- ಸಿನಿಮಾ ಪ್ರಾರಂಭವಾದ ಹತ್ತು ನಿಮಿಷಕ್ಕೆ ಪರಮಾತ್ಮ ಎಂಬ ಹೆಸರಿರುವ ನಾಯಕ ಹಿಮಾಲಯ ಹತ್ತಿ ಮುಗಿಸಿರುತ್ತಾನೆ, ಕುಂಗ್-ಫೂ ಕಲಿತು ಬಂದಿರುತ್ತಾನೆ, ಮುಂಬೈನಲ್ಲಿ ಶೇರು ಮಾರುಕಟ್ಟೆಯ ತಂತ್ರಗಳನ್ನು ಕಲಿತು ಲಾಭ ಹೊಂದಿರುತ್ತಾನೆ, ಇಲ್ಲೊಂದು ವಿಂಡ್-ಮಿಲ್ ಫ್ಯಾಕ್ಟರಿಯ ಮಾಲಿಕನಾಗಿರುತ್ತಾನೆ. ಹಾಗಿದ್ದಲ್ಲಿ ಇನ್ನು ಏನೇನು ಮಾಡಬಹುದು ಇವನು ಎನ್ನುವುದು ಸಿನಿಮಾದ ಕಥೆ ಎಂದು ನೀವು ಅಂದುಕೊಂಡರೆ ತಪ್ಪು, ಪರಮಾತ್ಮ ಏನೂ ಮಾಡದೇ ಇರುವಾಗ ಹೇಗಿರುತ್ತಾನೆ ಎನ್ನುವುದು ಈ ಸಿನಿಮಾದ ಕಥೆ ಇದ್ದಂತಿದೆ! ಅಥವಾ ಏನೂ ಮಾಡದೇ ಇದ್ದರೆ ಪರಮಾತ್ಮನಾಗುತ್ತೀರಿ ಎನ್ನುವುದು ಈ ಸಿನಿಮಾದ ಸಂದೇಶವೇ?
- ಪರಮಾತ್ಮ ಎನ್ನುವುದು ನಾಯಕನ ಹೆಸರು ಎಂಬುದು ಬಿಟ್ಟರೆ ಅವನಲ್ಲಿ ಪರಮತ್ಮನಾಗುವ ಯಾವ ಲಕ್ಷಣಗಳೂ ಇಲ್ಲ. ಒಮ್ಮೆ ಜೀವನದ ಅರ್ಥ ತಿಳಿದುಕೊಳ್ಳಲು ಟಿಬೆಟಿಗೆ ಹೋಗಿದ್ದು ಬಿಟ್ಟರೆ (ಸಿನಿಮ ಪ್ರಾರಂಭವಾದ ಮೊದಲ ಹತ್ತು ನಿಮಿಷಗಳಲ್ಲಿ ಇದೂ ಆಗಿ ಹೋಗಿರುತ್ತದೆ), ಅವನಲ್ಲಿ ಅಧ್ಯಾತ್ಮಿಕತೆಯ ಯಾವ ಅಂಶವೂ ಕಂಡು ಬರುವುದಿಲ್ಲ. ಸಮಾಜದ ಯಾವ ಆಗು ಹೋಗುಗಳೂ ಇವನ "scheme of things " ನಲ್ಲಿ ಇಲ್ಲ. "ದುಡ್ಡು ಬರ್ತಾನೆ ಇತ್ತು, ಬರ್ತಾ ನೆಮ್ಮದಿ ಹಾಳಾಯ್ತು" ಎಂದು ಒಮ್ಮೆ ಹೇಳುವ ನಾಯಕ, ಒಬ್ಬ ಭಿಕ್ಷುಕನಿಗಾಗಲಿ, ಕೊನೆಯ ಪಕ್ಷ ಒಬ್ಬ ಸ್ನೇಹಿತನಿಗಾಗಲಿ ಯಾವುದೇ ರೀತಿಯ ಸಹಾಯ ಮಾಡುವ ಒಂದು ಸನ್ನಿವೇಶವೂ ಸಿನಿಮಾದಲ್ಲಿಲ್ಲ. ಇದೆಲ್ಲ ಇರಲೇಬೇಕು ಎಂದು ಅಲ್ಲ, ಆದರೆ ಇಷ್ಟು ಮಾಡದೇ ಒಬ್ಬ ವ್ಯಕ್ತಿ ಪರಮಾತ್ಮನಾಗಲು ಸಾಧ್ಯವಾಗುವುದಾದರೆ ನಮ್ಮ ಸಮಾಜದ ತುಂಬೆಲ್ಲ ಬರಿ ಪರಮಾತ್ಮರೆ ತುಂಬಿದ್ದಾರೆ ಎನ್ನಬಹುದು. ಅನಿಸಿದ್ದನ್ನು ಮಾಡಿದವರೆಲ್ಲ ಪರಮಾತ್ಮರಲ್ಲ!
