Aug 25, 2012

ನಿನಗೆ ಯಾವ ಗೋಲಿ ಬೇಕು?

  ಆ ಹುಡುಗ ಬೆಳಗಿನಿಂದಲೂ ಅದೇ ಕೋಣೆಯಲ್ಲಿ ಕುಳಿತಿದ್ದ. ಆ ಕೋಣೆಯ ಮೂಲೆಯಲ್ಲಿ ಬಣ್ಣಬಣ್ಣದ ಗೋಲಿಗಳಿದ್ದವು. ಅವುಗಳನ್ನೇ ಬಹಳ ಹೊತ್ತು ನೋಡುತ್ತಾ ಕುಳಿತಿದ್ದ. ಹುಡುಗನ ತಾಯಿ ಈ ಮನೆಯಲ್ಲಿ ಕೆಲಸಕ್ಕಿದ್ದಳು. ಶಾಲೆಗೆ ರಜೆಯಾದ ಕಾರಣ, ಮಗನನ್ನೂ ಕರೆ ತಂದಿದ್ದಳು. ಪರರ ಮನೆಯಲ್ಲಿ ಐದಾರು ವರ್ಷ ವಯಸ್ಸಿನ ಮಕ್ಕಳಿಗಿರಬಹುದಾದ ಸಂಕೋಚದಲ್ಲಿ ಹುಡುಗ ಮೂಲೆಯಲ್ಲಿ ಕುಳಿತಿದ್ದ. ಶೋಕೇಸಿನಲ್ಲಿ ಅಲಂಕಾರಕ್ಕೆಂದು ತಂದಿದ್ದರೋ ಏನೋ, ಗೋಲಿಗಳನ್ನು ಯಾರೋ ಈ ಮೂಲೆಯಲ್ಲಿ ಸುರಿದಿದ್ದರು. ಹುಡುಗ ಗೋಲಿಗಳನ್ನು ಕುಕ್ಕರುಗಾಲಿನಲ್ಲಿ ಕುಳಿತು ನೋಡಿದ. ಕೆಲವನ್ನು ಎತ್ತಿ ಬೆಳಕಿಗೆ ಹಿಡಿದು, ತಿರುಗಿಸಿ ಸಂತೋಷ ಪಟ್ಟ. ಯಾರದಾದರೂ ಹೆಜ್ಜೆ ಸಪ್ಪಳ ಕೇಳಿದಾಗ ಪಟ್ಟನೆ ಕೆಳಗಿಟ್ಟು, ತನಗೂ ಗೋಲಿಗಳಿಗೂ ಸಂಬಂಧವಿಲ್ಲದಂತೆ ನಟಿಸುತ್ತ ಕುಳಿತ. ತಾಯಿ ಗಂಟೆಗೊಮ್ಮೆ ಬಂದು ಮಗ ತಂಟೆ ಮಾಡದೆ ಕುಳಿತಿರುವುದನ್ನು ಖಚಿತಪಡಿಸಿಕೊಂಡು ಮುಗುಳ್ನಕ್ಕು ಕೆಲಸಕ್ಕೆ ಮರಳುತ್ತಿದ್ದಳು. ಮನೆಯೊಡತಿ, 'ಎಂಥ ಪಾಪದ ಹುಡುಗ' ಎಂದುಕೊಂಡಳು ಹಲವು ಬಾರಿ. ಹುಡುಗ ಗೋಲಿಗಳನ್ನೇ ನೋಡುತ್ತಾ ಕುಳಿತ. ಒಂದೊಂದನ್ನೇ ಎತ್ತಿ ಬೆಳಕಿಗೊಡ್ಡಿ, ತಿರುಗಿಸಿ ಅದರೊಳಗಿದ್ದ ವಿಚಿತ್ರ ಆಕಾರಗಳು ಏನಿರಬಹುದೆಂದು ಯೋಚಿಸುತ್ತಾ ಕುಳಿತ. ತಿರುಗಿಸುತ್ತಾ ತಿರುಗಿಸುತ್ತಾ ಗೋಲಿಯೊಳಗೆ ಏನೇನೋ ಕಂಡಂತಾಗಿ ಸಂಭ್ರಮಿಸಿದ. ಪ್ರತಿಯೊಂದು ಗೋಲಿಯನ್ನೂ ಅದೇ ಬೆರಗಿನಿಂದ ಪರೀಕ್ಷಿಸಿದ. ತನ್ನ ಈ ಆಟ ಯಾರಿಗೂ ಗೊತ್ತಾಗಬಾರದೆಂದು ಕಿವಿಗಳನ್ನಗಲಿಸಿ ಹೆಜ್ಜೆ ಸಪ್ಪಳ ಕೇಳಿಸಿಕೊಳ್ಳುತ್ತಲೇ ಆಟ ಮುಂದುವರೆಸಿದ. ಈ ಆಟ ಅವನಿಗೆ ಎಷ್ಟು ಹಿಡಿಸಿಬಿಟ್ಟಿತೆಂದರೆ ಮರುದಿನ ಶಾಲೆಗೆ ಚಕ್ಕರ್ ಹೊಡೆದು ಇಲ್ಲಿಗೆ ಬರುವುದೆಂದು ನಿರ್ಧರಿಸಿದ. ಜ್ವರದ ನಾಟಕ ಸರಿಯೇ, ಹೊಟ್ಟೆನೋವಿನ ನಾಟಕ ಒಳ್ಳೆಯದೇ ಎಂದು ಚಿಂತಿಸಿದ. ಹಿಂದೊಮ್ಮೆ ಬೇಧಿಯ ನಾಟಕ ಆಡಿದ್ದು ನೆನೆಸಿಕೊಂಡ. ಬೇಧಿಯ ನಾಟಕ ಎರಡು ಸಲ ಕೆಲಸ ಮಾಡಿತ್ತು. ಆದರೆ ಮೂರನೆಯ ಸಲ ನಡೆಸಲು ಪ್ರಯತ್ನಿಸಿದಾಗ ತಾಯಿ,'ಮಗನೇ, ನೀನು ಕಕ್ಕಸಿನಿಂದ ಬರುವಾಗ ಈ ಸಲ ನೀರು ಹಾಕಬೇಡ. ನಾನೇ ಕಕ್ಕಸು ತೊಳೆಯುತ್ತೇನೆ.', ಎಂದಳು. ಹುಡುಗ ಕಕ್ಕಸಿಗೆ ಹೋದವನು ಎಷ್ಟೇ ಪ್ರಯತ್ನ ಪಟ್ಟರೂ 'ಬರದಿದ್ದಾಗ', ಅಳುತ್ತಾ ಅಮ್ಮನಲ್ಲಿ ಸತ್ಯ ಒಪ್ಪಿಕೊಂಡ. ಬೇಧಿಯ ನಾಟಕ ಅಂದೇ ಕೊನೆಯಾಯಿತು!

