Showing posts with label Kannada. Show all posts
Showing posts with label Kannada. Show all posts

Jun 10, 2017

ಇಂದು ಬೆಳಿಗ್ಗೆ

ಬೋಳು ರಸ್ತೆಯಲ್ಲಿ ಸೈಕಲ್ಲು ತುಳಿಯುತ್ತ ಬಂದ ಪೇಪರಿನವನು, ರಾಕೆಟ್ಟು ಉಡಾಯಿಸಿದ ಸುದ್ದಿ ಹೊತ್ತ ಪತ್ರಿಕೆಯನ್ನು ಮೊದಲನೆ ಮಹಡಿಗೆ ಉಡಾಯಿಸಿ ಮತ್ತೆ ಸೈಕಲ್ಲು ತುಳಿಯುತ್ತ ಹೊರಟ.

ರಸ್ತೆಯ ತುದಿಯಲ್ಲಿ ಪ್ರತ್ಯಕ್ಷನಾದ ಅಜ್ಜನ ಚಡ್ಡಿ ಬಹುಷಃ ಮೊಮ್ಮಗನದ್ದಿರಬೇಕು. ತಲೆಗೆ ಹಾಕಿದ ಮಂಕಿ-ಕ್ಯಾಪಿನ ಮೇಲೆ ದುಬಾರಿ ಹೆಡ್-ಫೋನ್ ಸಿಕ್ಕಿಸಿಕೊಂಡಿದ್ದಾನೆ - ಹಾಡು ಕೇಳಲಿಕ್ಕೋ? ಗಾಳಿ ತಡೆಯಲಿಕ್ಕೋ?

ಮನೆಗೆ ಬೂದು ಬಣ್ಣದ ಪೈಂಟು ಬಳಿದು ಬ್ರಶ್ಶು ಕ್ಲೀನು ಮಾಡಿದವನ ದಯೆಯಿಂದ ಸಂಪಿಗೆ ಮರವೂ ಬೂದು ಚಡ್ಡಿಯ ಯೂನಿಫಾರ್ಮು ಧರಿಸಿದೆ.

ಅಟ್ಟಹಾಸದಿಂದ ಗುಡುಗುತ್ತಾ ಹೊರಟ ಪಕ್ಕದ ಬೀದಿಯವನ ಎನ್ಫೀಲ್ಡಿನ ಜೋರಿಗೆ ಹೆದರಿದ ನೆರೆಮನೆಯವನ ಮಾರುತಿ ಎಂದಿನಂತೆ ತನ್ನ ಒಡೆಯನಿಗೆ ಮೊರೆಯಿಟ್ಟಿತು.

ಹೊಸ ದಿನವೊಂದು ಉದಯಿಸಿತು. ಹೊಸ ತಲೆನೋವು, ಹೊಸ ಖುಷಿ, ಹೊಸದೇ ಬೇಜಾರುಗಳನ್ನು ಸರಬರಾಜು ಮಾಡಲು ರವಿ ತಾನು ಖುದ್ದಾಗಿ ನಮ್ಮ ಬಡಾವಣೆಗೆ ಬಂದ. 

Apr 29, 2017

ಮಂಪರು ಮತ್ತು ಎಚ್ಚರ

ಕೋಣೆಯಲ್ಲಿ ಮಂದ ಬೆಳಕಿತ್ತು. ನಾನು ಮಲಗಿದ್ದೆ. ಅರ್ಧ ಎಚ್ಚರದಲ್ಲಿದ್ದೆ. ವರ್ಷ ತುಂಬದ ನನ್ನ ಮಗ ಇವತ್ತೇಕೋ ಬೇಗನೆ ಎಚ್ಚರವಾಗಿ ಹಾಸಿಗೆಯ ತುಂಬ ಹೊರಳಾಡುತ್ತಿದ್ದ. ಅವನ ಹೊರಳಾಟದಲ್ಲಿ ಆಗಾಗ ನನಗೆ ಗುದ್ದುತ್ತಿದ್ದ. ಅವನು ಗುದ್ದಿದಾಗೆಲ್ಲ ನನ್ನ ಮಂಪರು ಸ್ವಲ್ಪ ಕಡಿಮೆಯಾಗುತ್ತಿತ್ತು. ಅವನು ಅತ್ತ ಹೋಗುತ್ತಿದ್ದಂತೆ ಮಂಪರು ಮತ್ತೆ ಆವರಿಸುತ್ತಿತ್ತು. ಮಂಪರು ಮೂಡುತ್ತಿದ್ದಂತೆ ನನಗೆ ಇದರಲ್ಲೆಲ್ಲ ಯಾವುದೋ ಒಂದು ಕಥೆ ಇರುವಂತೆ ಅನ್ನಿಸತೊಡಗಿತು. ಅದೇನಿರಬಹುದೆಂದು ಯೋಚಿಸಲು ಎಚ್ಚರವಾದರೆ ಆ ಕಥೆ ಮಾಯವಾಗುತ್ತಿತ್ತು. ಆ ಕಥೆ ಬೆಳಗಿನ ಜಾವದ ಇಬ್ಬನಿಯಂತೆ ನನ್ನ ಕಣ್ಣಲ್ಲೇ ಕುಳಿತಂತೆಯೂ, ಕಣ್ಣು ಬಿಟ್ಟರೆ ಬೆಳಕಿನ ಬಿಸಿಗೆ ಅದು ಆವಿಯಾದಂತೆಯೂ ಮಂಪರಿನಲ್ಲಿ ನನಗೆ ಭಾಸವಾಗುತ್ತಿತ್ತು. ನಾನು ಕಣ್ಣು ಮುಚ್ಚಿದಾಗ ಇಲ್ಲೊಂದು ಹೊಸ ಲೋಕವೇ ಸೃಷ್ಟಿಯಾಗಿ, ಕಣ್ಣು ಬಿಟ್ಟ ಕ್ಷಣ ಅದು ನಾಶವಾದಂತೆಯೂ ಅನ್ನಿಸಿತು. ಮಂಪರಿನಲ್ಲಿ ಅದು ಇದ್ದಂತೆ ಅನ್ನಿಸಿ ಎಚ್ಚರದಲ್ಲಿ ಮಾಯವಾಗಿ ಸತಾಯಿಸುತ್ತಿತ್ತು. ಈ ಎಚ್ಚರ ಮತ್ತು ಮಂಪರಿನ ನಡುವಿನ ಯಾವ ಅವಸ್ಥೆಯಲ್ಲಿ ಆ ಕಥೆಯನ್ನು ಹಿಡಿದುಹಾಕಬಹುದೆಂದು ನನ್ನ ಮನಸ್ಸು ಚಿಂತಿಸುತ್ತಿತ್ತು. ನನ್ನ ಮಗ ಹೊರಳಾಡುತ್ತಾ ಬಂದು ನನ್ನ ದವಡೆಗೆ ಒಮ್ಮೆ ಗುದ್ದಿದ. ನಾನು ಏನೋ ಬಯ್ದುಕೊಳ್ಳುತ್ತಾ ಕಣ್ಣು ಬಿಟ್ಟೆ. ಕಥೆ ಮತ್ತೆ ಸುಟ್ಟು ಆವಿಯಾಯಿತು. ನನ್ನ ಮಗ ನಗುತ್ತಾ ಮಗ್ಗುಲಾದ.

Mar 6, 2014

ಹ್ಯಾಪಿ ಬರ್ತ್ ಡೇ

ಪುಷ್ಪ ವಿವೇಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ಎರಡು ತಿಂಗಳಿಗೇ ಬೇರೆ ಮನೆ ಮಾಡಿ ಸಂಸಾರ ಹೂಡಿದ್ದರು. ವಿವೇಕನಿಗೆ ಐದು ಅಣ್ಣಂದಿರಿದ್ದರು, ಹಾಗೂ ಆರು ಅಕ್ಕಂದಿರು. ಅಕ್ಕಂದಿರೆಲ್ಲರ ಮದುವೆಗಳಾಗಿ ಗಂಡಂದಿರ ಮನೆಗಳನ್ನು ಸೇರಿಕೊಂಡಿದ್ದರಾದರೂ, ಅಣ್ಣಂದಿರು ಮದುವೆಗಳಾದ ಮೇಲೂ ಜೊತೆಗೇ ಇದ್ದರು. ವಿವೇಕ-ಪುಷ್ಪ ಬಂಡಾಯವೆದ್ದು ಬೇರೆ ಮನೆ ಮಾಡಿದ್ದರು. ತಾವೇನೋ ಕ್ರಾಂತಿ ನಡೆಸಿದ್ದೇವೆಂಬ ಭಾವವಿತ್ತು ಇಬ್ಬರಲ್ಲೂ ಈ ವಿಷಯದಲ್ಲಿ. ಮುಂದೆ ಪುಷ್ಪ ಗಂಡು ಮಗುವೊಂದನ್ನು ಹೆತ್ತಳು.  ಹುಟ್ಟುತ್ತಲೇ ನಿತ್ರಾಣವಾಗಿತ್ತು; ಹೆಚ್ಚು ತೂಕವಿರಲಿಲ್ಲ. ವಿವೇಕನ ಅಣ್ಣಂದಿರ ಹೆಂಡತಿಯರು 'ದೊಡ್ಡವರ  ಕೇಳದ ಫಲ. ಮಾಗುವಿಗೆ ಆರೋಗ್ಯ ಸರಿಯಿಲ್ಲ.', ಎಂದು ಆಡಿ ತೋರಿಸಿದರು. ವಿವೇಕ ಕೆಮ್ಮಿ ಸುಮ್ಮನಾದರೆ ಪುಷ್ಪ ತಾನು ಮಗುವನ್ನು ಬೆಳೆಸಿ ಗೆಲ್ಲಿಸಿ ತೋರಿಸಬೇಕೆಂದು ಪಣ ತೊಟ್ಟಳು. ಮಗುವಿನ ಭವಿಷ್ಯದ ಬಗ್ಗೆ ಗಂಡನಲ್ಲಿ ತನ್ನ ಯೋಜನೆಗಳನ್ನು ಹಂಚಿಕೊಂಡಳು. ವಿವೇಕ ಪುಷ್ಪಳ ದುಬಾರಿ ಯೋಜನೆಗಳಿಗೆಲ್ಲ ಹಣ ಹೊಂದಿಸುವುದಾದರೂ ಹೇಗೆ ಎಂದು ಚಿಂತಿಸಲಾರಂಭಿಸಿದ. ತನಗೆ ಮುಂದೆ ಬಹಳ  ಕಷ್ಟಕರ ದಿನಗಳು ಎಂದು ತನ್ನ ಹಣೆಬರಹವನ್ನು ತಾನೇ ಹಳಿದುಕೊಂಡ. 
**********************************************************************************************************
ಮಗುವಿನ ನಾಮಕರಣ ಸಮಾರಂಭ ಭರ್ಜರಿಯಾಗಿ ನಡೆಯಿತು. ವಿವೇಕನ ಸಾಲದ ಹೊರೆ ಹೆಚ್ಚಿತು.
**********************************************************************************************************
ಈಗ ಆರ್ಯನ್ ಎಂಬ ಶುಭನಾಮಾಂಕಿತನಾಗಿದ್ದ ಮಗುವಿನ ಮೊದಲನೆ ಹುಟ್ಟುಹಬ್ಬದ ಯೋಜನೆ ಹಾಕಿಕೊಂಡಳು ಪುಷ್ಪ. ದೊಡ್ಡದೊಂದು ಪಾರ್ಟಿ ಆಯೋಜಿಸಿ, ಮನೆಯವರನ್ನೆಲ್ಲ ಕರೆದು, ಬಂದವರಿಗೆಲ್ಲ ಸ್ವಾಗತ ದ್ವಾರದಲ್ಲೇ ಕೋಕಾ-ಕೋಲಾ ಕುಡಿಸಿ, ಬಂದವರ ಮಕ್ಕಳಿಗೆಲ್ಲ ಆಟಗಳನ್ನು ಆಡಿಸಿ, ಮಗನಿಂದ ಕೇಕ್  ಕತ್ತರಿಸಿ, ಕೇಕಿನ ಮೇಲೊಂದು ಪುಟಾಣಿ ಕ್ಯಾಂಡಲ್ ಇರಿಸಿ, ಅದನ್ನು ಮಗನಿಂದ ಊದಿಸಿ, ಎಲ್ಲರೂ ಚಪ್ಪಾಳೆ ಹೊಡೆಯುತ್ತಿದ್ದರೆ ಮಗನಿಗೆ ಮುತ್ತಿಟ್ಟು, ಅದರದ್ದೊಂದು ಫೋಟೋ ಹಿಡಿಸಿ - ಎಂದೆಲ್ಲ ಕನಸು ಕಾಣತೊಡಗಿದ್ದಳು ಪುಷ್ಪ. ಆದರೆ ಮಗ ಆರ್ಯನ್ ಮನೆಯಲ್ಲಿ ಗ್ಯಾಸ್ ಸ್ಟೌವ್ ಉರಿಸುವಾಗ ಬೆಚ್ಚಿ ಬೀಳುತ್ತಿದ್ದ. ಮಗನನ್ನೆತ್ತಿಕೊಂಡು ಅಡಿಗೆ ಮಾಡಲು ಸ್ಟೌವ್ ಹಚ್ಚಿದರೆ ಮಗ ಕಿಟಾರನೆ ಕಿರುಚುತ್ತಿದ್ದ. ಒಂದು ವರ್ಷದ ಮಗುವಿಗೆ ಬೆಂಕಿಯೆಂದರೆ ವಿಪರೀತ ಭಯವಿತ್ತು. ಇದು ಸಹಜವೇ ಆದರೂ ಅವನಿಂದ ಕ್ಯಾಂಡಲ್ ಊದಿಸುವ ತನ್ನ ಕನಸು ನನಸಾಗಬೇಕಾದರೆ ಹೇಗಾದರೂ ಈ ಭಯವನ್ನು ಹೋಗಲಾಡಿಸಬೇಕೆಂದು ಪುಷ್ಪ  ಅದಕ್ಕೆ ಉಪಾಯಗಳನ್ನು ಹುಡುಕಿದಳು. 
ಪ್ರತಿದಿನವೂ ಮಗನ ಮುಂದೆ ಬೆಂಕಿ ಕಡ್ಡಿ ಗೀರುವುದು - ಇದಕ್ಕೆ ಪ್ರತಿಕ್ರಿಯೆಯಾಗಿ ಅವನು ಕಿರುಚಿಕೊಳ್ಳುವುದು - ಪುಷ್ಪಳ ಅವಿವೇಕದ ಬಗ್ಗೆ ವಿವೇಕ ರೇಗುವುದು ಬಹಳ ದಿನ ನಡೆಯಿತು. ಕೊನೆಗೊಮ್ಮೆ ಮಗು ಕಿರುಚಿಕೊಳ್ಳುವುದು ನಿಂತಿತು. ನಂತರ ಕ್ಯಾಂಡಲ್ ಊದುವ ತರಬೇತಿ ನಡೆಯಿತು. ಒಂದು ಸಂಜೆ ಪುಷ್ಪ ಮಗನಿಂದ ಕ್ಯಾಂಡಲ್ ಊದಿಸುವುದರಲ್ಲಿ ಯಶಸ್ವಿಯಾಗಿ, ತಾನು ಮಗನನ್ನು ತಯಾರು ಮಾಡಿದ ರೀತಿಗೆ ಹೆಮ್ಮೆ ಪಟ್ಟುಕೊಂಡು ಬೀಗಿದಳು. ವಿವೇಕ ಹೆಂಡತಿ ಮತ್ತು ಮಗನ ಮೇಲೆ ವಿಪರೀತ ಪ್ರೀತಿ ಉಕ್ಕಿ ಬಂದು ತಮ್ಮ ಮೂವರ ಫೋಟೋ ಒಂದನ್ನು ತನ್ನ ಮೊಬೈಲ್ ಫೋನ್ ನಲ್ಲಿ ಕ್ಲಿಕ್ಕಿಸಿಕೊಂಡ. 
*******************************************************************************************************
ವಿವೇಕನ ಅಣ್ಣಂದಿರ ಮಕ್ಕಳು ಯಾರಿಗೂ ಮೊದಲನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಾಗಿರಲಿಲ್ಲ. ಪುಷ್ಪ ತಾನು ಅಭೂತಪೂರ್ವವಾದದ್ದೇನನ್ನೋ ಸಾಧಿಸಿದ ಖುಷಿಯಲ್ಲಿದ್ದಳು ಮಗನ ಸಮಾರಂಭದ ದಿವಸ. ಸ್ನೇಹಿತರಿಗೆ, ಹಿತೈಷಿಗಳಿಗೆ, ಬಂಧುವರ್ಗಕ್ಕೆ ಆಮಂತ್ರಣವಿತ್ತು. ಪುಷ್ಪಳ ಆಸೆಯಂತೆಯೇ, ಈಗಿನ ಟ್ರೆಂಡ್ ಗೆ ಅನುಗುಣವಾಗಿಯೇ ಛೋಟಾ ಭೀಮನ ಆಕಾರದಲ್ಲಿ ಕೇಕನ್ನು ತಯಾರಿಸಲಾಗಿತ್ತು. ಛೋಟಾ ಭೀಮ ನಗುತ್ತಿದ್ದ. ವಿವೇಕ ಸಾಲದ ಹೊರೆಯಲ್ಲಿ ಒಳಗೊಳಗೆ ಅಳುತ್ತಿದ್ದ. ಸ್ವಾಗತದ್ವಾರದ ಬಳಿಯೇ ಕೋಕಾ-ಕೋಲಾ ಸರಬರಾಜಾಯಿತು. ವಿವೇಕನ ಅಣ್ಣಂದಿರ ಪತ್ನಿಯರು ಬೆರಗು ಹಾಗೂ ಅಸೂಯೆ ಬೆರೆಸಿಕೊಂಡು ಕೋಕಾ-ಕೋಲಾ ಕುಡಿದು ಸಮಾರಂಭದಲ್ಲೇನಾದರೂ ಕೊಂಕು ಹುಡುಕಬಹುದೇ ಎಂದು ಯೋಚಿಸುತ್ತಿದ್ದರು. ಪುಷ್ಪ ತಾನು ಮಗನನ್ನು ತಯಾರು ಮಾಡಿದ ರೀತಿಗೆ ಇವತ್ತು ಎಲ್ಲರೂ ಬೆಚ್ಚಿ ಬೀಳಲಿದ್ದಾರೆ ಎಂಬ ಖಾತ್ರಿಯಲ್ಲಿ ಖುಷಿಯಾಗಿದ್ದಳು. 
**********************************************************************************************************
ಕೊನೆಗೆ ಆ ಘಳಿಗೆ ಬಂತೇ ಬಂತು. ಪುಷ್ಪ ಮಗನನ್ನು ಹಿಡಿದುಕೊಂಡು ನಿಂತಳು. ವಿವೇಕ ಕ್ಯಾಂಡಲ್ ಹಚ್ಚಿದ. ನೆರೆದವರು ಕತ್ತು  ಉದ್ದ ಮಾಡಿ ಪುಷ್ಪಳ ಮಗ ಆರ್ಯನ್ ಕ್ಯಾಂಡಲ್ ಊದುವುದನ್ನು ಕಣ್ತುಂಬ ನೋಡಿ ಆನಂದಿಸಲು ಉತ್ಸುಕರಾಗಿದ್ದರು. ಛಾಯಾಗ್ರಾಹಕ ತಯಾರಾಗಿದ್ದ. ದುಬಾರಿ ಮೊಬೈಲ್ ಫೋನ್ ಗಳಿದ್ದವರು ಈ ಘಳಿಗೆಯನ್ನು ಶಾಶ್ವತವಾಗಿ ಸೆರೆ ಹಿಡಿದುಕೊಳ್ಳಲು ಮೊಬೈಲ್ ಫೋನ್ ಗಳನ್ನು ಆಯುಧಗಳಂತೆ ಎತ್ತಿ ಹಿಡಿದರು. 

ಇಷ್ಟೆಲ್ಲ ಭರ್ಜರಿ ಚಟುವಟಿಕೆಗಳ ಕೇಂದ್ರದಲ್ಲಿದ್ದ ಕೇಕಿನ ಹಿಂದಿದ್ದ ಆರ್ಯನ್ ನನ್ನು ಹಿಡಿದುಕೊಂಡಿದ್ದ ಪುಷ್ಪಳ ಪಕ್ಕ ವಿವೇಕನ ಅಣ್ಣಂದಿರಲ್ಲಿ ಒಬ್ಬನಾದ ಗೋಪಾಲ ತನ್ನ ಮೂರು ವರ್ಷದ ಮಗಳಾದ ಸೋನಂಳನ್ನು ಎತ್ತಿಕೊಂಡು ನಿಂತಿದ್ದ. ಇದೆಲ್ಲ ಭಾವೋದ್ವೇಗ ಉತ್ತುಂಗಕ್ಕೇರಿದೆ ಅನ್ನಿಸಿದಾಗ ಗೋಪಾಲ ಆರ್ಯನ್ ಗೆ, "ಊದು , ಊದು" ಎಂದು ಉತ್ತೇಜಿಸಿದ. ಆಗ ಅದು ನಡೆದು ಹೋಯಿತು - ಅಪ್ಪ ಹೇಳಿದ್ದು ತನಗೇ ಇರಬೇಕು ಎಂದುಕೊಂಡು ಗೋಪಾಲನ ಮಗಳು ಸೋನಂ ಪುಷ್ಪಳ ಮಗ ಆರ್ಯನ್ ಊದಬೇಕಿದ್ದ ಕ್ಯಾಂಡಲ್ ಅನ್ನು ಊದಿ ಬಿಟ್ಟಳು. ಕ್ಯಾಂಡಲ್ ಆರಿ ಹೋಗಿ ಸಣ್ಣ ಹೊಗೆ ಮೇಲೇರುತ್ತಿದ್ದಂತೆ ಪುಷ್ಪ ಸ್ಫೋಟಗೊಂಡು ಕಿರುಚಾಡಿ ಕೊನೆಗೆ ತಾನು ಮಗನನ್ನು ತಯಾರಿಸಿದ ರೀತಿಯನ್ನೆಲ್ಲ ನೆನೆಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು. ವಿವೇಕನ ಹಿರಿಯ ಅಣ್ಣ ಶ್ರೀನಿವಾಸ "Man proposes. God disposes.", ಎಂಬ ಭಾರವಾದ ತತ್ವಶಾಸ್ತ್ರದ ಚಿಂತನೆಯನ್ನು ಪುಷ್ಪಳಿಗೆ ಒಪ್ಪಿಸಿದರು. "ಬೇಕಿದ್ರೆ ಇನ್ನೊಂದು ಕ್ಯಾಂಡಲ್ ತರ್ಲಾ? ನಿನ್ನ ಮಗ ಊದ್ಲಿ.", ಎಂದೂ ಸೇರಿಸಿದರು. ಪುಷ್ಪ ಮತ್ತೂ ಅತ್ತಳು. ಛೋಟಾ ಭೀಮ ನಗುತ್ತಿದ್ದ. 
********************************************************************************************
(ಮುಗಿಯಿತು)

Jan 7, 2014

ಸಾವು-ಬದುಕಿನ ಆಟ

(ಭಾಗ ೧)
ಶರ್ಮಿಳಾಳ ಬಗ್ಗೆ ನೆನೆದಾಗ ನಯನಾಳಿಗೆ ಮೊದಲು ನೆನಪಾಗುವುದು ಅವಳ ದೈವ ಭಕ್ತಿ. ಅದರಲ್ಲೂ ಶಿರಡಿಯ ಸಾಯಿ ಬಾಬಾರ ಬಗ್ಗೆ ಇದ್ದ ಅವಳ ವಿಪರೀತ ಭಕ್ತಿ. ಅವಳು ತನ್ನ ಈ-ಮೇಲ್ ಅಕೌಂಟಿಗಾಗಲಿ, ಕಂಪ್ಯೂಟರ್ ಗಾಗಲಿ ಇಡುತ್ತಿದ್ದ ಪಾಸ್ವರ್ಡ್ ಗಳು ಕೂಡ "LoveYouSairam", "sairam123" ಎಂದಿತ್ಯಾದಿಯಾಗಿ ಅವಳ ಸಾಯಿ-ಭಕ್ತಿ ಯನ್ನು ಪ್ರತಿಬಿಂಬಿಸುವಂತಿದ್ದವು. ಪ್ರತಿ ಗಳಿಗೆಯೂ ಅವಳು ಸಾಯಿ ಬಾಬರೊಂದಿಗೆ ಸಂವಾದ ನಡೆಸುತ್ತಿದ್ದಳು. ಅಗತ್ಯಕ್ಕಿಂತ ಹೆಚ್ಚಾಗಿ ಬಾಬಾರನ್ನು ನಂಬುತ್ತಿದ್ದ ಅವಳು ಭಕ್ತಿಯಿಂದ ಬೇಡಿದರೆ ಕಷ್ಟಗಳೆಲ್ಲವೂ ದೂರವಾಗುವುದೆಂದು ದೃಢವಾಗಿ ನಂಬಿಕೊಂಡಿದ್ದಳು. ಬದುಕಿನಲ್ಲಿ ಅವಳಿಗಿದ್ದ ಕಷ್ಟಗಳೆಂದರೆ ಅವಳ ಕುಟುಂಬದ ಜವಾಬ್ದಾರಿ ಮತ್ತು ಈ ಜವಾಬ್ದಾರಿಗಳ ನಡುವೆಯೂ ಬೇಕೆನಿಸಿದ್ದ ಪ್ರೇಮ. ಮಹೇಶ ಎಂಬ ಹೆಸರಿನ ಅವಳ ಪ್ರಿಯತಮ ಅವಳ ಕಷ್ಟಗಳನ್ನು ಕರಗಿಸುವ ನಾಯಕನಾಗಿರದೆ, ಅವಳ ಕಷ್ಟಗಳನ್ನು ಹೆಚ್ಚಿಸುವ ಖಳನಾಯಕನಾಗಿ ಬಿಟ್ಟಿದ್ದ. ಹುಚ್ಚು ಹುಡುಗಿ ಶರ್ಮಿಳಾ ಮಹೇಶ ಸಿಗದಿದ್ದರೆ ಬಾಳುವುದಿಲ್ಲ ಎಂದು ಹಟ ತೊಟ್ಟಿದ್ದಳು. ಮಹೇಶ ಹುಚ್ಚು ಕುದುರೆಯಂತೆ ಶರ್ಮಿಳಾಳ ಹೊರತಾಗಿಯೂ ಎರಡು ಮೂರು ಹುಡುಗಿಯರೊಂದಿಗೆ ಚೆಲ್ಲಾಟ ನಡೆಸಿದ್ದ. ಶರ್ಮಿಳಾ-ಮಹೇಶರ ಮದುವೆ ಯಾವತ್ತೂ ನಡೆಯುವುದಿಲ್ಲವೆಂದು ತಿಳಿದಿದ್ದೂ ಕೂಡ ನಯನಾ ಶರ್ಮಿಳಾಳ ಹುಚ್ಚು ಪ್ರಯತ್ನಗಳಲ್ಲಿ ಭಾಗಿಯಾಗುತ್ತಿದ್ದಳು.