- ನಾಯಕಿಯ ಪಾತ್ರಕ್ಕೆ ಹುಚ್ಚು ಇದೆಯೇ ಎಂದು ಒಂದಕ್ಕಿಂತ ಹೆಚ್ಚು ಬಾರಿ ಅನಿಸುತ್ತದೆ. ನಗುವುದು, ಕಿರುಚುವುದು ಬಿಟ್ಟರೆ ಬೇರೆ ಏನೂ ಮಾಡಿದಂತಿಲ್ಲ ನಾಯಕಿ. ನಾಯಕನಿಗೆ ಅವಳಲ್ಲಿ ಅಂಥದ್ದೇನು ಕಂಡಿತು ಎಂಬುದಕ್ಕೆ ಉತ್ತರ ಇಲ್ಲ. ನಾಯಕ ಅದರ ಬಗ್ಗೆ ಮಾತಾಡುವುದೇ ಇಲ್ಲ. ಪ್ರೇಮಕ್ಕೆ ಕಾರಣ ಇರಲೇಬೇಕು ಎಂದೇನು ಇಲ್ಲ, ಸರಿ, ಆದರೆ ಯಾವ ಘಳಿಗೆಯಲ್ಲಿ ಪ್ರೇಮವಾಯಿತು ಎಂದಾದರು ಗೊತ್ತಾಗಬೇಕಲ್ಲ! ಅದರ ಬಗ್ಗೆ ಮಾತೇ ಇಲ್ಲ, ನಾಯಕ ಕಾರು ತೆಗೆದುಕೊಂಡು ನಾಯಕಿಯ ಊರಿಗೆ ಅವಳನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತಾನೆ. ಅರ್ಧ ಸಿನಿಮ ಮುಗಿಯುವ ವೇಳೆಗೆ ಒಮ್ಮೆ, "ಅವಳ ಕೂದಲಲ್ಲಿ, ಮೂಗುತಿಯಲ್ಲಿ ಒಂದು ಹಾಡು ಕೇಳುತ್ತದೆ. ಅದು ನನಗಿಷ್ಟ" ಎಂದು ನಾಯಕ ಹೇಳುವಾಗ ಪ್ರೇಕ್ಷಕನಿಗೆ ನಂಬಿಕೆ ಬರುವುದಿಲ್ಲ. ಸ್ವತಃ ನಾಯಕನಿಗೆ ಆ ಮಾತಿನಲ್ಲಿ ನಂಬಿಕೆ ಇದ್ದಂತಿಲ್ಲ.
- ನಾಯಕನಿಗೆ ತನ್ನ ಸ್ನೇಹಿತರ ನೋವು ತಟ್ಟುವುದಿಲ್ಲ. ಪಸೀನ ಎಂದು ಅವನಿಂದ ಕರೆಸಿಕೊಳ್ಳುವ ಎರಡನೇ ನಾಯಕಿಯ ಪಾತ್ರ, ಪರಮಾತ್ಮನ ಸ್ನೇಹಿತೆಗೆ ಪರಮಾತ್ಮನಲ್ಲಿ ಪ್ರೇಮ ಇರುತ್ತದೆ. ಆದರೆ ನಾಯಕ ಅವಳಿಗೆ, "ನೀನು ಮಗು, ಮಕ್ಕಳನ್ನ ಮದುವೆ ಆಗಿ ಒದ್ದಾಡೋಕೆ ಆಗುತ್ತಾ?", ಎನ್ನುತ್ತಾನೆ. ಇಲ್ಲಿ ಒಂದಿಷ್ಟೂ ಧರ್ಮ ಸಂಕಟ ಅನುಭವಿಸದ ನಾಯಕ "ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ", ಎಂದು ತನ್ನ ಸಂಕಟ ತೋಡಿಕೊಂಡು ಕುಣಿದಾಡುವುದಕ್ಕೆ ಯಾವ ಅರ್ಥವೂ ಇಲ್ಲ.
