Jan 7, 2014

ಸಾವು-ಬದುಕಿನ ಆಟ

(ಭಾಗ ೧)
ಶರ್ಮಿಳಾಳ ಬಗ್ಗೆ ನೆನೆದಾಗ ನಯನಾಳಿಗೆ ಮೊದಲು ನೆನಪಾಗುವುದು ಅವಳ ದೈವ ಭಕ್ತಿ. ಅದರಲ್ಲೂ ಶಿರಡಿಯ ಸಾಯಿ ಬಾಬಾರ ಬಗ್ಗೆ ಇದ್ದ ಅವಳ ವಿಪರೀತ ಭಕ್ತಿ. ಅವಳು ತನ್ನ ಈ-ಮೇಲ್ ಅಕೌಂಟಿಗಾಗಲಿ, ಕಂಪ್ಯೂಟರ್ ಗಾಗಲಿ ಇಡುತ್ತಿದ್ದ ಪಾಸ್ವರ್ಡ್ ಗಳು ಕೂಡ "LoveYouSairam", "sairam123" ಎಂದಿತ್ಯಾದಿಯಾಗಿ ಅವಳ ಸಾಯಿ-ಭಕ್ತಿ ಯನ್ನು ಪ್ರತಿಬಿಂಬಿಸುವಂತಿದ್ದವು. ಪ್ರತಿ ಗಳಿಗೆಯೂ ಅವಳು ಸಾಯಿ ಬಾಬರೊಂದಿಗೆ ಸಂವಾದ ನಡೆಸುತ್ತಿದ್ದಳು. ಅಗತ್ಯಕ್ಕಿಂತ ಹೆಚ್ಚಾಗಿ ಬಾಬಾರನ್ನು ನಂಬುತ್ತಿದ್ದ ಅವಳು ಭಕ್ತಿಯಿಂದ ಬೇಡಿದರೆ ಕಷ್ಟಗಳೆಲ್ಲವೂ ದೂರವಾಗುವುದೆಂದು ದೃಢವಾಗಿ ನಂಬಿಕೊಂಡಿದ್ದಳು. ಬದುಕಿನಲ್ಲಿ ಅವಳಿಗಿದ್ದ ಕಷ್ಟಗಳೆಂದರೆ ಅವಳ ಕುಟುಂಬದ ಜವಾಬ್ದಾರಿ ಮತ್ತು ಈ ಜವಾಬ್ದಾರಿಗಳ ನಡುವೆಯೂ ಬೇಕೆನಿಸಿದ್ದ ಪ್ರೇಮ. ಮಹೇಶ ಎಂಬ ಹೆಸರಿನ ಅವಳ ಪ್ರಿಯತಮ ಅವಳ ಕಷ್ಟಗಳನ್ನು ಕರಗಿಸುವ ನಾಯಕನಾಗಿರದೆ, ಅವಳ ಕಷ್ಟಗಳನ್ನು ಹೆಚ್ಚಿಸುವ ಖಳನಾಯಕನಾಗಿ ಬಿಟ್ಟಿದ್ದ. ಹುಚ್ಚು ಹುಡುಗಿ ಶರ್ಮಿಳಾ ಮಹೇಶ ಸಿಗದಿದ್ದರೆ ಬಾಳುವುದಿಲ್ಲ ಎಂದು ಹಟ ತೊಟ್ಟಿದ್ದಳು. ಮಹೇಶ ಹುಚ್ಚು ಕುದುರೆಯಂತೆ ಶರ್ಮಿಳಾಳ ಹೊರತಾಗಿಯೂ ಎರಡು ಮೂರು ಹುಡುಗಿಯರೊಂದಿಗೆ ಚೆಲ್ಲಾಟ ನಡೆಸಿದ್ದ. ಶರ್ಮಿಳಾ-ಮಹೇಶರ ಮದುವೆ ಯಾವತ್ತೂ ನಡೆಯುವುದಿಲ್ಲವೆಂದು ತಿಳಿದಿದ್ದೂ ಕೂಡ ನಯನಾ ಶರ್ಮಿಳಾಳ ಹುಚ್ಚು ಪ್ರಯತ್ನಗಳಲ್ಲಿ ಭಾಗಿಯಾಗುತ್ತಿದ್ದಳು.

"ಪ್ರತಿದಿನ ವೈನ್ ಕುಡಿದ್ರೆ ಮುಖದಲ್ಲಿ glow ಬರುತ್ತೆ.", ಎಂದು ಒಮ್ಮೆ ಶರ್ಮಿಳಾಗೆ ಮಹೇಶನನ್ನು ತನ್ನ ಕಾಂತಿಯುತ ಮುಖದ ಸೆಳೆತವೊಂದರಿಂದಲೇ ಉಳಿಸಿಕೊಳ್ಳಬಹುದೆಂಬ ಅದ್ಭುತವಾದ ಉಪಾಯ ಹೊಳೆದು ಇವರಿಬ್ಬರೂ ಮಸಾಲೆ ಪುರಿ, ಗೋಬಿ ಮಂಚೂರಿಗಳಿಗೆ ಕಳೆಯುತ್ತಿದ್ದ ದುಡ್ಡನ್ನುಳಿಸಿ ಗೋಲ್ಕೊಂಡ ವೈನು ಕೊಂಡು ಕುಡಿಯಲಾರಂಭಿಸಿದರು. ವೈನು ಬಾಟಲಿ ಖಾಲಿಯಾಯಿತು. ಮಹೇಶನ ಪ್ರೇಯಸಿಯರ ಸಂಖ್ಯೆ ಹೆಚ್ಚಿತು. ಉಪಾಯ ಫಲಿಸಲಿಲ್ಲ.

*                                                            *                                                            *

