Jun 27, 2009

ಸಿಟ್ಟು

ತುಂಬ ಹಿಂದೆ ಬಿ.ಎಂ.ಟಿ.ಸಿ ಯಲ್ಲಿ ಆಫೀಸಿಗೆ ಹೋಗುತ್ತಿದ್ದಾಗ ಒಮ್ಮೆ, ಯಾವುದೋ ಸ್ಟಾಪಿನಲ್ಲಿ ಒಬ್ಬ ಪ್ರಯಾಣಿಕ ಬಾಗಿಲಿನ ಪಕ್ಕ ನಿಂತು ಹತ್ತುವವರಿಗೆ ಕಿರಿಕಿರಿ ಕೊಡುತ್ತಿದ್ದ ಒಬ್ಬ ಯುವಕನಿಗೆ, "ಡೋರ್ ಪಕ್ಕ ಯಾಕೆ ನಿಲ್ತೀರ? ಒಳಗೆ ಹೋಗಿ ಸಾಯಲಿಕ್ಕೆ ಏನು ನಿಮಗೆ?", ಎಂದು ಬಯ್ದ. ಯುವಕನಿಗೆ ಸಿಟ್ಟು ನೆತ್ತಿಗೇರಿತು, "ಬೆಳಿಗ್ಗೆ ಬೆಳಿಗ್ಗೆ ಸಾಯೋ ಮಾತು ಯಾಕೆ ಆಡ್ತೀರ?", ಎಂದು ಅವನು ಕಿರುಚಿದ. ಇದು ಇನ್ನೂ ಜೋರಾಗುತ್ತಿತ್ತು, ಅಷ್ಟರಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಧ್ಯ ವಯಸ್ಕನೊಬ್ಬ, "ಇಕೊಳ್ಳಿ, ಇಲ್ಲಿ ಬನ್ನಿ, ಕೂರಿ", ಎಂದು ಈಗ ತಾನೇ ಬಸ್ಸು ಹತ್ತಿದವನಿಗೆ ತನ್ನ ಪಕ್ಕ ಸೀಟು ತೋರಿಸಿ, "ನೀವು ಕಿರುಚಿದರೆ ನಿಮಗೆ ಮಾತ್ರ, ನಮಗೆ ಏನೂ ಆಗೋಲ್ಲ.", ಎಂದ. ಇವನು ಏನೋ ಸಮಜಾಯಿಷಿ ಹೇಳ ಹೊರಟವನಿಗೆ ಮಧ್ಯ ವಯಸ್ಕ, "ಎಲ್ಲಿಯವರು ನೀವು? ಕನ್ನಡ ಅಲ್ವ? ಮತ್ತೆ, ಕನ್ನಡದವರಾಗಿ ನೀವು ಹೀಗೆ ಮಾಡುವುದ?", ಎಂದು ಬುದ್ಧಿ ಮಾತು ಹೇಳಿದ.
ವ್ಯರ್ಥ ಜಗಳವಾಡುತ್ತಿದ್ದ ವ್ಯಕ್ತಿಗಳಿಬ್ಬರು ಈ ಮಧ್ಯ ವಯಸ್ಕನ ಪ್ರವೇಶದಿಂದ ಶಾಂತವಾದರು. ಕದನ ನಿಂತಿತು.

