Apr 29, 2017

ಮಂಪರು ಮತ್ತು ಎಚ್ಚರ

ಕೋಣೆಯಲ್ಲಿ ಮಂದ ಬೆಳಕಿತ್ತು. ನಾನು ಮಲಗಿದ್ದೆ. ಅರ್ಧ ಎಚ್ಚರದಲ್ಲಿದ್ದೆ. ವರ್ಷ ತುಂಬದ ನನ್ನ ಮಗ ಇವತ್ತೇಕೋ ಬೇಗನೆ ಎಚ್ಚರವಾಗಿ ಹಾಸಿಗೆಯ ತುಂಬ ಹೊರಳಾಡುತ್ತಿದ್ದ. ಅವನ ಹೊರಳಾಟದಲ್ಲಿ ಆಗಾಗ ನನಗೆ ಗುದ್ದುತ್ತಿದ್ದ. ಅವನು ಗುದ್ದಿದಾಗೆಲ್ಲ ನನ್ನ ಮಂಪರು ಸ್ವಲ್ಪ ಕಡಿಮೆಯಾಗುತ್ತಿತ್ತು. ಅವನು ಅತ್ತ ಹೋಗುತ್ತಿದ್ದಂತೆ ಮಂಪರು ಮತ್ತೆ ಆವರಿಸುತ್ತಿತ್ತು. ಮಂಪರು ಮೂಡುತ್ತಿದ್ದಂತೆ ನನಗೆ ಇದರಲ್ಲೆಲ್ಲ ಯಾವುದೋ ಒಂದು ಕಥೆ ಇರುವಂತೆ ಅನ್ನಿಸತೊಡಗಿತು. ಅದೇನಿರಬಹುದೆಂದು ಯೋಚಿಸಲು ಎಚ್ಚರವಾದರೆ ಆ ಕಥೆ ಮಾಯವಾಗುತ್ತಿತ್ತು. ಆ ಕಥೆ ಬೆಳಗಿನ ಜಾವದ ಇಬ್ಬನಿಯಂತೆ ನನ್ನ ಕಣ್ಣಲ್ಲೇ ಕುಳಿತಂತೆಯೂ, ಕಣ್ಣು ಬಿಟ್ಟರೆ ಬೆಳಕಿನ ಬಿಸಿಗೆ ಅದು ಆವಿಯಾದಂತೆಯೂ ಮಂಪರಿನಲ್ಲಿ ನನಗೆ ಭಾಸವಾಗುತ್ತಿತ್ತು. ನಾನು ಕಣ್ಣು ಮುಚ್ಚಿದಾಗ ಇಲ್ಲೊಂದು ಹೊಸ ಲೋಕವೇ ಸೃಷ್ಟಿಯಾಗಿ, ಕಣ್ಣು ಬಿಟ್ಟ ಕ್ಷಣ ಅದು ನಾಶವಾದಂತೆಯೂ ಅನ್ನಿಸಿತು. ಮಂಪರಿನಲ್ಲಿ ಅದು ಇದ್ದಂತೆ ಅನ್ನಿಸಿ ಎಚ್ಚರದಲ್ಲಿ ಮಾಯವಾಗಿ ಸತಾಯಿಸುತ್ತಿತ್ತು. ಈ ಎಚ್ಚರ ಮತ್ತು ಮಂಪರಿನ ನಡುವಿನ ಯಾವ ಅವಸ್ಥೆಯಲ್ಲಿ ಆ ಕಥೆಯನ್ನು ಹಿಡಿದುಹಾಕಬಹುದೆಂದು ನನ್ನ ಮನಸ್ಸು ಚಿಂತಿಸುತ್ತಿತ್ತು. ನನ್ನ ಮಗ ಹೊರಳಾಡುತ್ತಾ ಬಂದು ನನ್ನ ದವಡೆಗೆ ಒಮ್ಮೆ ಗುದ್ದಿದ. ನಾನು ಏನೋ ಬಯ್ದುಕೊಳ್ಳುತ್ತಾ ಕಣ್ಣು ಬಿಟ್ಟೆ. ಕಥೆ ಮತ್ತೆ ಸುಟ್ಟು ಆವಿಯಾಯಿತು. ನನ್ನ ಮಗ ನಗುತ್ತಾ ಮಗ್ಗುಲಾದ.

1 comment: