Mar 20, 2016

ಫೇಸ್ಬುಕ್ ಬರಹಗಳು

ತಾಳ್ಮೆ, ಶಾಂತಿ, ಪರಿಶ್ರಮ ಇತ್ಯಾದಿ...
**************************
ತಾಳ್ಮೆ ತೀವ್ರ ನಿಗಾ ಘಟಕದಲ್ಲಿ ಕೇಳುವವರಿಲ್ಲದೆ ಬಡಕಲಾಗಿದ್ದ. ಯಾರೂ ಮಾತಾಡಿಸಲು ಬಂದಿರಲಿಲ್ಲ. ಬರಲು ಯಾರೂ ಉಳಿದಿಲ್ಲ, ಸಹನೆ ಮೊನ್ನೆಯಷ್ಟೇ ಅಸು ನೀಗಿದ್ದ. ಉಳಿದವಳೊಬ್ಬಳು ಶಾಂತಿ; ಅವಳು ಪ್ರಪಂಚದ ಪ್ರಚಂಡ ನಾಯಕರೆಲ್ಲರೂ ಆಯೋಜಿಸಿದ್ದ ಶೃಂಗಸಭೆಯಲ್ಲೊಮ್ಮೆ ಮುಖ ತೋರಿಸಲು ಹೋಗಿದ್ದಳು. ಅವರೆಲ್ಲರೂ ಕೈ ಕುಲುಕಿ, ಆಲಿಂಗಿಸಿಕೊಳ್ಳುವಾಗ ಅವಳು ಅಲ್ಲಿ ಹಾಜರಿರುವುದು ಅಗತ್ಯ. ಅವರೆಲ್ಲ ಶಾಂತಿಗಾಗಿ ಯುದ್ಧ ಮಾಡುವವರು ಎಂಬ ಮುಲಾಜು ಅವಳಿಗೆ.

ತಾಳ್ಮೆಗೆ ಬದುಕು ಸಾಕಾಗಿತ್ತು. ಮೊದಲು ಅವನು ಬಾಡಿಗೆಗಿದ್ದಲ್ಲಿ, ಮನೆಯ ಯಜಮಾನ ಬಾಡಿಗೆ ಹೆಚ್ಚಿಸಿದಾಗ ಇವನು ಹೊರ ನಡೆದಿದ್ದ. ಈಗ ಅಲ್ಲಿ ಲೋಭ ಮನೆ ಮಾಡಿದ್ದಾನಂತೆ. ಪರಿಶ್ರಮ ಎಂಬ ಹೆಸರಿನ ದೂರದ ಸಂಬಂಧಿಯೊಬ್ಬಳಿದ್ದಳು ತಾಳ್ಮೆಗೆ. ಅವಳೂ ಕೂಡ ಬೀದಿಗೆ ಬಂದಿದ್ದಳು. ಹಿಂದೆಲ್ಲ ಗೆಲುವು ಮತ್ತು ಪರಿಶ್ರಮ ಜೋಡಿ, ಎಲ್ಲಿ ಹೋದರೂ ಜೊತೆಗೇ ಇರುತ್ತಿದ್ದರು. ಏನು ಕೆಟ್ಟಿತೋ ಏನೋ ಗೆಲುವು ಹಲವು ಅನೈತಿಕ ಸಂಬಂಧಗಳನ್ನು ಬೆಳೆಸಿಕೊಂಡು ಪರಿಶ್ರಮಳನ್ನು ಬೀದಿಗೆ ತಳ್ಳಿದ.

ಅದೇನೇ ಇರಲಿ, ತಾಳ್ಮೆಗೂ ಇನ್ನು ಹೆಚ್ಚು ಸಮಯ ಉಳಿದಿಲ್ಲ. ತಾಳ್ಮೆಗೆ ದಯಾಮರಣ ಕೊಡಿಸಬೇಕೆಂದು ಆತುರ ಮತ್ತು ಗಡಿಬಿಡಿ ಎಂಬಿಬ್ಬರು ವಕೀಲರು ನ್ಯಾಯಾಲಯದ ಮೆಟ್ಟಿಲು ಹತ್ತುವವರಿದ್ದಾರೆ. ನ್ಯಾಯಾಧೀಶನಾಗಿ ತಮಗೆ ಬೇಕಾದವನಾದ ಒಡಂಬಡಿಕೆಯನ್ನು ನೇಮಿಸಿಕೊಂಡಿದ್ದಾರೆ. ದಯಾಮರಣ ಖಂಡಿತ.

**********************************************

ಧಾವಂತ
*******
ಕರೆಂಟು ಹೋಗುವ ಮೊದಲು ಇಸ್ತ್ರಿ ಹಾಕಬೇಕು, ನೀರಿನ ಬಿಸಿ ಆರುವ ಮುನ್ನ ಸ್ನಾನ ಮುಗಿಸಬೇಕು, ದೀಪ ಕೆಂಪಾಗುವಷ್ಟರಲ್ಲಿ ಸಿಗ್ನಲ್ ದಾಟಬೇಕು, ಗಂಟೆ ಬಡಿಯುವ ಮೊದಲು ಆಫೀಸ್ ತಲುಪಬೇಕು, ದುಡಿಯುವ ಶಕ್ತಿ ಇರುವಾಗಲೇ ಕಡಿದು ಗುಡ್ಡೆ ಹಾಕಬೇಕು....

ಎಂಬ ಧಾವಂತದಲ್ಲಿ ಬದುಕು ಇರುವಾಗಲೇ ಅದನ್ನು ಸವಿಯಬೇಕು ಎಂಬುದು ಮರೆತೇ ಹೋಯಿತು.

**********************************************


ಸಿಟ್ಟು
******
ಸಿಟ್ಟು ಅನ್ನೋದು ಕರ್ಚೀಫು ಇದ್ದ ಹಾಗೆ. ಸದಾ ಅದು ಮೂಗಿನ ತುದಿಯಲ್ಲೇ ಇದ್ರೆ, ಜನ ನಿಮ್ಗೇನೋ ಖಾಯಿಲೆ ಅಂತ ಅಂದ್ಕೋತಾರೆ.
(ಯೋಗರಾಜ್ ಭಟ್ ಇಂಥದ್ದೇನೋ ಹೇಳೋ ಮೊದ್ಲು ನಾನೇ ಹೇಳಿ ಬಿಡೋಣ ಅಂತ...)
:-D

**********************************************


ಪುಸ್ತಕ ಮತ್ತು ಮೊಬೈಲ್ ಫೋನ್
************************

ತಲೆ ಬಗ್ಗಿಸಿ ನನ್ನನ್ನು ನೋಡು. ತಲೆ ಎತ್ತಿ ನಡೆಯುವಂತೆ ಮಾಡುತ್ತೇನೆ.
-ಪುಸ್ತಕ

ತಲೆ ಬಗ್ಗಿಸಿ ಒಮ್ಮೆ ನನ್ನನ್ನು ನೋಡು. ಪಕ್ಕದಲ್ಲೇ ಭೂಕಂಪವಾದರೂ ನೀನು ತಲೆ ಎತ್ತಿ ನೋಡದಿರುವಂತೆ ಮಾಡುತ್ತೇನೆ.
-ಮೊಬೈಲ್ ಫೋನ್.

