Sep 21, 2009

ಹುಡುಕಾಟ


ಬದುಕಿನ ನಿರರ್ಥಕತೆಯ ಬಗ್ಗೆ ಏನಾದರೂ ಬರೆಯಬೇಕು ಅನ್ನಿಸತೊಡಗಿದೆ. ಮನುಷ್ಯ, ಮನುಷ್ಯನೆಂದು ಕರೆಸಿಕೊಳ್ಳುವ ಯೋಗ್ಯತೆ ಬಂದ ಕಾಲದಿಂದಲೂ ಬದುಕಿಗೆ ಏನಾದರೂ ಅರ್ಥವಿದ್ದೀತು ಎಂದು ಹುಡುಕುತ್ತಲೇ ಇದ್ದಾನೆ. ಇನ್ನೂ ಆ ಹುಡುಕಾಟ ಮುಂದುವರಿದಿದೆ. ಬದುಕಿನಲ್ಲಿ ನಡೆಯುತ್ತಿರುವುದಕ್ಕೆಲ್ಲ ಏನೋ ಅರ್ಥವಿದೆ, ಕೊನೆಯಲ್ಲಿ "ಯುರೇಕ" ಎನ್ನುವ ಕ್ಷಣವೊಂದು ಬರುತ್ತದೆ ಎಂಬುದೇ ಎಲ್ಲರ ಆಸೆ. ಎಲ್ಲ ಕಥೆ, ಕವನ, ಸಿದ್ಧಾಂತ, ಕೊನೆಗೆ ನಮ್ಮ ಸಿನಿಮಾಗಳು ಕೂಡ ಇದೇ ಭಾವನೆಯನ್ನು ಪೋಷಿಸುತ್ತದೆ. ನಾನು ಏನನ್ನೋ ಕಲಿಯುತ್ತಿದ್ದೇನೆ, ಸಂಪಾದಿಸುತ್ತಿದ್ದೇನೆ, ಕೊನೆಗೊಮ್ಮೆ ಈ ಎಲ್ಲದರ ಅರ್ಥವನ್ನು ತಿಳಿದೇ ತೀರುತ್ತೇನೆ ಎಂಬ ಧೈರ್ಯವೇ ಪ್ರತಿಯೊಬ್ಬನ ಜೀವನ ದ್ರವ್ಯವಾಗಿದೆ. ಆ ನಂಬಿಕೆಯೊಂದೇ ನಮ್ಮೆಲ್ಲರ ಬದುಕನ್ನು ಸಹ್ಯವಾಗಿಸಿದೆ ಎನ್ನಬಹುದು.

ಆದರೆ "At the end, it makes sense" , ಎಂಬ ಆಸೆ ಎಷ್ಟು ಸತ್ಯ? ನಾವು ನೋಡುತ್ತಿರುವ ಬದುಕಿಗೆ ಅದರಾಚೆಗೂ ಏನೋ ಅರ್ಥವಿದೆ ಎನ್ನುವ ಹುಡುಕಾಟಕ್ಕೆ ಕೊನೆಯಿದೆಯೇ? ಅಥವಾ ಆ ಹುಡುಕಾಟಕ್ಕೆ ನಿಜಕ್ಕೂ ಅರ್ಥವಿದೆಯೇ? ಬಹುಷಃ ಎಲ್ಲದಕ್ಕೂ ಅರ್ಥವಿದೆ, ನಮ್ಮ ಮಾತು - ನಡವಳಿಕೆಗೆಲ್ಲ ಅರ್ಥವಿರಬೇಕು, ಬದುಕಿಗೊಂದು ಗುರಿಯಿರಬೇಕು ಎಂದೆಲ್ಲ ಹಿರಿಯರು ನಮ್ಮ ಸಣ್ಣಂದಿನಲ್ಲಿ ಹೇಳಿದ್ದು ನಮ್ಮ ಈ ನಂಬಿಕೆಗೆ ಕಾರಣವಿರಬಹುದು. ಬದುಕಿಗೆ "ಇದು ಇಷ್ಟೇ" ಎಂದು ಹೇಳುವಂಥ ಅರ್ಥವಿದ್ದರೆ, ಮತ್ತೆ ಮತ್ತೆ ಎಲ್ಲರೂ ಬದುಕಬೇಕಾದ ಅವಶ್ಯಕತೆಯಿಲ್ಲ , ಬಹುಷಃ ಅರ್ಥ ಗೊತ್ತಾದ ನಂತರ ಮನುಕುಲದ ಅವಶ್ಯಕತೆಯೂ ಇಲ್ಲ!

