Jun 14, 2012

ಈ ಕಾಲ

ನಾವು ನೀವು ಬದುಕುತ್ತಿರುವ ಈ ಕಾಲದಲ್ಲಿ ಯಾವುದಕ್ಕೂ ಬೆಲೆ ಉಳಿದಿಲ್ಲ. ಸತ್ಯ, ನ್ಯಾಯ, ನೀತಿ, ಸಿದ್ಧಾಂತ ಎಂಬುದೆಲ್ಲ ಹಳಸಿದ ಮಾತು. ಹಿಂದೆಲ್ಲ ಚೆನ್ನಾಗಿತ್ತು ಎಂಬುದು ನನ್ನ ಅಭಿಪ್ರಾಯವಲ್ಲ , ಆದರೆ ಇಂದು "ಇದೆಲ್ಲ ಸರಿಯಿಲ್ಲ " ಎಂಬ ಮಾತಿಗೂ ಬೆಲೆ ಇಲ್ಲದಂತಾಗಿದೆ . ಪವಿತ್ರವಾಗಿ , ಪ್ರಶ್ನಾತೀತವಾಗಿ ಯಾವುದೂ ಉಳಿದಿಲ್ಲ.  ದೇವರು ಎಂಬ  ಕಲ್ಪನೆ ಎಷ್ಟು ಮನಗಳಲ್ಲಿ  ಉಳಿದಿದೆಯೋ ಆ ದೇವರೇ  ಬಲ್ಲ! ಆ ದೇವರ  ಹೆಸರಿನಲ್ಲಿ ಎಷ್ಟು ಅವ್ಯವಹಾರಗಳು ನಡೆದಿವೆಯೋ ಅದನ್ನೂ ಅವನೇ ಬಲ್ಲ! ಧರ್ಮವೆಂಬುದು ರಾಜಕೀಯ ದಾಳವಾದದ್ದು ಕೂಡ ಹಳೆಯ ಮಾತು. ಐ.ಎ.ಎಸ್. ಅಧಿಕಾರಿ, ವಕೀಲ, ಸರಕಾರಿ ಉದ್ಯೋಗಿ, ನ್ಯಾಯಾಧೀಶ, ಕೊನೆಗೆ ರಾಷ್ಟ್ರಪತಿಯಂಥ ರಾಷ್ಟ್ರಪತಿ ಕೂಡ ಘನತೆಯನ್ನು ಉಳಿಸಿಕೊಂಡಿಲ್ಲ. ರಾಜಕಾರಣಿ ಮರ್ಯಾದೆ ಕಳೆದುಕೊಂಡು ದಶಕಗಳೇ ಕಳೆದವು. ಇಂಥ ಈ ಕಾಲದಲ್ಲಿ ಯಾರಿಗೂ ಮತ್ತೊಬ್ಬರಿಗೆ ಬುದ್ಧಿ ಹೇಳುವ, ತಿದ್ದುವ ಅರ್ಹತೆ ಇಲ್ಲ. ಎಲ್ಲರೂ ಅವರವರ ಸ್ವಾರ್ಥ ಸಾಧಿಸಿಕೊಳ್ಳುವುದೇ ಸರಿ ಎಂದು ಬದುಕುತ್ತಿದ್ದಾರೆ.

ಸಮಾಜದ ಕಥೆ ಹೀಗಾದರೆ ಖಾಸಗಿ ಜೀವನದ್ದು ಇನ್ನೊಂದು ಕಥೆ. ಸಂಬಂಧಗಳಿಗೆ ಬೆಲೆ ಇಲ್ಲ. ತಂದೆಯ ಮಮತೆ, ತಾಯಿಯ ಪ್ರೀತಿ ಪ್ರಶ್ನಾತೀತವಾದದ್ದು ಎಂದುಕೊಂಡವರು ಎಷ್ಟು ಜನ ಉಳಿದಿದ್ದಾರೋ ಗೊತ್ತಿಲ್ಲ. ಪ್ರೇಮ ಪವಿತ್ರವಾಗಿ ಕಾಣುವುದು ತೀರ ಭಾವುಕವಾಗಿದ್ದಾಗ ಮಾತ್ರ. ನಂತರ ಅದೂ ಕೂಡ ಬೇರೆ ಭಾವಗಳಂತೆ ಮಾಮೂಲಿಯಾಗಿ ಕಾಣತೊಡಗುತ್ತದೆ. ಸ್ವಾರ್ಥದ ಓಟದಲ್ಲಿ ಪ್ರೀತಿ, ಪ್ರೇಮ, ಮಮತೆ, ಸ್ನೇಹ - ಎಲ್ಲವೂ ನಜ್ಜುಗುಜ್ಜಾಗುವುದನ್ನು ಎಲ್ಲರೂ ನೋಡಿದ್ದಾರೆ. ಪ್ರತಿದಿನ ವ್ಯವಹರಿಸುವ ಜನರನ್ನು ಕೂಡ ಅಪರಿಚಿತರಂತೆ ಸಂಶಯದ ದೃಷ್ಟಿಯಿಂದ ನೋಡುವುದನ್ನು ವ್ಯವಹಾರ ಚಾತುರ್ಯ ಎಂದು ಕರೆಯಲಾಗಿದೆ  ಇಂದಿನ ಕಾಲದಲ್ಲಿ. ನಂಬಿಕೆ, ವಿಶ್ವಾಸ, ಆಪ್ತತೆ - ಎಲ್ಲವೂ ಕೆಲವು ಸನ್ನಿವೇಶಗಳಿಗೆ ಅಷ್ಟೆ, ನಂತರ ಅವೂ ಹಳಸಿ ಹೋಗುತ್ತವೆ.

ಇಂಥ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ! ಹೊರಗಿನ ಗದ್ದಲ ಮನಸ್ಸಿಗೂ ಘಾಸಿ ಮಾಡುತ್ತದೆ ಪ್ರತಿದಿನ. ಕೊಳಕು ಸುದ್ದಿಗಳು "ಯಾರನ್ನೂ ನಂಬದಿರು" ಎಂದು ಕಿರುಚುತ್ತವೆ. ಮನುಷ್ಯ ಮನುಷ್ಯನನ್ನು ನಂಬದಿರುವ ಕಾಲ. ಸಂವೇದನೆಗಳಿಗೆ ಜಡವಾಗಿರುವ ನಮ್ಮ ಕಾಲ. ಹೀಗೆಲ್ಲ ಅನಿಸುವುದು ಬದಲಾದ ಕಾಲದಿಂದಲೋ, ಅಥವಾ ಬದಲಾಗಿದ್ದು ನಾನೋ ಎಂಬ ಪ್ರಶ್ನೆಗೆ ಉತ್ತರಿಸಲು ನಾನು ತಕ್ಕ ವ್ಯಕ್ತಿಯಲ್ಲ! ಹಾಗೊಮ್ಮೆ ಬದಲಾದದ್ದು ನನ್ನ ಮನೋಭಾವವಾಗಿದ್ದರೂ ಕೂಡ ಅದರಲ್ಲಿ ನಾನು ಬದುಕುತ್ತಿರುವ ಕಾಲದ್ದೂ ಪಾಲಿದೆ ಎಂಬುದು ಮಾತ್ರ ಸತ್ಯ!


You might also like:
ಹುಡುಕಾಟ

No comments:

Post a Comment