Oct 3, 2008

ಮೊಬೈಲ್ ಫೋನ್


ನನ್ನ ದಿವಸ ಆರಂಭವಾಗುವುದೇ ಮೊಬೈಲ್ ಫೋನಿನಲ್ಲಿ ಸಮಯ ನೋಡಿಕೊಳ್ಳುವುದರೊಂದಿಗೆ. ಎದ್ದ ಕೂಡಲೇ ನಾನು ಮಾಡುವ ಮೊದಲ ಕೆಲಸ - ಮೊಬೈಲ್ ಫೋನನ್ನು ಚಾರ್ಜಿಗಿಡುವುದು. ನಂತರ ಹೊರಟು ಹೊರ ಹೋದವನಿಗೆ ನಿಮಿಷ ನಿಮಿಷಕ್ಕೂ ಯಾರದಾದರೂ ಕರೆ ಬರುತ್ತಿದೆಯೇ ಎಂದು ಪರೀಕ್ಷಿಸುವ ದುರಭ್ಯಾಸ. ರಾತ್ರಿ ಮಲಗುವಾಗ ಮೊಬೈಲ್ ಫೋನಿನಲ್ಲಿಸಂಗೀತ ಕೇಳುವ ಅಭ್ಯಾಸ. ಮೊಬೈಲ್ ಫೋನು ಕೊಂಡ ನಂತರ ನಾನು ಕೈಗಡಿಯಾರ ಕಟ್ಟಿಕೊಳ್ಳುವುದನ್ನು ನಿಲ್ಲಿಸಿದ್ದೇನೆ. ನಾನು ಪ್ರತಿದಿನವೂ ಒಂದು ಗಂಟೆಯಷ್ಟು ಹೊತ್ತು ಫೋನಿನಲ್ಲಿ ಮತಾಡುತ್ತೇನೆ. ಇದಿಷ್ಟು ಮೊಬೈಲ್ ಫೋನು ನನ್ನ ದಿನಚರಿಯಲ್ಲಿ ವಹಿಸುವ ಪಾತ್ರದ ಕುರಿತು.

ನನ್ನ ಈ ಬರಹದ ಉದ್ದೇಶ ಮೊಬೈಲ್ ಫೋನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಮನುಷ್ಯನ ಮೇಲೆ ಬೀರಿರುವ ಪ್ರಭಾವವನ್ನು ನನಗೆ ತಿಳಿಯದಂತೆ ದಾಖಲಿಸುವುದು.

ನಗರಗಳಲ್ಲಿ ತಿರುಗಾಡುವಾಗ ಮನುಷ್ಯ ದಿಕ್ಕು ತಪ್ಪುವ, ಕಳೆದು ಹೋಗುವ ಅಪಾಯ ಮೊಬೈಲ್ ಫೋನಿನಿಂದಾಗಿ ಎಷ್ಟೋ ಕಡಿಮೆಯಾಗಿದೆ ಎನ್ನಬಹುದು. ಎಲ್ಲಿಯೇ ಇದ್ದರೂ ತನ್ನವರನ್ನು ಸಂಪರ್ಕಿಸಲಿಕ್ಕೆ ಮೊಬೈಲ್ ಫೋನು ಇದೆ. ಹೊಸ ಸ್ಥಳಗಳಿಗೆ ಹೋಗುವಾಗ ದಾರಿ ತಿಳಿದುಕೊಳ್ಳಲಿಕ್ಕೆ ಒಂದು ಫೋನು ಹಚ್ಚಿದರಾಯಿತು, ದಾರಿ ತಪ್ಪುವ ಮಾತೇ ಇಲ್ಲ ಎಂಬ ಒಂದು ರೀತಿಯ ಅಹಂಕಾರ ನಮ್ಮಲ್ಲಿರುವುದನ್ನು ಗಮನಿಸಿದ್ದೇನೆ. ಅದೇ ರೀತಿ, ಕವರೇಜ್ ಇಲ್ಲದ ಸ್ಥಳಗಳಲ್ಲಿ ನಮ್ಮನ್ನೆಲ್ಲ ಒಂದು ರೀತಿಯ ಭಯ ಕಾಡುವುದನ್ನು ಕೂಡ ಗಮನಿಸಿದ್ದೇನೆ. Signal Strength ಸೂಚಿಸುವ ಕಡ್ಡಿಗಳ ಸಂಖ್ಯೆ ಕಡಿಮೆಯಾದಂತೆ ನಮ್ಮ ಆತಂಕ ಹೆಚ್ಚಾಗುತ್ತದೆ. "Not Reachable" ಆಗುವ ಭಯ ಇದು.

