Apr 27, 2008

ಮುಳುಗು


ಭಾಸ್ಕರ ಒಂದು ಯಂತ್ರದಂತೆ ಕೆಲಸ ಮಾಡಲು ತೊಡಗಿ ಮೂರು ವರ್ಷಗಳ ಮೇಲಾಗಿತ್ತು. ಅವನು ಈಗಿರುವ ಉದ್ಯೋಗಕ್ಕೆ ಸೇರಿದ ದಿನಾಂಕ ಕೂಡ ಅವನಿಗೆ ಮರೆತು ಹೋಗಿತ್ತು. ''ಈ ಆಫೀಸಿಗೆ ನಾನು ಎಡಗಾಲಿಟ್ಟು ಬಂದಾಗಲೇ ನನ್ನ ಬದುಕಿನ ಕೆಟ್ಟ ದಿನಗಳು ಪ್ರಾರಂಭವಾದವು.'', ಎಂದುಕೊಂಡಿದ್ದಾನೆ ಹಲವಾರು ಬಾರಿ. ಅವನು ಮಾಡುತ್ತಿದ್ದ ಕೆಲಸದಲ್ಲಿ ಅವನ ಮನಸ್ಸಿಗೆ ಒಗ್ಗುವ ಅಂಶಗಳು ಲವಲೇಶವೂ ಇರಲಿಲ್ಲ. ಅವರಿವರು ಹೇಳಿದಂತೆ, ಯಾರು ಯಾರನ್ನೋ ಉದ್ಧಾರ ಮಾಡಲಿಕ್ಕಾಗಿ ಹಗಲೂ ರಾತ್ರಿ ದುಡಿಯುತ್ತಿದ್ದದ್ದು ಕೆಲವೊಮ್ಮೆ ಅವನಿಗೇ ನಾಚಿಕೆ ಬರಿಸುತ್ತಿತ್ತು. ಅದೇ ಕೆಲಸವನ್ನು ಮತ್ತೆ ಕೆಲವರು ಸಂತೋಷದಿಂದ ಮಾಡುತ್ತಿದ್ದರೂ ಕೂಡ, ಭಾಸ್ಕರನಿಗೆ ಮನಸ್ಸಿಗೆ ಒಗ್ಗದ ಕೆಲಸವಾದ ಕಾರಣ, ಅವರ ಸಂತೋಷದ ಮೂಲ ಏನಿರಬಹುದೆಂಬ ಕುತೂಹಲವೂ ಉಳಿದಿಲ್ಲ. ಕೆಲಸ ಬದಲಾಯಿಸುವ ಬಗ್ಗೆ ಆಗೀಗ ತುಂಬಾ ಗಂಭೀರವಾಗಿ ಯೋಚಿಸುತ್ತಿದ್ದ ಅವನು, ಅಸಲಿಗೆ ತನ್ನ ಮನಸ್ಸಿಗೆ ಒಗ್ಗುವ ಕೆಲಸ ಜಗತ್ತಿನಲ್ಲಿದೆಯೇ ಎಂಬ ಅನುಮಾನ ಬಂದ ಮೇಲೆ, ಆ ಪ್ರಯತ್ನವನ್ನೂ, ಚಿಂತೆಯನ್ನೂ ಮಿದುಳಿಂದ ಹೊರ ತಳ್ಳಿದ್ದಾನೆ.

