿ ಬರುವುದೂ ಇಲ್ಲ.

(ಇಲ್ಲಿನ ಸತ್ಯಗಳು ಬೇರೆಯಿರಬಹುದು, ಇದೆಲ್ಲ ತುಂಬ ಕಷ್ಟವಿರಬಹುದು. ಆದರೆ ಒಬ್ಬ ವೀಕ್ಷಕನಾಗಿ ಇದು ನನ್ನ ಅಭಿಪ್ರಾಯ.)