:-D

**********************************************


ಪ್ರಿಯ ಕ್ರಾಂತಿಕಾರಿ....
***************

ಪ್ರಿಯ ಕ್ರಾಂತಿಕಾರಿ,

ಅವರೆಲ್ಲ ಏ.ಸಿ. ಕೋಣೆಗಳಲ್ಲಿ ಕುಳಿತು ಕ್ರಾಂತಿ ನಾಳೆ, ನಾಳಿದ್ದು, ಆಚೆ ನಾಳಿದ್ದು ಬರುತ್ತೆ ಎಂದು ಲೆಕ್ಕಾಚಾರ ಹಾಕುವ ಜನ. ಅವರಿಂದ ಮಾಡಲಿಕ್ಕೆ ಆಗದ್ದು ಏನೋ ನೀನು ಮಾಡ್ತಿ ಅಂತ ಕಾದಿದ್ದಾರೆ. ನೀನು ಕೂಡಲೇ ಏನೋ ಮಾಡ್ಲಿಲ್ಲ ಅಂದ್ರೆ ನಿನ್ನ ಪಕ್ಕಕ್ಕೆಸೆದು ಹೊಸ ಕ್ರಾಂತಿಕಾರಿಯನ್ನು ಹುಟ್ಟಿಸ್ತಾರೆ. ತಾಳ್ಮೆಯಿಂದ ಕುಳಿತು ಯೋಚಿಸಿ ಮುಂದೇನು ಮಾಡಬೇಕು ಅಂತ ನಿರ್ಧರಿಸು.  ಓದು ಮುಗಿಸಿ ಕೆಲಸ ಹುಡುಕಿಕೊಂಡು ಎಲ್ಲರಂತೆ ಬದುಕುವ ಹಕ್ಕು ನಿನಗೂ ಇದೆ. ಅವರು ಗೀರಿದ್ದಕ್ಕೆಲ್ಲ ನೀನು ಹತ್ತಿಕೊಳ್ಳಲೇಬೇಕು ಅಂತ ಏನಿಲ್ಲ.
-ಇಂತಿ ನಿನ್ನ ವಿಶ್ವಾಸಿ.
**********************************************


ಪ್ರವಾಸ
*******

ನಾವು ಒಮ್ಮೆ ಶಾಲೆಯಿಂದ ಒಂದು ದಿನದ ಪ್ರವಾಸ ಹೋಗಿದ್ದೆವು. ಒಂದು ಜಲಪಾತ, ಬಳಿಕ ದೇವಸ್ಥಾನ, ಅಲ್ಲಿಂದ ಒಂದು ಬೌದ್ಧ ದೇವಾಲಯ, ಅದನ್ನು ಮುಗಿಸಿ ಸಂಜೆ ಕಾಡಿನಲ್ಲಿ ಸಫಾರಿ - ಇದಿತ್ತು ಪ್ಲಾನ್.

ಪ್ರವಾಸದ ಹೊಣೆ ವಹಿಸಿಕೊಂಡಿದ್ದ ನಮ್ಮ ಮೇಷ್ಟ್ರು ಜಲಪಾತದ ಬಳಿ ನಾವು ಆಡುತ್ತಿರಬೇಕಾದರೆ, 'ದೇವಸ್ಥಾನಕ್ಕೆ ತಡವಾಗುತ್ತೆ. ಬೇಗ ಬೇಗ ಬನ್ನಿ.', ಎಂದರು.

ದೇವಸ್ಥಾನದಲ್ಲಿ ತಣ್ಣಗೆ ಕುಳಿತಿರಬೇಕಾದರೆ, 'ಬೌದ್ಧ ದೇವಾಲಯಕ್ಕೆ ತಡವಾಗುತ್ತೆ. ಬೇಗ ಬೇಗ ಬನ್ನಿ.', ಎಂದರು.

ಬೌದ್ಧ ದೇವಾಲಯ ನಿಜಕ್ಕೂ ಚೆನ್ನಾಗಿತ್ತು. ಒಂದು ನಿಮಿಷ ಶಾಂತವಾಗಿ ಕುಳಿತಿರಬೇಕಾದರೆ, 'ಲೋ ಹುಡುಗ್ರಾ, ಸಫಾರಿಗೆ ತಡವಾಗುತ್ತೆ. ಬೇಗ ಬೇಗ ಬನ್ನಿ. ', ಎಂದು ಅಲ್ಲಿಂದ ಹೊರಡಿಸಿದರು.

ಸಫಾರಿಯಲ್ಲಿ ಮಣ್ಣೂ ಕಾಣ ಸಿಗಲಿಲ್ಲ. ಅಲ್ಲದೆ ಮನೆಗೆ ತಲುಪುವುದು ತಡವಾಗುತ್ತದೆ ಎಂದು ಬೇಗ ಬೇಗ ಹೊರಟೆವು.ಒಟ್ಟಿನಲ್ಲಿ ಪ್ರವಾಸದ ಉದ್ದೇಶ ಮುಂದಿನ ಗಮ್ಯಕ್ಕೆ ಬೇಗ ಬೇಗ ತಲುಪುವುದು ಎಂಬ ಪಾಠವನ್ನು ಆ ಮೇಷ್ಟ್ರು ನಮಗೆ ಕಲಿಸಿದರು. ಬೇಗನೆ ಮನೆ ತಲುಪಿ ಬೇಗನೆ ಮಲಗಿದೆವು. ಮರುದಿನ ಬೇಗನೆ ಎದ್ದು ಬೇಗನೆ ಶಾಲೆಗೆ ತಲುಪುವುದಿತ್ತು ನೋಡಿ....

**********************************************
ಫೇಸ್ಬುಕ್ ಚಾತುರ್ಯ
****************
ವಿಷಯ : ಜ್ವರ ಬಂದು ಬಸವಳಿದ ಅವನು ಈಗಷ್ಟೇ ಸುಧಾರಿಸಿಕೊಂಡಿದ್ದಾನೆ.

ಈ ಸಾಧಾರಣ ವಿಷಯವನ್ನು ನಾಲ್ಕು ಜನರು ಲೈಕ್ ಮಾಡುವಂತೆ ದಾಟಿಸುವ ರೀತಿ : ಜ್ವರ ಬಂದು ವಾರಗಟ್ಟಲೆ ಮನೆಯೊಳಗೇ ಇದ್ದೆ. ಈಗಷ್ಟೇ ಮನೆಯ ಬಾಗಿಲು ತೆಗೆದು ಹೊರ ಬಂದು ತಾಯ ಗರ್ಭದಿಂದ ಹೊರ ಬಂದ ಹಸುಗೂಸಿನಂತೆ ಕಣ್ಣು ತೆರೆಯುತ್ತಿದ್ದೇನೆ.

Disclaimer : ಹೋಲಿಕೆಗಳು ಕಾಕತಾಳೀಯ.

*********************************************


ಆಧುನಿಕ ಬದುಕಿನ ಕೆಲವು ಹೊಸ  definitions
************************************

ಮನೆ:ಆಫೀಸು ಮುಗಿಸಿದ ಬಳಿಕ ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳ. ಸಾಲ ಮಾಡಿಕೊಂಡು ವರ್ಷಗಳ ಕಾಲ emi ಕಟ್ಟಲು ಮತ್ತು ಸದಾ ಕಾಲ ಹೆಚ್ಚು ಸಂಬಳದ ಉದ್ಯೋಗದ ಅನ್ವೇಷಣೆಯಲ್ಲಿರಲು ಕಾರಣವಾಗುವ ಐದಾರು ಕೋಣೆಗಳಿರುವ ಒಂದು ಕಟ್ಟಡ.

ಕಾರು: ಬೈಕಿನಲ್ಲಿರುವವರನ್ನು ಬಯ್ದುಕೊಳ್ಳಲು ಉಪಯೋಗಿಸುವ ಒಂದು ವಾಹನ. ಮನೆಯ ಮುಂದೆ ನಿಲ್ಲಿಸಿರುವಾಗ ಗರ್ವವನ್ನೂ, ಟ್ರಾಫಿಕ್ಕಿನಲ್ಲಿ ಸಿಲುಕಿಕೊಂಡು ಒದ್ದಾಡುವಾಗ ರೇಜಿಗೆಯನ್ನೂ ಹುಟ್ಟಿಸುವ ಒಂದು ಯಂತ್ರ.

ರೆಫ್ರಿಜರೇಟರ್: ತಿಂಗಳ ಶುರುವಿನಲ್ಲಿ ಭರ್ತಿಯಾಗಿ ತಿಂಗಳ ಅರ್ಧದಷ್ಟರಲ್ಲಿ ಖಾಲಿಯಾಗುವ ಪೆಟ್ಟಿಗೆ. ಮಿಕ್ಕಿದ ಆಹಾರವನ್ನು ನಾಯಿಗಳಿಗೆ ಅಥವಾ ಯಾವುದೇ ಸಾಕುಪ್ರಾಣಿಗಳಿಗೆ ಹಾಕಲು ಸಾಧ್ಯವಾಗದೆ ಇದ್ದಾಗ ಅದನ್ನೆಲ್ಲ ಶೇಖರಿಸಿಟ್ಟು ಒಂದು ವಾರದ ಬಳಿಕ ಶಾಪ ಹಾಕುತ್ತಾ ಶುದ್ಧ ಮಾಡಬಹುದಾದ ಒಂದು ಯಂತ್ರ.

ಡಿಯೋಡರೆಂಟ್: ನಿಮ್ಮ ಬೆವರಿನಿಂದ ನಿಮ್ಮ ದೇಹದ ವಾಸನೆಯನ್ನು ತೆಗೆದು, ಬೇರೆ ಯಾರದೋ ದೇಹದ ವಾಸನೆಯನ್ನು ಕೊಡುವುದರ ಮೂಲಕ ನಿಮಗೆ ಗಂಡಸುತನವನ್ನು ದಯಪಾಲಿಸುವ ದ್ರವ್ಯ.

ಸ್ನೇಹಿತ: ಫೇಸ್ಬುಕ್ಕಿನಲ್ಲಿ ಹೊಸ ಫೋಟೋ ಹಾಕಿದ ಕೂಡಲೇ ಲೈಕಿಸುವವ.

ಬೆಟ್ಟ,  ಗುಡ್ಡ, ಜಲಪಾತ, ಸಮುದ್ರ ಇತ್ಯಾದಿ: ನಗರಗಳ ಜನರು ಕುಂದುತ್ತಿರುವ ತಮ್ಮ ಜೀವನೋತ್ಸಾಹಕ್ಕೆ ಸ್ವಲ್ಪ ತೈಲ ಸುರಿಯಲು ಹೋಗುವ ಸ್ಥಳ. ತಮ್ಮ ಆಫೀಸುಗಳ ಹೊರತಾಗಿಯೂ ಒಂದು ಪ್ರಪಂಚವಿದೆ ಎಂಬ ಜ್ಞಾನವನ್ನು ಸಂಪಾದಿಸಿ, ಮತ್ತೆ ಹೆಚ್ಚಿನ ಸಂಬಳದ ಕೆಲಸಗಳಿಗೆ ಮರಳಿ ಜೀವ ತೇಯುವುದಕ್ಕೆ ಬೇಕಾದ ಶಕ್ತಿಯನ್ನು ಇಲ್ಲಿಂದ ಪಡೆಯುತ್ತಾರೆ. 'Nature, wow!' ಎಂಬ ಉದ್ಗಾರಕ್ಕೂ ಕಾರಣವಾಗುವ ಸ್ಥಳಗಳು.

ಬದುಕು: ಕೆಲಸದ ಒತ್ತಡದ ನಡುವೆ ಸಮತೋಲನ ಕಂಡುಕೊಳ್ಳಬೇಕಾದ ಒಂದು ವಿಷಯ. ಕೆಲಸ ಮುಗಿಸಿ ರಾತ್ರಿ ಮನೆಗೆ ತಲುಪಿದ ಬಳಿಕ ಮಲಗಿ ನಿದ್ರಿಸುತ್ತಿರುವ ನಿಮ್ಮ ಕಂದಮ್ಮನನ್ನು ಐದು ನಿಮಿಷ ದಿಟ್ಟಿಸಿ ಕೊನೆಗೊಂದು ನಿಟ್ಟುಸಿರು ಬಿಟ್ಟಾಗ 'ಅದೇ ಇಲ್ಲ ನನ್ನ ಬದುಕಿನಲ್ಲಿ' ಎಂದುಕೊಳ್ಳುತ್ತೀರಲ್ಲ, ಆ ಅದನ್ನೇ ಬದುಕು ಎನ್ನುತ್ತಾರೆ.
**********************************************

ಸ್ವಲ್ಪ ಫಿಲಾಸಫಿ
***********
ತುಂಬ ಹಿಂದೆ ಎಲ್ಲೋ ಓದಿದ್ದು : ಒಬ್ಬರು ಕೆಮಿಸ್ಟ್ರಿ ಲೆಕ್ಚರರ್ ತುಂಬ ಕುಳ್ಳಗೆ ಇದ್ದರು. ತಮ್ಮ ಎತ್ತರದ ಬಗ್ಗೆ ಅವರಿಗೆ ಕೀಳರಿಮೆ ಇತ್ತು. ಒಮ್ಮೆ ಅವರ ಲ್ಯಾಬ್ ನಲ್ಲಿ ಯಾರೋ ಇಟ್ಟಿಗೆಗಳನ್ನು ಜೋಡಿಸಿ ಇಟ್ಟಿದ್ದರು.  ತಾವು ಕುಳ್ಳಗೆ ಇರುವುದರಿಂದ ತಾವು ಇಟ್ಟಿಗೆಗಳ ಮೇಲೆ ನಿಂತುಕೊಂಡು ಪಾಠ ಮಾಡಬೇಕು ಎಂಬುದನ್ನು ಸೂಚಿಸಲೇ  ಯಾರೋ ಕಿಡಿಗೇಡಿ ವಿದ್ಯಾರ್ಥಿಗಳು ಮಾಡಿದ ಕೆಲಸ ಇದು ಎಂದು  ಲೆಕ್ಚರರ್ ಕೆಂಡವಾದರು.

ಮುಂದೆ ಆ ಕಥೆಯಲ್ಲಿ ಏನಾಯಿತು ಎಂಬುದು ನನಗೆ ನೆನಪಿಲ್ಲ. ಆದರೆ ಅದನ್ನು ಓದಿದಾಗ ನನಗೆ ಅನ್ನಿಸಿದ್ದೆಲ್ಲ ಇನ್ನೂ ನೆನಪಿದೆ... ಅಸಲಿಗೆ ಅವರನ್ನು ಕಿಚಾಯಿಸಲು ಇಟ್ಟಿದ್ದರೋ ಅಥವಾ ಬೇರೆ ಯಾವುದೋ ಕಾರಣಕ್ಕೆ ಇಡ್ಟಿದ್ದರೋ ಗೊತ್ತಿಲ್ಲ, ಆದರೆ ಅವರ ಕೀಳರಿಮೆ ಅವರ ತಲೆಯಲ್ಲಿ ಸದಾ ಕುಣಿಯುತ್ತಿದ್ದ ಕಾರಣ ಅವರು ಆ ಸನ್ನಿವೇಶಕ್ಕೆ ತಮ್ಮದೇ ಬಣ್ಣ ಬಳಿದರು. ನಾವೆಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ನಮ್ಮ ಬದುಕಿನಲ್ಲಿ ಇಂಥ 'ಇಟ್ಟಿಗೆ'ಗಳನ್ನು  ನೋಡಿ ಯಾರೋ ನಮಗೆ ತೊಂದರೆ ಕೊಡಲೇ ಇಟ್ಟಿದ್ದಾರೆ ಎಂದು ಭಯಂಕರ ಸಿಟ್ಟು, ದ್ವೇಷ, ಕಹಿಯನ್ನೆಲ್ಲ ಬೆಳೆಸಿಕೊಂಡಿರುತ್ತೇವೆ. ಆಪಾದನೆಗೆ ಯಾರೂ ಸಿಗದಿದ್ದರೆ ಕೊನೆಗೆ 'ದೇವರು ಮೋಸ ಮಾಡಿದ' ಎನ್ನುತ್ತೇವೆ. ಸನ್ನಿವೇಶಗಳನ್ನು ಯಾರೋ ನಮಗೆ ಕಷ್ಟ ಕೊಡಲೆಂದೆ ರೂಪಿಸುತ್ತಿದ್ದಾರೆ ಎಂಬ ಸಿಟ್ಟನ್ನು ಇಟ್ಟುಕೊಳ್ಳುತ್ತೇವೆ.