ಈ ಮುಂಜಾನೆ ಸ್ನಾನ ಮುಗಿಸಿ ಬಂದು ಕೋಣೆಯಲ್ಲಿ ಕನ್ನಡಿಯ ಮುಂದೆ ನಿಂತಾಗ, ಅಪರೂಪಕ್ಕೆಂಬಂತೆ ತನ್ನ ಪ್ರತಿಬಿಂಬವನ್ನು ದಿಟ್ಟಿಸಿ ನೋಡಿದ. ಕನ್ನಡಿಯಲ್ಲಿ ಮೂಡಿರುವ ಬಿಂಬ ತನ್ನದೇ ಅಲ್ಲವೇ ಎಂಬಷ್ಟರ ಮಟ್ಟಿಗೆ ತನಗೆ ತಾನೇ ಅಪರಿಚಿತನಾಗಿದ್ದೇನೆನ್ನಿಸಿತು. ತನ್ನ ಕಣ್ಣುಗಳು ಇಷ್ಟು ನಿರ್ಜೀವವಾಗಿ ಕಾಣಿಸುತ್ತವೆ ಎಂಬ ಯೋಚನೆಯೇ ಅವನನ್ನು ಬೆಚ್ಚಿ ಬೀಳಿಸಿತು. ಹಾಗೆಯೇ ಯೋಚಿಸುತ್ತಾ ಛಾವಣಿಯತ್ತ ನೋಡಿದಾಗ ಕಾಣಿಸಿದ ಗಿರಗಿರನೆ ತಿರುಗುತ್ತಿದ್ದ ಫ್ಯಾನಿನಂತೆ ತಾನೂ ತಿರುಗತೊಡಗಿದ್ದೇನೆ, ಉದ್ಯೋಗವೆಂಬ ಛಾವಣಿಗೆ ಜೋತು ಬಿದ್ದು, ಎಂದೆನಿಸಿತು. ಮತ್ತೆ ಕಛೇರಿಗೆ ತಡವಾಗುತ್ತಿದೆಯೆಂಬ ಯೋಚನೆ ಬಂದದ್ದೇ ಮತ್ತಷ್ಟು ವೇಗವಾಗಿ ತಿರುಗತೊಡಗಿದ. ಭಾಸ್ಕರ!
ಕಛೇರಿಯಲ್ಲಿ ಸದ್ದಿಲ್ಲದೆ ವೇಗವಾಗಿ ತಿರುಗುತ್ತಿದ್ದವನು ಮಧ್ಯಾಹ್ನ ಊಟಕ್ಕೆಂದು ಕುಳಿತಾಗ ತನ್ನೊಂದಿಗೆ ತಿರುಗುತ್ತಿರುವ ಸೀಲಿಂಗ್ ಫ್ಯಾನುಗಳು ಎಷ್ಟಿವೆ ಎಂದು ಸುತ್ತಲೂ ನೋಡತೊಡಗಿದ. ವಿವಿಧ ಬಣ್ಣ, ಆಕಾರ, ಗಾತ್ರಗಳ ಫ್ಯಾನ್ ಗಳನ್ನು ಕಂಡು ನಗು ಬಂತು. ತನ್ನದೇ ಯೋಚನೆಯಲ್ಲಿ ಮುಳುಗಿದ್ದವನಿಗೆ ಸಹೋದ್ಯೋಗಿ ರಾಜೀವ ತನ್ನ ಮುಖವನ್ನು ದಿಟ್ಟಿಸಿ ಏನೋ ಹೇಳುತ್ತಿದ್ದಾನೆಂದೆನಿಸಿದಾಗ ಅವನತ್ತ ಗಮನ ಹರಿಸಿದ.
''ಈ ವೀಕೆಂಡ್ ಎಲ್ಲಾದರೂ ಟ್ರಿಪ್ ಹೋಗಿ ಬರೋಣ?'', ರಾಜೀವ ಕೇಳಿದ. ಭಾಸ್ಕರ ಮಾತಾಡಲಿಲ್ಲ. ಆಸಲಿಗೆ ಭಾಸ್ಕರನಿಗೆ ವಾರಾಂತ್ಯದ ರಜೆಯಲ್ಲಿ ಮಾಡಲು ಏನೂ ಕೆಲಸವಿರಲಿಲ್ಲವಾದರೂ ಪ್ರವಾಸ ಹೋಗುವಷ್ಟು ಇಚ್ಛಾಶಕ್ತಿಯಾಗಲಿ, ಜೀವನ ಪ್ರೀತಿಯಾಗಲಿ ತನ್ನಲ್ಲಿದೆಯೇ ಎಂಬ ಅನುಮಾನ ಕಾಡಿತಾದ್ದರಿಂದ ''ಬರಲಾಗುವುದಿಲ್ಲ'', ಎನ್ನಬೇಕೆನಿಸಿತು. ರಾಜೀವ ಬಿಡದೆ ಕಾಡಿದ, ''ಹೋಗಿ ಬರೋಣ, ಇಲ್ಲೀ ೪೦ ಕಿ.ಮೀ. ದೂರದಲ್ಲಿ ಒಂದು ಜಲಪಾತವಿದೆ, ಫ್ಯಾನ್ಟಾಸ್ಟಿಕ ಜಾಗ.'' ಕೊನೆಗೆ ಇಲ್ಲ ಎನ್ನಲೂ ಇಚ್ಛಾಶಕ್ತಿ ಸಾಲದೆ ಭಾಸ್ಕರ ಪ್ರವಾಸ ಹೋಗಲು ಒಪ್ಪಿಕೊಂಡ.
************************************************************************************
ಶನಿವಾರ ಮುಂಜಾನೆ ಭಾಸ್ಕರ, ರಾಜೀವ ಮತ್ತು ಅವನ ಮತ್ತಿಬ್ಬರು ಸ್ನೇಹಿತರಾದ ಸಮೀರ್ ಮತ್ತು ಶ್ರೀಕಾಂತರು ಎರಡು ಬೈಕುಗಳಲ್ಲಿ ಜಲಪಾತದತ್ತ ಹೊರಟರು. ಉಳಿದವರ ಉತ್ಸಾಹ ಭಾಸ್ಕರನಲ್ಲಿ ಕುತೂಹಲ ಮೂಡಿಸುತ್ತಿತ್ತು. ಇವರೆಲ್ಲರೂ ತಾನು ಬದುಕುತ್ತಿರುವ ಪ್ರಪಂಚದ ಭಾಗವೇ ಅಲ್ಲವೇನೋ ಎನಿಸುತ್ತಿತ್ತು. ''ಇಷ್ಟು ಸಂತೋಷ ಪಡಲಿಕ್ಕೆ ಕಾರಣವಾದರೂ ಏನಿದೆ ಬಾಳಿನಲ್ಲಿ!'' ''ಹೆಸರಿಲ್ಲದ ಜಲಪಾತಕ್ಕೆ ಹೊರಟ ನಾಲ್ವರು ಅನಾಮಿಕರು'' ಎಂಬ ವಿಷಯದ ಬಗ್ಗೆ ಏನಾದರೂ ಬರೆಯಬೇಕೆನಿಸಿತು. ಕಥೆ, ಕವನ ಬರೆಯುವ ತನ್ನ ಅಭ್ಯಾಸ ಈ ಉದ್ಯೋಗ ಸೇರಿದ ಮೇಲೆ ಸತ್ತು ಹೋಗಿದ್ದು ಹೇಗೆ ಎಂದು ಯೋಚಿಸತೊಡಗಿದ. ಹೇಳಿಕೊಳ್ಳುವಂಥ ಯಾವ ಕಾರಣವೂ ಹೊಳೆಯಲಿಲ್ಲ. ಅದರ ಬಗ್ಗೆ ಯೋಚಿಸುವಷ್ಟು ತಾಳ್ಮೆ ತನ್ನಲ್ಲಿಲ್ಲ ಎನಿಸಿ ಮತ್ತೆ ತನ್ನ ಜೊತೆಗಾರರತ್ತ ನೋಡಿದ. ಮತ್ತೆ ಅವರ ಉತ್ಸಾಹಕ್ಕೆ ಕಾರಣವೇನಿರಬಹುದೆಂದು ಯೋಚಿಸತೊಡಗಿದ.

