Mar 6, 2014

ಹ್ಯಾಪಿ ಬರ್ತ್ ಡೇ

ಪುಷ್ಪ ವಿವೇಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ಎರಡು ತಿಂಗಳಿಗೇ ಬೇರೆ ಮನೆ ಮಾಡಿ ಸಂಸಾರ ಹೂಡಿದ್ದರು. ವಿವೇಕನಿಗೆ ಐದು ಅಣ್ಣಂದಿರಿದ್ದರು, ಹಾಗೂ ಆರು ಅಕ್ಕಂದಿರು. ಅಕ್ಕಂದಿರೆಲ್ಲರ ಮದುವೆಗಳಾಗಿ ಗಂಡಂದಿರ ಮನೆಗಳನ್ನು ಸೇರಿಕೊಂಡಿದ್ದರಾದರೂ, ಅಣ್ಣಂದಿರು ಮದುವೆಗಳಾದ ಮೇಲೂ ಜೊತೆಗೇ ಇದ್ದರು. ವಿವೇಕ-ಪುಷ್ಪ ಬಂಡಾಯವೆದ್ದು ಬೇರೆ ಮನೆ ಮಾಡಿದ್ದರು. ತಾವೇನೋ ಕ್ರಾಂತಿ ನಡೆಸಿದ್ದೇವೆಂಬ ಭಾವವಿತ್ತು ಇಬ್ಬರಲ್ಲೂ ಈ ವಿಷಯದಲ್ಲಿ. ಮುಂದೆ ಪುಷ್ಪ ಗಂಡು ಮಗುವೊಂದನ್ನು ಹೆತ್ತಳು.  ಹುಟ್ಟುತ್ತಲೇ ನಿತ್ರಾಣವಾಗಿತ್ತು; ಹೆಚ್ಚು ತೂಕವಿರಲಿಲ್ಲ. ವಿವೇಕನ ಅಣ್ಣಂದಿರ ಹೆಂಡತಿಯರು 'ದೊಡ್ಡವರ  ಕೇಳದ ಫಲ. ಮಾಗುವಿಗೆ ಆರೋಗ್ಯ ಸರಿಯಿಲ್ಲ.', ಎಂದು ಆಡಿ ತೋರಿಸಿದರು. ವಿವೇಕ ಕೆಮ್ಮಿ ಸುಮ್ಮನಾದರೆ ಪುಷ್ಪ ತಾನು ಮಗುವನ್ನು ಬೆಳೆಸಿ ಗೆಲ್ಲಿಸಿ ತೋರಿಸಬೇಕೆಂದು ಪಣ ತೊಟ್ಟಳು. ಮಗುವಿನ ಭವಿಷ್ಯದ ಬಗ್ಗೆ ಗಂಡನಲ್ಲಿ ತನ್ನ ಯೋಜನೆಗಳನ್ನು ಹಂಚಿಕೊಂಡಳು. ವಿವೇಕ ಪುಷ್ಪಳ ದುಬಾರಿ ಯೋಜನೆಗಳಿಗೆಲ್ಲ ಹಣ ಹೊಂದಿಸುವುದಾದರೂ ಹೇಗೆ ಎಂದು ಚಿಂತಿಸಲಾರಂಭಿಸಿದ. ತನಗೆ ಮುಂದೆ ಬಹಳ  ಕಷ್ಟಕರ ದಿನಗಳು ಎಂದು ತನ್ನ ಹಣೆಬರಹವನ್ನು ತಾನೇ ಹಳಿದುಕೊಂಡ. 
**********************************************************************************************************
ಮಗುವಿನ ನಾಮಕರಣ ಸಮಾರಂಭ ಭರ್ಜರಿಯಾಗಿ ನಡೆಯಿತು. ವಿವೇಕನ ಸಾಲದ ಹೊರೆ ಹೆಚ್ಚಿತು.