ಯಾರೋ ಇಟ್ಟ ಇಟ್ಟಿಗೆಗಳು ನನಗೆ ಯಾಕೆ ತಲೆ ಕೆಡಿಸಬೇಕು ಎಂಬುದು ಪ್ರಶ್ನೆ. ನಿಜವಾದ ಯುದ್ಧ ಇಟ್ಟಿಗೆಗಳನ್ನು ಇಟ್ಟವನ ಮೇಲಲ್ಲ, ಇಟ್ಟಿಗೆಗಳು ನನ್ನ ಮನಸಿನಲ್ಲಿ ಹುಟ್ಟಿಸುತ್ತಿರುವ ಭಾವನೆಗಳ ಮೇಲೆ. ಸಮಸ್ಯೆ ಸನ್ನಿವೇಶದಲ್ಲಿಲ್ಲ, ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿಯಲ್ಲಿದೆ - ಇದು  cliche ಅನಿಸಿದರೂ ಆ ಮಾತು ಹುಟ್ಟಿಸುವ ಮಾಮೂಲಿ ಅರ್ಥವನ್ನು ಸರಿಸಿ ನೋಡಿದರೆ ಆ ಮಾತು ನಿಜವೆನಿಸುತ್ತದೆ. ಎಲ್ಲವೂ ಅದರ ಪಾಡಿಗೆ ನಡೆಯುತ್ತಿದೆ, ನಾವೇ ಅದನ್ನೆಲ್ಲ ನಮ್ಮ ಮೂಗಿನ ನೇರಕ್ಕೆ ನೋಡಿ, 'ಇದೆಲ್ಲ ಬೇಕೆಂದೇ ನನ್ನ ವಿರುದ್ಧ ನಡೆಯುತ್ತಿದೆ. ಇಡೀ ವ್ಯವಸ್ಥೆಯೇ ನನ್ನನ್ನು ನುಂಗಲು ಹೊಂಚುತ್ತಿದೆ. ನಾನೇ ಏಕೆ! Why me!', ಎಂದೆಲ್ಲ ಯಾರೋ ಇಟ್ಟ ಇಟ್ಟಿಗೆಗಳಿಗೆ ಪ್ರತಿಕ್ರಿಯಿಸುತ್ತೇವೆ.

'ಭುಜಂಗಯ್ಯನ ದಶಾವತಾರ' ಸಿನಿಮಾದಲ್ಲಿ ಭುಜಂಗಯ್ಯ ಇದೆಲ್ಲ ದೇವರೇ ಮಾಡುತ್ತಿರುವ ಕೆಲಸವೆಂದು ಆಗಾಗ ದೇವರಿಗೆ, 'ಲೋ ನೀನಿದ್ದೀಯಲ್ಲ!', ಎಂದು ದೇವರನ್ನು ಬಯ್ದುಕೊಳ್ಳುತ್ತಾನೆ. ದೇವರ ಜೊತೆ ನೇರ ಸಂವಾದ, ಅವನು ಬೇರೆ ಯಾರನ್ನೂ ದೂಷಿಸುವುದಿಲ್ಲ. 'ಲೋ ದೇವರೇ, ಯಾಕೆ ಹೀಗೆ ಮಾಡಿದೆ?', ಎಂದೂ ಕೇಳುವುದಿಲ್ಲ. 'ದೇವರೇ, ನೀನು ಭಲೇ ಕಿಲಾಡಿ', ಎಂಬುದಷ್ಟೇ ಅವನ ಪ್ರತಿಕ್ರಿಯೆ. ತನ್ನ ಸನ್ನಿವೇಶದಲ್ಲೊಂದು ವಿಡಂಬನೆ, ವಿಚಿತ್ರ ವ್ಯಂಗ್ಯ, ಅರ್ಥಹೀನತೆ ಎಲ್ಲವೂ ಇದೆ ಎಂಬುದನ್ನು ಅವನು ಅರ್ಥ ಮಾಡಿಕೊಂಡಿದ್ದಾನೇನೊ ಅನಿಸುತ್ತದೆ.

ಅಂದ ಮಾತ್ರಕ್ಕೆ, 'ಇದೆಲ್ಲ ಅದರ ಪಾಡಿಗೆ ನಡೆಯುತ್ತಿದೆ, ನನ್ನ ಪಾಲು ಏನೂ ಇಲ್ಲ.', ಎಂದು ಕೈ ಚೆಲ್ಲಿ ಕೂರಬೇಕಿಲ್ಲ. 'ಬಹುಷಃ ನಾನಂದುಕೊಂಡಂತೆ ನಡೆಯಲಿಕ್ಕಿಲ್ಲ, ಆದರೂ ಒಂದು ಕೈ ನೋಡಿಯೇ ಬಿಡೋಣ.', ಎಂಬ ಭಾವನೆಯಿಂದ ಈ ವೈಚಿತ್ರ್ಯಗಳ ಮಜಾ ತೆಗೆದುಕೊಳ್ಳುತ್ತ, ಇಟ್ಟಿಗೆಗಳನ್ನು ಪಕ್ಕಕ್ಕಿಡುತ್ತಲೋ, ಮೆಟ್ಟಿಲುಗಳೋ ವೇದಿಕೆಗಳೋ ಏನು ಬೇಕೋ ಅದನ್ನಾಗಿ ಮಾಡಿಕೊಳ್ಳುತ್ತ ಮುಂದೆ ನಡೆಯಬಹುದು. ಬೇಕಿದ್ದರೆ, 'ಲೋ ನೀನಿದ್ದೀಯಲ್ಲ...', ಎಂದು ಕಾಣದ ಕೈಯ ಜೊತೆ ಒಂದು ಸಂವಾದವನ್ನೂ ನಡೆಸಬಹುದು - ಎಂಬಲ್ಲಿಗೆ ನನ್ನ ಫಿಲಾಸಾಫಿಕಲ್ ಆಲಾಪವನ್ನು ನಿಲ್ಲಿಸುತ್ತೇನೆ.
**********************************************

ಹುಡುಕಾಟ
********
ಇಲ್ಲೊಬ್ಬ ಬೆಂಗಳೂರು ಸುಸ್ತಾಗಿ ಒಂದಿಷ್ಟು ದಿನ ಹಸಿರಿನ ಮಡಿಲಲ್ಲಿ ಇದ್ದು ಬರೋಣವೆಂದು ಹುಡುಕಾಡಿ ಬೆಟ್ಟಗಳಿಂದ ಸುತ್ತುವರೆದಿರುವ ಹಳ್ಳಿಯೊಂದಕ್ಕೆ ಬಸ್ಸು ಹತ್ತಿದ.

ಅಲ್ಲೊಬ್ಬ ಅದೇ ಹಳ್ಳಿ, ಅದೇ ಬೆಟ್ಟ, ಅದೇ ಜಲಪಾತ ಬೋರು ಬಂದು ಒಂದು ಸ್ವಲ್ಪ ಸಮಯ ಪಟ್ಟಣದಲ್ಲಿ ಸುತ್ತಾಡಿ ಬರೋಣವೆಂದು ಬೆಂಗಳೂರಿಗೆ ಬಸ್ಸು ಹತ್ತಿದ.