ಜ್ವರದ ನಾಟಕಕ್ಕೆ ತುಂಬಾ ತಯಾರಿ ಬೇಕಾಗುತ್ತದೆ. ಹಿಂದಿನ ಸಂಜೆಯೇ ಕೆಮ್ಮು, ಗಂಟಲು ನೋವುಗಳ ಪ್ರದರ್ಶನವಾಗಬೇಕಾಗುತ್ತದೆ. ಮುಂಜಾನೆ ಕಣ್ಣುಗಳನ್ನು ಜೋರಾಗಿ ತಿಕ್ಕಿಕೊಂಡು ಕೆಂಪು ಮಾಡಿಕೊಂಡು, ಮುಖ ಬಾಡಿಸಿಕೊಂಡು, 'ಅಮ್ಮ, ಜ್ವರ ಇರೋ ಥರ ಅನ್ನಿಸ್ತಾ ಇದೆ', ಎನ್ನಬೇಕು. ಅಮ್ಮನಿಗೆ ಸಂಶಯ ಬಂದು ಹಣೆ, ಕತ್ತುಗಳನ್ನು ಮುಟ್ಟಿ ಪರೀಕ್ಷಿಸುತ್ತಾಳೆ. ನಾಟಕ ಚೆನ್ನಾಗಿದ್ದಲ್ಲಿ, ಹಣೆ ಕತ್ತು ತಣ್ಣಗಿದ್ದರೂ, 'ಒಳ ಜ್ವರವಿರಬಹುದು', ಎಂದುಕೊಂಡು ರಜೆ ಹಾಕಿಸುತ್ತಾಳೆ. ನಾಟಕದಲ್ಲಿ ದೋಷವಿದ್ದರೆ, 'ಸುಳ್ಳು ಹೇಳ್ತೀಯ?', ಎಂದು ಗದರಿ, ಒದ್ದು ಶಾಲೆಗೆ ಕಳಿಸುತ್ತಾಳೆ! ಹಾಗಾಗಿ ಜ್ವರದ ನಾಟಕ ಬಹಳ ಕಷ್ಟ. ಹೊಟ್ಟೆ ನೋವೇ ಸರಿ ಎಂದು ತೀರ್ಮಾನಿಸಿದ ಹುಡುಗ. ಈ ಮಹತ್ವದ ತೀರ್ಮಾನ ಕೈಗೊಂಡ ಬಳಿಕ ಮತ್ತೆ ಗೋಲಿಗಳ ಜೊತೆ ಆಟ ಮುಂದುವರೆಸಿದ. ಪ್ರಪಂಚ ದುಂಡಗಿದೆ ಎಂದು ಮೇಷ್ಟ್ರು ಹೇಳಿದ್ದರು. ಗೋಲಿಯೂ ದುಂಡಗಿತ್ತು. ಗೋಲಿಯೊಳಗೆ ಒಂದು ಪ್ರಪಂಚವೇ ಇತ್ತು. ಹಾಗೆಯೇ ಗೋಲಿಗಳನ್ನು ನೋಡುತ್ತಾ ಹುಡುಗ ಗೋಲಿಯೊಳಗಿನ ಪ್ರಪಂಚದ ಭಾಗವಾಗಿಬಿಟ್ಟ. ಹೆಜ್ಜೆ ಸಪ್ಪಳಕ್ಕೆ ತೆರೆದಿದ್ದ ಕಿವಿ ಈಗ ಗೋಲಿಯೊಳಗಿನ ಪ್ರಪಂಚದ ದನಿಗಳನ್ನು ಕೇಳಿಸಿಕೊಳ್ಳಲು ಯತ್ನಿಸಿತು. ಹುಡುಗನ ಪ್ರಪಂಚದಲ್ಲಿ ಈ ಮಹತ್ವದ ಬದಲಾವಣೆಗಳಾಗುತ್ತಿದ್ದಾಗ, ಆ ಮನೆಯವರು ಇದರ ಪರಿವೆಯೇ ಇಲ್ಲದೆ ಕಾಫಿ-ಉಪ್ಪಿಟ್ಟು, ಟೀವಿ-ವಾರ್ತೆ, ಚುನಾವಣೆ-ಭ್ರಷ್ಟಾಚಾರಗಳ ನೀರಸ ಪ್ರಪಂಚದ ರಗಳೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೋಫಾ-ಕುರ್ಚಿಗಳಲ್ಲಿ ಕೋನ ಬದಲಿಸಿಕೊಳ್ಳುತ್ತಿದ್ದರು.

