Feb 24, 2008

ಆಗಬೇಕು

ಶುದ್ದವಾಗಬೇಕು
ಒಳಗಿನಿಂದ
ಗಟ್ಟಿಯಾಗಬೇಕು
ಅಣು ಅಣುವಿನಿಂದ
ದ್ವೇಷ ತ್ಯಜಿಸಬೇಕು
ಮನದಿಂದ
ಸಾಮಾನ್ಯನಾಗಬೇಕು,
ಬೀದಿ ನಾಯಿಯಂತೆ,

ಮತ್ತೆ ಬೆಳೆಯಬೇಕು
ತೆಂಗಿನ ಮರದಂತೆ
ಸುತ್ತ ಸಾವಿರಗರಿ ಚಾಚಿ
ಈ ವ್ಯಂಗ್ಯನುಡಿ
ಚುಚ್ಚು ಮಾತುಗಳ
ಸಿಡಿಲಿಗಂಜದೆ, ಕಾಲದೆಲ್ಲೆ ಮೀರಿ
ಸೂರ್ಯನಂತೆ ಬೆಳಕಾಗಿ!


ನಾನು

ನಾನೆಂದರೆ ಮೂಲತಃ ಒಬ್ಬ ಉಗ್ರಗಾಮಿ,
ಉಗ್ರ ಭಾವನೆಗಳೆಲ್ಲ ನನ್ನಲ್ಲಿ ಅಂತರ್ಗಾಮಿ!
ಮಹಾತ್ಮನ ಸೋಗು ಹಾಕಿ
ಸಹವರ್ತಿಗಳಿಂದ 'ಗಾಂಧಿ' ಎನಿಸಿಕೊಂಡವನ
ಒಳಗಿನ 'ಗಂಧಿ ' ಭಾವನೆಗಳು
ಕೇವಲ ನನಗಷ್ಟೆ ಗೊತ್ತು!

ಜೀವನ

ಕೆಲವರಿಗೆ ಮಲಬದ್ಧತೆ
ಮತ್ತೆ ಕೆಲವರಿಗೆ ಅಜೀರ್ಣ ಭೇಧಿ!

Feb 18, 2008

ನನ್ನ ಕವನ

ಗುಲಾಬಿಯಲ್ಲ, ನಕ್ಷತ್ರವಲ್ಲ
ಗುಡುಗು ಸಿಡಿಲಂತೂ ಮೊದಲೇ ಅಲ್ಲ!

ಸುಮ್ಮನೆ ಕೂರಲಿಕ್ಕಾಗದವನ ಒಳ ತುಡಿತ,
ಅದಕ್ಕಿಲ್ಲ ಸಮಾಜವ ತಿದ್ದುವ ಹರಿತ

ಸುಖವಾಗಿ ಮಲಗಿದ್ದವರನ್ನೆಚ್ಚರಿಸುವ ಗೂಬೆ ಕೂಗು,
ವಿವರಿಸುತ್ತ ಕೂರಲು ಅದರಲ್ಲಿ ಎಂಥದ್ದೂ ಇಲ್ಲ, ಮಣ್ಣಾಂಗಟ್ಟಿ!

ಆಸೆ

ಆಸೆಯೇ ದುಃಖಕ್ಕೆ ಮೂಲ
ಇದು ಗೊತ್ತಿದ್ದೂ
ಮನಸ್ಸು ನಾಯಿ ಬಾಲ!

Feb 17, 2008

ಬೆಳಕು

ಅವನು ಅರವತ್ತರ ಮುದುಕ,
ಸಂಜೆಗತ್ತಲಲ್ಲಿ ವಾಕಿಂಗ್ ಹೊರಟಿದ್ದ
ನಾ ಕೆಲಸ ಮುಗಿಸಿ ಹೊರಟಿದ್ದೆ ಮನೆ ಕಡೆಗೆ,

ಅವ ನಕ್ಕ, ನಾ ನಗದೇ ಕೇಳಿದೆ,
"ಹೊರಟೆ ಎಲ್ಲಿಗೆ?"
ಅವ ಹೇಳಿದ,
"ನಾ ನಡೆವೆ ಕತ್ತಲೆಯೆಡೆಗೆ
ನೀ ಮನೆಯತ್ತ ನಡೆ, ಅದುವೆ ಸರಿ
ಬೆಳಕಿದೆಯಲ್ಲಿ, ಬೆಳಕು ಸಾಕೆನಿಸಿತೆನಗೆ
ಹೊರಟೆ, ಹೊರಟೆ ನೀ ಹುಟ್ಟಿದಲ್ಲಿಗೆ !"