ಸಂತೋಷವನ್ನು ಅಲ್ಲಿನವನು ಇಲ್ಲಿ, ಇಲ್ಲಿನವನು ಅಲ್ಲಿ ಊಹಿಸಿಕೊಂಡು ಹುಡುಕಾಡಿದರು.
**********************************************

'ವಾಕ್' ಪ್ರವಾಹ
************

೧. 'ನಾನು ಬೇಕು ಅನ್ಸಿದ್ರೆ ವಾಕ್ ಹೋಗ್ತೀನಿ. ಬೇಡ ಅನ್ಸಿದ್ರೆ ಕಂಬಳಿ ಹೊದ್ದು ಮಲಗ್ತೀನಿ. ನನ್ನಿಷ್ಟ.'

ಇದನ್ನೇ ನೋಡಿ ವಾಕ್ ಸ್ವಾತಂತ್ರ್ಯ ಅನ್ನೋದು :-D

೨. ಬಹಳ ಸಮಯದ ನಂತರ ಇಂದು ಮುಂಜಾನೆ ವಾಕ್ ಹೋಗಿದ್ದೆ. ಪಾರ್ಕಿನಲ್ಲಿ ಹಿಂದೆ ಕಂಡು ಪರಿಚಯವಿರುವ ಮುಖಗಳೇ ಇದ್ದವು. ಪ್ರಪಂಚ ಏನೂ ಬದಲಾಗಿಲ್ಲ, ಸದ್ಯ ಅನ್ನಿಸಿತು. ಜಾಗಿಂಗ್ ಮುಗಿಸಿದ ಬಳಿಕ ಓಂಕಾರ ಕೂಗುವವನೊಬ್ಬ ಇದ್ದಾನೆ. ಅವನು ಇವತ್ತೂ ಓಂಕಾರ ಕೂಗಿದ. ನಡೆಯುವುದಕ್ಕಿಂತ ನಿಧಾನವಾಗಿ ಜಾಗ್ ಮಾಡುವವಳೊಬ್ಬಳು ಇದ್ದಾಳೆ. ಇವತ್ತೂ ಅವಳ ವೇಗ ಅಷ್ಟೇ ಇತ್ತು.

ಎಲ್ಲಕ್ಕಿಂತ ಮುಖ್ಯವಾಗಿ ನಾನು ತಿಂಗಳುಗಳ ಬಳಿಕ ಹೋಗುತ್ತಿದ್ದರೂ ಈ ವಾಕು, ಜಾಗಿಂಗು ಮಾಡುತ್ತಿರುವ ಮಂದಿ ಅಷ್ಟೇ ದಪ್ಪಗಿದ್ದಾರೆ, ಯಾರೂ ವಿಸ್ಮಯ ಎನ್ನಿಸುವಷ್ಟು ಸಣ್ಣಗಾಗಿಲ್ಲ. ಎಂಥ ಸಮಾಧಾನ ಗೊತ್ತಾ ಅದು?! :-D

೩. ಪಾರ್ಕ್ ಗಳಲ್ಲಿ ನಡೆಯುವವರು ತುಂಬ ಜನರಿರುತ್ತಾರೆ. ಕೆಲವರು ವೇಗವಾಗಿ ನಡೆಯುತ್ತಾರೆ. ಕೆಲವರು ತುಂಬ ನಿಧಾನ. ನೀವು ನಡೆಯುತ್ತಿರುವಾಗ ಮುಂದಿರುವವರ ವೇಗವನ್ನು ದೂರದಿಂದಲೇ ಗ್ರಹಿಸಿ, ನಿಮ್ಮ ವೇಗ ತಗ್ಗಿಸದೆ ಅವರನ್ನು overtake ಮಾಡುವುದೂ ಒಂದು ವಿದ್ಯೆ. ಇದೇ  ಕಾರಣಕ್ಕೆ ಎಲ್ಲರು ಪ್ರದಕ್ಷಿಣಾಕಾರದಲ್ಲಿ ನಡೆದರೆ ಕೆಲವರು ಬುದ್ಧಿವಂತರು ಅಪ್ರದಕ್ಷಿಣಾಕಾರದಲ್ಲಿ ನಡೆಯುತ್ತಾರೆ, ಹಾಗೆ ನಡೆದರೆ ಈ ದಾರಿ ಮಾಡಿಕೊಂಡು overtake ಮಾಡುವ ತಲೆಬಿಸಿ ಇರೋಲ್ಲ. ಆಹಾ ಬುದ್ಧಿವಂತಿಕೆಯೇ! ಇದನ್ನೇ 'ವಾಕ್ ಚಾತುರ್ಯ' ಎಂದು ನಮ್ಮ ಹಿರಿಯರು ಕರೆದದ್ದು.

೪. ಅವನು ಪ್ರತಿದಿನವೂ walk ಹೋಗುವುದಾಗಿ ಹೊಸ ವರ್ಷದ ದಿನ ಪ್ರತಿಜ್ಞೆ ತೆಗೆದುಕೊಂಡ. ಈಗ ಒಂದು ವಾರ ಅದನ್ನು ಪಾಲಿಸಿದ್ದಾನೆ. ನುಡಿದಂತೆ 'ನಡೆ'ಯುತ್ತಿದ್ದಾನೆ, ಜಾಣಮರಿ. :D

೫. ಆ ಪಾರ್ಕಿನಲ್ಲಿ ಒಂದು ಪುಟ್ಟ ದೇವರ ವಿಗ್ರಹವಿದೆ. ನಡೆಯುತ್ತಲೇ ಅವನು ದೇವರಲ್ಲಿ ತನ್ನ ಕಷ್ಟಗಳನ್ನು ಹೇಳಿಕೊಂಡು ದೇವರನ್ನು ಪ್ರಾರ್ಥಿಸುತ್ತಾನೆ. ವಾಕ್ ಮಾಡುತ್ತಾ ದೇವರಲ್ಲಿ 'ಅರಿಕೆ' ಮಾಡಿಕೊಳ್ಳವುದರಿಂದ, ಈ ಪ್ರಾರ್ಥನೆಯನ್ನು ವಾಕರಿಕೆ ಎನ್ನಬಹುದು?
**********************************************

ರಸ್ತೆಬದಿಯ ಚಿತ್ರಗಳು
****************
ಕರ್ಕಶ ಹಾರ್ನಿನ ಸ್ಕೂಟಿ ಬಳುಕುತ್ತಾ, ನರ್ತಿಸುತ್ತಾ ಕಾರುಗಳ ನಡುವೆ ಹಾದು ಹೋಯಿತು...
ಬ್ಯೂಟಿ ಪಾರ್ಲರಿನಿಂದ ಹೊರ ಬಂದ ಹೆಂಗಸು ಕಾಯುತ್ತ ನಿಂತಿದ್ದ ತನ್ನ ಗಂಡನ ತೋಳನ್ನು ಕೇಳಿ ಕೇಳಿ ಹಿಡಿದುಕೊಂಡು ರಸ್ತೆ ದಾಟಿದಳು...
ಯಾವುದೋ ಅಂಗಡಿಯ ಮೆಟ್ಟಿಲುಗಳಲ್ಲಿ ಕುಳಿತ ಪೋರ-ಪೋರಿ ಸಾರ್ವಜನಿಕವಾಗಿ ದೊರೆತ ಖಾಸಗಿ ಕ್ಷಣಗಳನ್ನು ತಡಮಾಡದೆ ಚಕಚಕನೆ ಸೆಲ್ಫಿಗಳಲ್ಲಿ ಕಾಪಾಡಿಕೊಂಡರು....