ಜಲಪಾತ ತಲುಪಲು ಒಂದು ಕಿಲೋ ಮೀಟರಿನಷ್ಟು ದೂರ ನಡೆಯಬೇಕಿತ್ತು, ಬೈಕು ಕೂಡ ಹೋಗದಷ್ಟು ಇಕ್ಕಟ್ಟಾದ ರಸ್ತೆಯಿತ್ತು. ಇವರು ನಾಲ್ವರು ನಡೆಯತೊಡಗಿದರು. ಸಮೀರ ಉತ್ಸಾಹದಿಂದ ದನಿಯೆತ್ತರಿಸಿ ಮಾತನಾಡುತ್ತಿದ್ದ, ದಾರಿಯಲ್ಲಿದ್ದ ಇತರ ಪ್ರವಾಸಿಗರ ಬಗ್ಗೆ ತಮಾಷೆ ಮಾಡಿಕೊಳ್ಳುತ್ತ ನಡೆದಿದ್ದ. ಅವನೊಂದಿಗೆ ಉಳಿದವರು ಸೇರಿಕೊಂಡರು. ಭಾಸ್ಕರ ಮಾತ್ರ ಮಾತಾಡದೆ ಹೆಜ್ಜೆ ಹಾಕುತ್ತಿದ್ದ. ಜಲಪಾತದ ಬಳಿ ತಲುಪಿದಾಗ ಉಳಿದವರು ಕೇಕೆ ಹಾಕುತ್ತ ಓಡಿದರು. ಅವರ ಉತ್ಸಾಹ ಭಾಸ್ಕರನಿಗೆ ಕೊಂಚ ಮಟ್ಟಿಗೆ ಹರಡಿತಾದರೂ ಅವನು ಸದ್ದಿಲ್ಲದೆ ಜಲಪಾತದತ್ತ ನಡೆದ.