ಅವನ ಮಾತು, ನನಗರ್ಥವಾಗಲಿಲ್ಲ,
ಆಯಿತೆ ನಿಮಗೆ?


ಸಮಸ್ಯೆ

ಏನೆಂದು ಹೇಳಲಾಗದು, ಏನೋ ದ್ವಂದ್ವ
ಸಿದ್ಧಾಂತಗಳೆಲ್ಲ ಸಿಕ್ಕಾಗಿ ಕಂಡದ್ದು ಪ್ರಶ್ನಾರ್ಥಕ ಚಿಹ್ನೆ!

ಮನಸೆಂಬುದು ಮುದುಡಿದ ತಾವರೆಯಂತಾದಾಗ
ಕಂಡದ್ದಕ್ಕೆಲ್ಲ ಸಹಸ್ರ ವಿಪರೀತಾರ್ಥ!

ಅರಳದೆ ಮೂಲೆ ಸೇರುವ ಮನಸ್ಸು
ಸಿಟ್ಟು ಬರಿಸುತ್ತದೆ ಕೆಲವೊಮ್ಮೆ,
ಮತ್ತೊಮ್ಮೆ ಏಕಾಂತಪ್ರಿಯತೆಯ ಬಗ್ಗೆ ಅಹಂಕಾರ, ಗರ್ವ, ಹೆಮ್ಮೆ!

ಪ್ರಪಂಚದ ಸಮಸ್ಯೆಗಳಿಗೆಲ್ಲ ಪರಿಹಾರ ಬಯಸುವ ಮನಸ್ಸು
ಏಕೋ ಕೆಲವೊಮ್ಮೆ ತಾನೆ ಸಮಸ್ಯೆಯಾಗಿ ಬಿಡುತ್ತದೆ!

ಸೂತ್ರ

ಸಾವಿಲ್ಲದ ಸಾವೇ ನಿನ್ನ ಸಾವು ಕಂಡವರುಂಟೆ?
ಕಂಡವ ಸಾಯದಿರುವುದುಂಟೆ?
ಸಾವು, ಸಾವು, ಸಾವು, ನಾವೆಲ್ಲ ಸಾಯುವೆವು!

ಸತ್ತ ನಂತರ ಜೀವವಿಲ್ಲ, ಬರಿಯ ದೇಹ ಮಾತ್ರ
ಸಾಯುವ ಮೊದಲಿತ್ತು, ಸತ್ತ ನಂತರವಿಲ್ಲ, ಅರ್ಥವಾಗದ ಸೂತ್ರ!

ಕತ್ತಲು

ಕಣ್ಣು ಮುಚ್ಚಲು
ಜಗತ್ತೇ ಕತ್ತಲು, ಕಪ್ಪು
ಆದರೆ ಬೆಳಕೆ ಸುಳ್ಳು ಎಂದರೆ
ಅದು ನಿನ್ನ ತಪ್ಪು!

ಕವಿತೆ

ಬಡತನದ ಮೇಲೆ ಭಾಷಣ ಬಿಗಿಯುತ್ತಾರಂತೆ,
ವಿದೇಶಿ ಮದ್ಯ ಹೀರುತ್ತಾ ಅಭಿಪ್ರಾಯ ವ್ಯಕ್ತ ಪಡಿಸುತ್ತಾರಂತೆ
ವರದಿಗಾರರು ಸಂಪಾದಿಸುತ್ತಾರೆ ಕಂತೆ ಕಂತೆ,
ಪ್ರಪಂಚವೆಂಬುದು ಸಮಯ ಸಾಧಕರ ಸಂತೆ!