ಅತ್ತ ಎ.ಟಿ.ಎಮ್. ವಾಚ್ಮನ್ ಕಾಲು ಕೆರೆದುಕೊಳ್ಳುತ್ತ ತನ್ನ ಕ್ಷಣಿಕ ಗೆಳೆಯನ ಜೊತೆ ಹರಟೆಯಲ್ಲಿ ತೊಡಗಿರಲು,
ಗೆಳೆಯನು ಒಮ್ಮೆ ಮೀಸೆ ಸವರುತ್ತಾ, ಒಮ್ಮೆ ಮೂಗು 'ತೋಡುತ್ತಾ' ವಾಚ್ಮನ್ನನ ಮಾತಿಗೆ ಕಿವಿಯಾಗಿದ್ದಾನೆ...

ಸೆರಗಿನ ತುದಿಗೆ ಗಂಟು ಹಾಕಿದ ಬೀಗದ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಬಿರಬಿರನೆ ನಡೆದ ಅಜ್ಜಿಗೆ, ಬದುಕಿನಲ್ಲಿ ನಿಧಾನ ಕಲಿಸಲು ಪಕ್ಕದಲ್ಲಿ ಕೈ ಎಳೆದು ಪ್ರಶ್ನೆ ಕೇಳುವ ಮೊಮ್ಮಗುವೊಂದಿರಬೇಕಿತ್ತು....

ಪಾನಿ ಪೂರಿಯವನ ವ್ಯಾಪಾರ ಎಂದಿನಂತೆ ಜೋರಿದೆ... ತನ್ನ ಬಾಯಿ ಇಷ್ಟಗಲವಿದೆ ಎಂಬುದು ಈಗಷ್ಟೇ ಅರಿವಾದಂತೆ ಕಾಣುವವನೊಬ್ಬ ಪೂರಿಯನ್ನು ನುಂಗಿ ನಸು ನಕ್ಕ...

ಪೋರ-ಪೋರಿ ಇನ್ನೂ ಸೆಲ್ಫಿಗಳಲ್ಲೇ ಮುಳುಗಿದ್ದಾರಲ್ಲ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಕರ್ಕಶ ಹಾರ್ನಿನ ಸ್ಕೂಟಿ ಕಾರುಗಳ ನಡುವೆ ತನ್ನ ಬಡನಡುವನ್ನು ಬಳುಕಿಸುತ್ತಾ ಬಿಂಕದಿಂದ ಸಾಗಿತು...
**********************************************


ಸೂಪರ್
******

ಉಪೇಂದ್ರರ 'ಸೂಪರ್' ನನ್ನ ಇಷ್ಟದ ಸಿನಿಮಾ. ಬರಿ ಅಷ್ಟೇ ಹೇಳಿದರೆ, 'ಹೌದು' ಎಂದೋ, 'ಅಂಥದ್ದೇನೂ ಇಲ್ಲ ಅದರಲ್ಲಿ.', ಎಂದೋ ಹೇಳಿ ಬಿಡುತ್ತೀರಿ. ಹಾಗಾಗಿ ಪ್ರತಿ ಸಲ ನೋಡಿದಾಗಲೂ ಮಜ ಕೊಡುವ ಕೆಲವು ವಿಷಯಗಳನ್ನು ಪಟ್ಟಿ ಮಾಡುತ್ತೇನೆ.

ಬಡ ಮೇಷ್ಟ್ರು ಪೆನ್ಷನ್ ಗಾಗಿ ಅಲೆದಾಡಿ ಸುಸ್ತಾಗಿದ್ದಾರೆ. ಮುನ್ನಾ ಭಾಯಿಯ ಗಾಂಧಿಗಿರಿ ಉಪಯೋಗಕ್ಕೆ ಬಂದಿರುವುದಿಲ್ಲ. ನಾಯಕ ಮೇಷ್ಟ್ರಿಗೆ ಉಪಕಾರ ಮಾಡಲು ಹೋಗಿ ಸರ್ಕಾರಿ ಕಛೇರಿಯಲ್ಲಿ ಹೊಡೆದಾಡುತ್ತಾನೆ. ಪೊಲೀಸರು ಅವನ ಹಿಂದೆ ಬೀಳುತ್ತಾರೆ. ಮೇಷ್ಟ್ರನ್ನೂ ಬಂಧಿಸಲಾಗುತ್ತದೆ. ನಾಯಕನಿಗೆ ಜೈಲು ಶಿಕ್ಷೆ ಘೋಷಿಸುವ ನ್ಯಾಯಾಲಯ ಮೇಷ್ಟ್ರಿಗೆ ಕೊಡುವ ಶಿಕ್ಷೆ - ೨೦೦ ಚಿಲ್ಲರೆ ರೂಪಾಯಿ ದಂಡ. ಅದೇ ಅವರ ಪೆನ್ಷನ್ ಮೊತ್ತ!

ಇನ್ನೊಂದು scene ನಲ್ಲಿ ನಾಯಕ ಪೊಲೀಸರಿಂದ ತಪ್ಪಿಸಿಕೊಂಡು ಮೇಷ್ಟ್ರ ಮನೆಗೆ ಬಂದರೆ ಅಲ್ಲಿ ರೌಡಿಗಳು ರಾದ್ಧಾಂತ ಮಾಡಿರುತ್ತಾರೆ. ಮೇಷ್ಟ್ರು ನಾಯಕನ ಕೈಗೆ ಲಾಂಗ್ ಕೊಟ್ಟು, 'ತೆಗೋ ಇದನ್ನ. ಎಲ್ಲಾರ್ನು ಹೊಡೆದು ಹಾಕು. ಇಡೀ ಸಿಸ್ಟಮ್ ನ ಸರಿ ಮಾಡು.', ಎಂದು ಶುರು ಮಾಡುತ್ತಾರೆ. 'ಓಹೋ ಇದು ಲಾಂಗು, ಮಚ್ಚು ಸಿನಿಮಾಗಳ ದಾರಿ ಹಿಡೀತಿದೆ.' ಅನಿಸುವಷ್ಟರಲ್ಲಿ ಮೇಷ್ಟ್ರು, 'ಅವರ್ನೆಲ್ಲ ಹೊಡೆದಾದ ಮೇಲೆ ನಮ್ಮ ಮನೆಯವರ್ನೆಲ್ಲ ಸಾಯ್ಸು.', ಎನ್ನುವಾಗ ನಾಯಕ ಕುಸಿದು ಅಸಹಾಯಕನಾಗಿ ಕೈ ಚೆಲ್ಲಿ ಕೂರುತ್ತಾನೆ. ಸಿನಿಮಾಗಳಲ್ಲಿ ತೋರಿಸುವ ತೋಳ್ಬಲದಿಂದ ನ್ಯಾಯ ದಕ್ಕಿಸಿಕೊಳ್ಳುವ ಕಥೆಗಳೆಲ್ಲ ಟೊಳ್ಳು, ವಾಸ್ತವಕ್ಕೆ ಅದರಿಂದ ಪ್ರಯೋಜನವಿಲ್ಲ ಎಂಬುದು ಈ ದೃಶ್ಯದ ಮರ್ಮ ಎಂದು ನನ್ನ ಭಾವನೆ.