ಭಾಸ್ಕರ ಜಲಪಾತದ ಬಳಿ ತಲುಪುವಷ್ಟರಲ್ಲಿ ಉಳಿದವರು ನೀರಿಗಿಳಿದಾಗಿತ್ತು. ಭಾಸ್ಕರ ಅವರನ್ನೇ ನೋಡುತ್ತ ನಿಂತ. ನೀರು ಹೆಚ್ಚು ರಭಸವಿಲ್ಲದೆ ನಯವಾಗಿ ಬೀಳುತ್ತಿತ್ತು. ಸುಮ್ಮನೆ ನಿಂತು ಧುಮ್ಮಿಕ್ಕುತ್ತಿದ್ದ ನೀರನ್ನೇ ದಿಟ್ಟಿಸುತ್ತಿದ್ದ ಭಾಸ್ಕರನಿಗೆ ಒಮ್ಮೆಗೆ ವೇಷ ಕಳಚಿ ನೀರಿಗಿಳಿವ ಆಸೆ ಹುಟ್ಟಿತು. ಕೂಡಲೇ ಶರಟು ಕಳಚಿ, ಪರ್ಸ್, ಮೊಬೈಲ್ ಫೋನ್ ಮುಂತಾದವನ್ನು ಜೊತೆಗೆ ತಂದಿದ್ದ ಬ್ಯಾಗಿನಲ್ಲಿಟ್ಟು ನೀರಿನತ್ತ ನಡೆದ ಭಾಸ್ಕರ. ನೀರು ಬೀಳುತ್ತಿದ್ದ ಸ್ಥಳಕ್ಕೆ ಕೊಂಚ ಹೆಚ್ಚೇ ಅನ್ನಿಸುವಷ್ಟು ಉತ್ಸಾಹದಿಂದ ಓಡಿದ ಭಾಸ್ಕರ ಇನ್ನೇನು ಅಲ್ಲಿಗೆ ತಲುಪಬೇಕು ಅನ್ನುವಷ್ಟರಲ್ಲಿ ಕಾಲು ಜಾರಿ ಅವನಿಗಿಂತ ಆಳಕ್ಕಿದ್ದ ಗುಂಡಿಗೆ ಬಿದ್ದು ಬಿಟ್ಟ. ಬಿದ್ದವನ ಕೈ ಮಾತ್ರ ನೀರಿನ ಮೇಲೆ ಕಾಣಿಸುತ್ತಿತ್ತು. ಸಮೀರ ಕೂಡಲೆ ಓಡಿ ಬಂದು ಭಾಸ್ಕರನ ಕೈ ಹಿಡಿದುಕೊಳ್ಳಲು ಪ್ರಯತ್ನಿಸಿದ. ಆದರೆ ಭಾಸ್ಕರ ಕೊಸರಾಡಿ ಕೈ ಬಿಡಿಸಿಕೊಂಡ! ಎಲ್ಲರೂ ಗಾಬರಿಯಿಂದ ಸುತ್ತಲೂ ನೆರೆದು ತೇಲುತ್ತಾ ಮುಳುಗುತ್ತಾ ಒದ್ದಾಡುತ್ತಿದ್ದ ಭಾಸ್ಕರನನ್ನು ನೋಡುತ್ತಿದ್ದರು.