ಹೊಟ್ಟೆಗಿಲ್ಲದವನ ಚಿತ್ರಕ್ಕೆ ಪ್ರಥಮ ಬಹುಮಾನ
ಚಿತ್ರ ಬರೆದವನಿಗೆ ಪ್ರಶಸ್ತಿ, ಸನ್ಮಾನ
ಹಸಿವಿನಿಂದ ನರಳಿದವನ ಬಾಯಿಗಿಷ್ಟು ಮಣ್ಣು,
ಅವನ ನೋವು ಕಾಣಲು ಯಾರಿಗು ಇಲ್ಲ ಕಣ್ಣು!

ಮನುಷ್ಯನ ಕಾಲಡಿ ನೆಲ, ತಲೆ ಮೇಲೆ ಬಾನು
ಕವಿತೆ ಕವಿಗಾಯಿತು, ಬಡವನ ಹೊಟ್ಟೆಗೇನು?
----ಎಂದೆಲ್ಲ ಬರೆದ ನಾನು,
ಕೊನೆಗೆ ಮಾಡಿದ್ದೇನು?



ದೈವ

ದೈವ ಬೇಕಿರುವುದು
ವರ್ಷ ವರ್ಷದ ಜಾತ್ರೆಗೆ
ತೀರ್ಥ ಕ್ಷೇತ್ರದ ಯಾತ್ರೆಗೆ

ಯೋಗಿಗೆ ದೈವ ಬೇಡ,

ಬೇಕು ಅವನು ಭೋಗಿಗೆ!
ನಮ್ಮ ಮನೋರೋಗಿಗೆ,

ಧರ್ಮಾತ್ಮನ ಸೋಗಿಗೆ
ಮತ್ತೆ ಬಡ ಬ್ರಾಹ್ಮಣನಿಗೆ
ದೇವಾಲಯ ಸಮಿತಿಗೆ!

Feb 16, 2008

ದೈವಕ್ಕೆ

ಲೋಕವೆಲ್ಲ ನಾನೇ ನಾನು
ಕುಳಿತಿರುವೆ ಎಲ್ಲಿ ನೀನು?

ನಾನೆಂಬುದು ಸುಳ್ಳು ಎಂದವರು ಯಾರು?
ನೀನು, ಅವನು, ಲೋಕವೆಲ್ಲ ನನ್ನಿಂದಲೇ ಶುರು !

ಕಣ್ಣಿಗೆ ಕಾಣದ ದೈವ ನೀನು ಧೂಳಿಗಿಂತ ಕೀಳೆ?
ವೇದ, ಗೀತೆ, ಮಂತ್ರ ಪಠಿಸಲು ನನಗಿಲ್ಲ ವೇಳೆ!

ನಿನ್ನ ಅರಿಯಲಿಕ್ಕೆ ನಿನ್ನ ಮೀರಬೇಕು
ಮನದಲ್ಲಿ ಭಕ್ತಿ ಬೇಡ , ಶೌಚವೊಂದೆ ಸಾಕು!

ತೇಪು

ದುಷ್ಟ ಮನವ ಮುಚ್ಚಲು ದುಬಾರಿ ಸೂಟು
ಕತ್ತಿಗೆ ಟೈ, ಕಾಲಿಗೆ ಸಾಕ್ಸ್, ಬೂಟು
ಮನದಲ್ಲಿ ದ್ವೇಷ, ಸೇಡಿನ ಕತ್ತಿ, ಚೂಪು
ಒಳಗೆ ಕೊಳಕು, ಹೊರಗೆ ಸಜ್ಜನಿಕೆಯ ತೇಪು.

ಕರೆಂಟು

ಸಮಾಜದ ಗಣ್ಯ ವ್ಯಕ್ತಿಗಳ
ದುಷ್ಟ ಮುಖದ ಮೇಲೆ
ಬೆಳಕು ಚೆಲ್ಲಲೆಂದು ಕುಳಿತದ್ದುಂಟು
ಆದರೆ
ಹಾಗೆ ಕುಳಿತಾಗಲೆಲ್ಲ
ಹೋಗಿಯೇ ಬಿಡುತ್ತಿತ್ತು ಕರೆಂಟು!

