ಅಂದು ಮುಂಜಾನೆ ನಾನು ಆಫೀಸಿಗೆ ಹೋಗುವ ದಾರಿಯಲ್ಲಿ ಒಂದು ಹಸು ಸತ್ತು ಬಿದ್ದಿತ್ತು. ದೊಡ್ಡ ಗಾತ್ರದ ಹಸು. ಪ್ರಾಣಿ-ಪಕ್ಷಿಗಳ ಬಗ್ಗೆ ಪ್ರೀತಿ ಇರುವ ಯಾರಿಗೇ ಆದರೂ ಹೊಟ್ಟೆ "ಚುರುಕ್" ಎನ್ನುವಂತಿತ್ತು. ಮುಖ್ಯ ರಸ್ತೆಯ ಬದಿಯಲ್ಲಿ, ಮಂಜಿನಲ್ಲಿ ಒದ್ದೆಯಾಗಿದ್ದ ಹಸುವಿನ ಶವ ಬಿದ್ದಿತ್ತು. ನಾನು ಬುದ್ಧಿ ಬೆಳೆದಾಗಿನಿಂದ ಹಸು-ಎಮ್ಮೆ, ಮತ್ತು ಅವುಗಳ ಕರುಗಳನ್ನು ನೋಡಿಕೊಂಡೇ ಬೆಳೆದವನು. ನನ್ನ ತಾಯಿ ಒಂದು ಜಾತಿ ಹಸುವನ್ನು ಸಾಕಿದ್ದಳು. ನಾನು ಅದರ ಹಾಲನ್ನು ಊರಿನ ಹೊಟೇಲಿಗೆ ಮಾರಿ ಬರುತ್ತಿದ್ದೆ. ಈ ಕೆಲಸಕ್ಕೆ ತಾಯಿ ನನಗೆ ವಾರಕ್ಕೆ ಹತ್ತು ರೂಪಾಯಿ ಕೊಡುತ್ತಿದ್ದಳು. ಈ ದುಡ್ಡನ್ನು ಸೇರಿಸಿ ನಾನು ಒಂದು ಸೈಕಲ್ಲು ಕೊಂಡೆ. ಮುಂದೆ ಆ ಹಸು ಸತ್ತು ಹೋಯಿತು. ಏನೂ ವಿಶೇಷಗಳಿಲ್ಲದೆ, ಮಾಮೂಲಿ ಬೇಜಾರುಗಳಲ್ಲಿ ಕಳೆದು ಹೋಗಿದ್ದ ನಮ್ಮ ಹಳ್ಳಿಯ ಜನರಿಗೆ ಇದೊಂದು ಸ್ವಾರಸ್ಯಕರ ವಿಷಯವಾಯಿತು; ನಮ್ಮನ್ನು ಕಂಡಾಗ ಸಹಾನುಭೂತಿಯಿಂದ ಮಾತಾಡಿ, "ತ್ಚು ತ್ಚು ತ್ಚು" ಎನ್ನಲಿಕ್ಕೆ. ನಮ್ಮ ಪ್ರೀತಿಯ ಹಸುವಿನ ಹೆಣವನ್ನು ಅದರ ಮೇಲೆ ಯಾವುದೇ ಸಹಾನುಭೂತಿ ಇಲ್ಲದವರಂತೆ ತೋರುತ್ತಿದ್ದ ನಾಲ್ವರು, ಹಗ್ಗ-ಗಿಗ್ಗ ಕಟ್ಟಿ ನಡುವೆ ಕೋಲು ಸಿಕ್ಕಿಸಿ, ಎಳೆದಾಡಿ, ತೂರಾಡಿ ಮಣ್ಣು ಮಾಡಿದರು. ಈ ದೃಶ್ಯವನ್ನು ನಾನು ಅಟ್ಟದ ಕಿಟಕಿಯಿಂದ (ಅಲ್ಲಿಂದ ಆ ಸ್ಥಳ ಸರಿಯಾಗಿ ಕಾಣುತ್ತಿದ್ದ ಕಾರಣಕ್ಕಾಗಿ) ನೋಡುತ್ತಾ, "ಇಂಥ ಅನುಭವಗಳೇ ನಮ್ಮನ್ನು ಪಕ್ವ ಮಾಡುವುದು" - ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ!