"ಪ್ರತಿದಿನ ವೈನ್ ಕುಡಿದ್ರೆ ಮುಖದಲ್ಲಿ glow ಬರುತ್ತೆ.", ಎಂದು ಒಮ್ಮೆ ಶರ್ಮಿಳಾಗೆ ಮಹೇಶನನ್ನು ತನ್ನ ಕಾಂತಿಯುತ ಮುಖದ ಸೆಳೆತವೊಂದರಿಂದಲೇ ಉಳಿಸಿಕೊಳ್ಳಬಹುದೆಂಬ ಅದ್ಭುತವಾದ ಉಪಾಯ ಹೊಳೆದು ಇವರಿಬ್ಬರೂ ಮಸಾಲೆ ಪುರಿ, ಗೋಬಿ ಮಂಚೂರಿಗಳಿಗೆ ಕಳೆಯುತ್ತಿದ್ದ ದುಡ್ಡನ್ನುಳಿಸಿ ಗೋಲ್ಕೊಂಡ ವೈನು ಕೊಂಡು ಕುಡಿಯಲಾರಂಭಿಸಿದರು. ವೈನು ಬಾಟಲಿ ಖಾಲಿಯಾಯಿತು. ಮಹೇಶನ ಪ್ರೇಯಸಿಯರ ಸಂಖ್ಯೆ ಹೆಚ್ಚಿತು. ಉಪಾಯ ಫಲಿಸಲಿಲ್ಲ.

*                                                            *                                                            *

ನಯನಾ ಶರ್ಮಿಳಾರು ಸಹೋದ್ಯೋಗಿಗಳು. ಇವರಿಬ್ಬರನ್ನೂ ಹತ್ತಿರ ತಂದಿದ್ದು ಇಬ್ಬರಿಗೂ ಬದುಕಿನಲ್ಲಿದ್ದ ಕಷ್ಟಗಳು. ಒಬ್ಬರ ಸಮಸ್ಯೆಗೆ ಇನ್ನೊಬ್ಬರಲ್ಲಿ ಉತ್ತರ ಹುಡುಕುತ್ತಿದ್ದರೋ, ಅಥವಾ ಇಬ್ಬರೂ ಸಮಾನ ದುಃಖಿಗಳೆಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರೋ ಎಂಬುದು ನಯನಾಳಿಗೆ ಸ್ಪಷ್ಟವಿಲ್ಲ. ಒಟ್ಟಿನಲ್ಲಿ ಗಟ್ಟಿಯಾದ ಸ್ನೇಹ ಬೆಳೆದಿತ್ತು, ಇಬ್ಬರ ಅರಿವಿಗೂ ಬರುವ ಮೊದಲೇ. ನಯನಾಳಿಗೆ ಪ್ರಪಂಚ ಜ್ಞಾನ ಬರುವ ಮೊದಲೇ ಅವಳ ತಂದೆಗೆ ತಲೆಯ ಬಲಭಾಗದಲ್ಲಿ ಶುರುವಾದ ನೋವು ಕೊನೆಗೆ ಮೆದುಳಿನ ತೊಂದರೆಯಲ್ಲಿ ಕೊನೆಗೊಂಡು, ಅವರು ಬದುಕುವ ಸಾಧ್ಯತೆಯೇ ಇಲ್ಲವೆಂಬ ಆಘಾತ ನಯನಾಳ ಮೇಲೆ ಎರಗಿತ್ತು. ನಯನಾಳ ತಾಯಿ ಮಂಜುಳಾ ಗಂಡನ ನೆರಳಿನಲ್ಲಿ ಬದುಕಿದವರು, ಅವರಿಗೆ ಗಂಡನ ಸಾವು ಖಚಿತವೆಂದು ಗೊತ್ತಾದ ಕ್ಷಣದಲ್ಲಿ ತನ್ನಿಬ್ಬರು ಮಕ್ಕಳಿಗೆ ವಿಷವಿಟ್ಟು ಸಾಯಿಸಿ, ತಾನೂ ಕೂಡ ಸಾಯುವುದೆಂದು ನಿರ್ಧರಿಸಿ ಬಿಟ್ಟರು. ನಯನಾ ಪಿ.ಯು.ಸಿ. ಎರಡನೆ ವರ್ಷದಲ್ಲಿದ್ದರೆ, ಅವಳ ತಮ್ಮ ನಿಖಿಲ ಒಂಬತ್ತನೇ ತರಗತಿಯಲ್ಲಿದ್ದ - ಇಬ್ಬರಿಗೂ ತಾಯಿಯ ನಿರ್ಧಾರವನ್ನು ಅಲ್ಲಗಳೆಯುವ ಧೈರ್ಯವಿರಲಿಲ್ಲ. ಅನ್ನಕ್ಕೆ ವಿಷ ಮಿಶ್ರ ಮಾಡಿ ತಯಾರಿಟ್ಟಾಗ, ನಯನಾ " ಅಮ್ಮ,ಕೊನೆಯ ಸಲ ಪಾರ್ಕಿಗೆ ಹೋಗಿ ಬರೋಣ." ಎಂದು ಒತ್ತಾಯ ಮಾಡಿದರೆ ಅಮ್ಮ ಒಪ್ಪಿಕೊಂಡರು.

ಪಾರ್ಕಿಗೆ ಹೋಗಿ ಬಂದು ವಿಷವುಂಡು ಸಾಯುವುದೆಂದು ನಿಶ್ಚಯ ಮಾಡಿಕೊಂಡಿದ್ದ ಮೂವರು ಪಾರ್ಕಿನಲ್ಲಿ ಕಲ್ಲು ಬೆಂಚೊಂದರಲ್ಲಿ ಮಾತಾಡದೆ ಕುಳಿತಿದ್ದರು. ಮಾತನಾಡಿದರೆ ನಿರ್ಧಾರ ಸಡಿಲವಾಗಿಬಿಡಬಹುದೇನೋ ಎಂಬಂತೆ ಕುಳಿತಿದ್ದರು ತಾಯಿ ಮಂಜುಳಾ. ಬದುಕು ಅವರ ಪಾಲಿಗೆ ಮುಗಿದಂತಿತ್ತು. ನಯನಾಳಿಗೆ ಬದುಕು ಮುಗಿಸುವ ಉದ್ದೇಶವಿರಲಿಲ್ಲ. ಎಲ್ಲಿಂದಾದರೂ ಯಾವುದಾದರೊಂದು ಸಹಾಯ  ಬರಬಾರದೆ, ಬದುಕು ಮುಗಿಸುವ ತಾಯಿಯ ನಿರ್ಧಾರ ಬದಲಾಗಬರದೆ ಎಂದು ಆ ಪಾರ್ಕಿನಲ್ಲಿ ಕುಳಿತು ಮನದಲ್ಲೇ ಮೌನವಾಗಿ ಪ್ರಾರ್ಥಿಸುತ್ತಿದಳು.

(ಭಾಗ ೨)

ಈ ಮೂವರು ಹೀಗೆ ಕುಳಿತಿರಬೇಕಾದರೆ, ನಯನಾಳ ಸಹಪಾಠಿ ಗಾಯತ್ರಿ ಅಲ್ಲಿಗೆ ಬಂದಳು. ಗಾಯತ್ರಿ ಬಹಳ ದುಃಖದಲ್ಲಿದ್ದಂತಿದ್ದಳು. ನಯನಾ ಸ್ವತಃ ತಾನೇ ದುಃಖದಲ್ಲಿದ್ದರೂ ಗಾಯತ್ರಿಯನ್ನು ಒತ್ತಾಯ ಮಾಡಿ ವಿಚಾರಿಸಿದಾಗ ಅವಳು ಬಿಕ್ಕಿ ಅಳತೊಡಗಿದಳು. ಕೊನೆಗೆ ನಯನಾ, ತಾಯಿ ಮಂಜುಳಾರಿಬ್ಬರೂ ಅವಳನ್ನು ಸಮಾಧಾನಪಡಿಸಿ ನಿಧಾನಕ್ಕೆ ಕೇಳಿದಾಗ ತನ್ನ ಕಷ್ಟ ಹೇಳಿಕೊಂಡಳು. "ನನ್ನ ತಮ್ಮನಿಗೆ ಹುಟ್ಟಿನಿಂದಲೇ ಬುದ್ಧಿಮಾಂದ್ಯ. ಯಾವ ಮದ್ದೂ ಇಲ್ಲ ಅದಕ್ಕೆ. ಈಗೀಗ ಅವನು ವಿಪರೀತ ಕಿರುಚಾಡ್ತಾನೆ. ಇಡೀ ದಿನ ಅವನನ್ನ control ಮಾಡ್ಲಿಕ್ಕೆ ಒಬ್ರು ಜೊತೆಗೇ ಇರ್ಬೇಕು. ಮನೆಯಲ್ಲಿ ಅವ್ನ ಕಿರುಚಾಟದ ಮಧ್ಯ ನಂಗೆ ಓದ್ಕೊಳ್ಳೋಕೂ ಅಗೊಲ್ಲ."

ಎಲ್ಲವನ್ನೂ ಕೇಳಿಸಿಕೊಂಡ ಮಂಜುಳಾ, "ಇಷ್ಟು ಚಿಕ್ಕ ವಯಸಿನಲ್ಲಿ ಈ ಮಗುವಿಗೆ ಇಂಥ ಕಷ್ಟ ಕೊಟ್ಟು ಪಾರ್ಕಿನಲ್ಲಿ ಬಂದು ಅಳುವಂತೆ ಮಾಡುವ ದೇವರಿಗೆ ಕರುಣೆಯೇ ಇಲ್ಲವೇ?!", ಎಂದು ಮರುಗಿದರು. ಗಾಯತ್ರಿಗೆ ಸಮಾಧಾನ ಮಾಡಿದರು - "ಎಲ್ಲಕ್ಕಿಂತ ದೊಡ್ಡದು ಬದುಕು. ಅಳಬೇಡ, ಧೈರ್ಯವಾಗಿರು."
ತಾಯಿ ಹೀಗೆ ಹೇಳಿದ್ದು ನಯನಾಳಿಗೆ ಆಶ್ಚರ್ಯವಾಯಿತು! ಇವಳ ಬದುಕು ಮಾತ್ರ ದೊಡ್ಡದೇ? ನಮ್ಮ ಬದುಕು ಬದುಕಲ್ಲವೇ? - ಎಂದುಕೊಂಡಳು ಗಾಯತ್ರಿಯನ್ನು ನೋಡುತ್ತಾ. ಸ್ವಲ್ಪ ಹೊತ್ತಿನಲ್ಲಿ ಗಾಯತ್ರಿ ತನ್ನ ಮನೆಗೆ ನಡೆದಳು.

ಗಾಯತ್ರಿ ಅತ್ತ ಹೋಗುತ್ತಿದ್ದಂತೆ, ಸಾವಿನಿಂದ ಬಚಾವಾಗಲು ತನಗಿರುವ ಕೊನೆಯ ದಾರಿ ಗಾಯತ್ರಿಯ ಕಥೆ ಎಂದು ನಯನಾಳಿಗೆ ಅನ್ನಿಸಿತು. ಹೇಗಾದರೂ ಮಾಡಿ ಈ ಕಥೆಯನ್ನು ತಾಯಿಯ ಸಾವಿನ ನಿರ್ಧಾರವನ್ನು ಬದಲಾಯಿಸಲು ಉಪಯೋಗಿಸಬೇಕೆಂದುಕೊಂಡು ಹೇಳಿಯೇಬಿಟ್ಟಳು - "ಅಮ್ಮಾ, ನೋಡು. ಎಲ್ರಿಗೂ ಕಷ್ಟ ಇದೆ. ಎರಡು ವರ್ಷದಿಂದ ಗಾಯತ್ರಿನ ನೋಡ್ತಾ ಇದ್ದೀನಿ, ಆದ್ರೆ ಅವಳಿಗೆ ಇಷ್ಟು ಕಷ್ಟ ಇದೆ ಅಂತ ಗೊತ್ತಿರ್ಲಿಲ್ಲ. ಅಂದ್ರೆ ಕಷ್ಟ ಇದ್ರೂ ಬದುಕಬಹುದು ಅಂತ ಆಲ್ವಾ ಅರ್ಥ? ಒಬ್ಬ ಡಾಕ್ಟರು ಅಪ್ಪ ಉಳಿಯೊಲ್ಲ ಅಂತ ಹೇಳಿದ್ರೆ ಏನಾಯ್ತು? ಇನ್ನೊಬ್ರಿಗೆ ತೋರ್ಸೋಣ. ಆದ್ರೆ ಸಾಯೋದು ಬೇಡ. ನಂಗೆ ಬದುಕ್ಬೇಕು.", ಎಂದು ಒತ್ತಾಯ ಮಾಡುತ್ತಾ ಜೋರಾಗಿ ಅಳತೊಡಗಿದಳು. ವಯಸಿಗೆ ಮೀರಿದ ಮಾತುಗಳನ್ನಾಡಿದ ಮಗಳನ್ನೇ ದಿಟ್ಟಿಸುತ್ತ ಕುಳಿತರು ಮಂಜುಳಾ. ಇದೇ ಹೊತ್ತಿಗೆ ತಮ್ಮ ನಿಖಿಲ ಕೂಡ, " ಅಮ್ಮ,ಸಾಯೋದು ಬೇಡ ಪ್ಲೀಸ್.", ಎಂದು ಅಳತೊಡಗಿದ!

*                                                                 *                                                                 *

ಅಂದು ತಾವು ಬದುಕಿ ಉಳಿದಿದ್ದಕ್ಕೆ ಕಾರಣ ಗಾಯತ್ರಿಯ ಕಥೆ ಎಂದು ನಯನಾ ದೃಢವಾಗಿ ನಂಬಿದ್ದಾಳೆ. ನಯನಾಳ ಮಾತಿನಿಂದ ಮನಸ್ಸು ಬದಲಾಯಿಸಿಕೊಂಡ ಮಂಜುಳಾ ಮನೆಗೆ ಬಂದವರೇ ವಿಷ ಬೆರೆಸಿದ್ದ ಅನ್ನವನ್ನು ಚೆಲ್ಲಿ ಹಣೆಯಲ್ಲಿದ್ದಂತೆ ನಡೆಯಲಿ ಎಂದು ಬದುಕನ್ನೆದುರಿಸಲು ತಯಾರಾದರು. ಮರುದಿನ ಆಸ್ಪತ್ರೆಗೆ ಹೋದರೆ ವೈದ್ಯರು ಐದು ದಿನ ಬಿಟ್ಟು ಕೊನೆಯದೊಂದು ಪರೀಕ್ಷೆ ಮಾಡುವುದಾಗಿಯೂ, ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದರೆ ಜೀವ ಉಳಿಯುವುದಾಗಿಯೂ ಹೇಳಿದರು. ಕೊನೆಗೆ ಅದ್ಭುತವೆಂಬಂತೆ ನಯನಾಳ ಅಪ್ಪ ಬದುಕುಳಿದು ನಿಧಾನವಾಗಿ ಚೇತರಿಸಿಕೊಂಡರು. ಆದರೆ ಮನೆಯವರಿಗೆ ನಿಮ್ಹಾನ್ಸ್ ನಲ್ಲಿ ಕಳೆದ ಆ ದಿನಗಳನ್ನು ಎಂದೂ ಮರೆಯಲಾಗಲಿಲ್ಲ. ಬದುಕು ಎಷ್ಟು ಸೂಕ್ಷ್ಮ ಮತ್ತು ಸುಲಲಿತವಾಗಿ ನಡೆಯುತ್ತಿರುವ ಎಲ್ಲವೂ ಹಳಿ ತಪ್ಪುವುದು ಎಷ್ಟು ಸುಲಭ ಎಂಬ ಸತ್ಯವನ್ನು ಸದಾ ನೆನಪಿಸುತ್ತಿರುತ್ತದೆ.

ಅಪ್ಪ ದೇವರಾಜ್ ಚೇತರಿಸಿಕೊಂಡರೂ ಕೂಡ ಹಿಂದಿನಂತೆ ದುಡಿಯುವ ಸಾಮರ್ಥ್ಯ ಉಳಿಯಲಿಲ್ಲ. ಸ್ಕಾಲರ್ ಶಿಪ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ ನಯನಾ ದುಡಿದು ಸಂಸಾರ ನೋಡಿಕೊಳ್ಳತೊಡಗಿದಳು. ತಮ್ಮ ನಿಖಿಲನನ್ನೂ ಇಂಜಿನಿಯರಿಂಗ್ ಓದಿಸುತ್ತಿದ್ದಳು. ನಯನಾಳಿಗೆ ವಿದ್ಯೆ, ಉತ್ತಮ ಅಂಕಗಳಿದ್ದರೂ ಕೂಡ ಭಾರಿ ಸಂಬಳದ ಕೆಲಸ ಸಿಗದೇ ಮನೆಯ ಖರ್ಚನ್ನೆಲ್ಲ ನೋಡಿಒಳ್ಳುವಷ್ಟರಲ್ಲಿ ಸಾಕುಸಾಕಾಗುತ್ತಿತ್ತು. ನಯನಾಳ ಅಪ್ಪ ಆರೋಗ್ಯ ಹದಗೆಟ್ಟ ನಂತರ ಮಗುವಿನಂತಾಗಿದ್ದರು - ಚಿಕ್ಕ ಪುಟ್ಟ  ವಿಷಯಗಳಿಗೆ,ಕೆಲವೊಮ್ಮೆ ಕಾರಣವೇ ಇಲ್ಲದೆ ಅಳುತ್ತಿದ್ದರು. ಟಿ.ವಿ.ಯಲ್ಲಿ ಯಾವುದಾದರೂ ಭಾವುಕ ಸನ್ನಿವೇಶ ಬಂದರೆ ಆ ಪಾತ್ರಗಳೊಂದಿಗೆ ತಾವೂ ಅಳುತ್ತಿದ್ದರು. ಕೆಲವೇ ತಿಂಗಳ ಹಿಂದೆ  ಗತ್ತಿನಿಂದ, ಕೆಲವೊಮ್ಮೆ ದರ್ಪವೇನೋ ಅನಿಸುವಂತೆ ನಡೆದುಕೊಳ್ಳುತ್ತಿದ್ದ ದೇವರಾಜ್ ಈ ರೀತಿ ಮೇಣದ ಮುದ್ದೆಯಂತೆ ಬದಲಾದದ್ದು ಮನೆಯವರಿಗೆ ದುಃಖ ತರಿಸಿತ್ತು, ಸ್ಥೈರ್ಯ ಕುಸಿದುಬಿಟ್ಟಿತ್ತು.

ನಯನಾ ತಾನು ಹಲ್ಲು ಕಚ್ಚಿಕೊಂಡು, ದುಃಖ ಸಹಿಸಿಕೊಂಡು ಬದುಕಲೇಬೇಕೇಂಬ ಜಿದ್ದಿನಿಂದ ಬೇರೆ ಕೆಲಸ ಹುಡುಕುತ್ತಿದ್ದಳು. ಏನಿಲ್ಲದಿದ್ದರೂ, ಮನೆಯ ಆರ್ಥಿಕ ಪರಿಸ್ಥಿತಿಯನ್ನಾದರೂ ಸುಧಾರಿಸಬೇಕು ಎಂದು ಚಡಪಡಿಸುತ್ತಿದ್ದಳು. ಕೊನೆಗೊಮ್ಮೆ ಬೇರೆ ದಾರಿ ಕಾಣದೆ ಪಾರ್ಟ್ ಟೈಮ್ ಕೆಲಸವೊಂದಕ್ಕೆ ಸೇರಿಕೊಂಡಳು. ಮುಂಜಾನೆ ಎರಡು-ಮೂರು ಗಂಟೆ ಕಿಂಡರ್ ಗಾರ್ಟನ್ ಒಂದರಲ್ಲಿ ಪಾಠ ಮಾಡಿ ನಂತರ ತನ್ನ ಎಂದಿನ ಕೆಲಸಕ್ಕೆ ಹೋಗತೊಡಗಿದಳು. ಇದನ್ನೇ ಮಾಡಮಾಡುತ್ತ ಮಕ್ಕಳ ನಡುವೆ ತನ್ನ ದುಃಖ ಮರೆಯತೊಡಗಿದ್ದಳು. ಆದರೆ ಶಾಲೆಯ ಇತರ ಶಿಕ್ಷಕಿಯರು ತಾವು ಟೀಚರ್ಸ್ ಟ್ರೈನಿಂಗ್ ಮುಗಿಸಿ ಪಡೆಯುತ್ತಿರುವ ಅದೇ ಸಂಬಳವನ್ನು ನಯನಾ ಯಾವುದೇ ತರಬೇತಿಯಾಗಲಿ, ಪೂರ್ವ ಅನುಭವವಾಗಲಿ ಇಲ್ಲದೆ ಪಡೆಯುತ್ತಿದ್ದಾಳೆಂದು ಇವಳನ್ನು ಶತ್ರುವಿನಂತೆ ಕಾಣತೊಡಗಿದರು. ಇದರಿಂದಾಗಿ ನಯನಾ ಕೆಲಸ ಬಿಡಬೇಕಾಯಿತು. ಹೆಚ್ಚು ಸಂಬಳದ ಬೇರೆ ಕೆಲಸದ ಹುಡುಕಾಟ ಮುಂದುವರೆಯಿತು.

*                                                    *                                                                     *

ನಯನಾ ಕೆಲಸ ಹುಡುಕುವಲ್ಲಿ ತನ್ನ ಶಕ್ತಿ ವ್ಯಯಿಸುತ್ತಿದ್ದರೆ, ಶರ್ಮಿಳಾ ಮಹೇಶನನ್ನು ಒಲಿಸಿಕೊಳ್ಳಲು ಶತಪ್ರಯತ್ನದಲ್ಲಿ ತೊಡಗಿದ್ದಳು. ಶರ್ಮಿಳಾ ಮಹೇಶನ ಹುಚ್ಚನ್ನು ಬಿಟ್ಟರೆ ಉದ್ಧಾರವಾಗುತ್ತಾಳೆ ಎಂದು ನಯನಾಳಿಗೆ ಎಷ್ಟೋ ಬಾರಿ ಅನಿಸಿದ್ದಿದೆ. ಆದರೆ ಶರ್ಮಿಳಾಗೆ ಅದನ್ನು ಅರ್ಥ ಮಾಡಿಸುವುದು ಸಾಧ್ಯವಾಗಿರಲಿಲ್ಲ. ಶರ್ಮಿಳಾ ಮಹೇಶರು ಭೇಟಿಯಾಗುವಾಗ ಕೆಲವೊಮ್ಮೆ ನಯನಾಳೂ ಜೊತೆಗಿರುತ್ತಿದ್ದಳು. ಅವರಿಬ್ಬರ ಮಾತುಕತೆಯಲ್ಲಿ ಮಹೇಶನ ಕಿರುಚಾಟ ಮತ್ತು ಶರ್ಮಿಳಾಳ ಮುಸುಮುಸು ಅಳುಗಳ ಪಾಲೇ ಹೆಚ್ಚಿತ್ತು. ಹೀಗೆ ಸಂವಾದವೇ ಇಲ್ಲದೆ ಸಂಬಂಧ ಬೆಳೆಯುವುದಾದರೂ ಹೇಗೆ ಎಂದು ನಯನಾಳಿಗೆ ಅನಿಸಿದ್ದರೂ ಶರ್ಮಿಳಾಳಿಗೆ ಏನೂ ಹೇಳಿರಲಿಲ್ಲ.