ನಾನು ಎದುರಿಸುತ್ತಿರುವ ಸಮಸ್ಯೆ, ಬವಣೆ ಎಲ್ಲ ಕ್ಷಣಿಕ, ಅರ್ಥವಿಲ್ಲದ್ದು, ಮುಂದೊಂದು ದಿನ ಸತ್ಯದ ಬೆಳಕು ಪ್ರಕಾಶಿಸುತ್ತದೆ - ಎಂಬುದು ಶುದ್ಧ ಪಲಾಯನವಾದ. ಬದುಕು ಇರುವುದೇ ಇಂಥ ನಿರರ್ಥಕ ಇಂದಿನಲ್ಲಿ, ಈ ಕ್ಷಣವೊಂದೇ ಸತ್ಯ. ನಾಳೆ ಬೆಳಕಾಗುತ್ತದೆ, ಸತ್ಯ ದರ್ಶನವಾಗುತ್ತದೆ, ನನ್ನನ್ನು ನಾನು ಕಂಡುಕೊಳ್ಳುತ್ತೇನೆ, ಅರ್ಥದ ಬೀಗ ಒಡೆಯುತ್ತೇನೆ ಎಂಬುದೆಲ್ಲ ಭ್ರಮೆ.
ಬದುಕೆಂಬುದು ಈ ಕ್ಷಣದಲ್ಲಷ್ಟೇ ಇದೆ. ನಾಳೆ ಬದುಕುತ್ತೇನೆ, ಅರ್ಥ ತಿಳಿದ ನಂತರ ಎಂದುಕೊಂಡರೆ ಬದುಕೆಲ್ಲ ಬರಿಯ ಅನ್ವೇಷಣೆಯಲ್ಲೇ ಕಳೆದು ಹೋಗುತ್ತದೆ. ಇಡಿಯ ಬದುಕನ್ನು ಒಂದು "temporary" ಭಾವದಲ್ಲಿ ಕಳೆಯಬೇಕಾಗುತ್ತದೆ.

ಬದುಕಿನ ಸ್ವಚ್ಛ ಸಂತೋಷವಿರುವುದು ಅದರ ಸಣ್ಣ ಸಣ್ಣ ಸುಖಗಳಲ್ಲಿ. ನಿನ್ನೆ-ನಾಳೆ , ನಾನು-ಅವನೆಂಬ, ನನ್ನದು-ಪರರದ್ದು ಎಂಬ ಭೇದವಿಲ್ಲದೆ, ಇದ್ದದ್ದನ್ನು ಇದ್ದಂತೆ ನೋಡುವ ಶುದ್ಧ ದೃಷ್ಟಿ ಇದ್ದರೆ, ಸಣ್ಣ ಸಣ್ಣ , silly ಎನ್ನಬಹುದಾದ ವಿಷಯಗಳೂ ಸಂತೋಷ ಕೊಡುತ್ತವೆ. ಎಲ್ಲವನ್ನೂ ಸ್ವಂತ ಮಾಡಿಕೊಳ್ಳಲು ಹೊರಟರೆ ಕೊನೆಗೆ ಉಳಿಯುವುದು ಒಂದು ರೀತಿಯ ಅನಾಥ ಭಾವ, ಖಾಲಿತನ. ಸ್ವಂತವಾದ ಮೇಲೂ ಸ್ವಾರ್ಥ, ಅಪನಂಬಿಕೆ ಬದುಕನ್ನು ಅಸಹ್ಯವಾಗಿಸುತ್ತವೆ.

-- ಇದನ್ನೆಲ್ಲಾ ಒಂದು ಕಥೆಯಲ್ಲಿ ಹಿಡಿದಿಡಲು ಸಾಧ್ಯವೇ ಎಂದು ಯೋಚಿಸುತ್ತಿದ್ದೇನೆ! ಮತ್ತೆ ನಿರರ್ಥಕತೆಯಲ್ಲಿ ಅರ್ಥ ಹುಡುಕುವ ನನ್ನ ಅಸೆ - ಎಂದು ನಗು ಬರುತ್ತದೆ.