ಸದಾ Reachable ಆಗಿರುವುದಕ್ಕೂ ಮನುಷ್ಯನಿಗೆ ಮತ್ತೊಂದು ಭಯವಿದೆ. ಗ್ರಾಹಕರಿಂದ, ಮೇಲಧಿಕಾರಿಗಳಿಂದ ಮೇಲಿಂದ ಮೇಲೆ ಕರೆಗಳು ಬರುವ ಭಯವಿದು. ಇದು IT, marketing ಮುಂತಾದ ಕೆಲಸಗಳಲ್ಲಿರುವವರಿಗೆ ಹೆಚ್ಚು ಇರಬಹುದು. ಇಂಥ ಕರೆಗಳಿಂದ ತಪ್ಪಿಸಿಕೊಳ್ಳಲು ಮೊಬೈಲ್ ಫೋನನ್ನು switch off ಮಾಡಿಡುವವರನ್ನು ನೋಡಿದ್ದೇನೆ. ಅಪರಿಚಿತ ಸಂಖ್ಯೆಗಳಿಂದ ಕರೆ ಬರುವಾಗಲೂ ಒಮ್ಮೆ ಬೆಚ್ಚಿ ಬೀಳುವವರನ್ನು ನೋಡಿದ್ದೇನೆ. ಇದೆಲ್ಲವೂ Reachable ಆಗಿರುವುದರಿಂದ ಹುಟ್ಟುವ ತೊಂದರೆಗಳು. ನನಗೆ ಮೊಬೈಲ್ ಫೋನು ಹೊಡೆದುಕೊಳ್ಳುವಾಗಲೊಮ್ಮೆ ಎದೆ ಜೋರಾಗಿ ಬಡಿದುಕೊಳ್ಳುತ್ತದೆ. ಈ ಕಾರಣಕ್ಕಾಗಿ ನಾನು ನನ್ನ ring tone ಅನ್ನು ಬದಲಾಯಿಸಿಕೊಳ್ಳುತ್ತಲೇ ಇರುತ್ತೇನೆ ಆಗಾಗ! ಒಂದಿಷ್ಟು ಏಕಾಂತಕ್ಕೆ, ನನ್ನಷ್ಟಕ್ಕೇ ನಾನು ಕಾಲ ಕಳೆಯಲಿಕ್ಕೆ ಅವಕಾಶ ಕೊಡದ ಮೊಬೈಲ್ ಫೋನಿನ ಮೇಲೆ ಸಿಟ್ಟು ಬರುತ್ತದೆ ಕೆಲವೊಮ್ಮೆ. ಯಾರು ಬೇಕಿದ್ದರೂ ಕರೆ ಮಾಡಿ 'ಎಲ್ಲಿದ್ದೀಯ' ಎಂದು ದಬಾಯಿಸಬಹುದು. ಸ್ವಭಾವದಲ್ಲಿ ಒಂಟಿತನವನ್ನು ಆನಂದಿಸುವ ಮನುಷ್ಯರಿಗೆ ಮೊಬೈಲ್ ಫೋನು ಶಾಪವಾಗಿ ಬಿಡುವ ಸಾಧ್ಯತೆ ಇದೆ!

