Oct 1, 2014

FaceBook Ramblings - Oct 2014

Oct 24, 2014:

ಅಪ್ಪ ಪಟಾಕಿ ಕೊಡಿಸ್ತಿರಲಿಲ್ಲ. 'ಎಟುಕದ ದ್ರಾಕ್ಷಿ ಹುಳಿ' ಅನ್ನಿಸಿರಬಹುದು, ಮತ್ತು ಅನಿಸಿದ್ದನ್ನೆಲ್ಲ 'ಚುಟುಕ'ದಲ್ಲಿ ಹೇಳುವ ಹುಚ್ಚು. ಹೈಸ್ಕೂಲಿನಲ್ಲಿದ್ದಾಗ ಬರೆದದ್ದು, ದೀಪಾವಳಿಯ ಸಮಯದಲ್ಲಿ:
ಹಬ್ಬದಂದು ಪಟಾಕಿ ಏಕೆ?
ಸಂತಸವ ಸದ್ದಿನೊಂದಿಗೆ ಆಚರಿಸಬೇಕೆ!
ವೃಥಾ ಮಾಲಿನ್ಯವ ಸೃಷ್ಟಿಸಲೇಕೆ?...
ಮುಂದೊಮ್ಮೆ ಮರುಗಬೇಕಾದೀತು, ಜೋಕೆ!

Oct 16, 2014:
ಬಂಧೀಖಾನೆ....
ನಾನೊಬ್ಬ ಖೈದಿ,
ಸಿದ್ಧಾಂತಗಳೆಲ್ಲ ಸರಪಳಿಗಳು
ನಾ ಬಂಧಿ ವಿಚಾರಗಳ ಬಂಧೀಖಾನೆಯಲ್ಲಿ....
...
ನನ್ನ ಗೆಳೆಯ ಕೂಡ ಖೈದಿ,
ರೂಪಾಯಿಯ ಸರಪಳಿಯಲ್ಲಿ
ಅವ ಬಂಧಿ ಅವನ ಕಾರು, ಅವನದೇ ಅಪಾರ್ಟ್ಮೆಂಟುಗಳಲ್ಲಿ
ನನ್ನ ಬಾಸ್ ನ ಕಥೆ ಬೇರೆ,
ಅವ ನಿಜಕ್ಕೂ ಸ್ವತಂತ್ರ
ಅದು ತಿಳಿಯದ ಅವನೂ ಕೂಡ ಬಂಧಿ,
ಅವನದೇ ಮೌಢ್ಯದಲ್ಲಿ!
ನೆರೆಮನೆಯವ ಸಿನಿಕ
ಅಲ್ಲದೇ ಮಹಾ ಮೌನಿ
ಅವನೂ ಕೂಡ ಖೈದಿ
ಅವನದೇ ಮೌನದಲ್ಲಿ...
ಅವನ ಪತ್ನಿ ಬಾಯಿಬಡುಕಿ
ಜೊತೆಗೆ ಟೆಲಿವಿಷನ್ ಶೋಕಿ
ವಿಚಾರಗಳೆಲ್ಲ ಚೌಕಾಕಾರ
ಅವಳು ಎಂದೆಂದಿಗೂ ಬಂಧಿ
ನಲವತ್ತೆರಡಿಂಚಿನ ಪೆಟ್ಟಿಗೆಯಲ್ಲಿ!
ನಾವೆಲ್ಲ ಖೈದಿಗಳು
ನಮ್ಮ ನಂಬಿಕೆಗಳಲ್ಲಿ,
ಭಕ್ತಿಯಲ್ಲಿ, ಪ್ರೇಮದಲ್ಲಿ
ಮಮತೆಯಲ್ಲಿ, ಮಾತ್ಸರ್ಯದಲ್ಲಿ...
ನಾವು ಕಟ್ಟಿದ ದೇವರು ಕೂಡ ಖೈದಿ
ಅವನು ಎಂದೆಂದಿಗೂ ಬಂಧಿ,
ನಾವು ಹೊರಿಸಿದ ಶಕ್ತಿಯ ಭಾರದಲ್ಲಿ,
ಕಲ್ಪಿತ ಕಥೆಗಳ ಪರಿಮಿತ ಸತ್ಯಗಳಲ್ಲಿ,
ಬದಲೇ ಆಗದ ಧರ್ಮ ಗ್ರಂಥಗಳ ವ್ಯಾಖ್ಯಾನದಲ್ಲಿ....
ಇಷ್ಟರಲ್ಲೇ ದೇವರು ಕೂಡ
ಬೈಲ್ ಅರ್ಜಿ ಹಾಕಿರಬಹುದು....

Oct 1, 2014:

ಏನಾಶ್ಚರ್ಯ! ಎಷ್ಟೊಂದು ವಿದ್ಯಾವಂತರೆನಿಸಿಕೊಂಡವರಿಗೆ ರಸ್ತೆಯಲ್ಲಿ ಕಸ ಎಸೆಯಬಾರದೆಂದು ಮೊನ್ನೆ ಮೊನ್ನೆ ಅರಿವಾಯಿತಂತೆ. ಶಂಖದಿಂದ ಬಂದ್ರೇನೆ ತೀರ್ಥ ಅಂದರೆ ಇದೇ ಏನು?