ಶರ್ಮಿಳಾಳನ್ನೊಮ್ಮೆ ನಯನಾ ಮನೆಗೆ ಕರೆದಿದ್ದಳು. ಶರ್ಮಿಳಾಳಿಗೆ ತನ್ನ ತಂದೆಯ ಅನಾರೋಗ್ಯದ ವಿಷಯವನ್ನೆಲ್ಲ ಹೇಳಿದ್ದರೂ ಕೂಡ ಅವಳನ್ನು ತಂದೆಯ ಬಳಿ ಕೂರಿಸಿ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಶರ್ಮಿಳಾ ತನ್ನ ಮತ್ತು ಮಹೇಶನ ಕಥೆಯನ್ನು ಹೇಳಿ - ಇಬ್ಬರೂ ಜೋರಾಗಿ ಅಳತೊಡಗಿದ್ದರು. ಇವರಿಬ್ಬರನ್ನು ಸಮಾಧಾನ ಮಾಡುವಷ್ಟರಲ್ಲಿ ನಯನಾಳಿಗೆ ಸಾಕು ಸಾಕಾಯಿತು! ಇದನ್ನೆಲ್ಲಾ ನೋಡಿದ ತಾಯಿ ಮಂಜುಳಾ ಮುಂದೆ ನೆನಪಾದಾಗಲೆಲ್ಲ "ಪಾಪ, ಪೆದ್ದು ಹುಡುಗಿ!", ಎನ್ನುತ್ತಾರೆ.

ಶರ್ಮಿಳಾ ಏನೇನೋ ಮೋಡಿ ಮಾಡಿ ಮಹೇಶನನ್ನು ಸೆಳೆದುಕೊಂಡು ತನ್ನ ಬಳಿ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಕೂಡ, ಮಹೇಶ ಇವಳ ಯಾವ ತಂತ್ರಕ್ಕೂ ಬಗ್ಗಲಿಲ್ಲ. ಶರ್ಮಿಳಾ ನಯನಾಳಲ್ಲಿ ಹೇಳದಿದ್ದರೂ ಕೂಡ, ಮಹೇಶ ಶರ್ಮಿಳಾಳನ್ನು ದೈಹಿಕವಾಗಿ ಉಪಯೋಗಿಸುತ್ತಿದ್ದಾನೆ ಎಂಬ ಅನುಮಾನ ನಯನಾಳಿಗೆ ಬಂದಿತ್ತು. ಆದರೆ ಮದುವೆಯ ಮಾತೆತ್ತಿದಾಗ ಮಹೇಶ ಉರಿದು ಬೀಳುತ್ತಿದ್ದ. ಮಹೇಶ ತನಗೆ ಸಿಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶರ್ಮಿಳಾ ಹೇಳತೊಡಗಿದ್ದಳು. ಈ ಹೆಣ್ಣು ಹುಚ್ಚನ ಹುಚ್ಚು ಹಿಡಿಸಿಕೊಂಡು ಅವಳು ಜೀವ ಕಳೆದುಕೊಳ್ಳುವುದಾದರೂ ಏಕೆ ಎಂದು ನಯನಾ ಶರ್ಮಿಳಾಳಿಗೆ ಇನ್ನಿಲ್ಲದಂತೆ ಬುದ್ಧಿ ಹೇಳಿದ್ದಳು.

ಇದು ಹೀಗೆಯೆ ಮುಂದುವರಿದು ಕೊನೆಗೊಮ್ಮೆ ಶರ್ಮಿಳಾಳಿಗೂ ಖಡಾಖಂಡಿತವಾಗಿ ಏನಾದರೊಂದು ಆಗಲೇಬೇಕು ಎಂದೆನಿಸಿತು. ಮಹೇಶ ತನ್ನನ್ನು ಮಾಡುವೆ ಆಗುತ್ತಾನೋ ಇಲ್ಲವೋ ಎಂದು ತೀರ್ಮಾನ ಆಗಲೇಬೇಕೆಂದು ನಯನಾಳನ್ನು ಜೊತೆಗಿಟ್ಟುಕೊಂಡು ಮಹೇಶನನ್ನು ಮಾತುಕತೆಗೆ ಕರೆದಳು. ಶರ್ಮಿಳಾ ಗಂಭೀರವಾಗಿ ಮಾತಾಡಿದರೆ ಮಹೇಶ ಉಡಾಫೆ ಮಾಡಿದ. ಕೊನೆಗೆ ನಯನಾ ಮಹೇಶನಿಗೆ ನಾಟುವಂತೆ ಕೇಳಿದಳು - "ಒಂದೇ ಮಾತಿನಲ್ಲಿ ಹೇಳು ಮಹೇಶ್. ನೀನು ಶರ್ಮಿಳಾನ ಮದುವೆ ಆಗ್ತೀಯಾ ಇಲ್ವಾ?"

ಮಹೇಶ ನಯನಾಳೀಂದ ಇಂಥ ನೇರ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. "ಬ್ಬೆಬ್ಬೆಬ್ಬೆ" ಎಂದ. ದೃಷ್ಟಿ ತಪ್ಪಿಸಿದ. ಕೊನೆಗೆ ತನ್ನ ಪಾಡು ತನಗೇ ಸಹಿಸಿಕೊಳ್ಳಲಾಗದೆ ಇಲ್ಲದ ಸಿಟ್ಟು ಬರಿಸಿಕೊಂಡು, "ನೀವೇ ಹೇಳಿ ಸಿಸ್ಟರ್. ಇವಳನ್ನ ಯಾರಾದ್ರೂ ಮದುವೆ ಆಗ್ತಾರಾ?", ಎಂದ.
ಕೂಡಲೆ ಶರ್ಮಿಳಾಳತ್ತ ತಿರುಗಿದ ನಯನಾ, "ಈ ನಾಯಿನ ಮರ್ತು ಬಿಡು. ಶರ್ಮಿಳಾ, ಇನ್ನು ಒಂದು ನಿಮಿಷ ಕೂಡ ಇಲ್ಲಿರೋದು ಬೇಡ. ಗುಡ್ ಬೈ ಹೇಳು ಇವ್ನಿಗೆ.", ಎಂದಳು. ನಯನಾಳ ದನಿಯಲ್ಲಿದ್ದ ಗಾಂಭೀರ್ಯಕ್ಕೆ ಹೆದರಿಕೊಂಡ ಶರ್ಮಿಳಾ ನಯನಾಳ ಜೊತೆ ನಡೆದು ಬಿಟ್ಟಳು.

ಮಹೇಶನಿಗೆ ಪಿಚ್ಚೆನಿಸಿತು. "ಸಿಸ್ಟರ್, ನಿಲ್ಲಿ. ಒಂದ್ನಿಮಿಷ", ಎಂದು ಬೇಡಿಕೊಳ್ಳುತ್ತಿದ್ದರೂ ಕೇಳಿಸಿಕೊಳ್ಳದೆ ಇಬ್ಬರೂ ನಡೆದು ಬಂದು ಬಿಟ್ಟರು.

*                                                       *                                                         *

ಇದು ನಡೆದ ಒಂದು ವಾರದೊಳಗೆ ನಯನಾಳ ಬದುಕಿನಲ್ಲಿ ಮತ್ತೊಂದು ಆಘಾತ ಅವಳ ತಂದೆ ದೇವರಾಜರ ಹೃದಯಾಘಾತದ ರೂಪದಲ್ಲಿ ಎರಗಿತು. ಮಧ್ಯರಾತ್ರಿ ನೋವು ಕಾಣಿಸಿಕೊಂಡು, ಮಕ್ಕಳಿಬ್ಬರೂ ಮಲಗಿರುವಾಗ, ಹೆದರಿಕೊಂಡಿದ್ದ ಪತ್ನಿ ಮಂಜುಳಾರನ್ನು ಕರೆದುಕೊಂಡು ಆಟೊ ರಿಕ್ಷಾ ಹಿಡಿದು ಆಸ್ಪತ್ರೆಯ ಮುಂಬಾಗಿಲು ದಾಟುವಷ್ಟರಲ್ಲಿ ದೇವರಾಜ್ ಕುಸಿದು ಬಿದ್ದರು. ಇಷ್ಟೆಲ್ಲವೂ ಮಧ್ಯರಾತ್ರಿ ನಡೆದು ಹೋದರೂ ಕೂಡ, ನಯನಾ ನಿಖಿಲರಿಗೆ ವಿಷಯ ತಿಳಿದದ್ದು ಮುಂಜಾನೆಯೇ! ಮತ್ತೊಂದು ಗಂಡಾಂತರದಿಂದ ತಪ್ಪಿಸಿಕೊಂಡು ಬದುಕಿ ಉಳಿದ ದೇವರಾಜರಿಗೆ ಸಂಜೆಯ ಒಳಗೆ angioplasty ಮಾಡಿಸಬೇಕೆಂದು ವೈದ್ಯರು ಹೇಳುತ್ತಿದ್ದರೆ ನಯನಾಳ ತಲೆಯಲ್ಲಿ ದುಡ್ಡು ಹೊಂದಿಸುವುದು ಹೇಗೆ ಎಂಬ ಪ್ರಶ್ನೆಯೊಂದೇ ಓಡುತ್ತಿತ್ತು. ವೈದ್ಯರು ಹೇಳಿದ್ದೊಂದೂ ಅರ್ಥವಾಗಲಿಲ್ಲ. ಮನಸ್ಸು-ಬುದ್ಧಿ ಎರಡಕ್ಕೂ ಮಂಕು ಬಡಿದಿತ್ತು.

ಅಂದು ಸಂಜೆ ದೇವರಾಜರ ಶಸ್ತ್ರಚಿಕಿತ್ಸೆ ಅವರ ಸ್ನೇಹಿತರೊಬ್ಬರು ಸಾಲವಾಗಿ ಕೊಟ್ಟ ಮೊತ್ತದಿಂದ ನಡೆಯಿತು. ಆದರೆ ನಯನಾಳಿಗೆ ಗುರಿಯೇ ಇರದ, ಕೊನೆಯೇನೆಂಬುದೇ ತಿಳಿಯದ ಹುಚ್ಚು ಓಟದಲ್ಲಿ ಓಡಿ ಸುಸ್ತಾಗಿತ್ತು. ಅಪ್ಪ ಐ.ಸಿ.ಯು. ನಲ್ಲಿ ಮಲಗಿದ್ದರು. ತಾಯಿ ಮಂಜುಳಾ ಅಳುವೊಂದರ ಹೊರತು ಬೇರೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ಕೊಡುತ್ತಿರಲಿಲ್ಲ. ತಮ್ಮನ ತಲೆಯಲ್ಲಿ ಏನು ನಡೆಯುತ್ತಿದೆ ಎಂದೇ ಅವಳಿಗೆ ತಿಳಿಯುತ್ತಿರಲಿಲ್ಲ - ಅವನು ತನ್ನ ಸ್ನೇಹಿತರ ಜೊತೆ ಮಾತಾಡದೆ ಕುಳಿತಿದ್ದ. ಇದಕ್ಕೂ ತನಗೂ ಸಂಬಂಧವಿಲ್ಲವೆಂದುಕೊಂಡಿದ್ದಾನೇ ಇವನು? - ಅರ್ಥವಾಗಲಿಲ್ಲ. ಅಂದು ಸಂಜೆ ಬಿಕೋ ಎನ್ನುತ್ತಿದ್ದ ಆಸ್ಪತ್ರೆಯ ಕಾರಿಡಾರಿನಲ್ಲಿ ಒಮ್ಮೆಗೆ ಅವಳಿಗೆ ಅನಾಥಳಾದಂತೆ ಭಾಸವಾಯಿತು. ಹೆಚ್ಚು ಸಂಬಳದ ಕೆಲಸದ ಹಿಂದೆ ತಾನು ಓಡಿದ್ದು ವ್ಯರ್ಥವಾದಂತೆ ಅನ್ನಿಸಿತು. ತಂದೆಯ ಆರೋಗ್ಯ ಇನ್ನೂ ಕೆಡುತ್ತದಷ್ಟೆ ಹೊರತು ಅದು ಸರಿ ಹೋಗಿ ಮೊದಲಿನ ಅಪ್ಪನನ್ನು ಮತ್ತೆ ನೋಡಲು ಸಾಧ್ಯವಿಲ್ಲ. ಅಮ್ಮ ಮೊದಲಿನಂತೆ ನಗುನಗುತ್ತ ಉತ್ಸಾಹದಿಂದಿರುವುದು ಸಾಧ್ಯವಿಲ್ಲ. ತನ್ನ ಮೇಲಿರುವ ಸಾಲದ ಹೊರೆಯನ್ನು ತನ್ನ ಸಂಬಳದಲ್ಲಿ ತೀರಿಸುವುದೂ ಸಾಧ್ಯವಿಲ್ಲ. 'ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ' ಎಂದು ಹೇಳುವುದು ಇದನ್ನೇ ಏನು?! ನಿಖಿಲ್  ತನ್ನ ಸ್ನೇಹಿತರ ಜೊತೆ ಕೂರುವ ಬದಲು ನನ್ನ ಬಳಿ ಬಂದು ಒಳ್ಳೆಯದೋ ಕೆಟ್ಟದ್ದೋ, ಉಪಯೋಗವಾಗುವಂತದ್ದಾಗಲೀ ವ್ಯರ್ಥವೆನಿಸುವಂಥದ್ದಾಗಲೀ ಒಂದೆರಡು ಮಾತಾಡಬಾರದೇ! ಅವನೇಕೆ ಬೇರೆಯದೇ ಪ್ರಪಂಚದ ಭಾಗವಾಗಿರುವವನಂತೆ ಒಬ್ಬೊಬ್ಬನೇ ಓಡಾಡುತ್ತಾನೆ! - ನಯನಾ ಆಸ್ಪತ್ರೆಯ ಬಿಕೋ ಎನ್ನುತ್ತಿದ್ದ ಕಾರಿಡಾರಿನ ಮೂಲೆಯೊಂದರಲ್ಲಿ ಸದ್ದಿಲ್ಲದೇ ಬಿಕ್ಕಿ ಬಿಕ್ಕಿ ಅತ್ತಳು.

*                                                 *                                               *

"ಸುಮ್ಮನೆ ಒದ್ದಾಡ್ತಾ ಇದ್ದೀನಿ ಅಷ್ಟೆ ಕಣೆ. ಇದು ಯಾವ್ದನ್ನೂ ಸರಿ ಮಾಡೋದು ಸಾಧ್ಯಾನೇ ಇಲ್ಲ!" - ನಯನಾ ಹೇಳಿದರೆ ಪ್ರತಿಕ್ರಿಯಿಸುವುದು ಹೇಗೆಂದು ತಿಳಿಯದೆ ಕುಳಿತಿದ್ದಳು. ಶರ್ಮಿಳಾ ಮಹೇಶನನ್ನು ಉಳಿಸಿಕೊಳ್ಳಲು ವರ್ಷಗಳ ಕಾಲ ವ್ಯರ್ಥ ಪ್ರಯತ್ನ ನಡೆಸಿದ್ದಳು. ಮದುವೆಯಾಗುವುದಾದರೆ ಅವನನ್ನೇ ಎಂದು ಎಂದೋ ನಿಶ್ಚಯಿಸಿಕೊಂಡಿದ್ದ ಅವಳ ಮುಂದೆ ಈಗ ಯಾವುದೇ ದಾರಿಗಳಿರಲಿಲ್ಲ.
ನಯನಾ ಸ್ವಗತವೆಂಬಂತೆ ಮಾತು ಮುಂದುವರೆಸಿದ್ದಳು - "ಅಪ್ಪ ಮತ್ತೆ ಮೊದಲಿನ ಹಾಗೆ ಅಗೊಲ್ಲ. ಅಮ್ಮನ ಅಳು ನಿಲ್ಲೊಲ್ಲ. ನಿಖಿಲನ ತಲೆಯಲ್ಲಿ ಅದೇನು ಓಡ್ತಿದ್ಯೋ, ಗೊತ್ತಿಲ್ಲ! ಏನಿದೆ ನಂಗೆ ಬದುಕಿನಲ್ಲಿ!"
"ನಯನಾ, ನಾವಿಬ್ರೂ ಆತ್ಮಹತ್ಯೆ ಮಾಡ್ಕೊಂಡು ಬಿಡೋಣ." - ಶರ್ಮಿಳ ಮೆತ್ತಗೆ ಹೇಳಿದಳು. "ಮಹೇಶ ನಂಗೆ ಸಿಗೊಲ್ಲ. ಅವನಿಲ್ದೆ ನಾನು ಬದುಕೊಲ್ಲ."
ನಯನಾಳಿಗೆ ಸಿಟ್ಟು ಬಂತು - "ಆ ಹುಚ್ಚು ನಾಯಿಗೋಸ್ಕರ ನೀನ್ಯಾಕೆ ಸಾಯಬೇಕು!", ಎಂದು ಶರ್ಮಿಳಾಳನ್ನು ಗದರಿದಳು.
"ನಾನು ಹೇಗೆ ಹೇಳ್ಲಿ ನಯನಾ? ಬದುಕಿದ್ರೆ ಅವ್ನ ಜೊತೆ, ಮದ್ವೆ ಆದ್ರೆ ಅವ್ನನ್ನೇ. ನಂಗೆ ಬೇರೆ ದಾರಿ ಇಲ್ಲ.", ಎಂದು ಅಳತೊಡಗಿದಳು. ಹಿಂದೆ ಆಗಿದ್ದರೆ ಶರ್ಮಿಳಾಳನ್ನು   ಗದರಿ ಸಮಾಧಾನ ಮಾಡುತ್ತಿದ್ದ ನಯನಾ ಇಂದು ತಾನೂ ಅಳತೊಡಗಿದಳು. ಮನಸ್ಸು ಹಗುರಾಗುವವರೆಗೆ ಅತ್ತ ನಂತರ ನಯನಾ ಹೇಳಿದಳು - " ಸರಿ. ಇಬ್ರೂ ಆತ್ಮಹತ್ಯೆ ಮಾಡ್ಕೊಂಡು ಬಿಡೋಣ!"
ನಯನಾಳ ಒಪ್ಪಿಗೆ ಸಿಕ್ಕ ಕೂಡಲೇ ಶರ್ಮಿಳಾ ಗೆಲುವಾದಳು. ಘನವಾದದ್ದೇನನ್ನೋ ಸಾಧಿಸಲಿದ್ದೇನೆಂಬಂತೆ ಸಾಯುವ ವಿಧಾನ, ಸಾಯುವ ದಿನವನ್ನೆಲ್ಲ ಹೇಳಿದಳು - "ಹನ್ನೆರಡ್ರಿಂದ ಹದಿನೈದು ನಿದ್ದೆ ಮಾತ್ರೆ ಸಾಕು ಒಬ್ರನ್ನ ಸಾಯ್ಸೋಕೆ. ನಾನು ಹೊಂದಿಸ್ತೀನಿ. ಬರುವ ತಿಂಗಳು - ಆಗಸ್ಟ್ ಇಪ್ಪತ್ತಕ್ಕೆ ಸಾಯೋಣ."
ನಯನಾ ಏನೂ ಮಾತಾಡಲಿಲ್ಲ. ಗಟ್ಟಿ ಮನಸ್ಸು ಮಾಡಿಕೊಂಡು ಸತ್ತು ಬಿಟ್ಟರೆ ಕಷ್ಟಗಳಿಗೆಲ್ಲ ಕೊನೆ! ಎಂದುಕೊಂಡು ಮುಗುಳ್ನಕ್ಕಳು.
*                                                         *                                                          *
(ಭಾಗ ೩)
ಆದರೆ  ನಡೆದದ್ದೇ ಬೇರೆ! ಸಾವೆಂಬ ಬದುಕಿನ ಪರಮ ಸತ್ಯಕ್ಕೆ  ತಮ್ಮನ್ನು ತಾವೇ ಒಡ್ಡಿಕೊಳ್ಳುವುದೆಂದು ನಿರ್ಧರಿಸಿದ ಎರಡೇ ವಾರಕ್ಕೆ ಬದುಕೆಂಬ ಮಹಾಮಾಯೆಯನ್ನು ಮುಂದುವರೆಸಲು ಚಿಕ್ಕದೊಂದು ಕಾರಣ ನಯನಾಳಿಗೆ ದೊರಕಿತು. ಅವಳು ಹುಡುಕುತ್ತಿದ್ದ ಹೆಚ್ಚು ಸಂಬಳದ ಕೆಲಸ ಅವಳನ್ನು ಹುಡುಕಿಕೊಂಡು ಬಂತು. ನಯನಾ ಕೆಲಸ ಬದಲಿಸುವ  ತಲೆಬಿಸಿಯಲ್ಲಿ ಮುಳುಗಿ ಹೋದಳು. ಸಾವಿನ ನಿರ್ಧಾರ ಸಡಿಲವಾಯಿತು. ಮುಂದಿನ ತಿಂಗಳು ಸಾಯುವವಳು ಕೆಲಸವೇಕೆ ಬದಲಾಯಿಸುತ್ತಿರುವೆ ಎಂದು ಶರ್ಮಿಳಾ ಕೇಳಲಿಲ್ಲ. ತಾನು ಹಿಂಜರಿಯುವುದು ಅವಳಿಗೆ ಆಗಲೇ ಗೊತ್ತಾಗಿತ್ತೆ?

ಒಮ್ಮೆ ಹೊಸ ಕೆಲಸದಲ್ಲಿ ತುಂಬಾ ಮುಖ್ಯವಾದ ಒಂದು ಮೀಟಿಂಗಿನಲ್ಲಿದ್ದಾಗ ಶರ್ಮಿಳಾ ಕರೆ ಮಾಡಿದಳು. ನಯನಾ ಎರಡು ಮೂರು ಬಾರಿ ಸೈಲೆಂಟಿಗೆ ಹಾಕಿ ಕೂತಳು. ಶರ್ಮಿಳಾ  ಮತ್ತೆ ಕರೆ ಮಾಡಿದಾಗ ಮೀಟಿಂಗ್ ರೂಮ್  ನಿಂದ ಹೊರಗೆ ಬಂದು ಕರೆಯನ್ನು ತೆಗೆದುಕೊಂಡಳು. ಶರ್ಮಿಳಾ ಮತ್ತೆ ಸಾವಿನ ವಿಷಯ ಮಾತಾಡುತ್ತಾಳೆಂದು ತಿಳಿದಿತ್ತು, ಹಾಗಾಗಿ ಅವಳು ಮಾತಾಡುವ ಮೊದಲೇ ನಯನಾ ಹೇಳಿದಳು, "ಶರ್ಮಿಳಾ, ನಂಗೆ ನಿಜವಾಗಲೂ ಸಾಯೋಕೆ ಇಷ್ಟವಿಲ್ಲ ಕಣೆ. ನಾನು ಆಸೆ ಪಡ್ತಿದ್ದ ಹಾಗೆ ಒಳ್ಳೆ ಕೆಲ್ಸ ಸಿಕ್ಕಿದೆ. ದೇವ್ರು ಬದುಕೋಕೆ ಒಂದು ಚಾನ್ಸ್ ಕೊಟ್ಟಿದ್ದಾನೆ, ಅದನ್ನ ಉಪಯೋಗಿಸ್ಕೋಬೇಕು ನಾನು!"

