ಬಾಲಕೃಷ್ಣ ಆ ಅಪರಿಚಿತ ಊರಿನ ಚಿಕ್ಕ ಬಸ್ ಸ್ಟಾಪಿಗೆ ಬಂದಾಗ ಬಿಸಿಲು ನೆತ್ತಿ ಸುಡುತ್ತಿತ್ತು, ಕೈ ಗಡಿಯಾರ ಗಂಟೆ ಹನ್ನೆರಡು ಸೂಚಿಸುತ್ತಿತ್ತು. ಕೈ ಗಡಿಯಾರದಲ್ಲಿ ತನ್ನ ಮುಖದ ಪ್ರತಿಬಿಂಬವನ್ನು ನೋಡುತ್ತ ನಿಂತಿದ್ದವ ಬಸ್ಸಿನ ಹಾರ್ನ್ ಸದ್ದು ಕೇಳಿ ಬೆಚ್ಚಿ ಬಿದ್ದು ಮುಖವೆತ್ತಿದ. ಬಸ್ಸೊಂದು ಅವನಿಗೆ ಗುದ್ದಲೆಂಬಂತೆ ಬರುತ್ತಿತ್ತು. ಅವನು ಒಂದು ಬದಿಗೆ ಸರಿದ, ನೆತ್ತಿ ಸುಡುತ್ತಿದ್ದ ಬಿಸಿಲಿನಿಂದಾಗಿ ತಲೆ ನೋಯಲು ಶುರುವಾಗಿತ್ತು. ಆತ ಅತ್ತಿತ್ತ ನೋಡುತ್ತ ನಿಂತ. ಕುಂಟನೊಬ್ಬ ಆಗ ತಾನೆ ಬಂದ ಬಸ್ಸು ಹೋಗುವ ಸ್ಥಳದ ಹೆಸರನ್ನು ಕೂಗಿ ಕೂಗಿ ಹೇಳುತ್ತಿದ್ದ. ಹುಡುಗನೊಬ್ಬ ಕೈಯಲ್ಲಿದ್ದ ವಸ್ತುಗಳನ್ನು ತೋರಿಸಿ , 'ಹತ್ತಕ್ಕೆ ಎರಡು' ಎಂದು ಕಿರುಚತೊಡಗಿದ್ದ.
ಅವನು ಸುತ್ತಲಿನ ಗದ್ದಲದಲ್ಲಿ ಮೆಲ್ಲಗೆ ಕರಗತೊಡಗಿದ್ದ. ಮೈ ಮೇಲಿನ ಎಚ್ಚರ ಮೆಲ್ಲನೆ ಕಳೆದು ಹೋಗತೊಡಗಿತ್ತು, ಬಿಸಿಲು ಮತ್ತು ಗದ್ದಲದಿಂದಾಗಿ. ಅವನು ಪುನಃ ಗಡಿಯಾರದಲ್ಲಿ ಮುಖದ ಪ್ರತಿಬಿಂಬ ನೋಡಿಕೊಂಡು ಕಣ್ಣೆತ್ತುವಷ್ಟರಲ್ಲಿ, ಎಲ್ಲೋ ನೋಡಿ ಮರೆತಂತಿದ್ದ ವ್ಯಕ್ತಿಯೊಬ್ಬ ಅವನ ದೇಹವನ್ನೊರೆಸಿಕೊಂಡು ಮುಗ್ಗರಿಸಿ ಬೀಳುವಂತಾಗಿ ಮತ್ತೆ ಚೇತರಿಸಿಕೊಂಡು ಮುಂದೆ ನಡೆದ. ಕ್ಷಣಕಾಲ ಆ ವ್ಯಕ್ತಿಯ ಮುಖವನ್ನು ದಿಟ್ಟಿಸಿದ ಬಾಲಕೃಷ್ಣ ಪುನಃ ಕೈಗಡಿಯಾರ ನೋಡಿಕೊಳ್ಳುವ ಹೊತ್ತಿಗೆ ಆ ವ್ಯಕ್ತಿಯ ಮುಖ ಬಾಲಕೃಷ್ಣನ ಮನಸ್ಸಿಗಿಳಿದಿತ್ತು.