ಸ್ನೇಹಿತರಿಂದ, ಪರಿಚಿತರಿಂದ ತಪ್ಪಿಸಿಕೊಂಡು ಓಡಾಡುವವರು ಇವರ ಕರೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಈ ರೀತಿ ಮಾಡುವುದಕ್ಕೆ ಕಾರಣ ಏನೇ ಇದ್ದರೂ, ಕರೆಗಳಿಂದ ತಪ್ಪಿಸಿಕೊಂಡು ಓಡಾಡುವವನಿಗೆ ಮನಸ್ಸಿನಲ್ಲಿ ಅಪರಾಧಿ ಭಾವ ಹೆಚ್ಚಾಗುತ್ತಾ ಹೋಗುತ್ತದೆ. ಇದು ಒಂದು ರೀತಿಯ ಹಿಂಸೆಯಾದರೆ, ಕರೆ ಮಾಡುವವನಿಗೆ ತನ್ನ ಕರೆಗೆ ಪ್ರತಿಕ್ರಿಯಿಸದವನ ಮೇಲೆ ವಿಪರೀತ ಸಿಟ್ಟು ಬರುತ್ತದೆ, ಅದು ಮತ್ತೊಂದು ರೀತಿಯ ಹಿಂಸೆ. ಆದರೆ ಮಕ್ಕಳನ್ನು ದೂರದ ಊರಿನಲ್ಲಿ ಓದಿಗೆ ಕಳಿಸಿದ ಪಾಲಕರಿಗೆ ಮಕ್ಕಳು ತಮ್ಮ ಕರೆಗೆ ಪ್ರತಿಕ್ರಿಯಿಸದಿದ್ದಾಗ ಕೋಪ ಬರುವುದಿಲ್ಲ, ಬದಲಿಗೆ ಗಾಬರಿಯಾಗುತ್ತದೆ. ತಮ್ಮ ಮಕ್ಕಳು ಯಾವುದೋ ತೊಂದರೆಯಲ್ಲಿರುವುದರಿಂದಲೇ ತಮ್ಮ ಕರೆಗೆ ಪ್ರತಿಕ್ರಿಯಿಸುತ್ತಿಲ್ಲ ಎಂಬುದು ಅವರ ಭಾವ.

ಮೊಬೈಲ್ ಫೋನಿನ ಬಳಕೆ ಯಾರು ಯಾರು ಹೇಗೆ ಹೇಗೆ ಮಾಡುತ್ತಾರೋ ಗೊತ್ತಿಲ್ಲ, ಆದರೆ ಪ್ರೇಮದಲ್ಲಿ ಬಿದ್ದಿರುವ ಯುವಕ ಯುವತಿಯರಿಗೆ ಮೊಬೈಲ್ ಫೋನು ಇರುವುದು ತಮ್ಮ ಪ್ರಿಯಕರ ಪ್ರಿಯತಮೆಯರೊಂದಿಗೆ ಹರಟಲಿಕ್ಕೇ ಎಂಬ ಭಾವನೆ! ಮುಂಜಾನೆ ಎದ್ದಲ್ಲಿಂದ ಹಿಡಿದು ರಾತ್ರಿ ಮಲಗುವವರೆಗೂ ಪ್ರತಿಯೊಂದನ್ನೂ ಒಬ್ಬರಿಗೊಬ್ಬರು ವರದಿಯೊಪ್ಪಿಸುತ್ತಾರೆ. ಮದುವೆ ನಿಶ್ಚಯವಾದ ಯುವಕ ಯುವತಿಯರೂ ಇದಕ್ಕೆ ಹೊರತಲ್ಲ, ಹುಡುಗ ವಿದೇಶದಲ್ಲಿದ್ದರೂ ಕೂಡ ಹುಡುಗಿಗೆ ಪ್ರತಿದಿನವೂ ಕರೆ ಮಾಡಿಯೇ ಮಾಡುತ್ತಾನೆ!