ಗಾಂಧಿಗೆ

ನಿನ್ನ ಮರಣದ ದಿವಸ
ಹೂವು ಅರಳಲೇ ಇಲ್ಲ
ಕಡಲು ಮೊರೆಯಲೇ ಇಲ್ಲ
ಮಳೆಯು ಹನಿಯಲೇ ಇಲ್ಲ

ನಿನ್ನ ಮರಣದ ಬಳಿಕ
ನಾವು ನಗುವುದೇ ಇಲ್ಲ
ಸುಳ್ಳು ಬೊಗಳುವುದಿಲ್ಲ
ಮನದಲ್ಲಿ ಶಾಂತಿ ಮಮತೆ
ಎದೆಯಲ್ಲಿ ಸ್ನೇಹದ ಹಣತೆ

---- ಎಂದೆಲ್ಲ ಇವರು ಹೇಳಿದ್ದು
ನಿನ್ನಾಣೆಗೂ ನಿಜವಲ್ಲ!!

ಹುಡುಗಿಗೆ

ಸುರುಳಿ ಮುಂಗುರುಳು
ಮೂಗು ಸಂಪಿಗೆ ಎಸಳು
ಹಲ್ಲು ದಾಳಿಂಬೆ ಬೀಜ
ಮೊಗವು ಅರಳಿದ ರೋಜಾ!

ನಿನ್ನ
ಕಂಡ ದಿನದಿಂದ
ಊಟ ಸೇರಲಿಲ್ಲ
ನಿದ್ದೆ ಸುಳಿಯಲಿಲ್ಲ
ಸುಳ್ಳು ಹೇಳಿ ನನಗಭ್ಯಾಸವಿಲ್ಲ,
ನಾ ಹೇಳಿದ್ದೊಂದೂ ನಿಜವಲ್ಲ!

ಹಲ್ಲು
ದಾಳಿಂಬೆ ಬೀಜ
ಮೊಗವು ಅರಳಿದ ರೋಜಾ
ಎಂದದ್ದೆಲ್ಲ ಬರಿಯ ಸುಳ್ಳು
ಘರ್ ಜಾಕೆ ಸೋ ಜಾ!

ಬ್ಯಾಚೆಲರ್ ಸ್ನೇಹಿತನಿಗೆ

ಹುಣ್ಣಿಮೆಯ ರಾತ್ರಿ
ಹಾಲು ಬೆಳದಿಂಗಳು
ನಿನ್ನ ಊರಿನ ಗಲ್ಲಿಗಳಲ್ಲಿ
ನಿನ್ನ ನೂರು ಮಕ್ಕಳು !

ಸ್ನೇಹಿತನಿಗೆ

ಮಳೆ ಬಂದ ಮರುದಿನ
ರಸ್ತೆ ತುಂಬ ಕೆಸರು
ಪಕ್ಕದ ಮನೆಯ ಹುಡುಗಿ ನಿನ್ನಿಂದ
ಆದಳಂತೆ ಬಸಿರು?!

ನನ್ನ ಕವಿತೆ

ಆಗಸದಲ್ಲಿ ಹಾರುವುದು ಹದ್ದು
ಅಂಗಡಿಯಲ್ಲಿ ಸಿಗುವುದು ಉದ್ದು
ಕವಿತೆ ಬರೆಯುವೆ ನಾನು ಬೇರೆಯವರಿಂದ ಕದ್ದು
ಓದಿ ಸುಮ್ಮನಿರಿ, ಮಾಡದಿರಿ ಸದ್ದು!