**********************************************************************************************************
ಈಗ ಆರ್ಯನ್ ಎಂಬ ಶುಭನಾಮಾಂಕಿತನಾಗಿದ್ದ ಮಗುವಿನ ಮೊದಲನೆ ಹುಟ್ಟುಹಬ್ಬದ ಯೋಜನೆ ಹಾಕಿಕೊಂಡಳು ಪುಷ್ಪ. ದೊಡ್ಡದೊಂದು ಪಾರ್ಟಿ ಆಯೋಜಿಸಿ, ಮನೆಯವರನ್ನೆಲ್ಲ ಕರೆದು, ಬಂದವರಿಗೆಲ್ಲ ಸ್ವಾಗತ ದ್ವಾರದಲ್ಲೇ ಕೋಕಾ-ಕೋಲಾ ಕುಡಿಸಿ, ಬಂದವರ ಮಕ್ಕಳಿಗೆಲ್ಲ ಆಟಗಳನ್ನು ಆಡಿಸಿ, ಮಗನಿಂದ ಕೇಕ್  ಕತ್ತರಿಸಿ, ಕೇಕಿನ ಮೇಲೊಂದು ಪುಟಾಣಿ ಕ್ಯಾಂಡಲ್ ಇರಿಸಿ, ಅದನ್ನು ಮಗನಿಂದ ಊದಿಸಿ, ಎಲ್ಲರೂ ಚಪ್ಪಾಳೆ ಹೊಡೆಯುತ್ತಿದ್ದರೆ ಮಗನಿಗೆ ಮುತ್ತಿಟ್ಟು, ಅದರದ್ದೊಂದು ಫೋಟೋ ಹಿಡಿಸಿ - ಎಂದೆಲ್ಲ ಕನಸು ಕಾಣತೊಡಗಿದ್ದಳು ಪುಷ್ಪ. ಆದರೆ ಮಗ ಆರ್ಯನ್ ಮನೆಯಲ್ಲಿ ಗ್ಯಾಸ್ ಸ್ಟೌವ್ ಉರಿಸುವಾಗ ಬೆಚ್ಚಿ ಬೀಳುತ್ತಿದ್ದ. ಮಗನನ್ನೆತ್ತಿಕೊಂಡು ಅಡಿಗೆ ಮಾಡಲು ಸ್ಟೌವ್ ಹಚ್ಚಿದರೆ ಮಗ ಕಿಟಾರನೆ ಕಿರುಚುತ್ತಿದ್ದ. ಒಂದು ವರ್ಷದ ಮಗುವಿಗೆ ಬೆಂಕಿಯೆಂದರೆ ವಿಪರೀತ ಭಯವಿತ್ತು. ಇದು ಸಹಜವೇ ಆದರೂ ಅವನಿಂದ ಕ್ಯಾಂಡಲ್ ಊದಿಸುವ ತನ್ನ ಕನಸು ನನಸಾಗಬೇಕಾದರೆ ಹೇಗಾದರೂ ಈ ಭಯವನ್ನು ಹೋಗಲಾಡಿಸಬೇಕೆಂದು ಪುಷ್ಪ  ಅದಕ್ಕೆ ಉಪಾಯಗಳನ್ನು ಹುಡುಕಿದಳು. 
ಪ್ರತಿದಿನವೂ ಮಗನ ಮುಂದೆ ಬೆಂಕಿ ಕಡ್ಡಿ ಗೀರುವುದು - ಇದಕ್ಕೆ ಪ್ರತಿಕ್ರಿಯೆಯಾಗಿ ಅವನು ಕಿರುಚಿಕೊಳ್ಳುವುದು - ಪುಷ್ಪಳ ಅವಿವೇಕದ ಬಗ್ಗೆ ವಿವೇಕ ರೇಗುವುದು ಬಹಳ ದಿನ ನಡೆಯಿತು. ಕೊನೆಗೊಮ್ಮೆ ಮಗು ಕಿರುಚಿಕೊಳ್ಳುವುದು ನಿಂತಿತು. ನಂತರ ಕ್ಯಾಂಡಲ್ ಊದುವ ತರಬೇತಿ ನಡೆಯಿತು. ಒಂದು ಸಂಜೆ ಪುಷ್ಪ ಮಗನಿಂದ ಕ್ಯಾಂಡಲ್ ಊದಿಸುವುದರಲ್ಲಿ ಯಶಸ್ವಿಯಾಗಿ, ತಾನು ಮಗನನ್ನು ತಯಾರು ಮಾಡಿದ ರೀತಿಗೆ ಹೆಮ್ಮೆ ಪಟ್ಟುಕೊಂಡು ಬೀಗಿದಳು. ವಿವೇಕ ಹೆಂಡತಿ ಮತ್ತು ಮಗನ ಮೇಲೆ ವಿಪರೀತ ಪ್ರೀತಿ ಉಕ್ಕಿ ಬಂದು ತಮ್ಮ ಮೂವರ ಫೋಟೋ ಒಂದನ್ನು ತನ್ನ ಮೊಬೈಲ್ ಫೋನ್ ನಲ್ಲಿ ಕ್ಲಿಕ್ಕಿಸಿಕೊಂಡ. 