*                                                                *                                                                      *

ಸಂಜೆಯಾದರೂ ಹುಡುಗನ ಆಟ ಮುಂದುವರೆದಿತ್ತು. ತಾಯಿ ಮನೆಗೆಲಸ ಮುಗಿಸಿ ಮಗನತ್ತ ಬಂದಳು. ಅವನಿಗೆಂದು ಅವಳು ಇಟ್ಟಿದ್ದ ಕುರುಕಲು ತಿಂಡಿಯನ್ನು ಹುಡುಗ ಮುಟ್ಟಿಯೂ ಇರಲಿಲ್ಲ. ತಾಯಿಗೆ ಆಶ್ಚರ್ಯ. 'ಕಿಟ್ಟಿ, ಯಾಕೋ ಏನೂ ತಿಂದಿಲ್ಲ', ಎಂದಳು. ಹುಡುಗನ ಕಿವಿಗಳು ಈ ಪ್ರಪಂಚದ ದನಿಗೆ ಕಿವುಡಾಗಿದ್ದವು. ತಾಯಿ ಮಗನ ತಲೆ ಸವರಿ, ಕೆನ್ನೆ ತಟ್ಟಿ ಮತ್ತೊಮ್ಮೆ ಕೇಳಿದಳು. ಹುಡುಗನಿಗೆ ಒಮ್ಮೆಗೆ ತನ್ನ ಪ್ರಪಂಚದಿಂದ ಬೇರೆ ಪ್ರಪಂಚಕ್ಕೆ ತಂದು ಇಳಿಸಿದಂತಾಗಿ ಬೆಚ್ಚಿ ಬಿದ್ದು, 'ಹಾಂ!' ಎಂದ. ತಾಯಿಗೆ ವಿಷಯ ಗೊತ್ತಾಯಿತು-ಮಗನಿಗೆ ಗೋಲಿಗಳು ಇಷ್ಟವಾಗಿವೆ. ನಾಲ್ಕೈದು ಗೋಲಿಗಳನ್ನು ಮಗನಿಗೆ ತೆಗೆದುಕೊಳ್ಳುವುದೆಂದು ಮನೆಯೊಡತಿಯಲ್ಲಿ ಕೇಳಿದಳು. ಅವಳೂ ಒಳ್ಳೆಯವಳೇ, ಇದಕ್ಕೆಲ್ಲ ಇಲ್ಲ ಎನ್ನುವವಳಲ್ಲ. ಆದರೆ ಆ ಮನೆಯ ಹುಡುಗನ ಕಿವಿ ಚುರುಕಾಯಿತು. ಆ ಗೋಲಿಗಳೆಲ್ಲವೂ ತನಗೆ ಬೇಕು ಎಂದು ಕಿರುಚತೊಡಗಿದ. ಮಗನ ರಂಪ ನೋಡಿ ಮನೆಯೊಡತಿ, 'ಆಯಿತು ಮಗಾ. ಎಲ್ಲ ನಿನಗೇ ಕೊಡ್ತೇನೆ. ಆದರೆ ಒಂದೇ ಒಂದು ಆ ಹುಡುಗನಿಗೆ ಕೊಡೋಣ?', ಎಂದು ಹೇಗೋ ಒಪ್ಪಿಸಿದಳು.