ನಯನಾ ಶರ್ಮಿಳಾರು ಸಹೋದ್ಯೋಗಿಗಳು. ಇವರಿಬ್ಬರನ್ನೂ ಹತ್ತಿರ ತಂದಿದ್ದು ಇಬ್ಬರಿಗೂ ಬದುಕಿನಲ್ಲಿದ್ದ ಕಷ್ಟಗಳು. ಒಬ್ಬರ ಸಮಸ್ಯೆಗೆ ಇನ್ನೊಬ್ಬರಲ್ಲಿ ಉತ್ತರ ಹುಡುಕುತ್ತಿದ್ದರೋ, ಅಥವಾ ಇಬ್ಬರೂ ಸಮಾನ ದುಃಖಿಗಳೆಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರೋ ಎಂಬುದು ನಯನಾಳಿಗೆ ಸ್ಪಷ್ಟವಿಲ್ಲ. ಒಟ್ಟಿನಲ್ಲಿ ಗಟ್ಟಿಯಾದ ಸ್ನೇಹ ಬೆಳೆದಿತ್ತು, ಇಬ್ಬರ ಅರಿವಿಗೂ ಬರುವ ಮೊದಲೇ. ನಯನಾಳಿಗೆ ಪ್ರಪಂಚ ಜ್ಞಾನ ಬರುವ ಮೊದಲೇ ಅವಳ ತಂದೆಗೆ ತಲೆಯ ಬಲಭಾಗದಲ್ಲಿ ಶುರುವಾದ ನೋವು ಕೊನೆಗೆ ಮೆದುಳಿನ ತೊಂದರೆಯಲ್ಲಿ ಕೊನೆಗೊಂಡು, ಅವರು ಬದುಕುವ ಸಾಧ್ಯತೆಯೇ ಇಲ್ಲವೆಂಬ ಆಘಾತ ನಯನಾಳ ಮೇಲೆ ಎರಗಿತ್ತು. ನಯನಾಳ ತಾಯಿ ಮಂಜುಳಾ ಗಂಡನ ನೆರಳಿನಲ್ಲಿ ಬದುಕಿದವರು, ಅವರಿಗೆ ಗಂಡನ ಸಾವು ಖಚಿತವೆಂದು ಗೊತ್ತಾದ ಕ್ಷಣದಲ್ಲಿ ತನ್ನಿಬ್ಬರು ಮಕ್ಕಳಿಗೆ ವಿಷವಿಟ್ಟು ಸಾಯಿಸಿ, ತಾನೂ ಕೂಡ ಸಾಯುವುದೆಂದು ನಿರ್ಧರಿಸಿ ಬಿಟ್ಟರು. ನಯನಾ ಪಿ.ಯು.ಸಿ. ಎರಡನೆ ವರ್ಷದಲ್ಲಿದ್ದರೆ, ಅವಳ ತಮ್ಮ ನಿಖಿಲ ಒಂಬತ್ತನೇ ತರಗತಿಯಲ್ಲಿದ್ದ - ಇಬ್ಬರಿಗೂ ತಾಯಿಯ ನಿರ್ಧಾರವನ್ನು ಅಲ್ಲಗಳೆಯುವ ಧೈರ್ಯವಿರಲಿಲ್ಲ. ಅನ್ನಕ್ಕೆ ವಿಷ ಮಿಶ್ರ ಮಾಡಿ ತಯಾರಿಟ್ಟಾಗ, ನಯನಾ " ಅಮ್ಮ,ಕೊನೆಯ ಸಲ ಪಾರ್ಕಿಗೆ ಹೋಗಿ ಬರೋಣ." ಎಂದು ಒತ್ತಾಯ ಮಾಡಿದರೆ ಅಮ್ಮ ಒಪ್ಪಿಕೊಂಡರು.

ಪಾರ್ಕಿಗೆ ಹೋಗಿ ಬಂದು ವಿಷವುಂಡು ಸಾಯುವುದೆಂದು ನಿಶ್ಚಯ ಮಾಡಿಕೊಂಡಿದ್ದ ಮೂವರು ಪಾರ್ಕಿನಲ್ಲಿ ಕಲ್ಲು ಬೆಂಚೊಂದರಲ್ಲಿ ಮಾತಾಡದೆ ಕುಳಿತಿದ್ದರು. ಮಾತನಾಡಿದರೆ ನಿರ್ಧಾರ ಸಡಿಲವಾಗಿಬಿಡಬಹುದೇನೋ ಎಂಬಂತೆ ಕುಳಿತಿದ್ದರು ತಾಯಿ ಮಂಜುಳಾ. ಬದುಕು ಅವರ ಪಾಲಿಗೆ ಮುಗಿದಂತಿತ್ತು. ನಯನಾಳಿಗೆ ಬದುಕು ಮುಗಿಸುವ ಉದ್ದೇಶವಿರಲಿಲ್ಲ. ಎಲ್ಲಿಂದಾದರೂ ಯಾವುದಾದರೊಂದು ಸಹಾಯ  ಬರಬಾರದೆ, ಬದುಕು ಮುಗಿಸುವ ತಾಯಿಯ ನಿರ್ಧಾರ ಬದಲಾಗಬರದೆ ಎಂದು ಆ ಪಾರ್ಕಿನಲ್ಲಿ ಕುಳಿತು ಮನದಲ್ಲೇ ಮೌನವಾಗಿ ಪ್ರಾರ್ಥಿಸುತ್ತಿದಳು.

(ಭಾಗ ೨)

ಈ ಮೂವರು ಹೀಗೆ ಕುಳಿತಿರಬೇಕಾದರೆ, ನಯನಾಳ ಸಹಪಾಠಿ ಗಾಯತ್ರಿ ಅಲ್ಲಿಗೆ ಬಂದಳು. ಗಾಯತ್ರಿ ಬಹಳ ದುಃಖದಲ್ಲಿದ್ದಂತಿದ್ದಳು. ನಯನಾ ಸ್ವತಃ ತಾನೇ ದುಃಖದಲ್ಲಿದ್ದರೂ ಗಾಯತ್ರಿಯನ್ನು ಒತ್ತಾಯ ಮಾಡಿ ವಿಚಾರಿಸಿದಾಗ ಅವಳು ಬಿಕ್ಕಿ ಅಳತೊಡಗಿದಳು. ಕೊನೆಗೆ ನಯನಾ, ತಾಯಿ ಮಂಜುಳಾರಿಬ್ಬರೂ ಅವಳನ್ನು ಸಮಾಧಾನಪಡಿಸಿ ನಿಧಾನಕ್ಕೆ ಕೇಳಿದಾಗ ತನ್ನ ಕಷ್ಟ ಹೇಳಿಕೊಂಡಳು. "ನನ್ನ ತಮ್ಮನಿಗೆ ಹುಟ್ಟಿನಿಂದಲೇ ಬುದ್ಧಿಮಾಂದ್ಯ. ಯಾವ ಮದ್ದೂ ಇಲ್ಲ ಅದಕ್ಕೆ. ಈಗೀಗ ಅವನು ವಿಪರೀತ ಕಿರುಚಾಡ್ತಾನೆ. ಇಡೀ ದಿನ ಅವನನ್ನ control ಮಾಡ್ಲಿಕ್ಕೆ ಒಬ್ರು ಜೊತೆಗೇ ಇರ್ಬೇಕು. ಮನೆಯಲ್ಲಿ ಅವ್ನ ಕಿರುಚಾಟದ ಮಧ್ಯ ನಂಗೆ ಓದ್ಕೊಳ್ಳೋಕೂ ಅಗೊಲ್ಲ."

ಎಲ್ಲವನ್ನೂ ಕೇಳಿಸಿಕೊಂಡ ಮಂಜುಳಾ, "ಇಷ್ಟು ಚಿಕ್ಕ ವಯಸಿನಲ್ಲಿ ಈ ಮಗುವಿಗೆ ಇಂಥ ಕಷ್ಟ ಕೊಟ್ಟು ಪಾರ್ಕಿನಲ್ಲಿ ಬಂದು ಅಳುವಂತೆ ಮಾಡುವ ದೇವರಿಗೆ ಕರುಣೆಯೇ ಇಲ್ಲವೇ?!", ಎಂದು ಮರುಗಿದರು. ಗಾಯತ್ರಿಗೆ ಸಮಾಧಾನ ಮಾಡಿದರು - "ಎಲ್ಲಕ್ಕಿಂತ ದೊಡ್ಡದು ಬದುಕು. ಅಳಬೇಡ, ಧೈರ್ಯವಾಗಿರು."
ತಾಯಿ ಹೀಗೆ ಹೇಳಿದ್ದು ನಯನಾಳಿಗೆ ಆಶ್ಚರ್ಯವಾಯಿತು! ಇವಳ ಬದುಕು ಮಾತ್ರ ದೊಡ್ಡದೇ? ನಮ್ಮ ಬದುಕು ಬದುಕಲ್ಲವೇ? - ಎಂದುಕೊಂಡಳು ಗಾಯತ್ರಿಯನ್ನು ನೋಡುತ್ತಾ. ಸ್ವಲ್ಪ ಹೊತ್ತಿನಲ್ಲಿ ಗಾಯತ್ರಿ ತನ್ನ ಮನೆಗೆ ನಡೆದಳು.

ಗಾಯತ್ರಿ ಅತ್ತ ಹೋಗುತ್ತಿದ್ದಂತೆ, ಸಾವಿನಿಂದ ಬಚಾವಾಗಲು ತನಗಿರುವ ಕೊನೆಯ ದಾರಿ ಗಾಯತ್ರಿಯ ಕಥೆ ಎಂದು ನಯನಾಳಿಗೆ ಅನ್ನಿಸಿತು. ಹೇಗಾದರೂ ಮಾಡಿ ಈ ಕಥೆಯನ್ನು ತಾಯಿಯ ಸಾವಿನ ನಿರ್ಧಾರವನ್ನು ಬದಲಾಯಿಸಲು ಉಪಯೋಗಿಸಬೇಕೆಂದುಕೊಂಡು ಹೇಳಿಯೇಬಿಟ್ಟಳು - "ಅಮ್ಮಾ, ನೋಡು. ಎಲ್ರಿಗೂ ಕಷ್ಟ ಇದೆ. ಎರಡು ವರ್ಷದಿಂದ ಗಾಯತ್ರಿನ ನೋಡ್ತಾ ಇದ್ದೀನಿ, ಆದ್ರೆ ಅವಳಿಗೆ ಇಷ್ಟು ಕಷ್ಟ ಇದೆ ಅಂತ ಗೊತ್ತಿರ್ಲಿಲ್ಲ. ಅಂದ್ರೆ ಕಷ್ಟ ಇದ್ರೂ ಬದುಕಬಹುದು ಅಂತ ಆಲ್ವಾ ಅರ್ಥ? ಒಬ್ಬ ಡಾಕ್ಟರು ಅಪ್ಪ ಉಳಿಯೊಲ್ಲ ಅಂತ ಹೇಳಿದ್ರೆ ಏನಾಯ್ತು? ಇನ್ನೊಬ್ರಿಗೆ ತೋರ್ಸೋಣ. ಆದ್ರೆ ಸಾಯೋದು ಬೇಡ. ನಂಗೆ ಬದುಕ್ಬೇಕು.", ಎಂದು ಒತ್ತಾಯ ಮಾಡುತ್ತಾ ಜೋರಾಗಿ ಅಳತೊಡಗಿದಳು. ವಯಸಿಗೆ ಮೀರಿದ ಮಾತುಗಳನ್ನಾಡಿದ ಮಗಳನ್ನೇ ದಿಟ್ಟಿಸುತ್ತ ಕುಳಿತರು ಮಂಜುಳಾ. ಇದೇ ಹೊತ್ತಿಗೆ ತಮ್ಮ ನಿಖಿಲ ಕೂಡ, " ಅಮ್ಮ,ಸಾಯೋದು ಬೇಡ ಪ್ಲೀಸ್.", ಎಂದು ಅಳತೊಡಗಿದ!

*                                                                 *                                                                 *

ಅಂದು ತಾವು ಬದುಕಿ ಉಳಿದಿದ್ದಕ್ಕೆ ಕಾರಣ ಗಾಯತ್ರಿಯ ಕಥೆ ಎಂದು ನಯನಾ ದೃಢವಾಗಿ ನಂಬಿದ್ದಾಳೆ. ನಯನಾಳ ಮಾತಿನಿಂದ ಮನಸ್ಸು ಬದಲಾಯಿಸಿಕೊಂಡ ಮಂಜುಳಾ ಮನೆಗೆ ಬಂದವರೇ ವಿಷ ಬೆರೆಸಿದ್ದ ಅನ್ನವನ್ನು ಚೆಲ್ಲಿ ಹಣೆಯಲ್ಲಿದ್ದಂತೆ ನಡೆಯಲಿ ಎಂದು ಬದುಕನ್ನೆದುರಿಸಲು ತಯಾರಾದರು. ಮರುದಿನ ಆಸ್ಪತ್ರೆಗೆ ಹೋದರೆ ವೈದ್ಯರು ಐದು ದಿನ ಬಿಟ್ಟು ಕೊನೆಯದೊಂದು ಪರೀಕ್ಷೆ ಮಾಡುವುದಾಗಿಯೂ, ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದರೆ ಜೀವ ಉಳಿಯುವುದಾಗಿಯೂ ಹೇಳಿದರು. ಕೊನೆಗೆ ಅದ್ಭುತವೆಂಬಂತೆ ನಯನಾಳ ಅಪ್ಪ ಬದುಕುಳಿದು ನಿಧಾನವಾಗಿ ಚೇತರಿಸಿಕೊಂಡರು. ಆದರೆ ಮನೆಯವರಿಗೆ ನಿಮ್ಹಾನ್ಸ್ ನಲ್ಲಿ ಕಳೆದ ಆ ದಿನಗಳನ್ನು ಎಂದೂ ಮರೆಯಲಾಗಲಿಲ್ಲ. ಬದುಕು ಎಷ್ಟು ಸೂಕ್ಷ್ಮ ಮತ್ತು ಸುಲಲಿತವಾಗಿ ನಡೆಯುತ್ತಿರುವ ಎಲ್ಲವೂ ಹಳಿ ತಪ್ಪುವುದು ಎಷ್ಟು ಸುಲಭ ಎಂಬ ಸತ್ಯವನ್ನು ಸದಾ ನೆನಪಿಸುತ್ತಿರುತ್ತದೆ.

ಅಪ್ಪ ದೇವರಾಜ್ ಚೇತರಿಸಿಕೊಂಡರೂ ಕೂಡ ಹಿಂದಿನಂತೆ ದುಡಿಯುವ ಸಾಮರ್ಥ್ಯ ಉಳಿಯಲಿಲ್ಲ. ಸ್ಕಾಲರ್ ಶಿಪ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ ನಯನಾ ದುಡಿದು ಸಂಸಾರ ನೋಡಿಕೊಳ್ಳತೊಡಗಿದಳು. ತಮ್ಮ ನಿಖಿಲನನ್ನೂ ಇಂಜಿನಿಯರಿಂಗ್ ಓದಿಸುತ್ತಿದ್ದಳು. ನಯನಾಳಿಗೆ ವಿದ್ಯೆ, ಉತ್ತಮ ಅಂಕಗಳಿದ್ದರೂ ಕೂಡ ಭಾರಿ ಸಂಬಳದ ಕೆಲಸ ಸಿಗದೇ ಮನೆಯ ಖರ್ಚನ್ನೆಲ್ಲ ನೋಡಿಒಳ್ಳುವಷ್ಟರಲ್ಲಿ ಸಾಕುಸಾಕಾಗುತ್ತಿತ್ತು. ನಯನಾಳ ಅಪ್ಪ ಆರೋಗ್ಯ ಹದಗೆಟ್ಟ ನಂತರ ಮಗುವಿನಂತಾಗಿದ್ದರು - ಚಿಕ್ಕ ಪುಟ್ಟ  ವಿಷಯಗಳಿಗೆ,ಕೆಲವೊಮ್ಮೆ ಕಾರಣವೇ ಇಲ್ಲದೆ ಅಳುತ್ತಿದ್ದರು. ಟಿ.ವಿ.ಯಲ್ಲಿ ಯಾವುದಾದರೂ ಭಾವುಕ ಸನ್ನಿವೇಶ ಬಂದರೆ ಆ ಪಾತ್ರಗಳೊಂದಿಗೆ ತಾವೂ ಅಳುತ್ತಿದ್ದರು. ಕೆಲವೇ ತಿಂಗಳ ಹಿಂದೆ  ಗತ್ತಿನಿಂದ, ಕೆಲವೊಮ್ಮೆ ದರ್ಪವೇನೋ ಅನಿಸುವಂತೆ ನಡೆದುಕೊಳ್ಳುತ್ತಿದ್ದ ದೇವರಾಜ್ ಈ ರೀತಿ ಮೇಣದ ಮುದ್ದೆಯಂತೆ ಬದಲಾದದ್ದು ಮನೆಯವರಿಗೆ ದುಃಖ ತರಿಸಿತ್ತು, ಸ್ಥೈರ್ಯ ಕುಸಿದುಬಿಟ್ಟಿತ್ತು.

ನಯನಾ ತಾನು ಹಲ್ಲು ಕಚ್ಚಿಕೊಂಡು, ದುಃಖ ಸಹಿಸಿಕೊಂಡು ಬದುಕಲೇಬೇಕೇಂಬ ಜಿದ್ದಿನಿಂದ ಬೇರೆ ಕೆಲಸ ಹುಡುಕುತ್ತಿದ್ದಳು. ಏನಿಲ್ಲದಿದ್ದರೂ, ಮನೆಯ ಆರ್ಥಿಕ ಪರಿಸ್ಥಿತಿಯನ್ನಾದರೂ ಸುಧಾರಿಸಬೇಕು ಎಂದು ಚಡಪಡಿಸುತ್ತಿದ್ದಳು. ಕೊನೆಗೊಮ್ಮೆ ಬೇರೆ ದಾರಿ ಕಾಣದೆ ಪಾರ್ಟ್ ಟೈಮ್ ಕೆಲಸವೊಂದಕ್ಕೆ ಸೇರಿಕೊಂಡಳು. ಮುಂಜಾನೆ ಎರಡು-ಮೂರು ಗಂಟೆ ಕಿಂಡರ್ ಗಾರ್ಟನ್ ಒಂದರಲ್ಲಿ ಪಾಠ ಮಾಡಿ ನಂತರ ತನ್ನ ಎಂದಿನ ಕೆಲಸಕ್ಕೆ ಹೋಗತೊಡಗಿದಳು. ಇದನ್ನೇ ಮಾಡಮಾಡುತ್ತ ಮಕ್ಕಳ ನಡುವೆ ತನ್ನ ದುಃಖ ಮರೆಯತೊಡಗಿದ್ದಳು. ಆದರೆ ಶಾಲೆಯ ಇತರ ಶಿಕ್ಷಕಿಯರು ತಾವು ಟೀಚರ್ಸ್ ಟ್ರೈನಿಂಗ್ ಮುಗಿಸಿ ಪಡೆಯುತ್ತಿರುವ ಅದೇ ಸಂಬಳವನ್ನು ನಯನಾ ಯಾವುದೇ ತರಬೇತಿಯಾಗಲಿ, ಪೂರ್ವ ಅನುಭವವಾಗಲಿ ಇಲ್ಲದೆ ಪಡೆಯುತ್ತಿದ್ದಾಳೆಂದು ಇವಳನ್ನು ಶತ್ರುವಿನಂತೆ ಕಾಣತೊಡಗಿದರು. ಇದರಿಂದಾಗಿ ನಯನಾ ಕೆಲಸ ಬಿಡಬೇಕಾಯಿತು. ಹೆಚ್ಚು ಸಂಬಳದ ಬೇರೆ ಕೆಲಸದ ಹುಡುಕಾಟ ಮುಂದುವರೆಯಿತು.

*                                                    *                                                                     *

ನಯನಾ ಕೆಲಸ ಹುಡುಕುವಲ್ಲಿ ತನ್ನ ಶಕ್ತಿ ವ್ಯಯಿಸುತ್ತಿದ್ದರೆ, ಶರ್ಮಿಳಾ ಮಹೇಶನನ್ನು ಒಲಿಸಿಕೊಳ್ಳಲು ಶತಪ್ರಯತ್ನದಲ್ಲಿ ತೊಡಗಿದ್ದಳು. ಶರ್ಮಿಳಾ ಮಹೇಶನ ಹುಚ್ಚನ್ನು ಬಿಟ್ಟರೆ ಉದ್ಧಾರವಾಗುತ್ತಾಳೆ ಎಂದು ನಯನಾಳಿಗೆ ಎಷ್ಟೋ ಬಾರಿ ಅನಿಸಿದ್ದಿದೆ. ಆದರೆ ಶರ್ಮಿಳಾಗೆ ಅದನ್ನು ಅರ್ಥ ಮಾಡಿಸುವುದು ಸಾಧ್ಯವಾಗಿರಲಿಲ್ಲ. ಶರ್ಮಿಳಾ ಮಹೇಶರು ಭೇಟಿಯಾಗುವಾಗ ಕೆಲವೊಮ್ಮೆ ನಯನಾಳೂ ಜೊತೆಗಿರುತ್ತಿದ್ದಳು. ಅವರಿಬ್ಬರ ಮಾತುಕತೆಯಲ್ಲಿ ಮಹೇಶನ ಕಿರುಚಾಟ ಮತ್ತು ಶರ್ಮಿಳಾಳ ಮುಸುಮುಸು ಅಳುಗಳ ಪಾಲೇ ಹೆಚ್ಚಿತ್ತು. ಹೀಗೆ ಸಂವಾದವೇ ಇಲ್ಲದೆ ಸಂಬಂಧ ಬೆಳೆಯುವುದಾದರೂ ಹೇಗೆ ಎಂದು ನಯನಾಳಿಗೆ ಅನಿಸಿದ್ದರೂ ಶರ್ಮಿಳಾಳಿಗೆ ಏನೂ ಹೇಳಿರಲಿಲ್ಲ.

ಶರ್ಮಿಳಾಳನ್ನೊಮ್ಮೆ ನಯನಾ ಮನೆಗೆ ಕರೆದಿದ್ದಳು. ಶರ್ಮಿಳಾಳಿಗೆ ತನ್ನ ತಂದೆಯ ಅನಾರೋಗ್ಯದ ವಿಷಯವನ್ನೆಲ್ಲ ಹೇಳಿದ್ದರೂ ಕೂಡ ಅವಳನ್ನು ತಂದೆಯ ಬಳಿ ಕೂರಿಸಿ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಶರ್ಮಿಳಾ ತನ್ನ ಮತ್ತು ಮಹೇಶನ ಕಥೆಯನ್ನು ಹೇಳಿ - ಇಬ್ಬರೂ ಜೋರಾಗಿ ಅಳತೊಡಗಿದ್ದರು. ಇವರಿಬ್ಬರನ್ನು ಸಮಾಧಾನ ಮಾಡುವಷ್ಟರಲ್ಲಿ ನಯನಾಳಿಗೆ ಸಾಕು ಸಾಕಾಯಿತು! ಇದನ್ನೆಲ್ಲಾ ನೋಡಿದ ತಾಯಿ ಮಂಜುಳಾ ಮುಂದೆ ನೆನಪಾದಾಗಲೆಲ್ಲ "ಪಾಪ, ಪೆದ್ದು ಹುಡುಗಿ!", ಎನ್ನುತ್ತಾರೆ.