*******************************************************************************************************
ವಿವೇಕನ ಅಣ್ಣಂದಿರ ಮಕ್ಕಳು ಯಾರಿಗೂ ಮೊದಲನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಾಗಿರಲಿಲ್ಲ. ಪುಷ್ಪ ತಾನು ಅಭೂತಪೂರ್ವವಾದದ್ದೇನನ್ನೋ ಸಾಧಿಸಿದ ಖುಷಿಯಲ್ಲಿದ್ದಳು ಮಗನ ಸಮಾರಂಭದ ದಿವಸ. ಸ್ನೇಹಿತರಿಗೆ, ಹಿತೈಷಿಗಳಿಗೆ, ಬಂಧುವರ್ಗಕ್ಕೆ ಆಮಂತ್ರಣವಿತ್ತು. ಪುಷ್ಪಳ ಆಸೆಯಂತೆಯೇ, ಈಗಿನ ಟ್ರೆಂಡ್ ಗೆ ಅನುಗುಣವಾಗಿಯೇ ಛೋಟಾ ಭೀಮನ ಆಕಾರದಲ್ಲಿ ಕೇಕನ್ನು ತಯಾರಿಸಲಾಗಿತ್ತು. ಛೋಟಾ ಭೀಮ ನಗುತ್ತಿದ್ದ. ವಿವೇಕ ಸಾಲದ ಹೊರೆಯಲ್ಲಿ ಒಳಗೊಳಗೆ ಅಳುತ್ತಿದ್ದ. ಸ್ವಾಗತದ್ವಾರದ ಬಳಿಯೇ ಕೋಕಾ-ಕೋಲಾ ಸರಬರಾಜಾಯಿತು. ವಿವೇಕನ ಅಣ್ಣಂದಿರ ಪತ್ನಿಯರು ಬೆರಗು ಹಾಗೂ ಅಸೂಯೆ ಬೆರೆಸಿಕೊಂಡು ಕೋಕಾ-ಕೋಲಾ ಕುಡಿದು ಸಮಾರಂಭದಲ್ಲೇನಾದರೂ ಕೊಂಕು ಹುಡುಕಬಹುದೇ ಎಂದು ಯೋಚಿಸುತ್ತಿದ್ದರು. ಪುಷ್ಪ ತಾನು ಮಗನನ್ನು ತಯಾರು ಮಾಡಿದ ರೀತಿಗೆ ಇವತ್ತು ಎಲ್ಲರೂ ಬೆಚ್ಚಿ ಬೀಳಲಿದ್ದಾರೆ ಎಂಬ ಖಾತ್ರಿಯಲ್ಲಿ ಖುಷಿಯಾಗಿದ್ದಳು. 