ಇದೇ ದೃಶ್ಯದಲ್ಲಿ ಮುಂದುವರೆದು ನಾಯಕನ ಅಪ್ಪ ಬಂದು ನಾಯಕನನ್ನು ಹೀಯಾಳಿಸುತ್ತಾನೆ. ಆಗ ನಾಯಕ ತಿರುಗಿ ಬಿದ್ದು ಭಾರತೀಯರ ದೌರ್ಬಲ್ಯಗಳನ್ನೇ ದೊಡ್ಡ ಗುಣಗಳು ಎಂಬಂತೆ ಬಿಂಬಿಸಿ ಭಾಷಣ ಬಿಗಿಯುತ್ತಾನೆ. ಅಲ್ಲಿ ಸುತ್ತ ನೆರೆದ ಜನ ಇವನು ತಮ್ಮನ್ನು ಬಯ್ಯುತ್ತಿದ್ದಾನೆ ಎಂಬುದೂ ಗೊತ್ತಿಲ್ಲದೆ ಚಪ್ಪಾಳೆ ಹೊಡೆಯುತ್ತಾರೆ. ಪ್ರತಿ ಸಲ ನೋಡಿದಾಗಲೂ ಈ ದೃಶ್ಯದ ವ್ಯಂಗ್ಯ ಚುಚ್ಚುತ್ತದೆ.

ಇನ್ನೊಂದು sensation ನ ಹುಚ್ಚು ಹಿಡಿಸಿಕೊಂಡ ಪತ್ರಕರ್ತನ ಪಾತ್ರವಿದೆ. ಈ ಪಾತ್ರದ 'ನೆಗೆಟಿವ್' ಅನ್ನು ಮಾತ್ರ ತೋರಿಸುತ್ತಾರೆ. ಅವನು ಸದಾ ಉರಿಯುವ ಬೆಂಕಿ ಎಂಬ ಭಾವನೆ ಬರಿಸಲೋ ಏನೋ, ಗೊತ್ತಿಲ್ಲ. ಒಂದು ದೃಶ್ಯದಲ್ಲಿ ಅವನು ತನ್ನ ಲೇಖನಿಯನ್ನು ಝಳಪಿಸುತ್ತಿರುತ್ತಾನೆ. ಅದರ ನಿಬ್ಬು ಮೊಂಡಾಗಿರುತ್ತದೆ! ಅಷ್ಟು ಬರೆದಿದ್ದಾನೆ ಎಂಬ ಅರ್ಥವಿರಬಹುದು, ಅಥವಾ ಸುಮ್ಮನೆ ಝಳಪಿಸುತ್ತಾನೆ, ಬರೆಯುವುದಿಲ್ಲ ಎಂಬ ವ್ಯಂಗ್ಯವಿದ್ದರೂ ಇರಬಹುದು.

ಸದಾ ವರ್ಗಾವಣೆಗೆ ಸಿದ್ಧವಾಗಿರುವ ಒಂದು ಪೊಲೀಸ್ ಅಧಿಕಾರಿ, 'I am not for sale.', ಎಂಬ ರಿಂಗ್ ಟೋನ್ ಇಟ್ಟುಕೊಂಡಿರುತ್ತಾನೆ. ಕೊನೆಯಲ್ಲಿ ಅವನು ಹೇಳುವುದು - 'I am not for sale, because I am already sold!' :D

ಈ ಸಿನಿಮಾದಲ್ಲಿ ನಿಜಕ್ಕೂ ಇಷ್ಟು ವ್ಯಂಗ್ಯವಿದೆಯೋ ಅಥವಾ ನನ್ನ ತಲೆಯಲ್ಲಷ್ಟೇ ಹಾಗನ್ನಿಸುತ್ತದೋ ಎಂದೂ ಯೋಚಿಸುತ್ತೇನೆ. ಸಿನಿಮಾದ ಮೊದಲ ಅರ್ಧದಲ್ಲಿ ನಾಯಕ ಹುಚ್ಚು ದೇಶಪ್ರೇಮಿ. ಅವನ ಕಂಗಳು ಆಗಸದಲ್ಲೇ ಇರುತ್ತದೆ. ನಾಯಕಿ ಅವನಿಗೆ ಭಾರತದ ವಾಸ್ತವವನ್ನು ತೋರಿಸುತ್ತಾಳೆ. ಅವನ ಕನಸಿನ ಸುಸಂಸ್ಕೃತ ಭಾರತಕ್ಕೂ, ಇವತ್ತು ಕಾಡುತ್ತಿರುವ ಸಮಸ್ಯೆಗಳಿಂದ ಕಂಗೆಟ್ಟು ಕುಳಿತಿರುವ ಭಾರತಕ್ಕೂ ಅಜಗಜಾಂತರ. ಇದನ್ನು ಜೀರ್ಣಿಸಿಕೊಳ್ಳಲು ಅವನು ಹೆಣಗುವಾಗ, ಮೊದಲ ಅರ್ಧದಲ್ಲಿ ಅವನು ಎಷ್ಟು ಟೊಳ್ಳಾಗಿದ್ದ, ಅವನ ಆದರ್ಶಗಳ ಮಹಲಿನಲ್ಲಿ, ಗತವೈಭವಗಳ ಅಮಲಿನಲ್ಲಿ ಸುಖವಾಗಿದ್ದವ ವಾಸ್ತವಕ್ಕೆ ಧೊಪ್ಪನೆ ಬಿದ್ದಾಗ ನನಗೇನೋ ವಿಚಿತ್ರ ಮಜ ಬಂತು.

ಪ್ರತಿ ದೃಶ್ಯಕ್ಕೂ ಈ ರೀತಿ ಟಿಪ್ಪಣಿ ಮಾಡಿಕೊಂಡು ಹೋಗಬಹುದು. ಆದರೆ ನನ್ನ ತಲೆಯಲ್ಲಿ ಈ ಸಿನಿಮಾ ಎಷ್ಟು 'ಸೂಪರ್' ಆಗಿ ಕಾಣುತ್ತೆ ಅಂತ ಇಷ್ಟರಲ್ಲೇ ನಿಮಗೆ ಗೊತ್ತಾಗಿರಬಹುದು. ಹಾಗಾಗಿ, ಇಷ್ಟು ಸಾಕು. :-D
**********************************************

ನರಳಾಟ
*******
ಅವನು ಬಾಯಾರಿಕೆಯಿಂದ ನರಳುತ್ತಿದ್ದ. ಯಾರೂ ನೀರು ಕೊಡುವವರಿರಲಿಲ್ಲ. ಆಗೊಮ್ಮೆ ಈಗೊಮ್ಮೆ 'ಅಮ್ಮಾ, ದಾಹ' ಎಂದು ನರಳುತ್ತಿದ್ದ. ಯಾರೂ ಗಮನಿಸುವವರಿರಲಿಲ್ಲ.

ಒಂದು ದಿನ ಗುಂಪೊಂದು ಬಂದು, 'ನಮ್ಮ ರಾಜ ನಿಮ್ಮ ಹಳೆಯ ರಾಜನನ್ನು ಒದ್ದು ಓಡಿಸುತ್ತಾನೆ. ನಿನ್ನ ಬಾಯಾರಿಕೆ ಶಮನವಾಗಲಿದೆ.', ಎಂದರು. ಆಗಲೂ ಅವನು ನರಳುತ್ತಲೇ ಇದ್ದ. ಗುಂಪು ತಮ್ಮ ಮಾತು ಮುಗಿಸಿ ಮುಂದಕ್ಕೆ ಹೋಯಿತು.

ರಾಜ ಬದಲಾದ. ಇವನ ಬಾಯಾರಿಕೆ ಮುಗಿಯಲಿಲ್ಲ. ಒಮ್ಮೆ ನರಳಿಕೆ ತೀವ್ರವಾದಾಗ, 'ಅಮ್ಮಾ, ಬಾಯಾರಿಕೆ. ನೀರು ಕೊಡಿ.', ಎಂದು ಇದ್ದ ಶಕ್ತಿ ಸೇರಿಸಿ ಕಿರುಚಿದ.