ದುಡಿಯುವ ವರ್ಗಕ್ಕೆ ಮೊಬೈಲ್ ಫೋನು ಪ್ರತಿಷ್ಠೆಯ ಸಂಕೇತ. ಎಷ್ಟೋ ಬಾರಿ ಅವರು ತಮ್ಮ ಪ್ಹೂನುಗಳಲ್ಲಿರುವ ಎರಡೋ ಮೂರೋ feature ಗಳನ್ನು ಬಳಸಿರುತ್ತಾರಷ್ಟೇ. ಮೊಬೈಲ್ ಫೋನಿನ ಕುರಿತಾದ ಒಂದು ನಂಬಿಕೆ - ಅದರ ಗಾತ್ರ ಪುರುಷತ್ವದ ಮಾಪಕವಂತೆ. ಪುರುಷತ್ವ ಹೆಚ್ಚಾದಷ್ಟೂ ಹೆಚ್ಚು ಅಗಲದ ಫೋನನ್ನು ಬಯಸುತ್ತಾನೆ ಮನುಷ್ಯ! ಇದು ಒಂದು ಪ್ರಸಿದ್ಧ ನಂಬಿಕೆ, ನನ್ನಲ್ಲಿ ಇದಕ್ಕೆ ಪುರಾವೆ ಇಲ್ಲ!ಓದುವ ಹುಡುಗರಿಗೆ ಮೊಬೈಲ್ ಫೋನು ಶೋಕಿಯ ವಸ್ತು. ಹಿಂದೆಲ್ಲ hero ಅನ್ನಿಸಿಕೊಳ್ಳಲಿಕ್ಕೆ ದುಬಾರಿ ವಾಚು, ಬೈಕುಗಳು ಬೇಕಿದ್ದವು, ಈಗ ದುಬಾರಿ ಫೋನುಗಳು ಬೇಕು. ದೊಡ್ದದಿದ್ದಷ್ಟೂ ಗಮನ ಸೆಳೆಯುವ ಸಾಧ್ಯತೆ ಹೆಚ್ಚಿರುವುದರಿಂದ ಗಾತ್ರಕ್ಕೆ ಆದ್ಯತೆ. ಕಪ್ಪು ಬಣ್ಣ ಹುಡುಗರಿಗೆ, ಕೆಂಪು , ಗುಲಾಬಿ ಬಣ್ಣಗಳು ಹುಡುಗಿಯರಿಗೆ ಎಂಬುದು ಅಲಿಖಿತ ಕಾನೂನು!