"ಆದ್ರೆ ನಾವು ಮಾತಾಡ್ಕೊಂಡಿದ್ದು ಬೇರೇನೇ ಆಲ್ವಾ ನಯನಾ??", ಶರ್ಮಿಳಾ ಏನೋ ಹೇಳ ಹೊರಟರೆ ನಯನಾ ಅವಳನ್ನು ತಡೆದು ಕೇಳಿದಳು, "ನಾನು ಈಗ ಒಂದು ಮೀಟಿಂಗ್ ನಲ್ಲಿ ಇದ್ದೀನಿ. ಮತ್ತೆ ಕಾಲ್ ಮಾಡ್ತೀನಿ ನಿಂಗೆ."
*                                                  *                                                                      *

ಅಂದು ನಯನಾ ಮತ್ತೆ ಶರ್ಮಿಳಾಳಿಗೆ ಕರೆ ಮಾಡಲಿಲ್ಲ. ಅವಳು ಶರ್ಮಿಳಾಳಿಗೆ ಮತ್ತೆ ಕರೆ ಮಾಡಿದ್ದು ಹೊಸ ಕೆಲಸದಲ್ಲಿ ಮೊದಲ ಸಂಬಳ ಬಂದಾಗಲೇ. ಆದರೆ ಶರ್ಮಿಳಾ ಎತ್ತಲಿಲ್ಲ. ಅವಳ ಪೀಜಿಯ ಬಳಿ ಹೋದರೆ ಅವಳು ಅಲ್ಲಿರಲಿಲ್ಲ. ವಿಳಾಸ ಬದಲಿಸಿದ್ದಳು, ಅಥವಾ ಹಾಗೆಂದು ನಯನಾ ನಂಬಿಕೊಂಡಳು. ಮತ್ತೆ ಯಾವತ್ತೂ ಶರ್ಮಿಳಾಳಿಂದ ನಯನಾಳಿಗೆ ಯಾವುದೇ ಕರೆ ಬರಲಿಲ್ಲ. 

ಈಗ ವರ್ಷಗಳೇ ಕಳೆದಿವೆ. ಶರ್ಮಿಳಾಳ ಸುದ್ದಿ ಇಲ್ಲ. ಈಗ ಅವಳ ಬಗ್ಗೆ ನೆನೆದರೆ ನಯನಾಳಿಗೆ ಮೊದಲಿಗೆ ನೆನಪಾಗುವುದು ಅವಳ ದೈವಭಕ್ತಿ. ಅದರಲ್ಲೂ ಶಿರಡಿಯ ಸಾಯಿಬಾಬಾರ ಬಗ್ಗೆ ಅವಳಿಗಿದ್ದ ವಿಪರೀತ ಭಕ್ತಿ. ಅವಳ ಪಾಸ್ವರ್ಡ್ ಗಳು ಕೂಡ ಅವಳ ಸಾಯಿ ಭಕ್ತಿಯನ್ನು ಪ್ರತಿಬಿಂಬಿಸುತ್ತಿದ್ದವು. ಅಗತ್ಯಕ್ಕಿಂತ ಹೆಚ್ಚಾಗಿ ಸಾಯಿಬಾಬರನ್ನು ನಂಬುತ್ತಿದ್ದ ಅವಳು, ಬಾಬಾರಿಗೆ ಭಕ್ತಿಯಿಂದ ಬೇಡಿಕೊಂಡರೆ ಕಷ್ಟಗಳೆಲ್ಲವೂ ದೂರವಾಗುವುದೆಂದು ನಂಬಿದ್ದಳು. ಹೀಗಿದ್ದ ಅವಳು ಆ ಆಗಸ್ಟ್ ಇಪ್ಪತ್ತರಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಶರ್ಮಿಳಾ ಬದುಕಿರಬಹುದೆ? ಸಾಯಿಬಾಬಾರನ್ನು ನಂಬಿಕೊಂಡು ಎಲ್ಲೋ ಬದುಕಿರಬಹುದು ಎಂದು ನಯನಾ ಭಾವಿಸುತ್ತಾಳೆ. ಹಾಗೆಂದುಕೊಂಡ ಮರುಕ್ಷಣವೇ ಸಾವಿನ ಬಗ್ಗೆ ತಾವು ಮಾಡಿಕೊಂಡ ಒಪ್ಪಂದದಿಂದ ಹಿಂಜರಿದು ತಾನವಳಿಗೆ ಮೋಸ ಮಾಡಿಬಿಟ್ಟೆ ಎಂದು ಚುಚ್ಚಿದಂತಾಗುತ್ತದೆ. ಶರ್ಮಿಳಾ ನೆನಪಾದ ರಾತ್ರಿಗಳಲ್ಲಿ ನಯನಾ ನಿದ್ದೆಗೆಡುತ್ತಾಳೆ. 
*                                                        *                                                                 *

ಮೊನ್ನೆ ಶರ್ಮಿಳಾಳಿಗೆ ಕಳಿಸಿದ್ದ ಈ-ಮೇಲ್ ಕೂಡ ವಿಳಾಸ ಅಸ್ತಿತ್ವದಲ್ಲಿಲ್ಲವೆಂಬ ಸಂದೇಶದೊಂದಿಗೆ ಮರಳಿತು. ಶರ್ಮಿಳಾಳ ಮನೆ ಕಾಳಹಸ್ತಿಯ ಬಳಿ ಎಲ್ಲೋ ಇದೆ ಎಂದು ಅವಳು ಹೇಳಿದ್ದು ನೆನಪು. ನಯನಾ ಕನಸಿನಲ್ಲಿ ಅವಳ ಮನೆಗೆ ಹೋಗಿದ್ದಳು. "ಶರ್ಮಿಳಾ" ಎಂದು ಕರೆದರೆ ಯಾರೂ ಬರಲಿಲ್ಲ. ಮನೆ ಬಿಕೋ ಎನ್ನುತ್ತಿತ್ತು. ನಯನಾಳಿಗೆ ಭಯವಾಯಿತು. ಇನ್ನೆರಡು ಬಾರಿ ಅವಳ ಹೆಸರನ್ನು ಕೂಗಿದಳು. "ನಯನಾ!", ಎಂದು ಕೂಗುತ್ತಾ ಶರ್ಮಿಳಾ ದಡದಡನೆ ಮೆಟ್ಟಿಲಿಳಿದು ಬಂದಳು! ಇಬ್ಬರೂ ತಬ್ಬಿಕೊಂಡು ನಕ್ಕರು. ಮತ್ತೆ ಅತ್ತರು. ಬಳಿಕ ನಕ್ಕರು. 

- ಕನಸಿನಿಂದ ಎಚ್ಚರಗೊಂಡ ನಯನಾಳ ಕಣ್ಣಲ್ಲಿ ನೀರಿತ್ತು. 'ಕಾಳಹಸ್ತಿಗೆ ಇವತ್ತೇ ಹೋಗಬೇಕು.", ಎಂದುಕೊಂಡು ಬೆಳಕಾಗುವುದನ್ನು ಉದ್ವೇಗದಿಂದ ಕಾದಳು. 
*                                                          *                                                                 *
(ಮುಗಿಯಿತು)

Sep 29, 2012

ಅತಿ ಸಣ್ಣ ಕಥೆಗಳು

ಜೀವನ

ಒಂದು  ಮನೆಯಲ್ಲಿ ಮುಂಜಾನೆ ಬೇಗನೆ ಶ್ರಾದ್ಧ ನಡೆಸಿ , ಮತ್ತೊಂದು ಮನೆಯಲ್ಲಿ ಮಗುವಿನ ನಾಮಕರಣ ನಡೆಸಲು ಮೊಪೆಡ್ ನಲ್ಲಿ ಅವಸರವಸರದಲ್ಲಿ ಹೋಗುತ್ತಿದ್ದ ಪುರೋಹಿತರೊಬ್ಬರು ರಸ್ತೆ ಅಪಘಾತದಲ್ಲಿ ಮೃತರಾದರು. ಜೀವನದ ನಶ್ವರತೆ ಸಾಯುವ ಕೆಲವೇ ಕ್ಷಣಗಳ ಹಿಂದೆ ಅರಿವಾಗಿ ಅವರು ಮನದಲ್ಲೇ ನಕ್ಕರು. ಅವರ ಮಕ್ಕಳು ನಶ್ವರ ಜೀವನಗಳನ್ನು ಮುಂದುವರೆಸಿದರು.

ಬಲಿ

ಕೆಲ ವರ್ಷಗಳ ಹಿಂದೆ ದೀಪಾವಳಿಯ ಸಮಯದಲ್ಲಿ ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಪಾತಾಳದಿಂದೆದ್ದು  ಬಂದ. ರಸ್ತೆ, ಬೀದಿ, ಗಲ್ಲಿಗಳಲ್ಲೆಲ್ಲ ಜನ ಹುಚ್ಚೆದ್ದು ಪಟಾಕಿ ಸಿಡಿಸುತ್ತಿದ್ದರು. ಸದ್ದಿಗೆ ಹೆದರಿ ಪಾತಾಳಕ್ಕೆ ಹಿಂದಿರುಗಿದ ಬಲಿ ಮತ್ತೆಂದೂ ಭೂಮಿಯತ್ತ ತಲೆ ಹಾಕುವ ಸಾಹಸ ಮಾಡಲಿಲ್ಲ. ಪಟಾಕಿ ಸದ್ದಿಗೆ ಬಲಿ ಚಕ್ರವರ್ತಿ ಬಲಿಯಾದದ್ದು ತಿಳಿಯದ ಜನ ಪಟಾಕಿ ಸಿಡಿಸುವುದು ನಿಲ್ಲಿಸಲಿಲ್ಲ.

ಅಳು  

ಜಯಮ್ಮನವರು ತಾಯಿಯ ಶವದ ಮುಂದೆ ಅಳುತ್ತ ಕುಳಿತಿದ್ದರು. ಪಕ್ಕದಲ್ಲೆ ಮತ್ತೆ ಯಾರೋ ಬಿಕ್ಕಳಿಸುವ ದನಿ ಕೇಳಿ, ನೋಡಿದರೆ ಅವರ ಪತಿಯ ಅಣ್ಣನ ಮಗಳು, ಹೈ-ಸ್ಕೂಲು ಹುಡುಗಿ. ಜಯಮ್ಮ ತಮ್ಮ ಅಳು ಮರೆತರು, ಆ ಹುಡುಗಿಯ ತಾಯಿ ಸತ್ತದ್ದು ಹಿಂದಿನ ವರ್ಷವಷ್ಟೆ. ಅವಳ ಅಳು ಸದ್ಯಕ್ಕೆ ನಿಲ್ಲುವಂಥದ್ದಾಗಿರಲಿಲ್ಲ.

 






Aug 25, 2012

ನಿನಗೆ ಯಾವ ಗೋಲಿ ಬೇಕು?

  ಆ ಹುಡುಗ ಬೆಳಗಿನಿಂದಲೂ ಅದೇ ಕೋಣೆಯಲ್ಲಿ ಕುಳಿತಿದ್ದ. ಆ ಕೋಣೆಯ ಮೂಲೆಯಲ್ಲಿ ಬಣ್ಣಬಣ್ಣದ ಗೋಲಿಗಳಿದ್ದವು. ಅವುಗಳನ್ನೇ ಬಹಳ ಹೊತ್ತು ನೋಡುತ್ತಾ ಕುಳಿತಿದ್ದ. ಹುಡುಗನ ತಾಯಿ ಈ ಮನೆಯಲ್ಲಿ ಕೆಲಸಕ್ಕಿದ್ದಳು. ಶಾಲೆಗೆ ರಜೆಯಾದ ಕಾರಣ, ಮಗನನ್ನೂ ಕರೆ ತಂದಿದ್ದಳು. ಪರರ ಮನೆಯಲ್ಲಿ ಐದಾರು ವರ್ಷ ವಯಸ್ಸಿನ ಮಕ್ಕಳಿಗಿರಬಹುದಾದ ಸಂಕೋಚದಲ್ಲಿ ಹುಡುಗ ಮೂಲೆಯಲ್ಲಿ ಕುಳಿತಿದ್ದ. ಶೋಕೇಸಿನಲ್ಲಿ ಅಲಂಕಾರಕ್ಕೆಂದು ತಂದಿದ್ದರೋ ಏನೋ, ಗೋಲಿಗಳನ್ನು ಯಾರೋ ಈ ಮೂಲೆಯಲ್ಲಿ ಸುರಿದಿದ್ದರು. ಹುಡುಗ ಗೋಲಿಗಳನ್ನು ಕುಕ್ಕರುಗಾಲಿನಲ್ಲಿ ಕುಳಿತು ನೋಡಿದ. ಕೆಲವನ್ನು ಎತ್ತಿ ಬೆಳಕಿಗೆ ಹಿಡಿದು, ತಿರುಗಿಸಿ ಸಂತೋಷ ಪಟ್ಟ. ಯಾರದಾದರೂ ಹೆಜ್ಜೆ ಸಪ್ಪಳ ಕೇಳಿದಾಗ ಪಟ್ಟನೆ ಕೆಳಗಿಟ್ಟು, ತನಗೂ ಗೋಲಿಗಳಿಗೂ ಸಂಬಂಧವಿಲ್ಲದಂತೆ ನಟಿಸುತ್ತ ಕುಳಿತ. ತಾಯಿ ಗಂಟೆಗೊಮ್ಮೆ ಬಂದು ಮಗ ತಂಟೆ ಮಾಡದೆ ಕುಳಿತಿರುವುದನ್ನು ಖಚಿತಪಡಿಸಿಕೊಂಡು ಮುಗುಳ್ನಕ್ಕು ಕೆಲಸಕ್ಕೆ ಮರಳುತ್ತಿದ್ದಳು. ಮನೆಯೊಡತಿ, 'ಎಂಥ ಪಾಪದ ಹುಡುಗ' ಎಂದುಕೊಂಡಳು ಹಲವು ಬಾರಿ. ಹುಡುಗ ಗೋಲಿಗಳನ್ನೇ ನೋಡುತ್ತಾ ಕುಳಿತ. ಒಂದೊಂದನ್ನೇ ಎತ್ತಿ ಬೆಳಕಿಗೊಡ್ಡಿ, ತಿರುಗಿಸಿ ಅದರೊಳಗಿದ್ದ ವಿಚಿತ್ರ ಆಕಾರಗಳು ಏನಿರಬಹುದೆಂದು ಯೋಚಿಸುತ್ತಾ ಕುಳಿತ. ತಿರುಗಿಸುತ್ತಾ ತಿರುಗಿಸುತ್ತಾ ಗೋಲಿಯೊಳಗೆ ಏನೇನೋ ಕಂಡಂತಾಗಿ ಸಂಭ್ರಮಿಸಿದ. ಪ್ರತಿಯೊಂದು ಗೋಲಿಯನ್ನೂ ಅದೇ ಬೆರಗಿನಿಂದ ಪರೀಕ್ಷಿಸಿದ. ತನ್ನ ಈ ಆಟ ಯಾರಿಗೂ ಗೊತ್ತಾಗಬಾರದೆಂದು ಕಿವಿಗಳನ್ನಗಲಿಸಿ ಹೆಜ್ಜೆ ಸಪ್ಪಳ ಕೇಳಿಸಿಕೊಳ್ಳುತ್ತಲೇ ಆಟ ಮುಂದುವರೆಸಿದ. ಈ ಆಟ ಅವನಿಗೆ ಎಷ್ಟು ಹಿಡಿಸಿಬಿಟ್ಟಿತೆಂದರೆ ಮರುದಿನ ಶಾಲೆಗೆ ಚಕ್ಕರ್ ಹೊಡೆದು ಇಲ್ಲಿಗೆ ಬರುವುದೆಂದು ನಿರ್ಧರಿಸಿದ. ಜ್ವರದ ನಾಟಕ ಸರಿಯೇ, ಹೊಟ್ಟೆನೋವಿನ ನಾಟಕ ಒಳ್ಳೆಯದೇ ಎಂದು ಚಿಂತಿಸಿದ. ಹಿಂದೊಮ್ಮೆ ಬೇಧಿಯ ನಾಟಕ ಆಡಿದ್ದು ನೆನೆಸಿಕೊಂಡ. ಬೇಧಿಯ ನಾಟಕ ಎರಡು ಸಲ ಕೆಲಸ ಮಾಡಿತ್ತು. ಆದರೆ ಮೂರನೆಯ ಸಲ ನಡೆಸಲು ಪ್ರಯತ್ನಿಸಿದಾಗ ತಾಯಿ,'ಮಗನೇ, ನೀನು ಕಕ್ಕಸಿನಿಂದ ಬರುವಾಗ ಈ ಸಲ ನೀರು ಹಾಕಬೇಡ. ನಾನೇ ಕಕ್ಕಸು ತೊಳೆಯುತ್ತೇನೆ.', ಎಂದಳು. ಹುಡುಗ ಕಕ್ಕಸಿಗೆ ಹೋದವನು ಎಷ್ಟೇ ಪ್ರಯತ್ನ ಪಟ್ಟರೂ 'ಬರದಿದ್ದಾಗ', ಅಳುತ್ತಾ ಅಮ್ಮನಲ್ಲಿ ಸತ್ಯ ಒಪ್ಪಿಕೊಂಡ. ಬೇಧಿಯ ನಾಟಕ ಅಂದೇ ಕೊನೆಯಾಯಿತು!

ಜ್ವರದ ನಾಟಕಕ್ಕೆ ತುಂಬಾ ತಯಾರಿ ಬೇಕಾಗುತ್ತದೆ. ಹಿಂದಿನ ಸಂಜೆಯೇ ಕೆಮ್ಮು, ಗಂಟಲು ನೋವುಗಳ ಪ್ರದರ್ಶನವಾಗಬೇಕಾಗುತ್ತದೆ. ಮುಂಜಾನೆ ಕಣ್ಣುಗಳನ್ನು ಜೋರಾಗಿ ತಿಕ್ಕಿಕೊಂಡು ಕೆಂಪು ಮಾಡಿಕೊಂಡು, ಮುಖ ಬಾಡಿಸಿಕೊಂಡು, 'ಅಮ್ಮ, ಜ್ವರ ಇರೋ ಥರ ಅನ್ನಿಸ್ತಾ ಇದೆ', ಎನ್ನಬೇಕು. ಅಮ್ಮನಿಗೆ ಸಂಶಯ ಬಂದು ಹಣೆ, ಕತ್ತುಗಳನ್ನು ಮುಟ್ಟಿ ಪರೀಕ್ಷಿಸುತ್ತಾಳೆ. ನಾಟಕ ಚೆನ್ನಾಗಿದ್ದಲ್ಲಿ, ಹಣೆ ಕತ್ತು ತಣ್ಣಗಿದ್ದರೂ, 'ಒಳ ಜ್ವರವಿರಬಹುದು', ಎಂದುಕೊಂಡು ರಜೆ ಹಾಕಿಸುತ್ತಾಳೆ. ನಾಟಕದಲ್ಲಿ ದೋಷವಿದ್ದರೆ, 'ಸುಳ್ಳು ಹೇಳ್ತೀಯ?', ಎಂದು ಗದರಿ, ಒದ್ದು ಶಾಲೆಗೆ ಕಳಿಸುತ್ತಾಳೆ! ಹಾಗಾಗಿ ಜ್ವರದ ನಾಟಕ ಬಹಳ ಕಷ್ಟ. ಹೊಟ್ಟೆ ನೋವೇ ಸರಿ ಎಂದು ತೀರ್ಮಾನಿಸಿದ ಹುಡುಗ. ಈ ಮಹತ್ವದ ತೀರ್ಮಾನ ಕೈಗೊಂಡ ಬಳಿಕ ಮತ್ತೆ ಗೋಲಿಗಳ ಜೊತೆ ಆಟ ಮುಂದುವರೆಸಿದ. ಪ್ರಪಂಚ ದುಂಡಗಿದೆ ಎಂದು ಮೇಷ್ಟ್ರು ಹೇಳಿದ್ದರು. ಗೋಲಿಯೂ ದುಂಡಗಿತ್ತು. ಗೋಲಿಯೊಳಗೆ ಒಂದು ಪ್ರಪಂಚವೇ ಇತ್ತು. ಹಾಗೆಯೇ ಗೋಲಿಗಳನ್ನು ನೋಡುತ್ತಾ ಹುಡುಗ ಗೋಲಿಯೊಳಗಿನ ಪ್ರಪಂಚದ ಭಾಗವಾಗಿಬಿಟ್ಟ. ಹೆಜ್ಜೆ ಸಪ್ಪಳಕ್ಕೆ ತೆರೆದಿದ್ದ ಕಿವಿ ಈಗ ಗೋಲಿಯೊಳಗಿನ ಪ್ರಪಂಚದ ದನಿಗಳನ್ನು ಕೇಳಿಸಿಕೊಳ್ಳಲು ಯತ್ನಿಸಿತು. ಹುಡುಗನ ಪ್ರಪಂಚದಲ್ಲಿ ಈ ಮಹತ್ವದ ಬದಲಾವಣೆಗಳಾಗುತ್ತಿದ್ದಾಗ, ಆ ಮನೆಯವರು ಇದರ ಪರಿವೆಯೇ ಇಲ್ಲದೆ ಕಾಫಿ-ಉಪ್ಪಿಟ್ಟು, ಟೀವಿ-ವಾರ್ತೆ, ಚುನಾವಣೆ-ಭ್ರಷ್ಟಾಚಾರಗಳ ನೀರಸ ಪ್ರಪಂಚದ ರಗಳೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೋಫಾ-ಕುರ್ಚಿಗಳಲ್ಲಿ ಕೋನ ಬದಲಿಸಿಕೊಳ್ಳುತ್ತಿದ್ದರು.

*                                                                *                                                                      *

ಸಂಜೆಯಾದರೂ ಹುಡುಗನ ಆಟ ಮುಂದುವರೆದಿತ್ತು. ತಾಯಿ ಮನೆಗೆಲಸ ಮುಗಿಸಿ ಮಗನತ್ತ ಬಂದಳು. ಅವನಿಗೆಂದು ಅವಳು ಇಟ್ಟಿದ್ದ ಕುರುಕಲು ತಿಂಡಿಯನ್ನು ಹುಡುಗ ಮುಟ್ಟಿಯೂ ಇರಲಿಲ್ಲ. ತಾಯಿಗೆ ಆಶ್ಚರ್ಯ. 'ಕಿಟ್ಟಿ, ಯಾಕೋ ಏನೂ ತಿಂದಿಲ್ಲ', ಎಂದಳು. ಹುಡುಗನ ಕಿವಿಗಳು ಈ ಪ್ರಪಂಚದ ದನಿಗೆ ಕಿವುಡಾಗಿದ್ದವು. ತಾಯಿ ಮಗನ ತಲೆ ಸವರಿ, ಕೆನ್ನೆ ತಟ್ಟಿ ಮತ್ತೊಮ್ಮೆ ಕೇಳಿದಳು. ಹುಡುಗನಿಗೆ ಒಮ್ಮೆಗೆ ತನ್ನ ಪ್ರಪಂಚದಿಂದ ಬೇರೆ ಪ್ರಪಂಚಕ್ಕೆ ತಂದು ಇಳಿಸಿದಂತಾಗಿ ಬೆಚ್ಚಿ ಬಿದ್ದು, 'ಹಾಂ!' ಎಂದ. ತಾಯಿಗೆ ವಿಷಯ ಗೊತ್ತಾಯಿತು-ಮಗನಿಗೆ ಗೋಲಿಗಳು ಇಷ್ಟವಾಗಿವೆ. ನಾಲ್ಕೈದು ಗೋಲಿಗಳನ್ನು ಮಗನಿಗೆ ತೆಗೆದುಕೊಳ್ಳುವುದೆಂದು ಮನೆಯೊಡತಿಯಲ್ಲಿ ಕೇಳಿದಳು. ಅವಳೂ ಒಳ್ಳೆಯವಳೇ, ಇದಕ್ಕೆಲ್ಲ ಇಲ್ಲ ಎನ್ನುವವಳಲ್ಲ. ಆದರೆ ಆ ಮನೆಯ ಹುಡುಗನ ಕಿವಿ ಚುರುಕಾಯಿತು. ಆ ಗೋಲಿಗಳೆಲ್ಲವೂ ತನಗೆ ಬೇಕು ಎಂದು ಕಿರುಚತೊಡಗಿದ. ಮಗನ ರಂಪ ನೋಡಿ ಮನೆಯೊಡತಿ, 'ಆಯಿತು ಮಗಾ. ಎಲ್ಲ ನಿನಗೇ ಕೊಡ್ತೇನೆ. ಆದರೆ ಒಂದೇ ಒಂದು ಆ ಹುಡುಗನಿಗೆ ಕೊಡೋಣ?', ಎಂದು ಹೇಗೋ ಒಪ್ಪಿಸಿದಳು.