ಆಗ ಒಬ್ಬ ವರದಿಗಾರ ಬಂದು ಇವನ ಬಾಯಿಗೆ ಮೈಕು ತುರುಕಿ, 'ಹೇಳಿ, ಹೊಸ ರಾಜ ಬಂದ ಮೇಲೆ ನಿಮ್ಮ ಬಾಯಾರಿಕೆ ಹೆಚ್ಚಿದೆಯೇ?', ಎಂದು ಅಬ್ಬರಿಸಿದ. ಇವನು ತತ್ತರಿಸಿದ. ಅವನು 'ಹೌದೇ, ಇಲ್ಲವೇ? ನಮಗೆ ಉತ್ತರಗಳು ಬೇಕು.', ಎಂದು ಕಿರುಚಿದ. ಇವನು, 'ಹಾಂ ಹೌದು!', ಎಂದ. 'ಹೊಸ ರಾಜನ ಆಳ್ವಿಕೆಯಲ್ಲಿ ಹೆಚ್ಚಿದ ಬಾಯಾರಿಕೆ.', ಎಂದು ಡಂಗುರ ಬಾರಿಸುತ್ತ ಅವನು ಹೋದ.

ಅದೇ ಸಮಯಕ್ಕೆ ಒಂದು ಗುಂಪು ಜನ ಬಂದು, 'ಹಳೆಯ ರಾಜನಿದ್ದಾಗಲೂ ನಿನಗೆ ಕುಡಿಯಲು ನೀರು ಇರಲಿಲ್ಲ. ಆಗ ಯಾಕೆ ಕಿರುಚಲಿಲ್ಲ?', ಎಂದು ಕಿರುಚಾಡಿದರು. 'ನಾಯಿ, ನರಿ, ಕಳ್ಳ, ಖದೀಮ!', ಎಂದು ಬಯ್ದರು. 'ನಮ್ಮ ಪ್ರಭುವಿನ ಮಾನ ಕಳೆಯಲು ಬಾಯಾರಿಕೆಯ ನಾಟಕವಾಡುತ್ತಿದ್ದೀಯ.', ಎಂದರು.

ಇವನಿಗೆ ಭಯವಾಯಿತು.ಹೊಸ ರಾಜನ ದರ್ಬಾರಿನಲ್ಲಿ ಬಾಯಾರಿದರೆ ನರಳುವಂತಿಲ್ಲ ಎಂದರಿತ ಇವನು ಮೌನವಾಗಿ ನರಳಿ ನರಳಿ, ಬಳಿಕ ಸಾವಿಗೆ ಶರಣಾದದ್ದು ಸುದ್ದಿಯಾಗಲಿಲ್ಲ.
**********************************************

ಉಲ್ಟಾ ಪಲ್ಟಾ
**********
ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ ದಾಸವಾಳವು...
- ಜಯಂತ್ ಕಾಯ್ಕಿಣಿ

ದಾಸ್ವಾಳ ಲಂಗಗಳು, ಪುಟ್ ಪುಟ್ಟ ಟಾಪುಗಳು
-ಯೋಗರಾಜ್ ಭಟ್

ದಾಸವಾಳ ಅದೇ, ವಿಷಯ ಮಾತ್ರ ಬೇರೆ :-D
ಒಬ್ರು ಅರಳಿದ ದಾಸವಾಳಾನ ಸ್ಟ್ರೈಟ್ ಆಗಿ ನೋಡಿದ್ರೆ, ಇನ್ನೊಬ್ರು ಅದನ್ನ ಉಲ್ಟಾ ಮಾಡಿ ಲಂಗವನ್ನ ಅದಕ್ಕೆ ಹೋಲಿಸ್ತಾರೆ. ಯೋಗರಾಜ್ ಭಟ್ ಸ್ವಲ್ಪ ಉಲ್ಟಾ ಅಂತ ಗೊತ್ತಾಗೋಕೆ ಇದೇ ಪ್ರೂಫ್ ಅಂತ ಅಲ್ಲ. ಇರೋ ದೊಡ್ಡ ಲಿಸ್ಟ್ ಅಲ್ಲಿ ಇದೂ ಒಂದು ಪ್ರೂಫ್ ಅಷ್ಟೇ :-D
**********************************************

ಜಯಂತಿಗಳು
**********
ಕಳೆದ ಹಾಗೂ ಈ ಶತಮಾನದ ಆಡಳಿತಗಾರರಲ್ಲಿ ಜಯಂತಿ ಆಚರಿಸಿಕೊಳ್ಳಲು ಯಾರೆಲ್ಲ ಅರ್ಹರು ಎಂಬ ಒಂದು ಪಟ್ಟಿಯನ್ನು ಎಲ್ಲರೂ (ಎಡ, ಬಲ, ಪ್ರಗತಿಪರ, ನಾಸ್ತಿಕವಾದಿ, ಕಾಂಗ್ರೆಸ್ಸಿ, ಆಪ್ಟಾರ್ಡ್, ಭಕ್ತರು ಇತ್ಯಾದಿ) ಒಪ್ಪುವ ಒಬ್ಬ ಸಂಶೋಧನಾಕಾರರು ತಯಾರಿಸುವುದು ಉತ್ತಮ.

ಇಲ್ಲದಿದ್ದರೆ ಬರುವ ಶತಮಾನಗಳಲ್ಲಿ ಇವರ ಜಯಂತಿಗಳನ್ನು ಆಚರಿಸಬೇಕೋ ಬೇಡವೋ ಎಂಬ ವಿಷಯಕ್ಕೇ ಭಯಂಕರ ಯುದ್ಧಗಳು ನಡೆದು, ಅವತ್ತಿನ ಅವರ ಮೌಲ್ಯಗಳ ಚೌಕಟ್ಟಿನಲ್ಲಿ ಇವರನ್ನು ಬಂಧಿಸಲು ಹೆಣಗಾಡಿ, ಆ ಹೊಸ ಮೌಲ್ಯಗಳ definition ಗೆ ಇವರು ನಿಲುಕದೆ ಇದ್ದಾಗ, ಇವರು 'ಅದೇ' ಎಂದು ಒಂದು ಪಂಗಡ, ಇವರು 'ಅದು ಅಲ್ಲವೇ ಅಲ್ಲ' ಎಂದು ಇನ್ನೊಂದು ಪಂಗಡ ಹೊಡೆದಾಡಿ, ನಮ್ಮ ಕಣ್ಣುಗಳ ಮುಂದಿದ್ದರೂ ನಮಗೇ ಇನ್ನೂ ಅರ್ಥವಾಗದ ಇವರನ್ನೆಲ್ಲ ಅವರು ಕಲ್ಪಿಸಿಕೊಂಡು ಅರ್ಥ ಮಾಡಿಕೊಳ್ಳಲು ಹೆಣಗಾಡಿ (ಹೋಗ್ತಾ ಹೋಗ್ತಾ I.Q. ಕಡಿಮೆಯಾಗುತ್ತಿರುವ ಲಕ್ಷಣ ಇದೆ ಬೇರೆ!), ಅರ್ಥವಾಗದೆ ಕೊನೆಗೆ ತಮಗೆ ನಿಲುಕಿದ್ದಷ್ಟೇ ಸತ್ಯ ಎಂದು ಅವರೆಲ್ಲ ಬಡಿದಾಡುತ್ತಿರುವಾಗ, ಮುಖ್ಯಮಂತ್ರಿಗಳು ನಿದ್ದೆಯಲ್ಲೂ, ಪ್ರಧಾನಮಂತ್ರಿಗಳು ಪ್ರವಾಸದಲ್ಲೂ ಮುಳುಗಿ, ಏನೂ ಅರ್ಥವಾಗದವನೊಬ್ಬ ಕೊನೆಗೆ ಆ ದಿನ ಈ ಮಾತನ್ನು ಹೇಳುವ ಬದಲು ನಾನೇ ಇವತ್ತೇ ಹೇಳ್ತಾ ಇದ್ದೀನಿ. ಉಳಿದದ್ದು ನಿಮ್ಮಿಷ್ಟ! :-D
**********************************************