ಶರ್ಮಿಳಾ ಏನೇನೋ ಮೋಡಿ ಮಾಡಿ ಮಹೇಶನನ್ನು ಸೆಳೆದುಕೊಂಡು ತನ್ನ ಬಳಿ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಕೂಡ, ಮಹೇಶ ಇವಳ ಯಾವ ತಂತ್ರಕ್ಕೂ ಬಗ್ಗಲಿಲ್ಲ. ಶರ್ಮಿಳಾ ನಯನಾಳಲ್ಲಿ ಹೇಳದಿದ್ದರೂ ಕೂಡ, ಮಹೇಶ ಶರ್ಮಿಳಾಳನ್ನು ದೈಹಿಕವಾಗಿ ಉಪಯೋಗಿಸುತ್ತಿದ್ದಾನೆ ಎಂಬ ಅನುಮಾನ ನಯನಾಳಿಗೆ ಬಂದಿತ್ತು. ಆದರೆ ಮದುವೆಯ ಮಾತೆತ್ತಿದಾಗ ಮಹೇಶ ಉರಿದು ಬೀಳುತ್ತಿದ್ದ. ಮಹೇಶ ತನಗೆ ಸಿಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶರ್ಮಿಳಾ ಹೇಳತೊಡಗಿದ್ದಳು. ಈ ಹೆಣ್ಣು ಹುಚ್ಚನ ಹುಚ್ಚು ಹಿಡಿಸಿಕೊಂಡು ಅವಳು ಜೀವ ಕಳೆದುಕೊಳ್ಳುವುದಾದರೂ ಏಕೆ ಎಂದು ನಯನಾ ಶರ್ಮಿಳಾಳಿಗೆ ಇನ್ನಿಲ್ಲದಂತೆ ಬುದ್ಧಿ ಹೇಳಿದ್ದಳು.

ಇದು ಹೀಗೆಯೆ ಮುಂದುವರಿದು ಕೊನೆಗೊಮ್ಮೆ ಶರ್ಮಿಳಾಳಿಗೂ ಖಡಾಖಂಡಿತವಾಗಿ ಏನಾದರೊಂದು ಆಗಲೇಬೇಕು ಎಂದೆನಿಸಿತು. ಮಹೇಶ ತನ್ನನ್ನು ಮಾಡುವೆ ಆಗುತ್ತಾನೋ ಇಲ್ಲವೋ ಎಂದು ತೀರ್ಮಾನ ಆಗಲೇಬೇಕೆಂದು ನಯನಾಳನ್ನು ಜೊತೆಗಿಟ್ಟುಕೊಂಡು ಮಹೇಶನನ್ನು ಮಾತುಕತೆಗೆ ಕರೆದಳು. ಶರ್ಮಿಳಾ ಗಂಭೀರವಾಗಿ ಮಾತಾಡಿದರೆ ಮಹೇಶ ಉಡಾಫೆ ಮಾಡಿದ. ಕೊನೆಗೆ ನಯನಾ ಮಹೇಶನಿಗೆ ನಾಟುವಂತೆ ಕೇಳಿದಳು - "ಒಂದೇ ಮಾತಿನಲ್ಲಿ ಹೇಳು ಮಹೇಶ್. ನೀನು ಶರ್ಮಿಳಾನ ಮದುವೆ ಆಗ್ತೀಯಾ ಇಲ್ವಾ?"

ಮಹೇಶ ನಯನಾಳೀಂದ ಇಂಥ ನೇರ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. "ಬ್ಬೆಬ್ಬೆಬ್ಬೆ" ಎಂದ. ದೃಷ್ಟಿ ತಪ್ಪಿಸಿದ. ಕೊನೆಗೆ ತನ್ನ ಪಾಡು ತನಗೇ ಸಹಿಸಿಕೊಳ್ಳಲಾಗದೆ ಇಲ್ಲದ ಸಿಟ್ಟು ಬರಿಸಿಕೊಂಡು, "ನೀವೇ ಹೇಳಿ ಸಿಸ್ಟರ್. ಇವಳನ್ನ ಯಾರಾದ್ರೂ ಮದುವೆ ಆಗ್ತಾರಾ?", ಎಂದ.
ಕೂಡಲೆ ಶರ್ಮಿಳಾಳತ್ತ ತಿರುಗಿದ ನಯನಾ, "ಈ ನಾಯಿನ ಮರ್ತು ಬಿಡು. ಶರ್ಮಿಳಾ, ಇನ್ನು ಒಂದು ನಿಮಿಷ ಕೂಡ ಇಲ್ಲಿರೋದು ಬೇಡ. ಗುಡ್ ಬೈ ಹೇಳು ಇವ್ನಿಗೆ.", ಎಂದಳು. ನಯನಾಳ ದನಿಯಲ್ಲಿದ್ದ ಗಾಂಭೀರ್ಯಕ್ಕೆ ಹೆದರಿಕೊಂಡ ಶರ್ಮಿಳಾ ನಯನಾಳ ಜೊತೆ ನಡೆದು ಬಿಟ್ಟಳು.

ಮಹೇಶನಿಗೆ ಪಿಚ್ಚೆನಿಸಿತು. "ಸಿಸ್ಟರ್, ನಿಲ್ಲಿ. ಒಂದ್ನಿಮಿಷ", ಎಂದು ಬೇಡಿಕೊಳ್ಳುತ್ತಿದ್ದರೂ ಕೇಳಿಸಿಕೊಳ್ಳದೆ ಇಬ್ಬರೂ ನಡೆದು ಬಂದು ಬಿಟ್ಟರು.

*                                                       *                                                         *

ಇದು ನಡೆದ ಒಂದು ವಾರದೊಳಗೆ ನಯನಾಳ ಬದುಕಿನಲ್ಲಿ ಮತ್ತೊಂದು ಆಘಾತ ಅವಳ ತಂದೆ ದೇವರಾಜರ ಹೃದಯಾಘಾತದ ರೂಪದಲ್ಲಿ ಎರಗಿತು. ಮಧ್ಯರಾತ್ರಿ ನೋವು ಕಾಣಿಸಿಕೊಂಡು, ಮಕ್ಕಳಿಬ್ಬರೂ ಮಲಗಿರುವಾಗ, ಹೆದರಿಕೊಂಡಿದ್ದ ಪತ್ನಿ ಮಂಜುಳಾರನ್ನು ಕರೆದುಕೊಂಡು ಆಟೊ ರಿಕ್ಷಾ ಹಿಡಿದು ಆಸ್ಪತ್ರೆಯ ಮುಂಬಾಗಿಲು ದಾಟುವಷ್ಟರಲ್ಲಿ ದೇವರಾಜ್ ಕುಸಿದು ಬಿದ್ದರು. ಇಷ್ಟೆಲ್ಲವೂ ಮಧ್ಯರಾತ್ರಿ ನಡೆದು ಹೋದರೂ ಕೂಡ, ನಯನಾ ನಿಖಿಲರಿಗೆ ವಿಷಯ ತಿಳಿದದ್ದು ಮುಂಜಾನೆಯೇ! ಮತ್ತೊಂದು ಗಂಡಾಂತರದಿಂದ ತಪ್ಪಿಸಿಕೊಂಡು ಬದುಕಿ ಉಳಿದ ದೇವರಾಜರಿಗೆ ಸಂಜೆಯ ಒಳಗೆ angioplasty ಮಾಡಿಸಬೇಕೆಂದು ವೈದ್ಯರು ಹೇಳುತ್ತಿದ್ದರೆ ನಯನಾಳ ತಲೆಯಲ್ಲಿ ದುಡ್ಡು ಹೊಂದಿಸುವುದು ಹೇಗೆ ಎಂಬ ಪ್ರಶ್ನೆಯೊಂದೇ ಓಡುತ್ತಿತ್ತು. ವೈದ್ಯರು ಹೇಳಿದ್ದೊಂದೂ ಅರ್ಥವಾಗಲಿಲ್ಲ. ಮನಸ್ಸು-ಬುದ್ಧಿ ಎರಡಕ್ಕೂ ಮಂಕು ಬಡಿದಿತ್ತು.