ಇಷ್ಟೆಲ್ಲಾ ಮಾತುಕತೆ-ಸಂಧಾನ  ನಡೆಯುತ್ತಿದ್ದಾಗ ನಮ್ಮ ಹುಡುಗ ಮತ್ತೆ ಗೋಲಿಯೊಳಗಿನ ಪ್ರಪಂಚದ ಜೊತೆ ಸಂಪರ್ಕ ಸಾಧಿಸಿದ್ದ! ಆದರೀಗ ಅವನ ತಾಯಿ ಮತ್ತೆ ಅವನನ್ನು ಈ ಪ್ರಪಂಚಕ್ಕೆ ಎಳೆದು ತಂದು, 'ಇದರಲ್ಲಿ ಒಂದು ಗೋಲಿ - ನಿನಗೆ ಯಾವುದು ಇಷ್ಟವೋ  ಅದು - ತೆಗೋ.' ಎಂದಳು. ಹುಡುಗನಿಗೆ ಗೊಂದಲವಾಯಿತು. ತನ್ನ ಪಾಡಿಗೆ ತಾನು ಆಡಿಕೊಂಡಿದ್ದೆ. ಮರುದಿನವೂ ಆಟ ಮುಂದುವರೆಸಲು ಬೇಕಾದ ಸಿದ್ಧತೆಗಳನ್ನು ನಡೆಸಿಕೊಂಡಿದ್ದೆ. ಅಮ್ಮ ಸುಮ್ಮನೆ ಎಲ್ಲವನ್ನೂ ಕೆಡಿಸುತ್ತಿದ್ದಾಳೆ ಎಂದು ಸಿಟ್ಟಿನಲ್ಲಿ ಮುಖ ಸಿಂಡರಿಸಿಕೊಂಡ. ಇಷ್ಟು ಗೋಲಿಗಳಲ್ಲಿ ಒಂದೇ ಒಂದನ್ನು ಆರಿಸಿಕೊಳ್ಳುವ ಯೋಚನೆ ಅವನಿಗೆ ಹಿಡಿಸಲಿಲ್ಲ. ಹುಡುಗನ ಮನದೊಳಗೆ ಯೋಚನೆಗಳ ಚಂಡಮಾರುತವೇ ಎದ್ದಿತು. ತಾಯಿಗೆ ಗೊತ್ತಾಗಲಿಲ್ಲ. 'ಬೇಗ ತೆಗೋ ಕಿಟ್ಟಿ, ಮನೆಗೆ ಹೋಗೋಣ.', ಎಂದು ಒತ್ತಾಯ ಮಾಡಿದಳು. ಹುಡುಗ ಅಲುಗಲಿಲ್ಲ. 'ತೆಗೊತೀಯೋ, ಇಲ್ಲ ಒದೆ ಬೇಕೋ?', ತಾಯಿ ದನಿ ಎತ್ತರಿಸಿದಳು. ಹುಡುಗ ಒತ್ತಡಕ್ಕೆ ಬಿದ್ದ. ತನಗೀಗ ಒಂದೇ ಒಂದು ಗೋಲಿಯನ್ನು ಎತ್ತಿಕೊಳ್ಳುವುದೇ ಮಾರ್ಗ ಎಂದು ತಡಕಾಡಿದ. ಬೇಗಬೇಗನೆ ಯಾವ ಗೋಲಿ ತನಗಿಷ್ಟವಾದದ್ದೆಂದು ಯೋಚಿಸತೊಡಗಿದ. ಗೋಲಿಗಳ ರಾಶಿಯೇ ಕಣ್ಣ ಮುಂದಿದ್ದಾಗ ಹುಡುಗ ಯಾವ ಗೋಲಿ ತನಗಿಷ್ಟವಾದದ್ದೆಂದು ಯೋಚಿಸಿಯೇ ಇರಲಿಲ್ಲ. ಯಾವ ಗೋಲಿಯನ್ನೂ ಮನೆಗೆ ತೆಗೆದುಕೊಂಡು ಹೋಗುವ ಯೋಚನೆಯೇ ಅವನಿಗೆ ಬಂದಿರಲಿಲ್ಲ. ಒಂದೊಂದು ಗೋಲಿಗೂ ಅದರದ್ದೇ ಅಂದವಿತ್ತು. ಆಡಲಿಕ್ಕೆ ಅವನಿಗೆ ಎಲ್ಲವೂ ಬೇಕಿತ್ತು, ಆದರೆ ಯಾವ ಒಂದನ್ನೂ ತನ್ನದಾಗಿ ಮಾಡಿಕೊಳ್ಳುವ ಹಠ ಅವನಿಗೆ ಇರಲಿಲ್ಲ. ಆದರೀಗ ಜೀವನ್ಮರಣದ ಹೋರಾಟ ಎದುರಾಯಿತು-ಇಷ್ಟರಲ್ಲಿ ತನ್ನ ಪಾಲಿಗೆ ಬಂದದ್ದು ಒಂದು, ಅದನ್ನೂ ತಾನೇ ಆರಿಸಬೇಕು! ಹುಡುಗನಿಗೆ ಭಯವಾಯಿತು. ತಾಯಿಯನ್ನೊಮ್ಮೆ ಗೋಲಿಗಳನ್ನೊಮ್ಮೆ ನೋಡಿ, 'ನಂಗೆ ಗೋಲಿಯೂ ಬೇಡ, ಏನೂ ಬೇಡ.', ಎಂದು ಕಿರುಚುತ್ತಾ ಮನೆಯತ್ತ ಓಡಿದ .

*                                                       *                                         *

ಈ ಘಟನೆಯ ಕಿಟ್ಟಿ ಬೆಳೆದು ಶ್ರೀ|ಕಿಶೋರ್ ಕುಮಾರ್ ಆದ ಮೇಲೂ, ಅಸಂಖ್ಯ ಸಾಧ್ಯತೆಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಸಂದರ್ಭಗಳಲ್ಲಿ, ಈ ಪ್ರಪಂಚದಲ್ಲಿ ಮಹತ್ವದ್ದು ಎನಿಸಿಕೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಣಗಳಲ್ಲಿ - ಅದು ಬೆಡ್ ರೂಮೇ ಆಗಿರಲಿ, ಬೋರ್ಡ್ ರೂಮೇ ಆಗಿರಲಿ, ಕಿಶೋರ್ ಚಡ್ಡಿ ಹಾಕಿಕೊಂಡ ಕಿಟ್ಟಿಯಂತಾಗಿ ತಾಯಿ, 'ನಿನಗೆ ಯಾವ ಗೋಲಿ ಬೇಕು?!', ಎಂದು ಗದರಿದಂತಾಗಿ ಬೆಚ್ಚಿ ಬೀಳುತ್ತಾನೆ!

*                                                      *                                            *

Jul 10, 2012

ಆಶ್ರಮದ ಹಾವುಗಳು

ಹಿಂದೊಂದು ಕಾಲದಲ್ಲಿ ಆಶ್ರಮವೊಂದಿತ್ತು. ಆಶ್ರಮದ ತುಂಬೆಲ್ಲ ಗಡ್ಡ ಬಿಟ್ಟುಕೊಂಡ ಸನ್ಯಾಸಿಗಳೇ ತುಂಬಿದ್ದರು. ಹೊರಗಿನಿಂದ ನೋಡುವವರಿಗೆ ಆಶ್ರಮ ಸುಂದರವಾಗಿಯೇ ಕಾಣುತ್ತಿತ್ತು. ಆಶ್ರಮವಾಸಿಗಳು ಒಬ್ಬರಲ್ಲೊಬ್ಬರು ಮಾತನಾಡುತ್ತಿರಲಿಲ್ಲ. ಎಲ್ಲರೂ ಯಂತ್ರಗಳಂತಿದ್ದರು. ಪ್ರತಿಯೊಬ್ಬರೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅಲ್ಲಿ ಎದುರಿಸುವ ಮತ್ತು ಅನುಸರಿಸುವ ಪ್ರಶ್ನೆಯೇ ಇರಲಿಲ್ಲ. ಒಬ್ಬರ ಪರಿಧಿ ಇನ್ನೊಬ್ಬರ ಪರಿಧಿಯೊಂದಿಗೆ ಘರ್ಷಣೆಗೊಳಗಾಗುವ ಸಂಭವವೇ ಇರಲಿಲ್ಲ. ಎಲ್ಲರೂ ಶಾಂತ, ಮೌನ ತಪಸ್ವಿಗಳಾಗಿದ್ದರು. ಬಿಡುವಿನ ವೇಳೆಯಲ್ಲಿ ತಮ್ಮ ಮನಸ್ಸಿಗೆ ಬಂದ ಸ್ಥಳದಲ್ಲಿ ಕುಳಿತುಕೊಂಡು ಧ್ಯಾನಿಸುತ್ತಿದ್ದರು, ಜಪಿಸುತ್ತಿದ್ದರು.

ಆ ಆಶ್ರಮದ ಈಶಾನ್ಯ ಮೂಲೆಯಲ್ಲಿ ಆಲದ ಮರವೊಂದಿತ್ತು. ಆ ಮರದ ಕೆಳಗೆ ಎಷ್ಟೋ ವರ್ಷಗಳಿಂದ ನಾಶವಾಗದೇ ಉಳಿದ ಹಂಡೆಯೊಂದಿತ್ತು. ಅದರಲ್ಲಿ ಮಾಯೆಯಿಂದಲೋ ಎಂಬಂತೆ ಸದಾಕಾಲ ನೀರು ತುಂಬಿರುತ್ತಿತ್ತು. ಆ ನೀರಿನ ಸ್ಥಿತಿಯನ್ನು ಯಾರೂ ಕೆಣಕಲು ಹೋಗಿರಲಿಲ್ಲ. ಪ್ರಶ್ನಿಸುವ ಮನೋಭಾವವೇ ಇಲ್ಲದ ಆಶ್ರಮವಾಸಿಗಳು ಇದರ ಕುರಿತು ತಲೆ ಕೆಡಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆಶ್ರಮವಾಸಿಗಳು ಇದ್ದದ್ದನ್ನು ಇದ್ದಂತೆ ಒಪ್ಪಿಕೊಳ್ಳುತ್ತಿದ್ದರು. ಅದು ಏಕೆ ಹಾಗಾಗಬೇಕು, ಹೀಗೇಕಾಗಬಾರದು ಎಂದು ಪ್ರಶ್ನಿಸುವ ಸ್ವಭಾವ ಅವರದಲ್ಲ. ಪ್ರಶ್ನೆಗಳಿಂದ ಅಲೆಗಳು ಏರ್ಪಡುತ್ತವೆ, ಅಲೆಗಳು ಸರ್ವನಾಶಕ್ಕೆ ಕಾರಣವಾಗುತ್ತವೆ - ಎಂಬುದು ಅವರು ಯಾರಲ್ಲೂ ಹೇಳದ, ಆದರೆ ಮನಸ್ಸಿನಲ್ಲೇ ಒಪ್ಪಿಕೊಂಡ ಸಿದ್ಧಾಂತವಾಗಿತ್ತು.

ಆಶ್ರಮವಾಸಿಗಳು ಮುಂಜಾನೆ ಎದ್ದಂತೆ ಹಲ್ಲುಜ್ಜಿಕೊಳ್ಳುತ್ತಿದ್ದರು. ಮಾವಿನ ಎಲೆಯಿಂದ ಇದ್ದಲಿನವರೆಗೆ ಯಾವುದಾದರೊಂದು ವಸ್ತುವಿನಿಂದ ಅವರು ಹಲ್ಲುಜ್ಜಿಕೊಳ್ಳುತ್ತಿದ್ದರು. ನಾಗರೀಕ ಮಾನವರಂತೆಯೇ ಅವರು ನಾಲಗೆಯ 'ಅಗ್ರ'ವನ್ನೂ ತೆಗೆಯುತ್ತಿದ್ದರು.ಅವರು ಮುಖ ತೊಳೆದುಕೊಳ್ಳುವ ರೀತಿ ವಿಚಿತ್ರವಾಗಿತ್ತು. ಮುಖಕ್ಕೆ ನೀರು ಹಾಕಿಕೊಂಡು ಅಪ್ರದಕ್ಷಿಣಾಕಾರವಾಗಿ ಮುಖವನ್ನು ಕೈಯಿಂದ ತಿಕ್ಕಿಕೊಳ್ಳುತ್ತಿದ್ದರು. ಮುಖ ತೊಳೆದಾದ ನಂತರ ಪುನಃ ಬಾಯಿ ಮುಕ್ಕಳಿಸುತ್ತಿದ್ದರು.

 ಹಲ್ಲುಜ್ಜಿಯಾದ  ನಂತರ ಅವರು ಸ್ನಾನ ಮಾಡುತ್ತಿದ್ದರು. ನಂತರ ಕಸ ಕಡ್ಡಿ ಸೇರಿಸಿ ಕಲ್ಲು ಕುಟ್ಟಿ ಬೆಂಕಿಯುರಿಸುತ್ತಿದ್ದರು. ಆಗ ತಾನೇ ಕಿತ್ತು ತಂದ ಹಣ್ಣುಗಳನ್ನೂ ತಿನ್ನುವಂಥ ಸೊಪ್ಪುಗಳನ್ನೂ ಸೇರಿಸಿ ಬೇಯಿಸುತ್ತಿದ್ದರು. ಬೆಂದದ್ದು ಸಂಪೂರ್ಣವಾಗಿ ಆರಿದ ಬಳಿಕ ಪದ್ಮಾಸನದಲ್ಲಿ ಕುಳಿತು ತಿನ್ನುತ್ತಿದ್ದರು. ಮಧ್ಯಾಹ್ನದ ಆಹಾರವೂ ಇದೇ ಆಗಿತ್ತು. ರಾತ್ರಿ - ಉಪವಾಸ. ಅವರು ಮಲಗಿಕೊಳ್ಳುವ ಹೊತ್ತಿಗೆ ಅಮಾವಾಸ್ಯೆಯ ದಿನವೂ ಚಂದ್ರ ಕಾಣಿಸಿಕೊಳ್ಳುತ್ತಿದ್ದ. ಇವರನ್ನು ನಿಯಂತ್ರಿಸುವವರು ಯಾರೂ ಇರಲಿಲ್ಲವಾದರೂ ಅವರು ತಮ್ಮ ಮೇಲೆ ಸ್ವಯಂಪ್ರೇರಿತ  ನಿರ್ಭಂದವನ್ನು ಹೇರಿಕೊಂಡಿದ್ದರು. ಅವರಲ್ಲಿ ಭಾವನೆಗಳಿರಲಿಲ್ಲ, ವಿಕಾರಗಳಿರಲಿಲ್ಲ. ಏಕೆಂದರೆ ಸಂತೋಷಪಡಲಾಗಲಿ, ದುಃಖಿಸಲಿಕ್ಕಾಗಲಿ ಅವರಿಗೆ ಕಾರಣಗಳಿರಲಿಲ್ಲ.

ಒಂದು ಸುಪ್ರಭಾತದಲ್ಲಿ ಆಶ್ರಮವಾಸಿಗಳು ಹಲ್ಲುಜ್ಜುತ್ತಿದ್ದಾಗ ಒಂದು ಘಟನೆ ನಡೆಯಿತು - ಅದುವರೆಗೆ ಹಕ್ಕಿಗಳ ಕಿಚಪಿಚ ಹಾಗೂ ಪ್ರಾಣಿಗಳ 'ಗೊರ ಗೊರ', 'ಬೌ ಬೌ', 'ಮಿಯಾಂವ್'ಗಳನ್ನೂ ಮಾತ್ರ ಕೇಳಿದ್ದ ಆಶ್ರಮವಾಸಿಗಳು ಮೊದಲ ಬಾರಿಗೆ ಮನುಷ್ಯನ ದನಿ ಕೇಳಿದರು. ಸುಮುಖನೆಂಬ ಆಶ್ರಮವಾಸಿ ಜೋರಾಗಿ  ಕಿರುಚಿದ್ದನು. ಮೊಟ್ಟ ಮೊದಲ ಬಾರಿಗೆ ತನ್ನ ಎತ್ತರಿಸಿದ ದನಿಯನ್ನು ಕೇಳಿದ ಸುಮುಖನಿಗೆ ಆಶ್ಚರ್ಯವಾಯಿತು. ತನ್ನ  ದನಿಗೆ ಹೆದರಿ ಹೆದರಿ ಹಕ್ಕಿಗಳು ಗಲಿಬಿಲಿಗೊಂಡು ಹಾರಿದ್ದನ್ನೂ, ಆಶ್ರಮದ ಬೆಕ್ಕುಗಳೂ ನಾಯಿಗಳೂ ಬೆದರಿದ ದನಿ ಹೊರಡಿಸಿದ್ದನ್ನೂ ಕಂಡ ಸುಮುಖನಿಗೆ ತನ್ನ ದನಿಗಿರುವ ಶಕ್ತಿಯ ಅರಿವಾಯಿತು. ಇಂಥ ಅದ್ಭುತವನ್ನು ಅಡಗಿಸಿಟ್ಟು ಬದುಕುತ್ತಿರುವ ತಮ್ಮ ಮೇಲೆ ಆತನಿಗೆ ಮರುಕ ಹುಟ್ಟಿತು. ಆತ ಪುನಃ ಪುನಃ ಕಿರುಚಿದ! ಹುಚ್ಚನಂತೆ ದನಿಯೆತ್ತರಿಸಿ ನಕ್ಕ!
 "ನಮಗೆ ಮಾತನಾಡಲು ಗೊತ್ತಿಲ್ಲವೇ? ನಾವೇನು ಮೂಗರೇ! ನಮಗೆ ಭಾಷೆ ಗೊತ್ತಿಲ್ಲವೇ? ನಾವೇಕೆ ಮೌನವಾಗಿರಬೇಕು?" - ಆತ ತನಗೆ ತಾನೇ ಪ್ರಶ್ನಿಸಿಕೊಂಡ.

ಜನ ಸೇರಿದರು. ಅದ್ಭುತವೆಂಬಂತೆ ಎಲ್ಲರೂ ಮಾತನಾಡತೊಡಗಿದರು! "ಏನಾಯಿತು? ಏನಾಯಿತು?" - ಎಲ್ಲರೂ ಕೇಳಿದರು.

ಸುಮುಖನಿಗೆ ಒಮ್ಮೆಗೆ ಎಚ್ಚರವಾಯಿತು. ತಾನು ಕಿರುಚಿದ್ದೇಕೆ ಎಂದು ಯೋಚಿಸಿದ. ಅದೇಕೆಂದು ನೆನಪಾದಾಗ ಆಲದ ಮರದತ್ತ ನಡೆದ. ಅದರ ಕೆಳಗಿದ್ದ ಹಂಡೆಯಲ್ಲಿ ನಾಲ್ಕು, ಐದು, ಹತ್ತು ... ಲೆಕ್ಕವಿಲ್ಲದಷ್ಟು ಹಾವುಗಳು ಹುಟ್ಟಿಕೊಂಡಿದ್ದವು! ಬಾಲವಿಲ್ಲದ, ಅಗಲ ಹೆಡೆಯ ಹಾವುಗಳು!

"ಹಾವು!" - ಆಶ್ಚರ್ಯವೆಂಬಂತೆ ಎಲ್ಲರೂ ಮಾತು ಕಲಿತಿದ್ದರು! ಎಲ್ಲರಿಗೂ ಆಶ್ಚರ್ಯವಾಗಿತು. ಯಂತ್ರಗಳಂತಿದ್ದವರು ಮನುಷ್ಯರಾಗಲು ಕಲಿತಿದ್ದರು.

ಆ ಹಾವುಗಳಿಂದ ಯಾರಿಗೂ ತೊಂದರೆಯಾಗಲಿಲ್ಲ. ಅವುಗಳು ಅಮಲಿನಲ್ಲಿದ್ದಂತಿದ್ದವು. ಏಲಕ್ಕಿ ತೋಟದ ಚೇಳುಗಳು ಕುಟುಕುವುದಿಲ್ಲ (ಅಂತೆ). ಅಂತೆಯೇ ಈ ಹಾವುಗಳು ವಿಷಪೂರಿತ ಹಾವುಗಳೆಂದೆನಿಸಿದರೂ ಯಾರಿಗೂ ಅದರ ಅನುಭವವಾಗಲಿಲ್ಲ ಅರ್ಥಾತ್ ಅದು ಯಾರಿಗೂ ಕಚ್ಚಿರಲಿಲ್ಲ.

ಸುಮುಖ ಪ್ರತಿದಿನ ಆ ಹಾವುಗಳನ್ನು ನೋಡುತ್ತಿದ್ದ. ಅವು ಅವನ ಕುತೂಹಲವನ್ನು ಕೆರಳಿಸಿದ್ದವು. ಆಹಾರವಿಲ್ಲದೆ ಅವು ಹೇಗೆ ಬದುಕುತ್ತವೆ ಎಂಬುದು  ಸುಮುಖನ ಮುಂದಿದ್ದ ಪ್ರಶ್ನೆ.

ಒಂದು ಮುಂಜಾನೆ ಸುಮುಖ ಹಾವುಗಳನ್ನು ನೋಡಲು ಬಂದಾಗ ಅವನಿಗೆ ಆಶ್ಚರ್ಯ ಕಾದಿತ್ತು. ಹಾವುಗಳ ಹೆಡೆಯಲ್ಲಿ, ಎರಡು ಕಣ್ಣುಗಳ ಮಧ್ಯೆ ಮೂರನೆಯ ಕಣ್ಣಿನಂತಿದ್ದ, ವಜ್ರದಂತೆ ಹೊಳೆಯುವಂಥದ್ದೇನೋ ಕಂಡಿತು! ಕೊಂಚ ಸಮಯ ವೀಕ್ಷಿಸಿದ ನಂತರ ಸುಮುಖನಿಗೆ ತಾನು ಕಾಣುತ್ತಿರುವುದು ನಿಜಕ್ಕೂ ವಜ್ರವೆಂಬುದು ಅರಿವಾಯಿತು. ಸುಮುಖ ವಜ್ರವನ್ನೇ ವೀಕ್ಷಿಸುತ್ತಾ ನಿಂತ.

ಇದಾದ ಕೆಲವು ತಿಂಗಳುಗಳ ನಂತರದ ಕಥೆಯನ್ನು ವರ್ತಮಾನ ಕಾಲವೆಂದು ಭಾವಿಸುವುದಾದರೆ, ಈಗ ಆಶ್ರಮಕ್ಕೆ ನಾಗರಿಕತೆಯ ದಾಳಿ ಶುರುವಾಗಿದೆ. ಸುಮುಖನು ಹಾವುಗಳ ತಲೆಯಲ್ಲಿದ್ದ ವಜ್ರಗಳನ್ನೆಲ್ಲ ಪೇಟೆಯಲ್ಲಿ ಮಾರಿ ಮುಗಿಸಿದ್ದಾನೆ! ನಿರ್ವಿಕಾರಿಗಳಾಗಿದ್ದ ಆಶ್ರಮವಾಸಿಗಳೆಲ್ಲರೂ ಸ್ವಾರ್ಥಿಗಳಾಗಿದ್ದಾರೆ. ಎಲ್ಲರೂ ಮಾತನಾಡುತ್ತಾರೆ. ಎಲ್ಲರ ಮನಗಳಲ್ಲಿದ್ದ ವಿಕಾರ ಹೊರ ಬಂದಿದೆ. ಆಶ್ರಮದ ಶಾಂತಿಭಂಗವಾಗಿದೆ. ಹಳೆಯ ಪರಂಪರೆಯವರು ಇದನ್ನೆಲ್ಲಾ ಕಂಡು ವ್ಯಥೆಪಡುತ್ತಿದ್ದಾರೆ.

ಮಾತನಾಡುತ್ತಾ, ಆಶ್ರಮವಾಸಿಗಳಲ್ಲಿ ಅಭಿಪ್ರಾಯ ವ್ಯತ್ಯಾಸ ಕಂಡುಬಂದು ಅವರಲ್ಲಿ ಗುಂಪುಗಾರಿಕೆ ಪ್ರಾರಂಭವಾಯಿತು. ಗುಂಪುಗಳಾದಾಗ ನಾಯಕನ ಅವಶ್ಯಕತೆ ಕಂಡು ಬಂದಿತು. ಆಗ ಚುನಾವಣೆಗಳ ಅವಶ್ಯಕತೆ ಕಂಡು ಬಂದಿತು. ಚುನಾವಣೆಗಳಾದಾಗ ಆಮಿಷ, ಬೆದರಿಕೆ, ದಬ್ಬಾಳಿಕೆಗಲೆಲ್ಲವೂ ಪ್ರಾರಂಭವಾದವು.

ಸುಮುಖ ತನ್ನ ಗುಂಪಿಗೆ ನಾಯಕನಾದ. ಆತ ಮಾತಾಡಿದ, "ನಮ್ಮ ಅಭಿವೃದ್ಧಿಗೆ ನಮ್ಮ ಆಶ್ರಮದ ಈಶಾನ್ಯ ಮೂಲೆಯಲ್ಲಿರುವ ಹಾವುಗಳೇ ಕಾರಣ. ನಮ್ಮ ವಿರೋಧಿ ಬಣದವರು ಆ ಹಾವುಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಆಕಾಶದಲ್ಲಿ ಹಾರಾಡುತ್ತಿದ್ದರೂ ನಾವು ನಮ್ಮ ಬೇರುಗಳನ್ನು ಮರೆಯಬಾರದು."