- ಇಡೀ ಸಿನಿಮ ನಾಯಕ ಎರಡನೆ ನಾಯಕಿಗೆ ಹೇಳುವ ಕಥೆಯ ರೂಪದಲ್ಲಿದೆ. ಕೊನೆಗೆ ಎರಡನೆ ನಾಯಕಿ ನಾಯಕನಿಗೆ ಮುತ್ತು ಕೊಡುತ್ತಾಳೆ. ನಾಯಕನ ಪುಟ್ಟ ಮಗುವಿಗೂ ಒಂದು ಮುತ್ತು ಕೊಟ್ಟು, "ನಿನ್ನ ಅಪ್ಪ ನಿನಗಿಂತ ಪಾಪು" ಎನ್ನುತ್ತಾಳೆ. "ಮಕ್ಕಳು ದೇವರ ಸಮಾನ", ಎಂದ ಮಾತ್ರಕ್ಕೆ ನಾಯಕನನ್ನು ಏಕ ಕಾಲಕ್ಕೆ ದೇವರು, ಮಗು ಎಂದೆಲ್ಲ ಕರೆದು ಪ್ರೇಕ್ಷಕ ನಂಬಬೇಕು ಎಂದುಕೊಳ್ಳುವುದು ದಡ್ಡತನ! ಮನಸ್ಸು ಸ್ವಚ್ಛ ಇರುವವನು ದೇವರಾಗುತ್ತಾನೆ, ನಿಜ. ಆದರೆ ನಮ್ಮ ನಾಯಕ ಬೇರೆಯವರ ಭಾವನೆಗಳಿಗೆ ಒಂದಿಷ್ಟು ಸ್ಪಂದಿಸದ ಕಲ್ಲು ಜೀವ. ಕೊನೆಗೆ ಇಷ್ಟ ಪಟ್ಟು ಕಟ್ಟಿಕೊಂಡ, ಸುಮ್ಮ ಸುಮ್ಮನೆ ನಗುವ ನಾಯಕಿ ಸತ್ತಾಗಲೂ ನಾಯಕ ಅಳುವುದಿಲ್ಲ. ಅವಳು ಸಂತೋಷ ಹೆಚ್ಚಾಗಿ ಸತ್ತಳು ಎಂದು ನಂಬಿಕೊಂಡು ಬದುಕುತ್ತಾನೆ. ಇದೆ ಪುನೀತ್, ಆಗ ಮಾಸ್ಟರ್ ಲೋಹಿತ್ ಆಗಿ ನಟಿಸಿದ "ಬೆಟ್ಟದ ಹೂವು" ಚಿತ್ರದ ನಾಯಕ ಮನೆಯವರಿಗಾಗಿ ತನ್ನ ಆಸೆಗಳನ್ನು ಬಲಿ ಕೊಡುತ್ತಾನೆ. ಅವನನ್ನು ಪರಮಾತ್ಮ ಎಂದರೆ ಅಡ್ಡಿಯಿಲ್ಲ. ಆದರೆ ಪರಮಾತ್ಮನಾಗುವ ಯಾವ ಅರ್ಹತೆಯೂ ಇರದ ಈ ನಾಯಕ emotional quotient ತೀರ ಕಡಿಮೆ ಇರುವ ವ್ಯಕ್ತಿಯಾಗಿ ಕಾಣುತ್ತಾನೆ, ದೇವರಾಗಿಯಲ್ಲ!
- ಸಿನಿಮಾದ ಕೊನೆಯಲ್ಲಿ ನಾಯಕನಿಗೆ ತನ್ನ ಮದುವೆ ಆಮಂತ್ರಣ ಪತ್ರಿಕೆ ಕೊಡುವ ನಾಯಕಿ ಹೊರಡುತ್ತಾ, "ನಾನು ನಿನ್ನ ಬದುಕಿನಲ್ಲಿ ಮತ್ತೆ ಬರುವ ಅವಕಾಶ ಇದೆಯೇ ಎಂದು ತಿಳಿದುಕೊಳ್ಳಲು ಬಂದೆ", ಎನ್ನುತ್ತಾಳೆ. ಹಾಗಿದ್ದಲ್ಲಿ ಅವಳನ್ನು ಮದುವೆಯಾಗಲು ಹೊರಟವನು ಇನ್ನೊಬ್ಬ ಪರಮಾತ್ಮನಿರಬಹುದು!
ಕೊನೆಯ ಮಾತು: ನಾನು ಹೋದ ಥಿಯೇಟರಿನಲ್ಲಿ ಯೋಗರಾಜ್ ಭಟ್ಟರ ಮೇಲೆ, ಪುನೀತ್ ರಾಜ್ ಕುಮಾರ್ ಮೇಲೆ ನಂಬಿಕೆ ಇಟ್ಟು ಬಂದ ಜನರಿಂದಾಗಿ ಹೌಸ್-ಫುಲ್ ಆಗಿತ್ತು. ಥಿಯೇಟರ್ ಬಿಡುವಾಗ ಎಲ್ಲರು ಮಂಕಾಗಿದ್ದರು. ರಂಗಾಯಣ ರಘು ಇರುವ ಕೆಲವು ಸೀನ್ ಗಳನ್ನು ಬಿಟ್ಟರೆ ಜನರು ಮೌನವಾಗಿದ್ದರು. ನಾನು "ಪಂಚರಂಗಿ" ನೋಡಿದಾಗ ಪ್ರೇಕ್ಷಕ ಹೀಗಿರಲಿಲ್ಲ.