ನೀರಿನಲ್ಲಿ ಮುಳುಗಿದ್ದ ಭಾಸ್ಕರನಿಗೆ ಹೊಸತೊಂದು ಲೋಕಕ್ಕೆ ಕಾಲಿಟ್ಟಂತೆನಿಸಿತು. ಉಸಿರುಗಟ್ಟಿದಂತೆನಿಸಿದರೂ ಕೂಡ ಯಾವುದೋ ಹೊಸ ಶಕ್ತಿ ತನ್ನನ್ನು ಆವರಿಸಿದಂತೆ, ವರ್ಷಗಳಿಂದ ಮೈಯಲ್ಲಿದ್ದ ಯಾವುದೋ ಬೇನೆ ದೂರಾದಂತೆ.... ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ನಿಂತು ಹೋದಂತೆ....

ಎರಡು ನಿಮಿಷಗಳಲ್ಲಿ ಒಮ್ಮೆಗೆ ಮೇಲಕ್ಕೆದ್ದ ಭಾಸ್ಕರ ಪಕ್ಕದಲ್ಲಿದ್ದ ಕಲ್ಲನ್ನು ಹಿಡಿದುಕೊಂಡು ನೀರಿನಿಂದ ತನ್ನ ದೇಹವನ್ನು ಹೊರಗೆಳೆದುಕೊಂಡ. ಮೇಲಕ್ಕೆದ್ದವನೇ ಎಲ್ಲರೂ ಅವನತ್ತ ಬಂದು, ''ಏನೂ ಆಗಿಲ್ಲ ತಾನೇ?'' ಎಂದು ವಿಚಾರಿಸಿಕೊಳ್ಳುತ್ತಿದ್ದರೂ ಗಮನ ಕೊಡದೆ, ರಾಜೀವನತ್ತ ನಡೆದು, ''ತುಂಬಾ ಥ್ಯಾಂಕ್ಸ್ ಕಣೊ, ಇಲ್ಲಿಗೆ ಕರೆದುಕೊಂಡು ಬಂದಿದ್ದಕ್ಕೆ!'' ಎಂದ. ನಂತರ ಹರಿಯುತ್ತಿದ್ದ ಜಲಪಾತದ ಕೆಳಗೆ, ಪುಟಿಯುತ್ತಿದ್ದ ಹೊಸ ನೀರಿಗೆ ಮೈ ಮುಖ ಒಡ್ಡಿ ಮುಗುಳ್ನಗುತ್ತ ನಿಂತ, ಯಾವುದೋ ರಹಸ್ಯ ತನಗೆ ಮಾತ್ರ ತಿಳಿದಿದೆ ಎನ್ನುವಂತೆ, ಉಳಿದವರೆಲ್ಲರೂ ಗಾಬರಿ, ಆಶ್ಚರ್ಯದಿಂದ ಇವನನ್ನೇ ನೋಡುತ್ತಿದ್ದಂತೆ!

No comments:

Post a Comment