ಸುಮುಖನ ವಿರೋಧಿ ಬಣದ ನಾಯಕ ದುರ್ಮುಖ ಮಾತನಾಡಿದ,"ನಾವಿನ್ನೂ ಅಭಿವೃದ್ಧಿ ಹೊಂದದಿರಲು ನಮ್ಮ ಆಶ್ರಮದ ಈಶಾನ್ಯ ಮೂಲೆಯಲ್ಲಿರುವ ಹಾವುಗಳೇ ಕಾರಣ. ನಮ್ಮ ವಿರೋಧಿ ಬಣದವರು ಆ ಹಾವುಗಳನ್ನು ನಾಶಪಡಿಸಬಾರದೆಂದು ಹೇಳುತ್ತಿದ್ದಾರೆ. ಬಂಧನವನ್ನು ಕಳಚಿಕೊಂಡ ಹಕ್ಕಿಗಳು ಆಗಸದೆತ್ತರಕ್ಕೆ ಹಾರುತ್ತವೆ, ನಾವು ಮನುಷ್ಯರು ಇನ್ನೂ ಭೂಮಿಗಂಟಿಕೊಂಡಿದ್ದೇವೆ." ಇವರಿಬ್ಬರ ಮಾತುಗಳಿಗೂ ಅವರವರ ಬಣದವರು ತಲೆಯಾಡಿಸಿದರು.

ಈಗ ಇದು ಗುಂಪು-ಗುಂಪುಗಳ ಘರ್ಷಣೆಯಾಗಿರದೆ, ಸುಮುಖ-ದುರ್ಮುಖರ ನಡುವಿನ ಯುದ್ಧವಾಗಿತ್ತು. ಕ್ರಮೇಣ ಗುಂಪುಗಳ ಸದಸ್ಯರ ಅಭಿಪ್ರಾಯಗಳು ಗೌಣವಾಗಿ ಸುಮುಖ-ದುರ್ಮುಖರ ಅಭಿಪ್ರಾಯಗಳಂತೆಯೇ ಅವರವರ ಬಣಗಳು ನಡೆಯತೊಡಗಿದವು.

ಈ ಸ್ಥಿತಿ ಮುಂದುವರೆದಾಗ ಸುಮುಖ-ದುರ್ಮುಖರಲ್ಲಿ ಒಂದು ಒಪ್ಪಂದವಾಯಿತು. ಅದರಂತೆ ಇವರಿಬ್ಬರಲ್ಲಿ ಒಬ್ಬರ ಆಡಳಿತ ಮಾತ್ರ ನಡೆಯಬೇಕಿತ್ತು ಅರ್ಥಾತ್ ಯಾವ ಗುಂಪಿಗೆ ಬಹುಮತವಿತ್ತೋ ಆ ಗುಂಪು ಆಶ್ರಮದ ಆಡಳಿತವನ್ನು ನೋಡಿಕೊಳ್ಳಬೇಕಿತ್ತು.

ಚುನಾವಣೆಯ ದಿನ ನಿಶ್ಚಯವಾಯಿತು. ಸುಮುಖ-ದುರ್ಮುಖರಿಬ್ಬರೂ ಪ್ರಚಾರ ನಡೆಸಿದರು. ಚುನಾವಣೆಗೆ ಎರಡು ವಾರಗಳ ಹಿಂದೆ ಎರಡೂ ಗುಂಪುಗಳಿಗೆ ಘರ್ಷಣೆಯಾಯಿತು. ಇದರ  ಫಲವಾಗಿ ಸುಮುಖಾನ ಗುಂಪಿನ ಇಬ್ಬರು ಹಾಗೂ ದುರ್ಮುಖನ ಗುಂಪಿನ ಒಬ್ಬನ ಕೊಲೆಯಾಯಿತು. ಇದರಿಂದಾಗಿ ಘರ್ಷಣೆ-ಮರುಘರ್ಷಣೆಗಳಾದವು. ಈ ಎರಡು ಇಸಮ್ಮುಗಳ ಘರ್ಷಣೆಯನ್ನು ಕಂಡು ರೋಸಿ ಹೋದ ಯುವಕನೊಬ್ಬನಿದ್ದ. ಚುನಾವಣೆಗೆ ಒಂದು ವಾರ ಬಾಕಿ ಉಳಿದಿದ್ದಾಗ ಆತನಿಗೆ ಗುಂಪುಗಾರಿಕೆ ಹಾಗೂ ಅದರ ಫಲಗಳನ್ನು ಸಹಿಸಲು ಅಸಾಧ್ಯವಾಯಿತು. ಆತ ತನ್ನ ಚೀಲವನ್ನು ಹೊರತೆಗೆದು ಅದರ ಒಳಗಿದ್ದುದನ್ನೆಲ್ಲವನ್ನೂ ಹೊರ ಸುರಿದ. ಅದರಲ್ಲಿದ್ದ ಚೂರಿಯನ್ನು ತೆಗೆದು ಅದರ ಹರಿತವನ್ನು ಪರೀಕ್ಷಿಸಿದ.

ಆತ ಆಶ್ರಮದ ಈಶಾನ್ಯ ಮೂಲೆಯತ್ತ ನಡೆದ. ಮಬ್ಬುಗತ್ತಲಿನಲ್ಲಿ ದಾರಿ ಕಾಣಲಿಲ್ಲವಾದರೂ, ತಡವರಿಸಿಕೊಂಡು ಹಂಡೆಯ ಬಳಿ  ತಲುಪಿದ. ಚೂರಿಯ ಹರಿತವಿರುವ ತುದಿಯಿಂದೊಮ್ಮೆ ಹಂಡೆಯನ್ನು ಸವರಿ ಅದನ್ನು ಹಿಂದಕ್ಕೆಳೆದು ಪುನಃ ಹಂಡೆಯತ್ತ ಬೀಸಿದ.  ಹಂಡೆಯಲ್ಲಾದ ಗಾಯದಿಂದಾಗಿ ನೀರೆಲ್ಲವೂ ಹೊರಗೆ ಸೋರಿ ಹೋಯಿತು. ಅದರ ಕೆಳಗಿದ್ದ ಹಾವುಗಳು ವಿಲವಿಲನೆ ಒದ್ದಾಡತೊಡಗಿದವು. ಯುವಕ ಒದ್ದ ರಭಸಕ್ಕೆ ಹಂಡೆಯೊಳಗಿದ್ದ ಹಾವುಗಳು ಹೊರ ಬಿದ್ದವು. ಒಂದೊಂದನ್ನೇ ಪರೀಕ್ಷಿಸಿ  ಚೂರಿಯಿಂದ ಚುಚ್ಚತೊಡಗಿದ ಯುವಕ. ಹಾವುಗಳು ತುಂಡುತುಂಡಾಗಿ ವಿಲವಿಲನೆ ಒದ್ದಾಡಿದವು. ರಕ್ತ ಸಮುದ್ರವಾಗಿ ಹರಿಯಿತು - ರುಧಿರ ಪ್ರವಾಹ! ಎಲ್ಲೆಲ್ಲೂ ರಕ್ತ! ಯುವಕ ಗಾಬರಿಗೊಂಡ. ತಾನು ರಕ್ತದಲ್ಲಿ  ತೇಲುತ್ತಿದ್ದೇನೆಂದು ಅರಿವಾಯಿತು. ಆಶ್ರಮ ರಕ್ತದಲ್ಲಿ ಮುಳುಗಿತು. ಮಲಗಿದ್ದವರೆಲ್ಲರೂ ಅದೇ ಭಂಗಿಯಲ್ಲಿ ರಕ್ತದಲ್ಲಿ ತೇಲುತ್ತಿದ್ದರು!

ಇದೀಗ ಯುವಕನಿಗೆ ಹೃದಯಾಘಾತವಾಗುವಂಥ ಘಟನೆ ನಡೆಯಿತು-ಕತ್ತರಿಸಲ್ಪಟ್ಟ ಪ್ರತಿಯೊಂದು ಹಾವಿನ ಹೆಡೆಯಿಂದ ಮೂರು  ಚೇಳುಗಳು, ಹೊಟ್ಟೆಯ ಭಾಗದಿಂದ ಆರು ಗೂಬೆಗಳು, ಚಿಕ್ಕ ಬಾಲದ ತುದಿಯಿಂದ ಹನ್ನೆರಡು ಕರಿಬೆಕ್ಕುಗಳು ಹುಟ್ಟಿಕೊಳ್ಳತೊಡಗಿದವು! ಯುವಕ ಕಿರುಚತೊಡಗಿದ - "ಏಳಿ! ಎದ್ದೇಳಿ, ಎಲ್ಲರೂ ಮುಳುಗಲಿದ್ದೀರಿ!" - ಯಾರೋ ಏಳಲಿಲ್ಲ, ಎಲ್ಲರೂ ಯಾವುದೊ ಅಮಲಿನಲ್ಲಿದ್ದಂತಿತ್ತು.

ಯುವಕ ಆಗಸದತ್ತ ನೋಡಿದ - ಸುಮುಖ ದುರ್ಮುಖರು ಪುಷ್ಪಕ ವಿಮಾನದಲ್ಲಿ ಕುಳಿತು ಪ್ರವಾಹವನ್ನು ವೀಕ್ಷಿಸುತ್ತಿದ್ದರು - ಈಗ ಅವರಿಬ್ಬರೂ ಒಂದಾಗಿದ್ದರು! "ಜನರೇ! ಎದ್ದೇಳಿ! ನಮ್ಮ ನಾಯಕರು ನಮಗೆ ಮೋಸ ಮಾಡಿದರು. ಅವರು ನಮ್ಮ ಸ್ಥಿತಿಯನ್ನು ನೋಡಿ ಗಹಗಹಿಸಿ ನಗುತ್ತಿದ್ದಾರೆ! ಎದ್ದೇಳಿ! ಪ್ರತಿಭಟಿಸಿ!" - ಯುವಕ ಕಿರುಚತೊಡಗಿದ, ಕಿರುಚುತ್ತಲೇ ಇದ್ದ. ಯಾರೂ ಎಚ್ಚರಗೊಳ್ಳಲಿಲ್ಲ.

Dec 11, 2011

ವಿಷ್ಣುವರ್ಧನ

Vishnuvardhana

ವಿಷ್ಣುವರ್ಧನ ಎಂಬ ಹೆಸರಿನ ಬಗ್ಗೆ ಹಿಂದೆ ವಿವಾದ ನಡೆದಿತ್ತು. ಈ ಹೆಸರು ದ್ವಾರಕೀಶರ ದುಡ್ಡು ಮಾಡುವ ತಂತ್ರ ಎಂಬುದು ಸ್ಪಷ್ಟ. ಆದರೆ ನಿರ್ದೇಶಕ ಪಿ. ಕುಮಾರ್ ಆ ಹೆಸರಿಗೆ, ಅದು ಉಂಟು ಮಾಡಿರಬಹುದಾದ ನಿರೀಕ್ಷೆಗೆ ನ್ಯಾಯ ಸಲ್ಲಿಸಿದ್ದಾರೆ. ಇದು ಒಂದು ಪಕ್ಕಾ ಮಸಾಲೆ ಚಿತ್ರ. ಬಹಳ ಸಮಯದ ನಂತರ ಕನ್ನಡದಲ್ಲಿ ಬಂದಿರುವ ಒಳ್ಳೆಯ ಮನರಂಜನೀಯ ಚಿತ್ರ.
ಚಿತ್ರಕಥೆ ಬಿಗಿಯಾಗಿದೆ. ನಿರ್ದೇಶಕರು ನಿರೂಪಣೆಯನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕಥೆ ಬಹಳ ಬೇಗ take-off ಆಗುತ್ತದೆ, ಮತ್ತು ಎಲ್ಲೂ ಸಮಯ ವ್ಯರ್ಥವಾಗಿ ಕಳೆದಿಲ್ಲ. ಹಾಸ್ಯವೂ ಕಥೆಯ ಅಂಶವೇ ಆಗಿರುವುದರಿಂದ ಅಲ್ಲೂ ಸಮಯ ವ್ಯರ್ಥವಾಗಿಲ್ಲ. ಸುದೀಪ್ ನಟನೆ lovely and lively ಆಗಿದೆ. ಹರಿಕೃಷ್ಣ ಸಂಗೀತ ಇನ್ನೂ ಚೆನ್ನಾಗಿರಬಹುದಾಗಿತ್ತು. ಪೋಷಕ ನಟರೆಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಜನರನ್ನು theatre ಗಳತ್ತ ಬರುವಂತೆ ಮಾಡುವ ಶಕ್ತಿಯಿರುವ ಒಂದು ಉತ್ತಮ ಚಿತ್ರ ವಿಷ್ಣುವರ್ಧನ.
 

Oct 9, 2011

ಅಯ್ಯೋ ಪರಮಾತ್ಮ, ಭಟ್ರು ಕೈ ಕೊಟ್ರು!




  • ಸಿನಿಮಾ ಪ್ರಾರಂಭವಾದ ಹತ್ತು ನಿಮಿಷಕ್ಕೆ ಪರಮಾತ್ಮ ಎಂಬ ಹೆಸರಿರುವ ನಾಯಕ ಹಿಮಾಲಯ ಹತ್ತಿ ಮುಗಿಸಿರುತ್ತಾನೆ, ಕುಂಗ್-ಫೂ ಕಲಿತು ಬಂದಿರುತ್ತಾನೆ, ಮುಂಬೈನಲ್ಲಿ ಶೇರು ಮಾರುಕಟ್ಟೆಯ ತಂತ್ರಗಳನ್ನು ಕಲಿತು ಲಾಭ ಹೊಂದಿರುತ್ತಾನೆ, ಇಲ್ಲೊಂದು ವಿಂಡ್-ಮಿಲ್ ಫ್ಯಾಕ್ಟರಿಯ ಮಾಲಿಕನಾಗಿರುತ್ತಾನೆ. ಹಾಗಿದ್ದಲ್ಲಿ ಇನ್ನು ಏನೇನು ಮಾಡಬಹುದು ಇವನು ಎನ್ನುವುದು ಸಿನಿಮಾದ ಕಥೆ ಎಂದು ನೀವು ಅಂದುಕೊಂಡರೆ ತಪ್ಪು, ಪರಮಾತ್ಮ ಏನೂ ಮಾಡದೇ ಇರುವಾಗ ಹೇಗಿರುತ್ತಾನೆ ಎನ್ನುವುದು ಈ ಸಿನಿಮಾದ ಕಥೆ ಇದ್ದಂತಿದೆ! ಅಥವಾ ಏನೂ ಮಾಡದೇ ಇದ್ದರೆ ಪರಮಾತ್ಮನಾಗುತ್ತೀರಿ ಎನ್ನುವುದು ಈ ಸಿನಿಮಾದ ಸಂದೇಶವೇ?  
  •  ಪರಮಾತ್ಮ ಎನ್ನುವುದು ನಾಯಕನ ಹೆಸರು ಎಂಬುದು ಬಿಟ್ಟರೆ ಅವನಲ್ಲಿ ಪರಮತ್ಮನಾಗುವ ಯಾವ ಲಕ್ಷಣಗಳೂ ಇಲ್ಲ. ಒಮ್ಮೆ  ಜೀವನದ ಅರ್ಥ ತಿಳಿದುಕೊಳ್ಳಲು ಟಿಬೆಟಿಗೆ ಹೋಗಿದ್ದು ಬಿಟ್ಟರೆ (ಸಿನಿಮ ಪ್ರಾರಂಭವಾದ ಮೊದಲ ಹತ್ತು ನಿಮಿಷಗಳಲ್ಲಿ ಇದೂ ಆಗಿ ಹೋಗಿರುತ್ತದೆ), ಅವನಲ್ಲಿ ಅಧ್ಯಾತ್ಮಿಕತೆಯ ಯಾವ ಅಂಶವೂ ಕಂಡು ಬರುವುದಿಲ್ಲ. ಸಮಾಜದ ಯಾವ ಆಗು ಹೋಗುಗಳೂ ಇವನ "scheme of things " ನಲ್ಲಿ ಇಲ್ಲ. "ದುಡ್ಡು ಬರ್ತಾನೆ ಇತ್ತು, ಬರ್ತಾ ನೆಮ್ಮದಿ ಹಾಳಾಯ್ತು" ಎಂದು ಒಮ್ಮೆ ಹೇಳುವ ನಾಯಕ, ಒಬ್ಬ ಭಿಕ್ಷುಕನಿಗಾಗಲಿ, ಕೊನೆಯ ಪಕ್ಷ ಒಬ್ಬ ಸ್ನೇಹಿತನಿಗಾಗಲಿ ಯಾವುದೇ ರೀತಿಯ ಸಹಾಯ ಮಾಡುವ ಒಂದು ಸನ್ನಿವೇಶವೂ ಸಿನಿಮಾದಲ್ಲಿಲ್ಲ. ಇದೆಲ್ಲ ಇರಲೇಬೇಕು ಎಂದು ಅಲ್ಲ, ಆದರೆ ಇಷ್ಟು ಮಾಡದೇ ಒಬ್ಬ ವ್ಯಕ್ತಿ ಪರಮಾತ್ಮನಾಗಲು ಸಾಧ್ಯವಾಗುವುದಾದರೆ ನಮ್ಮ ಸಮಾಜದ ತುಂಬೆಲ್ಲ ಬರಿ ಪರಮಾತ್ಮರೆ ತುಂಬಿದ್ದಾರೆ ಎನ್ನಬಹುದು. ಅನಿಸಿದ್ದನ್ನು ಮಾಡಿದವರೆಲ್ಲ ಪರಮಾತ್ಮರಲ್ಲ!
  • ನಾಯಕಿಯ ಪಾತ್ರಕ್ಕೆ ಹುಚ್ಚು ಇದೆಯೇ ಎಂದು ಒಂದಕ್ಕಿಂತ ಹೆಚ್ಚು ಬಾರಿ ಅನಿಸುತ್ತದೆ. ನಗುವುದು, ಕಿರುಚುವುದು ಬಿಟ್ಟರೆ ಬೇರೆ ಏನೂ ಮಾಡಿದಂತಿಲ್ಲ ನಾಯಕಿ. ನಾಯಕನಿಗೆ ಅವಳಲ್ಲಿ ಅಂಥದ್ದೇನು ಕಂಡಿತು ಎಂಬುದಕ್ಕೆ ಉತ್ತರ ಇಲ್ಲ. ನಾಯಕ ಅದರ ಬಗ್ಗೆ ಮಾತಾಡುವುದೇ ಇಲ್ಲ. ಪ್ರೇಮಕ್ಕೆ ಕಾರಣ ಇರಲೇಬೇಕು ಎಂದೇನು ಇಲ್ಲ, ಸರಿ, ಆದರೆ ಯಾವ ಘಳಿಗೆಯಲ್ಲಿ ಪ್ರೇಮವಾಯಿತು ಎಂದಾದರು ಗೊತ್ತಾಗಬೇಕಲ್ಲ! ಅದರ ಬಗ್ಗೆ ಮಾತೇ ಇಲ್ಲ, ನಾಯಕ ಕಾರು ತೆಗೆದುಕೊಂಡು ನಾಯಕಿಯ ಊರಿಗೆ ಅವಳನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತಾನೆ. ಅರ್ಧ ಸಿನಿಮ ಮುಗಿಯುವ ವೇಳೆಗೆ ಒಮ್ಮೆ, "ಅವಳ ಕೂದಲಲ್ಲಿ, ಮೂಗುತಿಯಲ್ಲಿ ಒಂದು ಹಾಡು ಕೇಳುತ್ತದೆ. ಅದು ನನಗಿಷ್ಟ" ಎಂದು ನಾಯಕ ಹೇಳುವಾಗ ಪ್ರೇಕ್ಷಕನಿಗೆ ನಂಬಿಕೆ ಬರುವುದಿಲ್ಲ. ಸ್ವತಃ ನಾಯಕನಿಗೆ ಆ ಮಾತಿನಲ್ಲಿ ನಂಬಿಕೆ ಇದ್ದಂತಿಲ್ಲ. 
  •  ನಾಯಕನಿಗೆ ತನ್ನ ಸ್ನೇಹಿತರ ನೋವು ತಟ್ಟುವುದಿಲ್ಲ. ಪಸೀನ ಎಂದು ಅವನಿಂದ ಕರೆಸಿಕೊಳ್ಳುವ ಎರಡನೇ ನಾಯಕಿಯ ಪಾತ್ರ, ಪರಮಾತ್ಮನ ಸ್ನೇಹಿತೆಗೆ ಪರಮಾತ್ಮನಲ್ಲಿ ಪ್ರೇಮ ಇರುತ್ತದೆ. ಆದರೆ ನಾಯಕ ಅವಳಿಗೆ, "ನೀನು ಮಗು, ಮಕ್ಕಳನ್ನ ಮದುವೆ ಆಗಿ ಒದ್ದಾಡೋಕೆ ಆಗುತ್ತಾ?", ಎನ್ನುತ್ತಾನೆ. ಇಲ್ಲಿ ಒಂದಿಷ್ಟೂ ಧರ್ಮ ಸಂಕಟ ಅನುಭವಿಸದ ನಾಯಕ "ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ", ಎಂದು ತನ್ನ ಸಂಕಟ ತೋಡಿಕೊಂಡು ಕುಣಿದಾಡುವುದಕ್ಕೆ ಯಾವ ಅರ್ಥವೂ ಇಲ್ಲ.
  • ಇಡೀ ಸಿನಿಮ ನಾಯಕ ಎರಡನೆ ನಾಯಕಿಗೆ ಹೇಳುವ ಕಥೆಯ ರೂಪದಲ್ಲಿದೆ. ಕೊನೆಗೆ ಎರಡನೆ ನಾಯಕಿ ನಾಯಕನಿಗೆ ಮುತ್ತು ಕೊಡುತ್ತಾಳೆ. ನಾಯಕನ ಪುಟ್ಟ ಮಗುವಿಗೂ ಒಂದು ಮುತ್ತು ಕೊಟ್ಟು, "ನಿನ್ನ ಅಪ್ಪ ನಿನಗಿಂತ ಪಾಪು" ಎನ್ನುತ್ತಾಳೆ. "ಮಕ್ಕಳು ದೇವರ ಸಮಾನ", ಎಂದ ಮಾತ್ರಕ್ಕೆ ನಾಯಕನನ್ನು ಏಕ ಕಾಲಕ್ಕೆ ದೇವರು, ಮಗು ಎಂದೆಲ್ಲ ಕರೆದು ಪ್ರೇಕ್ಷಕ ನಂಬಬೇಕು ಎಂದುಕೊಳ್ಳುವುದು ದಡ್ಡತನ! ಮನಸ್ಸು ಸ್ವಚ್ಛ ಇರುವವನು ದೇವರಾಗುತ್ತಾನೆ, ನಿಜ. ಆದರೆ ನಮ್ಮ ನಾಯಕ ಬೇರೆಯವರ ಭಾವನೆಗಳಿಗೆ ಒಂದಿಷ್ಟು ಸ್ಪಂದಿಸದ ಕಲ್ಲು ಜೀವ. ಕೊನೆಗೆ ಇಷ್ಟ ಪಟ್ಟು ಕಟ್ಟಿಕೊಂಡ, ಸುಮ್ಮ ಸುಮ್ಮನೆ ನಗುವ ನಾಯಕಿ ಸತ್ತಾಗಲೂ ನಾಯಕ ಅಳುವುದಿಲ್ಲ. ಅವಳು ಸಂತೋಷ ಹೆಚ್ಚಾಗಿ ಸತ್ತಳು ಎಂದು ನಂಬಿಕೊಂಡು ಬದುಕುತ್ತಾನೆ. ಇದೆ ಪುನೀತ್, ಆಗ ಮಾಸ್ಟರ್ ಲೋಹಿತ್ ಆಗಿ ನಟಿಸಿದ "ಬೆಟ್ಟದ ಹೂವು" ಚಿತ್ರದ ನಾಯಕ ಮನೆಯವರಿಗಾಗಿ ತನ್ನ ಆಸೆಗಳನ್ನು ಬಲಿ ಕೊಡುತ್ತಾನೆ. ಅವನನ್ನು ಪರಮಾತ್ಮ ಎಂದರೆ ಅಡ್ಡಿಯಿಲ್ಲ. ಆದರೆ ಪರಮಾತ್ಮನಾಗುವ ಯಾವ ಅರ್ಹತೆಯೂ ಇರದ ಈ ನಾಯಕ emotional  quotient ತೀರ ಕಡಿಮೆ ಇರುವ ವ್ಯಕ್ತಿಯಾಗಿ ಕಾಣುತ್ತಾನೆ, ದೇವರಾಗಿಯಲ್ಲ!
  •   ಸಿನಿಮಾದ ಕೊನೆಯಲ್ಲಿ ನಾಯಕನಿಗೆ ತನ್ನ ಮದುವೆ ಆಮಂತ್ರಣ ಪತ್ರಿಕೆ ಕೊಡುವ ನಾಯಕಿ ಹೊರಡುತ್ತಾ, "ನಾನು ನಿನ್ನ ಬದುಕಿನಲ್ಲಿ ಮತ್ತೆ ಬರುವ ಅವಕಾಶ ಇದೆಯೇ ಎಂದು ತಿಳಿದುಕೊಳ್ಳಲು ಬಂದೆ", ಎನ್ನುತ್ತಾಳೆ. ಹಾಗಿದ್ದಲ್ಲಿ ಅವಳನ್ನು ಮದುವೆಯಾಗಲು ಹೊರಟವನು ಇನ್ನೊಬ್ಬ ಪರಮಾತ್ಮನಿರಬಹುದು!
ಕೊನೆಯ ಮಾತು: ನಾನು ಹೋದ ಥಿಯೇಟರಿನಲ್ಲಿ ಯೋಗರಾಜ್ ಭಟ್ಟರ ಮೇಲೆ, ಪುನೀತ್ ರಾಜ್ ಕುಮಾರ್ ಮೇಲೆ ನಂಬಿಕೆ ಇಟ್ಟು ಬಂದ ಜನರಿಂದಾಗಿ ಹೌಸ್-ಫುಲ್ ಆಗಿತ್ತು. ಥಿಯೇಟರ್ ಬಿಡುವಾಗ ಎಲ್ಲರು ಮಂಕಾಗಿದ್ದರು. ರಂಗಾಯಣ ರಘು ಇರುವ ಕೆಲವು ಸೀನ್ ಗಳನ್ನು ಬಿಟ್ಟರೆ ಜನರು ಮೌನವಾಗಿದ್ದರು. ನಾನು "ಪಂಚರಂಗಿ" ನೋಡಿದಾಗ ಪ್ರೇಕ್ಷಕ ಹೀಗಿರಲಿಲ್ಲ.  