ರಸ್ತೆಯ ಬದಿಯಲ್ಲಿ ಹಸುವಿನ ಹೆಣವನ್ನು ನೋಡಿದಾಗ ಇಷ್ಟೆಲ್ಲ ಯೋಚನೆಗಳು ನನ್ನ ತಲೆಯಲ್ಲಿ ಸುಳಿದು ಹೋಗಿರಬೇಕು. ಸಾಕಿದವರು ಯಾರಾದರೂ ಮಣ್ಣು ಮಾಡಲು ಸ್ಥಳವಿಲ್ಲದೆ ರಸ್ತೆ ಬದಿಯಲ್ಲಿ ಎಸೆದು ಹೋದರೆ! - ಎಂದುಕೊಂಡೆ. ನಮ್ಮ ಹಳ್ಳಿಗಳಲ್ಲಾದರೆ ಮನೆಯ ಸುತ್ತ ಸತ್ತ ನಾಯಿ, ಬೆಕ್ಕು, ಹಸು, ಕೊನೆಗೆ ಮನುಶ್ಯರನ್ನು ಕೂಡ ಮಣ್ಣು ಮಾಡುವಷ್ಟು ಸ್ಥಳವಿರುತ್ತದೆ. ಮನೆ, ಅಂಗಡಿ, ಅಪಾರ್ಟುಮೆಂಟ್ ಎಂದು ಒಂದು ಅಡಿ ಸ್ಥಳ ಬಿಡದೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ಸಾಕಿದ ಹಸುವನ್ನು ಮಣ್ಣು ಮಾಡಲಿಕ್ಕೆ ಸ್ಥಳವೆಲ್ಲಿದೆ? ಅಷ್ಟಕ್ಕೂ ಸತ್ತ ಹಸುವನ್ನು ಮಣ್ಣು ಮಾಡುವುದಕ್ಕೆ ಏಕೆ ಖರ್ಚು ಮಾಡಬೇಕು, ರಸ್ತೆಯ ಬದಿಯಲ್ಲಿ ಎಸೆದು ಹೋದರೆ, ನಗರವನ್ನು ಸ್ವಚ್ಛ, ಸುಂದರವಾಗಿಡುವ ಹೊಣೆ ಹೊತ್ತವರು ಹೆಣಕ್ಕೆ ಗತಿ ಕಾಣಿಸುತ್ತಾರಲ್ಲ ಹೇಗಿದ್ದರೂ ಎಂದುಕೊಂಡಿರಬಹುದು ಸತ್ತ ಹಸುವಿನ ಮಾಲಿಕ.
ಹೀಗೆಲ್ಲ ಅಂದುಕೊಳ್ಳುತ್ತಾ ಆಫೀಸಿಗೆ ನಡೆದ ನಾನು ಆಗಲೇ ಹೇಗೆ ಮನುಷ್ಯನ ಸಂವೇದನೆಗಳು ನಶಿಸಿವೆ - ಎಂಬ ಬಗ್ಗೆ ಒಂದು ಕಥೆ ಬರೆಯಬೇಕು ಅಂದುಕೊಂಡೆ. ನನ್ನ ಕಥೆಯ ನಾಯಕ ಸಿನಿಮಾ-ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ ವೃತ್ತಿಯಲ್ಲಿರುತ್ತಾನೆ. ಮನುಷ್ಯನ ಮೂಲಭೂತ ಭಾವನೆಗಳು ಹೇಗೆ ಸತ್ತಿವೆ, ಹೀಗಾಗಲಿಕ್ಕೆ ಹೇಗೆ ನಮ್ಮ ’ಸಮೂಹ ಮಾಧ್ಯಮ’ಗಳು ಕಾರಣವಾಗಿವೆ, ಹೀಗೆ ಸಂವೇದನೆಗಳಿಲ್ಲದ ಜನರನ್ನು ಮುಟ್ಟಲಿಕ್ಕಾಗಿ, ಈ ಜಡ ಜೀವಗಳನ್ನು ಅಲುಗಿಸಲಿಕ್ಕಾಗಿ ನಮ್ಮ ಕಾದಂಬರಿಕಾರರು, ಸಿನಿಮಾ ಮಂದಿ ಹೇಗೆ ತಮ್ಮ ಕಥೆಗಳಲ್ಲಿ ಕ್ರೌರ್ಯ ತುರುಕುತ್ತಿದ್ದಾರೆ. ಮತ್ತು