ಇಷ್ಟೆಲ್ಲಾ ಮಾತುಕತೆ-ಸಂಧಾನ  ನಡೆಯುತ್ತಿದ್ದಾಗ ನಮ್ಮ ಹುಡುಗ ಮತ್ತೆ ಗೋಲಿಯೊಳಗಿನ ಪ್ರಪಂಚದ ಜೊತೆ ಸಂಪರ್ಕ ಸಾಧಿಸಿದ್ದ! ಆದರೀಗ ಅವನ ತಾಯಿ ಮತ್ತೆ ಅವನನ್ನು ಈ ಪ್ರಪಂಚಕ್ಕೆ ಎಳೆದು ತಂದು, 'ಇದರಲ್ಲಿ ಒಂದು ಗೋಲಿ - ನಿನಗೆ ಯಾವುದು ಇಷ್ಟವೋ  ಅದು - ತೆಗೋ.' ಎಂದಳು. ಹುಡುಗನಿಗೆ ಗೊಂದಲವಾಯಿತು. ತನ್ನ ಪಾಡಿಗೆ ತಾನು ಆಡಿಕೊಂಡಿದ್ದೆ. ಮರುದಿನವೂ ಆಟ ಮುಂದುವರೆಸಲು ಬೇಕಾದ ಸಿದ್ಧತೆಗಳನ್ನು ನಡೆಸಿಕೊಂಡಿದ್ದೆ. ಅಮ್ಮ ಸುಮ್ಮನೆ ಎಲ್ಲವನ್ನೂ ಕೆಡಿಸುತ್ತಿದ್ದಾಳೆ ಎಂದು ಸಿಟ್ಟಿನಲ್ಲಿ ಮುಖ ಸಿಂಡರಿಸಿಕೊಂಡ. ಇಷ್ಟು ಗೋಲಿಗಳಲ್ಲಿ ಒಂದೇ ಒಂದನ್ನು ಆರಿಸಿಕೊಳ್ಳುವ ಯೋಚನೆ ಅವನಿಗೆ ಹಿಡಿಸಲಿಲ್ಲ. ಹುಡುಗನ ಮನದೊಳಗೆ ಯೋಚನೆಗಳ ಚಂಡಮಾರುತವೇ ಎದ್ದಿತು. ತಾಯಿಗೆ ಗೊತ್ತಾಗಲಿಲ್ಲ. 'ಬೇಗ ತೆಗೋ ಕಿಟ್ಟಿ, ಮನೆಗೆ ಹೋಗೋಣ.', ಎಂದು ಒತ್ತಾಯ ಮಾಡಿದಳು. ಹುಡುಗ ಅಲುಗಲಿಲ್ಲ. 'ತೆಗೊತೀಯೋ, ಇಲ್ಲ ಒದೆ ಬೇಕೋ?', ತಾಯಿ ದನಿ ಎತ್ತರಿಸಿದಳು. ಹುಡುಗ ಒತ್ತಡಕ್ಕೆ ಬಿದ್ದ. ತನಗೀಗ ಒಂದೇ ಒಂದು ಗೋಲಿಯನ್ನು ಎತ್ತಿಕೊಳ್ಳುವುದೇ ಮಾರ್ಗ ಎಂದು ತಡಕಾಡಿದ. ಬೇಗಬೇಗನೆ ಯಾವ ಗೋಲಿ ತನಗಿಷ್ಟವಾದದ್ದೆಂದು ಯೋಚಿಸತೊಡಗಿದ. ಗೋಲಿಗಳ ರಾಶಿಯೇ ಕಣ್ಣ ಮುಂದಿದ್ದಾಗ ಹುಡುಗ ಯಾವ ಗೋಲಿ ತನಗಿಷ್ಟವಾದದ್ದೆಂದು ಯೋಚಿಸಿಯೇ ಇರಲಿಲ್ಲ. ಯಾವ ಗೋಲಿಯನ್ನೂ ಮನೆಗೆ ತೆಗೆದುಕೊಂಡು ಹೋಗುವ ಯೋಚನೆಯೇ ಅವನಿಗೆ ಬಂದಿರಲಿಲ್ಲ. ಒಂದೊಂದು ಗೋಲಿಗೂ ಅದರದ್ದೇ ಅಂದವಿತ್ತು. ಆಡಲಿಕ್ಕೆ ಅವನಿಗೆ ಎಲ್ಲವೂ ಬೇಕಿತ್ತು, ಆದರೆ ಯಾವ ಒಂದನ್ನೂ ತನ್ನದಾಗಿ ಮಾಡಿಕೊಳ್ಳುವ ಹಠ ಅವನಿಗೆ ಇರಲಿಲ್ಲ. ಆದರೀಗ ಜೀವನ್ಮರಣದ ಹೋರಾಟ ಎದುರಾಯಿತು-ಇಷ್ಟರಲ್ಲಿ ತನ್ನ ಪಾಲಿಗೆ ಬಂದದ್ದು ಒಂದು, ಅದನ್ನೂ ತಾನೇ ಆರಿಸಬೇಕು! ಹುಡುಗನಿಗೆ ಭಯವಾಯಿತು. ತಾಯಿಯನ್ನೊಮ್ಮೆ ಗೋಲಿಗಳನ್ನೊಮ್ಮೆ ನೋಡಿ, 'ನಂಗೆ ಗೋಲಿಯೂ ಬೇಡ, ಏನೂ ಬೇಡ.', ಎಂದು ಕಿರುಚುತ್ತಾ ಮನೆಯತ್ತ ಓಡಿದ .

*                                                       *                                         *

ಈ ಘಟನೆಯ ಕಿಟ್ಟಿ ಬೆಳೆದು ಶ್ರೀ|ಕಿಶೋರ್ ಕುಮಾರ್ ಆದ ಮೇಲೂ, ಅಸಂಖ್ಯ ಸಾಧ್ಯತೆಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಸಂದರ್ಭಗಳಲ್ಲಿ, ಈ ಪ್ರಪಂಚದಲ್ಲಿ ಮಹತ್ವದ್ದು ಎನಿಸಿಕೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಣಗಳಲ್ಲಿ - ಅದು ಬೆಡ್ ರೂಮೇ ಆಗಿರಲಿ, ಬೋರ್ಡ್ ರೂಮೇ ಆಗಿರಲಿ, ಕಿಶೋರ್ ಚಡ್ಡಿ ಹಾಕಿಕೊಂಡ ಕಿಟ್ಟಿಯಂತಾಗಿ ತಾಯಿ, 'ನಿನಗೆ ಯಾವ ಗೋಲಿ ಬೇಕು?!', ಎಂದು ಗದರಿದಂತಾಗಿ ಬೆಚ್ಚಿ ಬೀಳುತ್ತಾನೆ!

*                                                      *                                            *

2 comments:

  1. chennagi bardhidhira.

    ReplyDelete
  2. Chenagide Kiran, adre nange nimma bere blogs astu khushi aaglilla.

    ReplyDelete