- ಬಾಲಕೃಷ್ಣ ಮುರುಗನೊಂದಿಗೆ ಹುಣಿಸೆ ಮರದ ಬಳಿ ನಿಂತಿದ್ದ. ಇಬ್ಬರೂ ಒಮ್ಮೆ ಸುತ್ತಮುತ್ತ ನೋಡಿಕೊಂಡು ಹುಣಿಸೆ ಮರಕ್ಕೆ ಮತ್ತಷ್ಟು ಹತ್ತಿರ ನಡೆದರು.
ಹುಣಿಸೆ ಹಣ್ಣು ಕದ್ದು ಬೇಲಿ ಹಾರುವಷ್ಟರಲ್ಲಿ ತೋಟದ ಆಳುಗಳು ಓಡಿಸಿಕೊಂಡು ಬಂದರು. ಬಾಲಕೃಷ್ಣ ಮುರುಗನೊಂದಿಗೆ ಓಡಲಾರಂಭಿಸಿದ. ಓಡುತ್ತಿದ್ದ ಬಾಲಕೃಷ್ಣನ ಕಾಲಿಗೆ ಕಲ್ಲು ಸಿಕ್ಕಿ ಅವನು ಎಡವಿ ಬಿದ್ದು ಕಿರುಚಿದ, 'ಮುರುಗಾ...!'
- ಬಾಲಕೃಷ್ಣನಿಗೆ ಒಮ್ಮೆಗೆ ಎಚ್ಚರವಾಯಿತು. ಬೆವರಿದ್ದ ಮುಖವನ್ನು ಬೆಡ್ ಶೀಟಿನಲ್ಲಿ ಒರೆಸಿಕೊಂಡು ಯೋಚಿಸಲಾರಂಭಿಸಿದ, '' ಮುರುಗ, ಹೌದು, ಅವನೇ! ಇವತ್ತು ಮಧ್ಯಾಹ್ನ ನನಗೆ ಒರೆಸಿಕೊಂಡು ಹೋದವ, ಬೀಳಲಿಕ್ಕಾದವ, ಮುರುಗನೇ ಸರಿ, ಹೌದು!''
ಮಲಗಿದ್ದಲ್ಲಿಂದ ದಡಕ್ಕನೆದ್ದು ಟೆಲಿಫೋನಿನ ಬಳಿ ನಡೆದು, ಮಿತ್ರ ಅನಂತನಿಗೆ ಕಾಲ್ ಹಚ್ಚಿದ. ಎಷ್ಟೋ ಸಮಯದ ಬಳಿಕ ಅನಂತ ರಿಸೀವರೆತ್ತಿ, ''ಹಲೋ.." , ಎಂದ ಬೇಸರದ ದನಿಯಲ್ಲಿ.
"ಹಲೋ, ನಾನು ಬಾಲಕೃಷ್ಣ... ಹೈಸ್ಕೂಲಿನ ನಮ್ಮ ಕ್ಲಾಸ್
ಮೇಟ್ ಮುರುಗ ಈಗ ಏನು ಮಾಡುತ್ತಿದ್ದಾನೆ?" - ನಡುಗುವ ದನಿಯಲ್ಲಿ ಬಾಲಕೃಷ್ಣ ಕೇಳಿದ.
"ಈ ಮಧ್ಯರಾತ್ರಿಯಲ್ಲಿ ನಾನು, ನೀನು ಏನು ಮಾಡುತ್ತೇವೆ? ಅದನ್ನೇ ಅವನೂ ಮಾಡುತ್ತಿರಬಹುದು. ಆದರೆ ಯಮಲೋಕದಲ್ಲಿ! "- ಅನಂತ ಗೊಗ್ಗರು ದನಿಯಲ್ಲಿ ಹೇಳಿದ.
"ಅಂದರೆ... ಅಂದರೆ...."- ಬಾಲಕೃಷ್ಣ ಮತ್ತಷ್ಟು ನಡುಗತೊಡಗಿದ್ದ.
"ಅವನು ಸತ್ತು ತಿಂಗಳ ಮೇಲಾಯಿತು ... ಬಸ್ accident ನಲ್ಲಿ. " - ಅನಂತ ಹೇಳಿದ, "ಏಕೆ?"
ಬಾಲಕೃಷ್ಣ ಉತ್ತರಿಸಲಿಲ್ಲ, ಪ್ರಜ್ಞೆ ತಪ್ಪಿ ಬಿದ್ದ.
No comments:
Post a Comment