Aug 20, 2011

ಲಹರಿ

ಭಾರಿ  ಆಕಾಂಕ್ಷೆಗಳಿರದ  ವಿಷಯಗಳನ್ನು  ಇಷ್ಟ ಪಡತೊಡಗಿದ್ದೇನೆ. ದೊಡ್ಡ  ಆಸೆಗಳಿರದ  ಸಿನಿಮಾಗಳು , ಕೇವಲ  ಮನರಂಜನೆಗಾಗಿ  ಸಂಯೋಜಿಸಿದ  ಹಾಡುಗಳು  ಇತ್ಯಾದಿ . ಕೈಗೆಟುಕದ  ವಿಷಯಗಳು  ಎಟುಕಿವೆ  ಎಂದು  ತೋರಿಸಿಕೊಳ್ಳುವ ಆಕಾಂಕ್ಷೆಗಳಿರದ  ಕಥೆ , ಹಾಡು , ಜಾಹಿರಾತು , ಮಾತು  - ಇವೆಲ್ಲ  ನಿಜಕ್ಕೂ  ಎಷ್ಟು  ಕಷ್ಟ  ಎಂದು ಗೊತ್ತಾಗಿದೆ . ವ್ಯರ್ಥ  ಶಬ್ದ , ಸಂಜ್ಞೆ , ಪ್ರತಿಮೆಗಳನ್ನು  ಉಪಯೋಗಿಸಿ  ಒಂದು  ರೀತಿಯ  home work ಇದ್ದರೆ  ಮಾತ್ರ  ಅರ್ಥವಾಗುವ  ಕಥನ  ಶೈಲಿ  ಭಾರಿ  ಸುಲಭ . ಇವು  ಯಾವುದು  ಇಲ್ಲದ , ಅನುಭವವನ್ನು  ಅನುಭವಿಸಿದಂತೆ , ಕಲಿತ  ಬುದ್ಧಿಯನ್ನುಪಯೋಗಿಸದೆ  ಭಾಷೆಯಲ್ಲಿ  ವಿವರಿಸುವುದು  ಎಷ್ಟು ಕಷ್ಟ! 'ಮಾತಿನಲ್ಲಿ  ಹೇಳಲಾರೆನು ' ಎನ್ನುವುದು  ಸುಲಭ. ಆದರೆ  ಮಾತಿನಲ್ಲಿ ಹೇಳಲಾಗದ್ದನ್ನು  ನಾನು  ನಿಜವಾಗಿಯೂ  ಅನುಭವಿಸಿದ್ದೇನೆ  ಎಂಬುದಕ್ಕೆ  ಸಾಕ್ಷಿ  ಏನು !

Apr 26, 2011

ಸೂಪರ್

Super
ತುಂಬ ತಡವಾಗಿ "ಸೂಪರ್" ಬಗ್ಗೆ ಬರೆಯುತ್ತಿದ್ದೇನೆ. ಇಷ್ಟರಲ್ಲಿ ಎಷ್ಟೋ ಜನ ಎಷ್ಟೋ ಬರೆದಿದ್ದಾರೆ. ಹಾಗಾಗಿ ಹೆಚ್ಚು ವಿವರಗಳಿಗೆ ಹೋಗದೆ ಮೇಲ್ನೋಟಕ್ಕೆ ಕಾಣಿಸದ ಕೆಲವು ವಿಷಯಗಳ ಬಗ್ಗೆ ಬರೆಯುತ್ತೇನೆ. ಈ ಸಿನಿಮ ತುಂಬ "ಗದ್ದಲಮಯ"ವಾಗಿರುವುದರಿಂದ ಇದರ ನಿಜವಾದ ಸಂದೇಶ ನಮಗೆ ಕಾಣಿಸದೆ ಹೋಗುವ ಸಾಧ್ಯತೆ ಇದೆ. ಚಿತ್ರದ "ಪ್ರೋಮೋ" ಗಳು ಕೂಡ ಸಂದೇಶದ ಸುಳಿವು ಕೊಡುವುದಿಲ್ಲ. ಹಾಡುಗಳು ಕೂಡ "ಗದ್ದಲಮಯ" ವಾಗಿರುವುದರಿಂದ ಅಲ್ಲೂ ಕಥೆಯ ಸುಳಿವು ಸಿಗುವುದಿಲ್ಲ.
ನನ್ನ ಪ್ರಕಾರ ಈ ಸಿನಿಮ ಉಪೇಂದ್ರರವರ ಸಾಮಾಜಿಕ ಕಳಕಳಿಯ ಫಲ. ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಅಭಿಮಾನ ಹೊಂದಿರುವ ನಾವು ಭಾರತೀಯರು ಇದೇ ಮರುಳು ದುರಭಿಮಾನದಲ್ಲಿ ಮುಳುಗಿ ಹೋಗಿ ನಿಷ್ಕ್ರಿಯರಾಗಿದ್ದೇವೆ ಎಂಬುದೇ ಈ ಚಿತ್ರದ ಮೊದಲ ಸಂದೇಶ. ಎರಡನೆಯದಾಗಿ ನಮ್ಮ ದೇಶದ ದುಃಸ್ಥಿತಿಗೆ ಒಂದು ಪರಿಹಾರವನ್ನು ಸೂಚಿಸುತ್ತದೆ. ಪರಿಹಾರ ಕೊಂಚ ಉತ್ಪ್ರೇಕ್ಷೆ ಅನ್ನಿಸಬಹುದಾದರೂ, ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ "workable" ಅನ್ನಿಸುತ್ತದೆ. ಪರಿಹಾರ ಇಷ್ಟೇ : "ಇದು ನನ್ನ ದೇಶ. ಇದರ ಉನ್ನತಿಗೆ ಮತ್ತು ಅವನತಿಗೆ ನಾನು ಜವಾಬ್ದಾರ." ಎಂದು ಪ್ರತಿಯೊಬ್ಬ ಭಾರತೀಯನಿಗೂ ಮನವರಿಕೆಯಾಗಬೇಕು. 
ಈ ಸಂದೇಶಗಳನ್ನು ಜನರಿಗೆ ಮುಟ್ಟಿಸಲಿಕ್ಕೆ ಒಂದು ಪ್ರೇಮ ಕಥೆಯನ್ನು ಹೆಣೆದಿದ್ದಾರೆ ಉಪೇಂದ್ರ. ಪಕ್ಕಾ ಮಸಾಲೆಭರಿತ ಕಥೆಯ ಮೂಲಕ ಒಂದು ಉತ್ತಮ ಸಂದೇಶ ಹೇಳ ಹೊರಟ ಕಥೆಗಾರ ಉಪೇಂದ್ರ ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಅನ್ನಬಹುದು. 

ಇದು ಈ ಸಿನಿಮಾದ ಕುರಿತು. ಇದಲ್ಲದೆ ಕೆಲವು ವಿಷಯಗಳು ತಲೆಗೆ ಬಂದವು :
೧. ಒಂದು ಕಾಲದಲ್ಲಿ "ನಾನು" ಎಂಬ concept ಅನ್ನು ಸಿನಿಮಾದಲ್ಲಿ ಹೇಳಿದ್ದ ಉಪೇಂದ್ರ ಇಂದು ಒಂದು ಸಾಮಾಜಿಕ ಕಳಕಳಿ ಉಳ್ಳ ಚಿತ್ರವನ್ನು ಮಾಡಿದ್ದಾರೆ. "ನಾನು" ಎಂಬುದರ ಪರಿಧಿಯನ್ನು ವಿಸ್ತರಿಸಿಕೊಂಡಿದ್ದಾರೋ ಏನೋ? ಅಥವಾ ರಾಜಕೀಯಕ್ಕೆ ಇಳಿಯಲು ಮಾಡಿಕೊಂಡ "home work " ಇದ್ದರೂ ಇರಬಹುದು!
೨. ಯೋಗರಾಜ ಭಟ್ ಮತ್ತೆ ತಮ್ಮ ದನಿಯನ್ನು ಉಪಯೋಗಿಸಿದ್ದಾರೆ ಇಲ್ಲಿ. ಅವರು ಈ ಸಿನಿಮಾದ narrator . ಒಂದು ಹಾಡನ್ನು ಕೂಡ ಬರೆದಿದ್ದಾರೆ ಅನ್ನಿಸುತ್ತದೆ. ಬಹುಷಃ ಕನ್ನಡದ ನಿರ್ದೇಶಕರು ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಸಹಕರಿಸಲಿಕ್ಕೆ ಶುರು ಮಾಡಿದ್ದಾರೆ ಅನಿಸುತ್ತದೆ. ಇದು ನಿಜ ಇದ್ದಲ್ಲಿ, ಇದು ಒಂದು ಆರೋಗ್ಯಕರ ಬೆಳವಣಿಗೆ.
೩. ಉಪೇಂದ್ರ ಖಾಲಿಯಾಗಿದ್ದಾರೆ ಅನಿಸುತ್ತದೆ. ಈ ಅನಿಸಿಕೆಗೆ ಬಲವಾದ ಕಾರಣ ಯಾವುದೂ ಇಲ್ಲ. ಆದರೂ ಯಾಕೋ ಹಾಗೆ ಅನ್ನಿಸಿತು. 
   

Nov 3, 2010

ಪಂಚರಂಗಿ





ಇದು ಹಾಸ್ಯ ಚಿತ್ರವಲ್ಲ, "ವ್ಯಂಗ್ಯ" ಚಿತ್ರ ಅನ್ನಬೇಕು. ಮಾಮೂಲಿ ಬೇಜಾರುಗಳಲ್ಲಿ ಕಳೆದು ಹೋದ ಜೀವಗಳಿಗೆ ವ್ಯಂಗ್ಯದ ಚುಚ್ಚು ಮದ್ದು ಇದು. ಪ್ರತಿ ದೃಶ್ಯದಲ್ಲೂ ತಿವಿದು ಎಬ್ಬಿಸುವಂಥ ಸಂಭಾಷಣೆ ಉಪಯೋಗಿಸಿದ್ದಾರೆ ಯೋಗರಾಜ ಭಟ್.

ಭಾರಿ ತತ್ವ ಅಥವಾ ನೀತಿಗಳ ಬೆಂಬಲವಿಲ್ಲದ ಒಂದು ಶುದ್ಧ ಮನೋರಂಜನೀಯ ಸಿನಿಮ ಇದು. ಜೀವನದ ಬಗ್ಗೆ ತೀವ್ರವಾಗಿ ಯೋಚಿಸುತ್ತಲೇ "ಲೈಫು ಇಷ್ಟೇನೆ" ಎನ್ನುವ ಉಡಾಫೆಯನ್ನೂ ನಾಯಕನ ಮೂಲಕ ತೋರಿಸಲಾಗಿದೆ. ಪ್ರತಿ ಬಾರಿ "ಲೈಫು ಇಷ್ಟೇನೆ" ಎನ್ನುವಾಗಲೂ ವೀಕ್ಷಕ "ಇದರಾಚೆಗೂ ಏನೋ ಇದೆ" ಎಂದು ಯೋಚಿಸುವಂತೆ ಮಾಡುವುದೇ ನಿರ್ದೇಶಕನ ಉದ್ದೇಶ ಅನ್ನಿಸುತ್ತದೆ.

ಹಾಡುಗಳ ಮೂಲಕ ನಿರ್ದೇಶಕ ವೀಕ್ಷಕನೊಂದಿಗೆ ನೇರ ಸಂಭಾಷಣೆಗೆ ಇಳಿದಂತೆ ಕಾಣುತ್ತಿದೆ. "ಪಂಚರಂಗಿ ಹಾಡುಗಳು" ಎಂಬ ಹಾಡಿನಲ್ಲಿ ನಾಯಕನಿಗೆ ಹಿನ್ನೆಲೆ ಧ್ವನಿ ನೀಡುವ ಯೋಗರಾಜ್ ಭಟ್ ನಾಯಕನ ಮೂಲಕ ತೋರಿಸಲು ಹೊರಟಿದ್ದು ತಮ್ಮ ಜೀವನ ದೃಷ್ಟಿಯನ್ನು ಎಂದು ನನ್ನ ಭಾವನೆ. ಈ ಹಾಡಿನಲ್ಲಿ ಧ್ವನಿಯಲ್ಲಿರುವ ವ್ಯಂಗ್ಯದಿಂದಾಗಿ ಯೋಗರಾಜ್ ಭಟ್ ಗಮನ ಸೆಳೆಯುತ್ತಾರೆ.

ಪಾತ್ರ ಪೋಷಣೆಗೆ  ಸಾಕಷ್ಟು ಗಮನ ಹರಿಸಲಾಗಿದೆ. ಕಥೆಯಲ್ಲಿ ಸಂಕೀರ್ಣ ಅಂಶಗಳೇನು ಇಲ್ಲದೆಯೂ ವೀಕ್ಷಕನನ್ನು ತೊಡಗಿಸಿಕೊಳ್ಳುವ ಸತ್ವ ಉಳ್ಳ ಸಂಭಾಷಣೆ ಇದೆ. ನಟರೆಲ್ಲರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖಂಡಿತವಾಗಿಯೂ ಇದು ಒಂದು ಉತ್ತಮ ಚಿತ್ರ; ವೀಕ್ಷಕನನ್ನು ಯೋಚಿಸಲು ಹಚ್ಚಿಸುವಲ್ಲಿ ಯಶಸ್ವಿಯಾಗುವ ಚಿತ್ರ.

Oct 17, 2010

ಸತ್ತ ಹಸುವಿನ ಸುತ್ತ...


 
ಅಂದು ಮುಂಜಾನೆ ನಾನು ಆಫೀಸಿಗೆ  ಹೋಗುವ ದಾರಿಯಲ್ಲಿ ಒಂದು ಹಸು ಸತ್ತು ಬಿದ್ದಿತ್ತು. ದೊಡ್ಡ ಗಾತ್ರದ ಹಸು. ಪ್ರಾಣಿ-ಪಕ್ಷಿಗಳ ಬಗ್ಗೆ ಪ್ರೀತಿ ಇರುವ ಯಾರಿಗೇ ಆದರೂ ಹೊಟ್ಟೆ "ಚುರುಕ್" ಎನ್ನುವಂತಿತ್ತು. ಮುಖ್ಯ ರಸ್ತೆಯ ಬದಿಯಲ್ಲಿ, ಮಂಜಿನಲ್ಲಿ ಒದ್ದೆಯಾಗಿದ್ದ ಹಸುವಿನ ಶವ ಬಿದ್ದಿತ್ತು. ನಾನು ಬುದ್ಧಿ ಬೆಳೆದಾಗಿನಿಂದ ಹಸು-ಎಮ್ಮೆ, ಮತ್ತು ಅವುಗಳ ಕರುಗಳನ್ನು ನೋಡಿಕೊಂಡೇ ಬೆಳೆದವನು. ನನ್ನ ತಾಯಿ ಒಂದು ಜಾತಿ ಹಸುವನ್ನು ಸಾಕಿದ್ದಳು. ನಾನು ಅದರ ಹಾಲನ್ನು ಊರಿನ ಹೊಟೇಲಿಗೆ ಮಾರಿ ಬರುತ್ತಿದ್ದೆ. ಈ ಕೆಲಸಕ್ಕೆ ತಾಯಿ ನನಗೆ ವಾರಕ್ಕೆ ಹತ್ತು ರೂಪಾಯಿ ಕೊಡುತ್ತಿದ್ದಳು. ಈ ದುಡ್ಡನ್ನು ಸೇರಿಸಿ ನಾನು ಒಂದು ಸೈಕಲ್ಲು ಕೊಂಡೆ. ಮುಂದೆ ಆ ಹಸು ಸತ್ತು ಹೋಯಿತು. ಏನೂ ವಿಶೇಷಗಳಿಲ್ಲದೆ, ಮಾಮೂಲಿ ಬೇಜಾರುಗಳಲ್ಲಿ ಕಳೆದು ಹೋಗಿದ್ದ ನಮ್ಮ ಹಳ್ಳಿಯ ಜನರಿಗೆ ಇದೊಂದು ಸ್ವಾರಸ್ಯಕರ ವಿಷಯವಾಯಿತು; ನಮ್ಮನ್ನು ಕಂಡಾಗ ಸಹಾನುಭೂತಿಯಿಂದ ಮಾತಾಡಿ, "ತ್ಚು ತ್ಚು ತ್ಚು" ಎನ್ನಲಿಕ್ಕೆ. ನಮ್ಮ ಪ್ರೀತಿಯ ಹಸುವಿನ ಹೆಣವನ್ನು ಅದರ ಮೇಲೆ ಯಾವುದೇ ಸಹಾನುಭೂತಿ ಇಲ್ಲದವರಂತೆ ತೋರುತ್ತಿದ್ದ ನಾಲ್ವರು, ಹಗ್ಗ-ಗಿಗ್ಗ ಕಟ್ಟಿ ನಡುವೆ ಕೋಲು ಸಿಕ್ಕಿಸಿ, ಎಳೆದಾಡಿ, ತೂರಾಡಿ ಮಣ್ಣು ಮಾಡಿದರು. ಈ ದೃಶ್ಯವನ್ನು ನಾನು ಅಟ್ಟದ ಕಿಟಕಿಯಿಂದ (ಅಲ್ಲಿಂದ ಆ ಸ್ಥಳ ಸರಿಯಾಗಿ ಕಾಣುತ್ತಿದ್ದ ಕಾರಣಕ್ಕಾಗಿ) ನೋಡುತ್ತಾ, "ಇಂಥ  ಅನುಭವಗಳೇ ನಮ್ಮನ್ನು ಪಕ್ವ ಮಾಡುವುದು" - ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ!

ರಸ್ತೆಯ ಬದಿಯಲ್ಲಿ ಹಸುವಿನ ಹೆಣವನ್ನು ನೋಡಿದಾಗ ಇಷ್ಟೆಲ್ಲ ಯೋಚನೆಗಳು ನನ್ನ ತಲೆಯಲ್ಲಿ ಸುಳಿದು ಹೋಗಿರಬೇಕು. ಸಾಕಿದವರು ಯಾರಾದರೂ ಮಣ್ಣು ಮಾಡಲು ಸ್ಥಳವಿಲ್ಲದೆ ರಸ್ತೆ ಬದಿಯಲ್ಲಿ ಎಸೆದು ಹೋದರೆ! - ಎಂದುಕೊಂಡೆ. ನಮ್ಮ ಹಳ್ಳಿಗಳಲ್ಲಾದರೆ ಮನೆಯ ಸುತ್ತ ಸತ್ತ ನಾಯಿ, ಬೆಕ್ಕು, ಹಸು, ಕೊನೆಗೆ ಮನುಶ್ಯರನ್ನು ಕೂಡ ಮಣ್ಣು ಮಾಡುವಷ್ಟು ಸ್ಥಳವಿರುತ್ತದೆ. ಮನೆ, ಅಂಗಡಿ, ಅಪಾರ್ಟುಮೆಂಟ್ ಎಂದು ಒಂದು ಅಡಿ ಸ್ಥಳ ಬಿಡದೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ಸಾಕಿದ ಹಸುವನ್ನು ಮಣ್ಣು ಮಾಡಲಿಕ್ಕೆ ಸ್ಥಳವೆಲ್ಲಿದೆ? ಅಷ್ಟಕ್ಕೂ ಸತ್ತ ಹಸುವನ್ನು ಮಣ್ಣು ಮಾಡುವುದಕ್ಕೆ ಏಕೆ ಖರ್ಚು ಮಾಡಬೇಕು, ರಸ್ತೆಯ ಬದಿಯಲ್ಲಿ ಎಸೆದು ಹೋದರೆ, ನಗರವನ್ನು ಸ್ವಚ್ಛ, ಸುಂದರವಾಗಿಡುವ ಹೊಣೆ ಹೊತ್ತವರು ಹೆಣಕ್ಕೆ ಗತಿ ಕಾಣಿಸುತ್ತಾರಲ್ಲ ಹೇಗಿದ್ದರೂ ಎಂದುಕೊಂಡಿರಬಹುದು ಸತ್ತ ಹಸುವಿನ ಮಾಲಿಕ.


ಹೀಗೆಲ್ಲ ಅಂದುಕೊಳ್ಳುತ್ತಾ ಆಫೀಸಿಗೆ ನಡೆದ ನಾನು ಆಗಲೇ ಹೇಗೆ ಮನುಷ್ಯನ ಸಂವೇದನೆಗಳು ನಶಿಸಿವೆ - ಎಂಬ ಬಗ್ಗೆ ಒಂದು ಕಥೆ ಬರೆಯಬೇಕು ಅಂದುಕೊಂಡೆ. ನನ್ನ ಕಥೆಯ ನಾಯಕ ಸಿನಿಮಾ-ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ ವೃತ್ತಿಯಲ್ಲಿರುತ್ತಾನೆ. ಮನುಷ್ಯನ ಮೂಲಭೂತ ಭಾವನೆಗಳು ಹೇಗೆ ಸತ್ತಿವೆ, ಹೀಗಾಗಲಿಕ್ಕೆ ಹೇಗೆ ನಮ್ಮ ’ಸಮೂಹ ಮಾಧ್ಯಮ’ಗಳು ಕಾರಣವಾಗಿವೆ, ಹೀಗೆ ಸಂವೇದನೆಗಳಿಲ್ಲದ ಜನರನ್ನು ಮುಟ್ಟಲಿಕ್ಕಾಗಿ, ಈ ಜಡ ಜೀವಗಳನ್ನು ಅಲುಗಿಸಲಿಕ್ಕಾಗಿ ನಮ್ಮ ಕಾದಂಬರಿಕಾರರು, ಸಿನಿಮಾ ಮಂದಿ ಹೇಗೆ ತಮ್ಮ ಕಥೆಗಳಲ್ಲಿ ಕ್ರೌರ್ಯ ತುರುಕುತ್ತಿದ್ದಾರೆ. ಮತ್ತು ಈ ತುರುಕಾಟದಿಂದಾಗಿ ಮತ್ತೆ ಸಂವೇದನೆಗಳು ಹೇಗೆ ನಶಿಸುತ್ತಿವೆ - ಹೀಗೆ ಒಂದು ವಿಷಚಕ್ರದಲ್ಲಿ ಹೇಗೆ ನಾವೆಲ್ಲ ಒದ್ದಾಡುತ್ತಿದ್ದೇವೆ - ಎಂಬುದನ್ನೆಲ್ಲ ನನ್ನ ಕಥೆಯ ನಾಯಕನ ಮೂಲಕ ಹೇಳಬೇಕೆಂಬುದು ನನ್ನ ಉದ್ದೇಶವಾಗಿತ್ತು. ಹೀಗೆಲ್ಲ ಬರೆಯುವುದರಿಂದ ಏನೂ ಬದಲಾಗುವುದಿಲ್ಲ ಎಂಬುದು ನನಗೆ ಕಾಲೇಜಿನಲ್ಲಿರಬೇಕಾದರೆ ಹೊಳೆದಿತ್ತು. ಹಾಗಾಗಿ ಅಂಥ ಮಹತ್ವಾಕಾಂಕ್ಷೆಗಳೇನೂ ನನಗಿಲ್ಲ. ನನಗೆ ಮುಖ್ಯ ಎನಿಸಿದ ವಿಷಯವನ್ನು ನನಗೆ ಸರಿ ಎನಿಸಿದ ರೀತಿಯಲ್ಲಿ ದಾಖಲಿಸುವುದಷ್ಟೆ ನನ್ನ ಉದ್ದೇಶ. ಹೀಗೆ ಒಂದು ಕಥೆಯನ್ನು ಬರೆಯಬೇಕು ಎಂದುಕೊಂಡು ತುಂಬ ಸಮಯ ಓಡಾಡಿದೆ. ಓಡಾಡಿದೆ ಎಂದರೆ ಕಥೆಗೆ ವಿಷಯ ಸಂಗ್ರಹಿಸಿದೆ ಎಂದಲ್ಲ; ಹಾಗೆಲ್ಲ ವಿಷಯ ಸಂಗ್ರಹಿಸಿ ಬರೆಯುವ ಅಭ್ಯಾಸ ನನಗಿಲ್ಲ. ನನ್ನನ್ನು ನಾನೇ ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದೂ ಅನ್ನಬಹುದು.