Feb 12, 2008

ಅಪರಿಚಿತ

ಬಾಲಕೃಷ್ಣ ಆ ಅಪರಿಚಿತ ಊರಿನ ಚಿಕ್ಕ ಬಸ್ ಸ್ಟಾಪಿಗೆ ಬಂದಾಗ ಬಿಸಿಲು ನೆತ್ತಿ ಸುಡುತ್ತಿತ್ತು, ಕೈ ಗಡಿಯಾರ ಗಂಟೆ ಹನ್ನೆರಡು ಸೂಚಿಸುತ್ತಿತ್ತು. ಕೈ ಗಡಿಯಾರದಲ್ಲಿ ತನ್ನ ಮುಖದ ಪ್ರತಿಬಿಂಬವನ್ನು ನೋಡುತ್ತ ನಿಂತಿದ್ದವ ಬಸ್ಸಿನ ಹಾರ್ನ್ ಸದ್ದು ಕೇಳಿ ಬೆಚ್ಚಿ ಬಿದ್ದು ಮುಖವೆತ್ತಿದ. ಬಸ್ಸೊಂದು ಅವನಿಗೆ ಗುದ್ದಲೆಂಬಂತೆ ಬರುತ್ತಿತ್ತು. ಅವನು ಒಂದು ಬದಿಗೆ ಸರಿದ, ನೆತ್ತಿ ಸುಡುತ್ತಿದ್ದ ಬಿಸಿಲಿನಿಂದಾಗಿ ತಲೆ ನೋಯಲು ಶುರುವಾಗಿತ್ತು. ಆತ ಅತ್ತಿತ್ತ ನೋಡುತ್ತ ನಿಂತ. ಕುಂಟನೊಬ್ಬ ಆಗ ತಾನೆ ಬಂದ ಬಸ್ಸು ಹೋಗುವ ಸ್ಥಳದ ಹೆಸರನ್ನು ಕೂಗಿ ಕೂಗಿ ಹೇಳುತ್ತಿದ್ದ. ಹುಡುಗನೊಬ್ಬ ಕೈಯಲ್ಲಿದ್ದ ವಸ್ತುಗಳನ್ನು ತೋರಿಸಿ , 'ಹತ್ತಕ್ಕೆ ಎರಡು' ಎಂದು ಕಿರುಚತೊಡಗಿದ್ದ.
ಅವನು ಸುತ್ತಲಿನ ಗದ್ದಲದಲ್ಲಿ ಮೆಲ್ಲಗೆ ಕರಗತೊಡಗಿದ್ದ. ಮೈ ಮೇಲಿನ ಎಚ್ಚರ ಮೆಲ್ಲನೆ ಕಳೆದು ಹೋಗತೊಡಗಿತ್ತು, ಬಿಸಿಲು ಮತ್ತು ಗದ್ದಲದಿಂದಾಗಿ. ಅವನು ಪುನಃ ಗಡಿಯಾರದಲ್ಲಿ ಮುಖದ ಪ್ರತಿಬಿಂಬ ನೋಡಿಕೊಂಡು ಕಣ್ಣೆತ್ತುವಷ್ಟರಲ್ಲಿ, ಎಲ್ಲೋ ನೋಡಿ ಮರೆತಂತಿದ್ದ ವ್ಯಕ್ತಿಯೊಬ್ಬ ಅವನ ದೇಹವನ್ನೊರೆಸಿಕೊಂಡು ಮುಗ್ಗರಿಸಿ ಬೀಳುವಂತಾಗಿ ಮತ್ತೆ ಚೇತರಿಸಿಕೊಂಡು ಮುಂದೆ ನಡೆದ. ಕ್ಷಣಕಾಲ ಆ ವ್ಯಕ್ತಿಯ ಮುಖವನ್ನು ದಿಟ್ಟಿಸಿದ ಬಾಲಕೃಷ್ಣ ಪುನಃ ಕೈಗಡಿಯಾರ ನೋಡಿಕೊಳ್ಳುವ ಹೊತ್ತಿಗೆ ಆ ವ್ಯಕ್ತಿಯ ಮುಖ ಬಾಲಕೃಷ್ಣನ ಮನಸ್ಸಿಗಿಳಿದಿತ್ತು.