ಈ ತುರುಕಾಟದಿಂದಾಗಿ ಮತ್ತೆ ಸಂವೇದನೆಗಳು ಹೇಗೆ ನಶಿಸುತ್ತಿವೆ - ಹೀಗೆ ಒಂದು ವಿಷಚಕ್ರದಲ್ಲಿ ಹೇಗೆ ನಾವೆಲ್ಲ ಒದ್ದಾಡುತ್ತಿದ್ದೇವೆ - ಎಂಬುದನ್ನೆಲ್ಲ ನನ್ನ ಕಥೆಯ ನಾಯಕನ ಮೂಲಕ ಹೇಳಬೇಕೆಂಬುದು ನನ್ನ ಉದ್ದೇಶವಾಗಿತ್ತು. ಹೀಗೆಲ್ಲ ಬರೆಯುವುದರಿಂದ ಏನೂ ಬದಲಾಗುವುದಿಲ್ಲ ಎಂಬುದು ನನಗೆ ಕಾಲೇಜಿನಲ್ಲಿರಬೇಕಾದರೆ ಹೊಳೆದಿತ್ತು. ಹಾಗಾಗಿ ಅಂಥ ಮಹತ್ವಾಕಾಂಕ್ಷೆಗಳೇನೂ ನನಗಿಲ್ಲ. ನನಗೆ ಮುಖ್ಯ ಎನಿಸಿದ ವಿಷಯವನ್ನು ನನಗೆ ಸರಿ ಎನಿಸಿದ ರೀತಿಯಲ್ಲಿ ದಾಖಲಿಸುವುದಷ್ಟೆ ನನ್ನ ಉದ್ದೇಶ. ಹೀಗೆ ಒಂದು ಕಥೆಯನ್ನು ಬರೆಯಬೇಕು ಎಂದುಕೊಂಡು ತುಂಬ ಸಮಯ ಓಡಾಡಿದೆ. ಓಡಾಡಿದೆ ಎಂದರೆ ಕಥೆಗೆ ವಿಷಯ ಸಂಗ್ರಹಿಸಿದೆ ಎಂದಲ್ಲ; ಹಾಗೆಲ್ಲ ವಿಷಯ ಸಂಗ್ರಹಿಸಿ ಬರೆಯುವ ಅಭ್ಯಾಸ ನನಗಿಲ್ಲ. ನನ್ನನ್ನು ನಾನೇ ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದೂ ಅನ್ನಬಹುದು.
ಆದರೆ ಕಥೆಯನ್ನು ಬರೆಯಲು ಶುರು ಮಾಡಿದಾಗ ಒಮ್ಮೆಗೆ ಈ ಕಥೆಗೆ ಇನ್ನೊಬ್ಬ ನಾಯಕ ಏಕೆ ಬೇಕು ಎಂಬ ಪ್ರಶ್ನೆ ಬಂತು. ನಾನು ನಾನಾಗಿ ಮಾತಾಡದೆ ಏಕೆ ಮತ್ತೊಬ್ಬನ ಮುಖವಾಡದ ಮೂಲಕ ಮಾತಾಡಬೇಕು? ಮತ್ತೆ ಮಾತಿಗಿಂತ ಮುಖವಾಡವೇ ಮುಖ್ಯವಾಗಿ ಬಿಡುವ, ಹೇಳಬೇಕಾದ್ದನ್ನು ಹೇಳಲಿಕ್ಕಾಗದೆ ಹೋಗುವ ಅಪಾಯವಿಲ್ಲವೆ? ಹೀಗೆ ಹೇಳಬೇಕಾದ್ದನ್ನು ಹೇಳಲಿಕ್ಕಾಗದೆ ಹೋಗುವುದು ಕೂಡ ಕತೆಗಾರನಲ್ಲಿ ಸಿಟ್ಟಿಗೆ ಕಾರಣವಾಗಬಹುದಲ್ಲವೆ? ಇದೇ ಸಿಟ್ಟು, ಅಸಹಾಯಕತೆ ಅವನ ಮುಂದಿನ ಕೃತಿಗಳಲ್ಲಿ ಕ್ರೌರ್ಯದ ರೂಪದಲ್ಲಿ ಹೊರ ಬರುವ ಒಂದು ಸಣ್ಣ ಸಾಧ್ಯತೆ ಇದೆ ಅಲ್ಲವೆ? ಇಂಥ ಸಣ್ಣ ವಿಷಯಗಳೆ ತಾನೇ ಮುಂದೆ ಭೂತಾಕಾರ ತಾಳುವುದು!
(ಸಶೇಷ)