ಮೊಬೈಲ್ ಫೋನನ್ನು ಮನುಷ್ಯ ತನಗೂ ತನಗೆ ಪರಿಚಯವಿರುವ ಪ್ರಪಂಚಕ್ಕೂ ಇರುವ ಕೊಂಡಿಯಾಗಿ ಕಾಣುತ್ತಾನೆ. ಅರಿತೋ ಅರಿಯದೆಯೋ ಮೊಬೈಲ್ ಫೋನು ಎಂಬ ಉಪಕರಣ ನಮ್ಮ ಮನಸ್ಸಿಗೆ ಸುಖ ಕೊಡುವ ನೆನಪುಗಳೊಂದಿಗೆ ಬೆಸೆದುಕೊಲ್ಲುತ್ತದೆ. ಬಹು ದಿನಗಳ ನಂತರ ಕರೆ ಮಾಡಿದ ಹಳೆಯ ಗೆಳೆಯ, ಅಪರೂಪಕ್ಕೆ ಸಂದೇಶ ಕಳಿಸಿದ ಚೆಂದದ ಹುಡುಗಿ, ಬೇಕೆಂದಾಗ ಮಾತಾಡಲು ಸಿಗುವ ಪರಿಚಿತರು, ಬಂಧು ಮಿತ್ರರು - ಇವರೆಲ್ಲರಿಗೂ ತನಗೂ ಸೇತುವೆಯಾಗಿರುವ ಮೊಬೈಲ್ ಫೋನಿನ ಮೇಲೆ ಮನುಷ್ಯನಿಗೆ ಮಮಕಾರ ಬೆಳೆದದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಅಪರಿಚಿತ ಸನ್ನಿವೇಶದಲ್ಲಿ ಸಿಲುಕಿದ ಮನುಷ್ಯ, ಮೊಬೈಲ್ ಫೋನನ್ನು ಕಾರಣವಿಲ್ಲದೆ ಹೊರ ತೆಗೆಯುವುದು ಇದೇ ಕಾರಣದಿಂದಾಗಿ.
ರಸ್ತೆ ಮಧ್ಯದಲ್ಲಿ ಅಪರಿಚಿತನೊಂದಿಗೆ ಜಗಳ ಕಾಯುವ ಮನುಷ್ಯ ಮೊಬೈಲ್ ಫೋನನ್ನು ಆಯುಧದಂತೆ ಝಳಪಿಸುವುದು , 'ನನ್ನ ಪ್ರಪಂಚ ಇದರೊಳಗಿದೆ. ನಾನು ಒಂದು ಕರೆ ಹಚ್ಚಿದರೆ ನನ್ನ ಸಹಾಯಕ್ಕೆ ಓಡಿ ಬರುವ ಜನರಿದ್ದಾರೆ.' , ಎಂದು ಸೂಚಿಸಲಿಕ್ಕೆ. ಹಾಗೆಯೇ ಹುಡುಗಿಯರು ವಿನಾ ಕಾರಣ ಮೊಬೈಲ್ ಫೋನನ್ನು ನೋಡುವುದು, ರಸ್ತೆಯಲ್ಲಿ ನಡೆಯುವಾಗ ಕೂಡ ಯಾರಿಗಾದರೂ ಕರೆ ಹಚ್ಚಿ ಮಾತನಾಡುವುದು ತನ್ನದೊಂದು ಪ್ರಪಂಚ ಬೇರೆಯೇ ಇದೆ ಎಂದು ಸೂಚಿಸಲಿಕ್ಕೆ. ಮೊಬೈಲ್ ಫೋನಿನಲ್ಲಿ FM radio ಇರುವುದು ಇಂಥವರಿಗೆ ವರವಿದ್ದಂತೆ! 'Leave me alone', ಎಂಬ ಸಂದೇಶ ಕಿವಿಗೆ ear phone ಸಿಕ್ಕಿಸಿಕೊಂಡಾಗ ಮತ್ತೂ ಸ್ಪಷ್ಟವಾಗುತ್ತದೆ. ರಸ್ತೆ ದಾಟುವ ಮನುಷ್ಯ ಮೊಬೈಲ್ ಫೋನನ್ನೇ ದಿಟ್ಟಿಸಿ ನೋಡುವುದು ನುಗ್ಗಿ ಬರುತ್ತಿರುವ traffic ನ ಭಯವನ್ನು ಕಡಿಮೆಗೊಳಿಸಲಿಕ್ಕೆ. ಗೊಂದಲಕ್ಕೀಡಾದಾಗ, ಏನೋ ಯೋಚನೆಯಲ್ಲಿರುವಾಗ, ಮನುಷ್ಯ ಪದೇ ಪದೇ ಮೊಬೈಲ್ ಫೋನಿನ ಸ್ಕ್ರೀನ್ ಅನ್ನು ಉಜ್ಜುವುದು ತನ್ನ ನೆನಪನ್ನು ಹರಿತಗೊಳಿಸಲಿಕ್ಕೆ, ಮನಸ್ಸಿನ ಗೋಜಲನ್ನು ಕಡಿಮೆಗೊಳಿಸಲಿಕ್ಕೆ.

--- ಹೇಗೆ ಮೊಬೈಲ್ ಫೋನು ನಮ್ಮ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಮತ್ತು ಸಣ್ಣ ಮಟ್ಟಿನಲ್ಲಿ ನಮ್ಮ ಸಾಮಾಜಿಕ ನಡವಳಿಕೆಯ ಮೇಲೆ ಪ್ರಭಾವ ಬೀರಿದೆ ಎಂದು ತೀರ್ಪು ಕೊಡುವುದರೊಂದಿಗೆ, ಈ ಬರಹವನ್ನು ಮುಕ್ತಾಯಗೊಳಿಸುತ್ತೇನೆ :)