- ಬಾಲಕೃಷ್ಣ ಮುರುಗನೊಂದಿಗೆ ಹುಣಿಸೆ ಮರದ ಬಳಿ ನಿಂತಿದ್ದ. ಇಬ್ಬರೂ ಒಮ್ಮೆ ಸುತ್ತಮುತ್ತ ನೋಡಿಕೊಂಡು ಹುಣಿಸೆ ಮರಕ್ಕೆ ಮತ್ತಷ್ಟು ಹತ್ತಿರ ನಡೆದರು.
ಹುಣಿಸೆ ಹಣ್ಣು ಕದ್ದು ಬೇಲಿ ಹಾರುವಷ್ಟರಲ್ಲಿ ತೋಟದ ಆಳುಗಳು ಓಡಿಸಿಕೊಂಡು ಬಂದರು. ಬಾಲಕೃಷ್ಣ ಮುರುಗನೊಂದಿಗೆ ಓಡಲಾರಂಭಿಸಿದ. ಓಡುತ್ತಿದ್ದ ಬಾಲಕೃಷ್ಣನ ಕಾಲಿಗೆ ಕಲ್ಲು ಸಿಕ್ಕಿ ಅವನು ಎಡವಿ ಬಿದ್ದು ಕಿರುಚಿದ, 'ಮುರುಗಾ...!'
- ಬಾಲಕೃಷ್ಣನಿಗೆ ಒಮ್ಮೆಗೆ ಎಚ್ಚರವಾಯಿತು. ಬೆವರಿದ್ದ ಮುಖವನ್ನು ಬೆಡ್ ಶೀಟಿನಲ್ಲಿ ಒರೆಸಿಕೊಂಡು ಯೋಚಿಸಲಾರಂಭಿಸಿದ, '' ಮುರುಗ, ಹೌದು, ಅವನೇ! ಇವತ್ತು ಮಧ್ಯಾಹ್ನ ನನಗೆ ಒರೆಸಿಕೊಂಡು ಹೋದವ, ಬೀಳಲಿಕ್ಕಾದವ, ಮುರುಗನೇ ಸರಿ, ಹೌದು!''
ಮಲಗಿದ್ದಲ್ಲಿಂದ ದಡಕ್ಕನೆದ್ದು ಟೆಲಿಫೋನಿನ ಬಳಿ ನಡೆದು, ಮಿತ್ರ ಅನಂತನಿಗೆ ಕಾಲ್ ಹಚ್ಚಿದ. ಎಷ್ಟೋ ಸಮಯದ ಬಳಿಕ ಅನಂತ ರಿಸೀವರೆತ್ತಿ, ''ಹಲೋ.." , ಎಂದ ಬೇಸರದ ದನಿಯಲ್ಲಿ.
"ಹಲೋ, ನಾನು ಬಾಲಕೃಷ್ಣ... ಹೈಸ್ಕೂಲಿನ ನಮ್ಮ ಕ್ಲಾಸ್
ಮೇಟ್ ಮುರುಗ ಈಗ ಏನು ಮಾಡುತ್ತಿದ್ದಾನೆ?" - ನಡುಗುವ ದನಿಯಲ್ಲಿ ಬಾಲಕೃಷ್ಣ ಕೇಳಿದ.
"ಈ ಮಧ್ಯರಾತ್ರಿಯಲ್ಲಿ ನಾನು, ನೀನು ಏನು ಮಾಡುತ್ತೇವೆ? ಅದನ್ನೇ ಅವನೂ ಮಾಡುತ್ತಿರಬಹುದು. ಆದರೆ ಯಮಲೋಕದಲ್ಲಿ! "- ಅನಂತ ಗೊಗ್ಗರು ದನಿಯಲ್ಲಿ ಹೇಳಿದ.
"ಅಂದರೆ... ಅಂದರೆ...."- ಬಾಲಕೃಷ್ಣ ಮತ್ತಷ್ಟು ನಡುಗತೊಡಗಿದ್ದ.
"ಅವನು ಸತ್ತು ತಿಂಗಳ ಮೇಲಾಯಿತು ... ಬಸ್ accident ನಲ್ಲಿ. " - ಅನಂತ ಹೇಳಿದ, "ಏಕೆ?"
ಬಾಲಕೃಷ್ಣ ಉತ್ತರಿಸಲಿಲ್ಲ, ಪ್ರಜ್ಞೆ ತಪ್ಪಿ ಬಿದ್ದ.