**********************************************************************************************************
ಕೊನೆಗೆ ಆ ಘಳಿಗೆ ಬಂತೇ ಬಂತು. ಪುಷ್ಪ ಮಗನನ್ನು ಹಿಡಿದುಕೊಂಡು ನಿಂತಳು. ವಿವೇಕ ಕ್ಯಾಂಡಲ್ ಹಚ್ಚಿದ. ನೆರೆದವರು ಕತ್ತು  ಉದ್ದ ಮಾಡಿ ಪುಷ್ಪಳ ಮಗ ಆರ್ಯನ್ ಕ್ಯಾಂಡಲ್ ಊದುವುದನ್ನು ಕಣ್ತುಂಬ ನೋಡಿ ಆನಂದಿಸಲು ಉತ್ಸುಕರಾಗಿದ್ದರು. ಛಾಯಾಗ್ರಾಹಕ ತಯಾರಾಗಿದ್ದ. ದುಬಾರಿ ಮೊಬೈಲ್ ಫೋನ್ ಗಳಿದ್ದವರು ಈ ಘಳಿಗೆಯನ್ನು ಶಾಶ್ವತವಾಗಿ ಸೆರೆ ಹಿಡಿದುಕೊಳ್ಳಲು ಮೊಬೈಲ್ ಫೋನ್ ಗಳನ್ನು ಆಯುಧಗಳಂತೆ ಎತ್ತಿ ಹಿಡಿದರು. 

ಇಷ್ಟೆಲ್ಲ ಭರ್ಜರಿ ಚಟುವಟಿಕೆಗಳ ಕೇಂದ್ರದಲ್ಲಿದ್ದ ಕೇಕಿನ ಹಿಂದಿದ್ದ ಆರ್ಯನ್ ನನ್ನು ಹಿಡಿದುಕೊಂಡಿದ್ದ ಪುಷ್ಪಳ ಪಕ್ಕ ವಿವೇಕನ ಅಣ್ಣಂದಿರಲ್ಲಿ ಒಬ್ಬನಾದ ಗೋಪಾಲ ತನ್ನ ಮೂರು ವರ್ಷದ ಮಗಳಾದ ಸೋನಂಳನ್ನು ಎತ್ತಿಕೊಂಡು ನಿಂತಿದ್ದ. ಇದೆಲ್ಲ ಭಾವೋದ್ವೇಗ ಉತ್ತುಂಗಕ್ಕೇರಿದೆ ಅನ್ನಿಸಿದಾಗ ಗೋಪಾಲ ಆರ್ಯನ್ ಗೆ, "ಊದು , ಊದು" ಎಂದು ಉತ್ತೇಜಿಸಿದ. ಆಗ ಅದು ನಡೆದು ಹೋಯಿತು - ಅಪ್ಪ ಹೇಳಿದ್ದು ತನಗೇ ಇರಬೇಕು ಎಂದುಕೊಂಡು ಗೋಪಾಲನ ಮಗಳು ಸೋನಂ ಪುಷ್ಪಳ ಮಗ ಆರ್ಯನ್ ಊದಬೇಕಿದ್ದ ಕ್ಯಾಂಡಲ್ ಅನ್ನು ಊದಿ ಬಿಟ್ಟಳು. ಕ್ಯಾಂಡಲ್ ಆರಿ ಹೋಗಿ ಸಣ್ಣ ಹೊಗೆ ಮೇಲೇರುತ್ತಿದ್ದಂತೆ ಪುಷ್ಪ ಸ್ಫೋಟಗೊಂಡು ಕಿರುಚಾಡಿ ಕೊನೆಗೆ ತಾನು ಮಗನನ್ನು ತಯಾರಿಸಿದ ರೀತಿಯನ್ನೆಲ್ಲ ನೆನೆಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು. ವಿವೇಕನ ಹಿರಿಯ ಅಣ್ಣ ಶ್ರೀನಿವಾಸ "Man proposes. God disposes.", ಎಂಬ ಭಾರವಾದ ತತ್ವಶಾಸ್ತ್ರದ ಚಿಂತನೆಯನ್ನು ಪುಷ್ಪಳಿಗೆ ಒಪ್ಪಿಸಿದರು. "ಬೇಕಿದ್ರೆ ಇನ್ನೊಂದು ಕ್ಯಾಂಡಲ್ ತರ್ಲಾ? ನಿನ್ನ ಮಗ ಊದ್ಲಿ.", ಎಂದೂ ಸೇರಿಸಿದರು. ಪುಷ್ಪ ಮತ್ತೂ ಅತ್ತಳು. ಛೋಟಾ ಭೀಮ ನಗುತ್ತಿದ್ದ. 
********************************************************************************************
(ಮುಗಿಯಿತು)

4 comments: