Mar 9, 2008

ಈಗೀಗ...

ಈಗೀಗ ನನಗೆ ಅತ್ತಾಗ ಕಣ್ಣೀರು ಬರುವುದಿಲ್ಲ,
ಎಷ್ಟು ಅತ್ತರೂ ದುಃಖ ಇಳಿಯುತ್ತಿಲ್ಲ,
ದುಃಖ ಒತ್ತರಿಸಿ ಬಂದಾಗಲೂ ನಾನು ಬಿಕ್ಕಳಿಸುವುದಿಲ್ಲ!

ಈಗೀಗ ನನಗೆ ಮಾತಾಡಲು ದನಿಯೇ ಹೊರಡುತ್ತಿಲ್ಲ,
ಹೊರಟ ದನಿಗೆ ಉಸಿರು ಜೊತೆ ಕೊಡುತ್ತಿಲ್ಲ,
ಕೊರಳು ಹಿಂಡಿದವರು ಯಾರೆಂದು ನಾನು ಯೋಚಿಸುವುದಿಲ್ಲ!

ಈಗೀಗ ಸಂಜೆ ಹೊತ್ತು ತಂಗಾಳಿ ಬೀಸುತ್ತಿಲ್ಲ,
ಬಿಸಿಲ ಬೇಗೆ ಏಕೋ ಏನೋ ಇಳಿಯುತ್ತಿಲ್ಲ,
ಬೆಳದಿಂಗಳು ಮೂಡಬಹುದೆಂಬ ಆಸೆಯೇ ನನಗಿಲ್ಲ!

ಈಗೀಗ ಯಾವ ಕರೆಗಂಟೆಗೂ ನಾನು ಉತ್ತರಿಸುತ್ತಿಲ್ಲ,
ಎಷ್ಟು ತಟ್ಟಿದರೂ ಮುಚ್ಚಿದ ಬಾಗಿಲು ತೆರೆಯುವುದಿಲ್ಲ,
ಬಾಗಿಲು ತೆರೆದರೆ ಬೆಳಕು ಬರಬಹುದೆಂದು ನನಗನ್ನಿಸುವುದಿಲ್ಲ!

ಈಗೀಗ ನನ್ನ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕುತ್ತಿಲ್ಲ,
ಪ್ರಪಂಚದ ಹಾಳು ರಗಳೆ ನನರ್ಥವಾಗುವುದಿಲ್ಲ,
ಅರ್ಥಾನರ್ಥಗಳ ಸಂತೆಯಲ್ಲಿ ನನಗೆ ನಾನೇ ಕಾಣುತ್ತಿಲ್ಲ!

No comments:

Post a Comment