ಅಂದು ಸಂಜೆ ದೇವರಾಜರ ಶಸ್ತ್ರಚಿಕಿತ್ಸೆ ಅವರ ಸ್ನೇಹಿತರೊಬ್ಬರು ಸಾಲವಾಗಿ ಕೊಟ್ಟ ಮೊತ್ತದಿಂದ ನಡೆಯಿತು. ಆದರೆ ನಯನಾಳಿಗೆ ಗುರಿಯೇ ಇರದ, ಕೊನೆಯೇನೆಂಬುದೇ ತಿಳಿಯದ ಹುಚ್ಚು ಓಟದಲ್ಲಿ ಓಡಿ ಸುಸ್ತಾಗಿತ್ತು. ಅಪ್ಪ ಐ.ಸಿ.ಯು. ನಲ್ಲಿ ಮಲಗಿದ್ದರು. ತಾಯಿ ಮಂಜುಳಾ ಅಳುವೊಂದರ ಹೊರತು ಬೇರೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ಕೊಡುತ್ತಿರಲಿಲ್ಲ. ತಮ್ಮನ ತಲೆಯಲ್ಲಿ ಏನು ನಡೆಯುತ್ತಿದೆ ಎಂದೇ ಅವಳಿಗೆ ತಿಳಿಯುತ್ತಿರಲಿಲ್ಲ - ಅವನು ತನ್ನ ಸ್ನೇಹಿತರ ಜೊತೆ ಮಾತಾಡದೆ ಕುಳಿತಿದ್ದ. ಇದಕ್ಕೂ ತನಗೂ ಸಂಬಂಧವಿಲ್ಲವೆಂದುಕೊಂಡಿದ್ದಾನೇ ಇವನು? - ಅರ್ಥವಾಗಲಿಲ್ಲ. ಅಂದು ಸಂಜೆ ಬಿಕೋ ಎನ್ನುತ್ತಿದ್ದ ಆಸ್ಪತ್ರೆಯ ಕಾರಿಡಾರಿನಲ್ಲಿ ಒಮ್ಮೆಗೆ ಅವಳಿಗೆ ಅನಾಥಳಾದಂತೆ ಭಾಸವಾಯಿತು. ಹೆಚ್ಚು ಸಂಬಳದ ಕೆಲಸದ ಹಿಂದೆ ತಾನು ಓಡಿದ್ದು ವ್ಯರ್ಥವಾದಂತೆ ಅನ್ನಿಸಿತು. ತಂದೆಯ ಆರೋಗ್ಯ ಇನ್ನೂ ಕೆಡುತ್ತದಷ್ಟೆ ಹೊರತು ಅದು ಸರಿ ಹೋಗಿ ಮೊದಲಿನ ಅಪ್ಪನನ್ನು ಮತ್ತೆ ನೋಡಲು ಸಾಧ್ಯವಿಲ್ಲ. ಅಮ್ಮ ಮೊದಲಿನಂತೆ ನಗುನಗುತ್ತ ಉತ್ಸಾಹದಿಂದಿರುವುದು ಸಾಧ್ಯವಿಲ್ಲ. ತನ್ನ ಮೇಲಿರುವ ಸಾಲದ ಹೊರೆಯನ್ನು ತನ್ನ ಸಂಬಳದಲ್ಲಿ ತೀರಿಸುವುದೂ ಸಾಧ್ಯವಿಲ್ಲ. 'ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ' ಎಂದು ಹೇಳುವುದು ಇದನ್ನೇ ಏನು?! ನಿಖಿಲ್  ತನ್ನ ಸ್ನೇಹಿತರ ಜೊತೆ ಕೂರುವ ಬದಲು ನನ್ನ ಬಳಿ ಬಂದು ಒಳ್ಳೆಯದೋ ಕೆಟ್ಟದ್ದೋ, ಉಪಯೋಗವಾಗುವಂತದ್ದಾಗಲೀ ವ್ಯರ್ಥವೆನಿಸುವಂಥದ್ದಾಗಲೀ ಒಂದೆರಡು ಮಾತಾಡಬಾರದೇ! ಅವನೇಕೆ ಬೇರೆಯದೇ ಪ್ರಪಂಚದ ಭಾಗವಾಗಿರುವವನಂತೆ ಒಬ್ಬೊಬ್ಬನೇ ಓಡಾಡುತ್ತಾನೆ! - ನಯನಾ ಆಸ್ಪತ್ರೆಯ ಬಿಕೋ ಎನ್ನುತ್ತಿದ್ದ ಕಾರಿಡಾರಿನ ಮೂಲೆಯೊಂದರಲ್ಲಿ ಸದ್ದಿಲ್ಲದೇ ಬಿಕ್ಕಿ ಬಿಕ್ಕಿ ಅತ್ತಳು.

*                                                 *                                               *