ಇವತ್ತು ಮನೆಗೆ ಬರುತ್ತಿದ್ದಾಗ, ರಸ್ತೆಯಲ್ಲಿ ಒಬ್ಬ ಆಟೋ ರಿಕ್ಷ ಚಾಲಕ ಮತ್ತೊಬ್ಬನೊಂದಿಗೆ ಜೋರು ಜೋರಾಗಿ ಕಿರುಚಾಡುತ್ತಿದ್ದ. "ಲೋಫಾರ್", "ಎಲ.ಕೆ.ಬಿ." ಎಂದೆಲ್ಲ ಮಾತು ನಡೆಯುತ್ತಿತ್ತು. ಇವರ ಹಿಂದೆ ಉದ್ದಕ್ಕೆ ಟ್ರಾಫಿಕ್ ಸ್ಥಗಿತಗೊಂಡಿತ್ತು. ಯಾರೂ ಸಮಾಧಾನ ಮಾಡುವ ಗೋಜಿಗೆ ಹೋಗಲಿಲ್ಲ. ಇಬ್ಬರೂ ಮುಷ್ಟಿ ಬಿಗಿದುಕೊಂಡು ಕೂದಲೆಳೆಯ ಅಂತರದಲ್ಲಿ ನಿಂತುಕೊಂಡು ಕಿರುಚಾಡುತ್ತಿದ್ದರು. ತಮ್ಮ ಪೌರುಷವೆಲ್ಲ ಇಷ್ಟಕ್ಕೇ, ಹೊಡೆಯುವ ಧೈರ್ಯ ತಮಗಿಲ್ಲ ಎಂಬುದು ಇಬ್ಬರಿಗೂ ಗೊತ್ತಿದ್ದಂತಿತ್ತು! "ಹೊಡೆದೇ ಬಿಡ್ತೀನಿ ನೋಡು!", ಎಂದು ಇಬ್ಬರೂ ಪರಸ್ಪರ ಬೆದರಿಕೆ ಹಾಕುತ್ತಿದ್ದರು!

ಇಂಥ ಸಿಟ್ಟು ನಿಜಕ್ಕೂ ಮುಂದಿರುವವರ ಮೇಲಲ್ಲ, ನಮ್ಮ ಬಗ್ಗೆ ನಮಗೇ ಇರುವ ಸಿಟ್ಟು ಈ ರೀತಿಯಲ್ಲಿ ಹೊರ ಬರುತ್ತದೇನೋ ಎನಿಸುತ್ತದೆ. ಕೂಡಿಟ್ಟ frustration ಈ ಬಗೆಯಲ್ಲಿ ಹೊರ ಬರುತ್ತದೆ. ಸಮಾಜದ ಬಗ್ಗೆ, ನಮ್ಮ ಹಣೆಬರಹದ ಬಗ್ಗೆ, ಬದಲಾಗದ ಪರಿಸ್ಥಿತಿಗಳ ಬಗ್ಗೆ, ಹದಗೆಟ್ಟ ಸಂಬಂಧಗಳ ಬಗ್ಗೆ, ಹೊಟ್ಟೆ ಹೊರೆಯಲಿಕ್ಕೆ ಇಲ್ಲದ ವೇಷ ಕಟ್ಟಿ ಆತ್ಮ ಮಾರಿಕೊಳ್ಳುತ್ತಿರುವ ಬಗ್ಗೆ ಒಳಗೇ ಇರುವ ಸಿಟ್ಟು, ಜಿಗುಪ್ಸೆ, ಹೇಸಿಗೆಗಳು ಒಂದು ಹೊರ ದಾರಿ ಸಿಕ್ಕಿದ ಖುಷಿಯಲ್ಲಿ ಒಮ್ಮೆಗೇ ಈ ರೀತಿಯಾಗಿ ಕಾಣಿಸಿಕೊಳ್ಳುತ್ತದೆಯೋ ಏನೋ! ಎಲ್ಲೋ ತೋರಿಸಬೇಕಾಗಿದ್ದ ಪ್ರತಿರೋಧ ರಸ್ತೆ ಮಧ್ಯೆಯ ಕಿತ್ತಾಟದಲ್ಲಿ ಹೀಗೆ ಖರ್ಚಾಗಿ ಹೋಗುತ್ತದೆ. ಎಲ್ಲೋ ಎತ್ತಬೇಕಾಗಿದ್ದ ದನಿ ಇಲ್ಲಿ ಹೀಗೆ ವ್ಯರ್ಥ ಜಗಳದಲ್ಲಿ ಹಾಳಾಗುತ್ತದೆ. ಇಂಥ ಸಿಟ್ಟನ್ನೆಲ್ಲಾ ಸರಿಯಾದ ದಿಕ್ಕಿನಲ್ಲಿ ನಿರ್ದೇಶಿಸಿದರೆ ಬಹುಷಃ ಒಂದಿಷ್ಟು ಪ್ರಯೋಜನವಾಗುತ್ತದೋ ಏನೋ?!

No comments:

Post a Comment