"ಸುಮ್ಮನೆ ಒದ್ದಾಡ್ತಾ ಇದ್ದೀನಿ ಅಷ್ಟೆ ಕಣೆ. ಇದು ಯಾವ್ದನ್ನೂ ಸರಿ ಮಾಡೋದು ಸಾಧ್ಯಾನೇ ಇಲ್ಲ!" - ನಯನಾ ಹೇಳಿದರೆ ಪ್ರತಿಕ್ರಿಯಿಸುವುದು ಹೇಗೆಂದು ತಿಳಿಯದೆ ಕುಳಿತಿದ್ದಳು. ಶರ್ಮಿಳಾ ಮಹೇಶನನ್ನು ಉಳಿಸಿಕೊಳ್ಳಲು ವರ್ಷಗಳ ಕಾಲ ವ್ಯರ್ಥ ಪ್ರಯತ್ನ ನಡೆಸಿದ್ದಳು. ಮದುವೆಯಾಗುವುದಾದರೆ ಅವನನ್ನೇ ಎಂದು ಎಂದೋ ನಿಶ್ಚಯಿಸಿಕೊಂಡಿದ್ದ ಅವಳ ಮುಂದೆ ಈಗ ಯಾವುದೇ ದಾರಿಗಳಿರಲಿಲ್ಲ.
ನಯನಾ ಸ್ವಗತವೆಂಬಂತೆ ಮಾತು ಮುಂದುವರೆಸಿದ್ದಳು - "ಅಪ್ಪ ಮತ್ತೆ ಮೊದಲಿನ ಹಾಗೆ ಅಗೊಲ್ಲ. ಅಮ್ಮನ ಅಳು ನಿಲ್ಲೊಲ್ಲ. ನಿಖಿಲನ ತಲೆಯಲ್ಲಿ ಅದೇನು ಓಡ್ತಿದ್ಯೋ, ಗೊತ್ತಿಲ್ಲ! ಏನಿದೆ ನಂಗೆ ಬದುಕಿನಲ್ಲಿ!"
"ನಯನಾ, ನಾವಿಬ್ರೂ ಆತ್ಮಹತ್ಯೆ ಮಾಡ್ಕೊಂಡು ಬಿಡೋಣ." - ಶರ್ಮಿಳ ಮೆತ್ತಗೆ ಹೇಳಿದಳು. "ಮಹೇಶ ನಂಗೆ ಸಿಗೊಲ್ಲ. ಅವನಿಲ್ದೆ ನಾನು ಬದುಕೊಲ್ಲ."
ನಯನಾಳಿಗೆ ಸಿಟ್ಟು ಬಂತು - "ಆ ಹುಚ್ಚು ನಾಯಿಗೋಸ್ಕರ ನೀನ್ಯಾಕೆ ಸಾಯಬೇಕು!", ಎಂದು ಶರ್ಮಿಳಾಳನ್ನು ಗದರಿದಳು.
"ನಾನು ಹೇಗೆ ಹೇಳ್ಲಿ ನಯನಾ? ಬದುಕಿದ್ರೆ ಅವ್ನ ಜೊತೆ, ಮದ್ವೆ ಆದ್ರೆ ಅವ್ನನ್ನೇ. ನಂಗೆ ಬೇರೆ ದಾರಿ ಇಲ್ಲ.", ಎಂದು ಅಳತೊಡಗಿದಳು. ಹಿಂದೆ ಆಗಿದ್ದರೆ ಶರ್ಮಿಳಾಳನ್ನು   ಗದರಿ ಸಮಾಧಾನ ಮಾಡುತ್ತಿದ್ದ ನಯನಾ ಇಂದು ತಾನೂ ಅಳತೊಡಗಿದಳು. ಮನಸ್ಸು ಹಗುರಾಗುವವರೆಗೆ ಅತ್ತ ನಂತರ ನಯನಾ ಹೇಳಿದಳು - " ಸರಿ. ಇಬ್ರೂ ಆತ್ಮಹತ್ಯೆ ಮಾಡ್ಕೊಂಡು ಬಿಡೋಣ!"
ನಯನಾಳ ಒಪ್ಪಿಗೆ ಸಿಕ್ಕ ಕೂಡಲೇ ಶರ್ಮಿಳಾ ಗೆಲುವಾದಳು. ಘನವಾದದ್ದೇನನ್ನೋ ಸಾಧಿಸಲಿದ್ದೇನೆಂಬಂತೆ ಸಾಯುವ ವಿಧಾನ, ಸಾಯುವ ದಿನವನ್ನೆಲ್ಲ ಹೇಳಿದಳು - "ಹನ್ನೆರಡ್ರಿಂದ ಹದಿನೈದು ನಿದ್ದೆ ಮಾತ್ರೆ ಸಾಕು ಒಬ್ರನ್ನ ಸಾಯ್ಸೋಕೆ. ನಾನು ಹೊಂದಿಸ್ತೀನಿ. ಬರುವ ತಿಂಗಳು - ಆಗಸ್ಟ್ ಇಪ್ಪತ್ತಕ್ಕೆ ಸಾಯೋಣ."
ನಯನಾ ಏನೂ ಮಾತಾಡಲಿಲ್ಲ. ಗಟ್ಟಿ ಮನಸ್ಸು ಮಾಡಿಕೊಂಡು ಸತ್ತು ಬಿಟ್ಟರೆ ಕಷ್ಟಗಳಿಗೆಲ್ಲ ಕೊನೆ! ಎಂದುಕೊಂಡು ಮುಗುಳ್ನಕ್ಕಳು.
*                                                         *                                                          *
(ಭಾಗ ೩)
ಆದರೆ  ನಡೆದದ್ದೇ ಬೇರೆ! ಸಾವೆಂಬ ಬದುಕಿನ ಪರಮ ಸತ್ಯಕ್ಕೆ  ತಮ್ಮನ್ನು ತಾವೇ ಒಡ್ಡಿಕೊಳ್ಳುವುದೆಂದು ನಿರ್ಧರಿಸಿದ ಎರಡೇ ವಾರಕ್ಕೆ ಬದುಕೆಂಬ ಮಹಾಮಾಯೆಯನ್ನು ಮುಂದುವರೆಸಲು ಚಿಕ್ಕದೊಂದು ಕಾರಣ ನಯನಾಳಿಗೆ ದೊರಕಿತು. ಅವಳು ಹುಡುಕುತ್ತಿದ್ದ ಹೆಚ್ಚು ಸಂಬಳದ ಕೆಲಸ ಅವಳನ್ನು ಹುಡುಕಿಕೊಂಡು ಬಂತು. ನಯನಾ ಕೆಲಸ ಬದಲಿಸುವ  ತಲೆಬಿಸಿಯಲ್ಲಿ ಮುಳುಗಿ ಹೋದಳು. ಸಾವಿನ ನಿರ್ಧಾರ ಸಡಿಲವಾಯಿತು. ಮುಂದಿನ ತಿಂಗಳು ಸಾಯುವವಳು ಕೆಲಸವೇಕೆ ಬದಲಾಯಿಸುತ್ತಿರುವೆ ಎಂದು ಶರ್ಮಿಳಾ ಕೇಳಲಿಲ್ಲ. ತಾನು ಹಿಂಜರಿಯುವುದು ಅವಳಿಗೆ ಆಗಲೇ ಗೊತ್ತಾಗಿತ್ತೆ?

ಒಮ್ಮೆ ಹೊಸ ಕೆಲಸದಲ್ಲಿ ತುಂಬಾ ಮುಖ್ಯವಾದ ಒಂದು ಮೀಟಿಂಗಿನಲ್ಲಿದ್ದಾಗ ಶರ್ಮಿಳಾ ಕರೆ ಮಾಡಿದಳು. ನಯನಾ ಎರಡು ಮೂರು ಬಾರಿ ಸೈಲೆಂಟಿಗೆ ಹಾಕಿ ಕೂತಳು. ಶರ್ಮಿಳಾ  ಮತ್ತೆ ಕರೆ ಮಾಡಿದಾಗ ಮೀಟಿಂಗ್ ರೂಮ್  ನಿಂದ ಹೊರಗೆ ಬಂದು ಕರೆಯನ್ನು ತೆಗೆದುಕೊಂಡಳು. ಶರ್ಮಿಳಾ ಮತ್ತೆ ಸಾವಿನ ವಿಷಯ ಮಾತಾಡುತ್ತಾಳೆಂದು ತಿಳಿದಿತ್ತು, ಹಾಗಾಗಿ ಅವಳು ಮಾತಾಡುವ ಮೊದಲೇ ನಯನಾ ಹೇಳಿದಳು, "ಶರ್ಮಿಳಾ, ನಂಗೆ ನಿಜವಾಗಲೂ ಸಾಯೋಕೆ ಇಷ್ಟವಿಲ್ಲ ಕಣೆ. ನಾನು ಆಸೆ ಪಡ್ತಿದ್ದ ಹಾಗೆ ಒಳ್ಳೆ ಕೆಲ್ಸ ಸಿಕ್ಕಿದೆ. ದೇವ್ರು ಬದುಕೋಕೆ ಒಂದು ಚಾನ್ಸ್ ಕೊಟ್ಟಿದ್ದಾನೆ, ಅದನ್ನ ಉಪಯೋಗಿಸ್ಕೋಬೇಕು ನಾನು!"

"ಆದ್ರೆ ನಾವು ಮಾತಾಡ್ಕೊಂಡಿದ್ದು ಬೇರೇನೇ ಆಲ್ವಾ ನಯನಾ??", ಶರ್ಮಿಳಾ ಏನೋ ಹೇಳ ಹೊರಟರೆ ನಯನಾ ಅವಳನ್ನು ತಡೆದು ಕೇಳಿದಳು, "ನಾನು ಈಗ ಒಂದು ಮೀಟಿಂಗ್ ನಲ್ಲಿ ಇದ್ದೀನಿ. ಮತ್ತೆ ಕಾಲ್ ಮಾಡ್ತೀನಿ ನಿಂಗೆ."
*                                                  *                                                                      *

ಅಂದು ನಯನಾ ಮತ್ತೆ ಶರ್ಮಿಳಾಳಿಗೆ ಕರೆ ಮಾಡಲಿಲ್ಲ. ಅವಳು ಶರ್ಮಿಳಾಳಿಗೆ ಮತ್ತೆ ಕರೆ ಮಾಡಿದ್ದು ಹೊಸ ಕೆಲಸದಲ್ಲಿ ಮೊದಲ ಸಂಬಳ ಬಂದಾಗಲೇ. ಆದರೆ ಶರ್ಮಿಳಾ ಎತ್ತಲಿಲ್ಲ. ಅವಳ ಪೀಜಿಯ ಬಳಿ ಹೋದರೆ ಅವಳು ಅಲ್ಲಿರಲಿಲ್ಲ. ವಿಳಾಸ ಬದಲಿಸಿದ್ದಳು, ಅಥವಾ ಹಾಗೆಂದು ನಯನಾ ನಂಬಿಕೊಂಡಳು. ಮತ್ತೆ ಯಾವತ್ತೂ ಶರ್ಮಿಳಾಳಿಂದ ನಯನಾಳಿಗೆ ಯಾವುದೇ ಕರೆ ಬರಲಿಲ್ಲ. 

ಈಗ ವರ್ಷಗಳೇ ಕಳೆದಿವೆ. ಶರ್ಮಿಳಾಳ ಸುದ್ದಿ ಇಲ್ಲ. ಈಗ ಅವಳ ಬಗ್ಗೆ ನೆನೆದರೆ ನಯನಾಳಿಗೆ ಮೊದಲಿಗೆ ನೆನಪಾಗುವುದು ಅವಳ ದೈವಭಕ್ತಿ. ಅದರಲ್ಲೂ ಶಿರಡಿಯ ಸಾಯಿಬಾಬಾರ ಬಗ್ಗೆ ಅವಳಿಗಿದ್ದ ವಿಪರೀತ ಭಕ್ತಿ. ಅವಳ ಪಾಸ್ವರ್ಡ್ ಗಳು ಕೂಡ ಅವಳ ಸಾಯಿ ಭಕ್ತಿಯನ್ನು ಪ್ರತಿಬಿಂಬಿಸುತ್ತಿದ್ದವು. ಅಗತ್ಯಕ್ಕಿಂತ ಹೆಚ್ಚಾಗಿ ಸಾಯಿಬಾಬರನ್ನು ನಂಬುತ್ತಿದ್ದ ಅವಳು, ಬಾಬಾರಿಗೆ ಭಕ್ತಿಯಿಂದ ಬೇಡಿಕೊಂಡರೆ ಕಷ್ಟಗಳೆಲ್ಲವೂ ದೂರವಾಗುವುದೆಂದು ನಂಬಿದ್ದಳು. ಹೀಗಿದ್ದ ಅವಳು ಆ ಆಗಸ್ಟ್ ಇಪ್ಪತ್ತರಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಶರ್ಮಿಳಾ ಬದುಕಿರಬಹುದೆ? ಸಾಯಿಬಾಬಾರನ್ನು ನಂಬಿಕೊಂಡು ಎಲ್ಲೋ ಬದುಕಿರಬಹುದು ಎಂದು ನಯನಾ ಭಾವಿಸುತ್ತಾಳೆ. ಹಾಗೆಂದುಕೊಂಡ ಮರುಕ್ಷಣವೇ ಸಾವಿನ ಬಗ್ಗೆ ತಾವು ಮಾಡಿಕೊಂಡ ಒಪ್ಪಂದದಿಂದ ಹಿಂಜರಿದು ತಾನವಳಿಗೆ ಮೋಸ ಮಾಡಿಬಿಟ್ಟೆ ಎಂದು ಚುಚ್ಚಿದಂತಾಗುತ್ತದೆ. ಶರ್ಮಿಳಾ ನೆನಪಾದ ರಾತ್ರಿಗಳಲ್ಲಿ ನಯನಾ ನಿದ್ದೆಗೆಡುತ್ತಾಳೆ. 
*                                                        *                                                                 *

ಮೊನ್ನೆ ಶರ್ಮಿಳಾಳಿಗೆ ಕಳಿಸಿದ್ದ ಈ-ಮೇಲ್ ಕೂಡ ವಿಳಾಸ ಅಸ್ತಿತ್ವದಲ್ಲಿಲ್ಲವೆಂಬ ಸಂದೇಶದೊಂದಿಗೆ ಮರಳಿತು. ಶರ್ಮಿಳಾಳ ಮನೆ ಕಾಳಹಸ್ತಿಯ ಬಳಿ ಎಲ್ಲೋ ಇದೆ ಎಂದು ಅವಳು ಹೇಳಿದ್ದು ನೆನಪು. ನಯನಾ ಕನಸಿನಲ್ಲಿ ಅವಳ ಮನೆಗೆ ಹೋಗಿದ್ದಳು. "ಶರ್ಮಿಳಾ" ಎಂದು ಕರೆದರೆ ಯಾರೂ ಬರಲಿಲ್ಲ. ಮನೆ ಬಿಕೋ ಎನ್ನುತ್ತಿತ್ತು. ನಯನಾಳಿಗೆ ಭಯವಾಯಿತು. ಇನ್ನೆರಡು ಬಾರಿ ಅವಳ ಹೆಸರನ್ನು ಕೂಗಿದಳು. "ನಯನಾ!", ಎಂದು ಕೂಗುತ್ತಾ ಶರ್ಮಿಳಾ ದಡದಡನೆ ಮೆಟ್ಟಿಲಿಳಿದು ಬಂದಳು! ಇಬ್ಬರೂ ತಬ್ಬಿಕೊಂಡು ನಕ್ಕರು. ಮತ್ತೆ ಅತ್ತರು. ಬಳಿಕ ನಕ್ಕರು. 

- ಕನಸಿನಿಂದ ಎಚ್ಚರಗೊಂಡ ನಯನಾಳ ಕಣ್ಣಲ್ಲಿ ನೀರಿತ್ತು. 'ಕಾಳಹಸ್ತಿಗೆ ಇವತ್ತೇ ಹೋಗಬೇಕು.", ಎಂದುಕೊಂಡು ಬೆಳಕಾಗುವುದನ್ನು ಉದ್ವೇಗದಿಂದ ಕಾದಳು. 
*                                                          *                                                                 *
(ಮುಗಿಯಿತು)

7 comments:

  1. Next episode bega barli.. (ಕಾಯುತ್ತಿದ್ದೇವೆ )

    ReplyDelete
  2. Very nice Kiran..keep it up and keep writing..

    ReplyDelete
    Replies
    1. Thanks a lot Deepthi. Will definitely keep writing!

      Delete
  3. Heart touching! Could not stop my tears!

    ReplyDelete
    Replies
    1. Thanks a lot for reading, Reshma! Please read other stories too :)

      Delete