ಆದರೆ ಕಥೆಯನ್ನು ಬರೆಯಲು ಶುರು ಮಾಡಿದಾಗ ಒಮ್ಮೆಗೆ ಈ ಕಥೆಗೆ ಇನ್ನೊಬ್ಬ ನಾಯಕ ಏಕೆ ಬೇಕು ಎಂಬ ಪ್ರಶ್ನೆ ಬಂತು. ನಾನು ನಾನಾಗಿ ಮಾತಾಡದೆ ಏಕೆ ಮತ್ತೊಬ್ಬನ ಮುಖವಾಡದ ಮೂಲಕ ಮಾತಾಡಬೇಕು? ಮತ್ತೆ ಮಾತಿಗಿಂತ ಮುಖವಾಡವೇ ಮುಖ್ಯವಾಗಿ ಬಿಡುವ, ಹೇಳಬೇಕಾದ್ದನ್ನು ಹೇಳಲಿಕ್ಕಾಗದೆ ಹೋಗುವ ಅಪಾಯವಿಲ್ಲವೆ? ಹೀಗೆ ಹೇಳಬೇಕಾದ್ದನ್ನು ಹೇಳಲಿಕ್ಕಾಗದೆ ಹೋಗುವುದು ಕೂಡ ಕತೆಗಾರನಲ್ಲಿ ಸಿಟ್ಟಿಗೆ ಕಾರಣವಾಗಬಹುದಲ್ಲವೆ? ಇದೇ ಸಿಟ್ಟು, ಅಸಹಾಯಕತೆ ಅವನ ಮುಂದಿನ ಕೃತಿಗಳಲ್ಲಿ ಕ್ರೌರ್ಯದ ರೂಪದಲ್ಲಿ ಹೊರ ಬರುವ ಒಂದು ಸಣ್ಣ ಸಾಧ್ಯತೆ ಇದೆ ಅಲ್ಲವೆ? ಇಂಥ ಸಣ್ಣ ವಿಷಯಗಳೆ ತಾನೇ ಮುಂದೆ ಭೂತಾಕಾರ ತಾಳುವುದು!


(ಸಶೇಷ) 

Jun 20, 2010

ಭೂಮಿಗೆ ಬಂದ ಭಗವಂತ ...

ಕೆ.ಎಸ್.ಎಲ್.ಸ್ವಾಮಿ (ರವಿ) ನಿರ್ದೇಶನದ "ಭೂಮಿಗೆ ಬಂದ ಭಗವಂತ" ಎಂಬ ಸಿನಿಮಾದಲ್ಲಿ "ಭೂಮಿಗೆ ಬಂದ ದೇವಕಿ ಕಂದ", ಎಂದು ಶುರುವಾಗುವ ಹಾಡೊಂದಿದೆ. ಇದಕ್ಕೆ ಜಿ.ಕೆ. ವೆಂಕಟೇಶರ ಸಂಗೀತ ನಿರ್ದೇಶನವಿದೆ. ಎಸ್.ಪಿ.ಬಿ ಹಾಡಿದ್ದಾರೆ.
ಮೇಲ್ನೋಟಕ್ಕೆ ಭಕ್ತಿ ಗೀತೆಯಂತೆ ಕಾಣುವ ಈ ಹಾಡು ಗಮನವಿಟ್ಟು ಕೇಳಿದಾಗ
"ಆನಂದ ರಸ" ಉಕ್ಕಿಸುವ ವಿಷಯ ಗೊತ್ತಾಗುತ್ತದೆ.

ಬಹುಷಃ ಜಿ.ಕೆ. ಬೇಕೆಂದೇ ಈ ರೀತಿಯ ಸಂಗೀತ ಸಂಯೋಜಿಸಿದ್ದಾರೆ.

ಸಾಧಾರಣ ಭಕ್ತಿ ಗೀತೆಗಳಲ್ಲಿ ಇರುವಂತೆ ಒಂದು ರೀತಿಯ ಮೈ ಮರೆತ ಹುಚ್ಚು ಸಂಗೀತ ಇದಲ್ಲ. ಎಲ್ಲೂ ಏರು ಸ್ವರವಿಲ್ಲ.
ಇಡೀ ಹಾಡಿನಲ್ಲಿ ಬಹಳ ಎಚ್ಚರವಿಟ್ಟುಕೊಂಡು ಆನಂದ ಭಾವ ಹುಟ್ಟಿಸಿದ್ದಾರೆ ಗಾಯಕ ಮತ್ತು ಸಂಯೋಜಕರಿಬ್ಬರೂ.
ಅಲ್ಲದೆ ಸಾಧಾರಣ ಭಕ್ತಿ ಗೀತೆಗಳೆಲ್ಲ ದೇವರನ್ನು ಮೆಚ್ಚಿಸುವ ಹಾಡುಗಳು. ಆದರೆ ಈ ಹಾಡಿನಲ್ಲಿ ದೇವರನ್ನು ಮೆಚ್ಚಿಸುವ, ತನ್ನ ಭಕ್ತಿಯ ವೈಶಿಷ್ಟ್ಯವನ್ನು ವರ್ಣಿಸುವ ಆತುರವಿಲ್ಲ. ಬದಲಿಗೆ ದೇವರನ್ನು ಪಡೆದ ಧನ್ಯತಾ ಭಾವವಿದೆ.
ಅವನನ್ನು ಪಡೆದಾಗ ನಿಜಕ್ಕೂ ಸಿಗಬಹುದಾದ ಆನಂದ ಭಾವವಿದೆ. ಕೆಲವೊಮ್ಮೆ ಉಕ್ಕುವ ಸಮುದ್ರ, ಬೃಹತ್ ಪರ್ವತ ಅಥವಾ ಒಂದು ಭಾರಿ ಮರವನ್ನು ನೋಡಿದಾಗ ನಮ್ಮಲ್ಲಿ ಉಕ್ಕುವ ಭಾವ ಕೂಡ ಇದೇ ಎಂದು ನನಗೆ ಅನ್ನಿಸುತ್ತದೆ. ನಿನ್ನೆ-ನಾಳೆಗಳ ಪರಿವೆ ಇಲ್ಲದ ಅಪಾರ ಆನಂದ!

ಮತ್ತೆ ಕೆಲವು ವಿಷಯಗಳು :
ಉದಯಶಂಕರ್ ಅವರ ಸಾಹಿತ್ಯ brilliant ಆಗಿದೆ.
ಈ ಸಿನಿಮಾದ ಕಥೆ ಕೂಡ interesting ಆಗಿದೆ. ದರೋಡೆಕೋರನೊಬ್ಬ ರಾಣಿಯೊಬ್ಬಳ ಮೇಲೆ ಪ್ರೀತಿ ಹುಟ್ಟಿ ಅವಳಲ್ಲಿ ಕೇಳಿದಾಗ ಅವಳು ಬೇರೆ ದಾರಿ ಕಾಣದೆ ಶ್ರೀ ಕೃಷ್ಣನ ಕತ್ತಿನಲ್ಲಿರುವ ಮಣಿಯನ್ನು ತಂದು ಕೊಟ್ಟರೆ ಅವನನ್ನು ಮದುವೆಯಾಗುವುದಾಗಿ ಹೇಳುತ್ತಾಳೆ. ದರೋಡೆಕೋರ ಕೃಷ್ಣನನ್ನು ಹುಡುಕುತ್ತ ಹೊರಡುತ್ತಾನೆ. ಈ ಹುಡುಕಾಟದಲ್ಲಿ ಅವನು ಹೇಗೆ "ತನ್ನನ್ನು" ಕಳೆದುಕೊಂಡು ಭಗವಂತನನ್ನು ಪಡೆಯುತ್ತಾನೆ ಎಂಬುದೇ ಕಥೆ. ಲೋಕೇಶ್ ಅದ್ಭುತ ನಟ ಎಂದು ನನಗೆ ಎಷ್ಟೋ ಸಲ ಅನ್ನಿಸಿದೆ. ಈ ಹಾಡಿನ video ನೋಡಿದರೆ ನಿಮಗೂ ಅನ್ನಿಸಬಹುದು. 
ಅಂದ ಹಾಗೆ ಬಾಲ - ಕೃಷ್ಣನ ಪಾತ್ರದಲ್ಲಿ ಪುನಿತ್ ರಾಜಕುಮಾರ್ ನಟಿಸಿದ್ದಾರೆ.

"ರಾಗ" ದಲ್ಲಿ ಇದರ ಲಿಂಕ್ : http://www.raaga.com/player4/?id=168145&mode=100&rand=0.062396971958092295

May 23, 2010

ಮಡಿದ ಗೆಳೆಯನಿಗೆ...

ನೀನು ಸತ್ತೆ ಎಂದ ಸುದ್ದಿ ಬಹಳ ಸುಲಭದಲ್ಲಿ ಜೀರ್ಣ ಆಯಿತು. ಸುದ್ದಿ - ಟಿ.ವಿ. ಯಲ್ಲಿ ನೋಡಿದಂತೆ, ಪೇಪರಿನಲ್ಲಿ ಓದಿದಂತೆ - ರಸ್ತೆ ಅಪಘಾತದಲ್ಲಿ ಮೃತ್ಯು - ಬುದ್ಧಿಗೆ ಅರ್ಥವಾಯಿತು; ವಿಪರೀತ ಮದ್ಯ ಸೇವಿಸಿ, ಅತಿ ವೇಗದಲ್ಲಿ ಗಾಡಿ ಓಡಿಸಿ ಮುಂದೆ ಇದ್ದ ಟ್ರಕ್ ಗೆ ನೀನೆ ಹೊಡೆದು, ವಾಹನ ನಜ್ಜು ಗುಜ್ಜಾಗಿ ಸ್ಥಳದಲ್ಲೇ ಸಾವು.
ಆದರೆ ಇನ್ನೂ ಜೀರ್ಣವಾಗದ ವಿಷಯ ಎಂದರೆ ಇವು - ನಿನ್ನ ಡೊಳ್ಳು ಹೊಟ್ಟೆಗೆ ಹೊಡೆದು "ಧಡಿಯ" ಎನ್ನಲು ಸಾಧ್ಯ ಇಲ್ಲ. ಕೆನ್ನೆಗೆ ತಟ್ಟಿ "loafer " ಎನ್ನುವಂತಿಲ್ಲ. ನೀನು ಇನ್ನು ಯಾವತ್ತು ಆಫೀಸಿನಲ್ಲಿ ಕಾಣ ಸಿಗುವುದಿಲ್ಲ. ನನ್ನ ಸೀಟಿನ ಹತ್ತಿರ ಬಂದು, "ಹುಚ್ ನನ್ ಮಗನೆ", ಎನ್ನುವುದಿಲ್ಲ. ಕೂದಲು ಸವರಿಕೊಳ್ಳುತ್ತಾ, "ಏಯ್, ನಾನು ಸಕತ್ talent ಕಣೋ", ಎಂದು ನಿನ್ನ ಬೆನ್ನು ನೀನೆ ಚಪ್ಪರಿಸಿಕೊಳ್ಳುವುದಿಲ್ಲ. ಯಾವುದೋ ತಮಿಳು ಹಾಡಿನ ಅರ್ಥ ಕೇಳಿದರೆ ಚಿತ್ರ ಬಿಡಿಸಿ ವಿವರಿಸುವುದಿಲ್ಲ. ಸಣ್ಣ ವಿಷಯಕ್ಕೆ ಮುನಿಸಿಕೊಂಡು, " ಸರಿ ಇಲ್ಲ ಕಣೋ ನೀನು!" ಎನ್ನುವುದಿಲ್ಲ. ಕುಡಿದು ಪ್ರೀತಿ ಹೆಚ್ಚಾದಾಗ ಅತಿ ಭಾವುಕ S.M .S ಗಳನ್ನೂ ಕಳಿಸುವುದಿಲ್ಲ. "ವಯನಾಡಿಗೆ ಟ್ರಿಪ್ ಹೋಗೋಣ?", ಎಂದು ಪದೇ ಪದೇ ಕೇಳುವುದಿಲ್ಲ.

ಇಲ್ಲ ಇಲ್ಲ ಇಲ್ಲ! ಯಾವ ವಿಷಯಕ್ಕೂ ನಾನು ಇಷ್ಟು ಕಣ್ಣೀರು ಸುರಿಸಿಲ್ಲ ಎಂದರೆ ಬಹುಷಃ ನೀನು ನಂಬುವುದಿಲ್ಲ. "ಹೋಗೋ ಹುಚ್ಚ!", ಎಂದು ಕೂದಲು ಸವರಿಕೊಂಡು ಮುಂದೆ ಹೋಗುತ್ತೀಯ ಅನ್ನಿಸುತ್ತೆ.

May 21, 2010

ಹೀಗೊಬ್ಬ ಸಿನಿಕನ ಲಹರಿ

ಇದು ಒಂದು ಹಳೆ ಪದ್ಯ. ನಾನು ವಿದ್ಯಾರ್ಥಿಯಾಗಿದ್ದಾಗ ಬರೆದದ್ದು. ಆದರೆ ಇವತ್ತಿಗೂ ಇದನ್ನು ಓದಿದಾಗ ನನ್ನ ಮನಸ್ಸಿನ ಸಿನಿಕತನ, ವ್ಯಂಗ್ಯ ಎಲ್ಲವೂ ಇದರಲ್ಲಿ ದಾಖಲಾಗಿದೆ ಅನ್ನಿಸುತ್ತದೆ. ಈ ಕಾರಣಕ್ಕಾಗಿ ಮೊದಲೇ ಪೋಸ್ಟ್ ಮಾಡಿದ್ದ ಇದರ ತಾರೀಖನ್ನು ಬದಲಾಯಿಸಿ "ಮುಂದೆ" ತಳ್ಳಿದ್ದೇನೆ :

ರಂಗಾಗಿ ಹೆಣೆದ ಶಬ್ದಗಳು,
ಸೋಗಿನಲ್ಲಿ ಮುಚ್ಚಲ್ಪಟ್ಟ ಒಳಮನಸ್ಸು,
ಬಣ್ಣ ಬಳಿದುಕೊಂಡ ಕೆಟ್ಟ ವಿಕೃತ ಹೃದಯ,
ಕೈಗೆ ಸಿಗದ ಬುದ್ಧಿಯ ಮುಷ್ಟಿಯಲ್ಲಿಡಲು ಕುಣಿದಾಟ,

ತನ್ನಷ್ಟಕ್ಕೆ ಓಡುವ ಕಾಲ,
ಮುಂದಕ್ಕುರುಳುವ ಬದುಕು,
ಅಲ್ಲಿ-ಇಲ್ಲಿ , ಎಲ್ಲೆಲ್ಲಿ , ಹಲವೆಡೆಯಲ್ಲಿ
ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ,
ಸ್ಫೋಟ, ಯುದ್ಧ, ಬಿರುಕು, ಅಪ್ಪಚ್ಚಿ
ಹಪ್ಪಳದಂತೆ ಬದುಕು.

---- ಇದ ವಿವರಿಸಲೊಬ್ಬ ಸಾಹಿತಿ,
ಪದ್ಯ ಕಟ್ಟಲೊಬ್ಬ ಕವಿ,
ಸ್ಟೇಜಿನಲ್ಲಿ ಸೆಮಿ-
-ನಾರುಗಳು, ಅಚ್ಚಾಗುವ ಪದ್ಯಗಳು.

ಟೊಳ್ಳು ಸಾಹಿತ್ಯ,
ಜೊಳ್ಳು ವಿಚಾರ, ಅದಕ್ಕಿಷ್ಟು ವಿಮರ್ಶೆ,
ಕುಳಿತು ಟೀಕಿಸಲೊಬ್ಬ,
ಅದ ವಿರೋಧಿಸಲೊಬ್ಬ,
ಇಬ್ಬರಿಗೆ ರಾಜಿ ಮಾಡಿಸಲು ಮತ್ತಿನ್ನೊಬ್ಬ...



ಇದನ್ನೆಲ್ಲಾ ವರದಿಯೊಪ್ಪಿಸಲೊಂದುಪತ್ರಿಕೆ,
ಅದಕ್ಕೊಬ್ಬ ಸಂಬಳಕ್ಕಿಟ್ಟ ವರದಿಗಾರ,
ಅಲ್ಪ ಸಂಖ್ಯಾತರ, ದೀನ ದಲಿತರ ದನಿ,
ಭ್ರಷ್ಟಾಚಾರದ ವಿರುದ್ಧದ ಶಂಖಧ್ವನಿ ,
ಅನಾಚಾರಿಗಳ ವಿರುದ್ಧ ಯುದ್ಧ
ಘೋಷಿಸುವ ಪತ್ರಿಕೆ,
ಎಲ್ಲೋ ಕತ್ತೆಯ ಮೆರವಣಿಗೆಯ
ಸುದ್ದಿ ಪ್ರಕಟಿಸುತ್ತದೆ!

ಪತ್ರಿಕೆಗಳಿಗೆ ಸುದ್ದಿಯೊದಗಿಸಲು
ಒಬ್ಬೊಬ್ಬ ಶಾಸಕ, ಸಚಿವ, ಮಂತ್ರಿ, ಪ್ರಧಾನಿ,
ತಮ್ಮ ದಬ್ಬಾಳಿಕೆ ನಡೆಸಲು ಇವರಿಗೊಂದು ದೇಶ,
ಪಕ್ಕದ ಕಾಡಿನ ಹೆಬ್ಬುಲಿ ಇವನ ಬೇಟೆ ತಿನ್ನದಂತೆ
ಇವನ ದೇಶಕ್ಕೊಂದು ಗಡಿ ಸುತ್ತ ಸೈನಿಕರು ,ಇವರಿಗಾಗಿ ಗನ್ನು, ಬಾಂಬು ಮತ್ತಿನ್ನೇನೇನೋ....


ಮದ್ದಿನ ಹುಡಿಯಿಂದ ಬೆಂಕಿ
ಹುಟ್ಟಿಸಲೊಬ್ಬ ವಿಜ್ಞಾನಿ,
ಅವನಿಗೊಂದು ಪದವಿ,
ಅದಕ್ಕೊಂದು ಯೂನಿವರ್ಸಿಟಿ ,
ವಿದೇಶಿ ವಿದ್ಯಾಭ್ಯಾಸಕ್ಕೆ ಪಾಸ್ ಪೋರ್ಟು - ವೀಸಾ
ಹಾರಲು, ಏರಲು ವಿಮಾನ,
ಅದಕ್ಕೊಬ್ಬ ಪೈಲಟ್ಟು,
ಅವನಿಗೊಂದು ಜಾಕೆಟ್ಟು,
ಅದ ಹೊಲಿಯಲೊಬ್ಬ ದರ್ಜಿ,
ಅವನಿಗೊಂದು ಸೂಜಿ,
ಅದಕ್ಕೊಂದು ಕಾರ್ಖಾನೆ,
ಅದರಿಂದಷ್ಟು ಹೊಗೆ,
ಇದ ತಡೆಯಲೊಬ್ಬ ಪರಿಸರವಾದಿ,
ಅವನಿಗೊಂದು ಸಂಘಟನೆ,
ಅದಕ್ಕೊಂದು ಕಛೇರಿ,
ಅದ ಕಟ್ಟಲು ಸಿಮೆಂಟು
ಅದಕ್ಕೆ ಮತ್ತೊಂದು ಕಾರ್ಖಾನೆ,
ಅದರಿಂದ ಮತ್ತಷ್ಟು ಹೊಗೆ!

ತನ್ನಷ್ಟಕ್ಕೆ ಉರುಳುವ ಬದುಕು,
ಆಗಸದಲ್ಲಿ ತೇಲುವ ಮೋಡ,
ಅಂಗಳದಲ್ಲಿ ಆಡುವ ಮಗು,
ಇಳಿಜಾರಿನಲ್ಲುರುಳುವ ಚೆಂಡು,

- ಇದನೆಲ್ಲ ವಿವರಿಸಲೊಬ್ಬ ಕವಿ,
ಅವನಿಗೊಂದು ಕವಿತೆ,
ಕವಿತೆ ಬರೆಯಲೊಂದು ಪೆನ್ನು,
ಅದಕ್ಕಿಷ್ಟು ಮಸಿ,
ಮಸಿಗೊಂದು ಕುಪ್ಪಿ....
ತಲೆ ಕೆಟ್ಟ ಕಬ್ಬಿಗ,
ಅದ ಓದಲೊಬ್ಬ ಓದುಗ
-ಇದನೆಲ್ಲ ಬರೆಯಲು ನನಗೊಂದು ಬ್ಲಾಗು,
ಕುಕ್ಕಲೊಂದು ಕೀ ಬೋರ್ಡು,
ಕೂರಲೊಂದು ಕೋಣೆ ಅದ ಕಟ್ಟಲು ಸಿಮೆಂಟು
ಅದಕ್ಕೊಂದು ಕಾರ್ಖಾನೆ
ಅದರಿಂದಷ್ಟು ಹೊಗೆ , ನನಗೊಳ್ಳೆ ಹುಚ್ಚು?

Sep 21, 2009

ಹುಡುಕಾಟ


ಬದುಕಿನ ನಿರರ್ಥಕತೆಯ ಬಗ್ಗೆ ಏನಾದರೂ ಬರೆಯಬೇಕು ಅನ್ನಿಸತೊಡಗಿದೆ. ಮನುಷ್ಯ, ಮನುಷ್ಯನೆಂದು ಕರೆಸಿಕೊಳ್ಳುವ ಯೋಗ್ಯತೆ ಬಂದ ಕಾಲದಿಂದಲೂ ಬದುಕಿಗೆ ಏನಾದರೂ ಅರ್ಥವಿದ್ದೀತು ಎಂದು ಹುಡುಕುತ್ತಲೇ ಇದ್ದಾನೆ. ಇನ್ನೂ ಆ ಹುಡುಕಾಟ ಮುಂದುವರಿದಿದೆ. ಬದುಕಿನಲ್ಲಿ ನಡೆಯುತ್ತಿರುವುದಕ್ಕೆಲ್ಲ ಏನೋ ಅರ್ಥವಿದೆ, ಕೊನೆಯಲ್ಲಿ "ಯುರೇಕ" ಎನ್ನುವ ಕ್ಷಣವೊಂದು ಬರುತ್ತದೆ ಎಂಬುದೇ ಎಲ್ಲರ ಆಸೆ. ಎಲ್ಲ ಕಥೆ, ಕವನ, ಸಿದ್ಧಾಂತ, ಕೊನೆಗೆ ನಮ್ಮ ಸಿನಿಮಾಗಳು ಕೂಡ ಇದೇ ಭಾವನೆಯನ್ನು ಪೋಷಿಸುತ್ತದೆ. ನಾನು ಏನನ್ನೋ ಕಲಿಯುತ್ತಿದ್ದೇನೆ, ಸಂಪಾದಿಸುತ್ತಿದ್ದೇನೆ, ಕೊನೆಗೊಮ್ಮೆ ಈ ಎಲ್ಲದರ ಅರ್ಥವನ್ನು ತಿಳಿದೇ ತೀರುತ್ತೇನೆ ಎಂಬ ಧೈರ್ಯವೇ ಪ್ರತಿಯೊಬ್ಬನ ಜೀವನ ದ್ರವ್ಯವಾಗಿದೆ. ಆ ನಂಬಿಕೆಯೊಂದೇ ನಮ್ಮೆಲ್ಲರ ಬದುಕನ್ನು ಸಹ್ಯವಾಗಿಸಿದೆ ಎನ್ನಬಹುದು.

ಆದರೆ "At the end, it makes sense" , ಎಂಬ ಆಸೆ ಎಷ್ಟು ಸತ್ಯ? ನಾವು ನೋಡುತ್ತಿರುವ ಬದುಕಿಗೆ ಅದರಾಚೆಗೂ ಏನೋ ಅರ್ಥವಿದೆ ಎನ್ನುವ ಹುಡುಕಾಟಕ್ಕೆ ಕೊನೆಯಿದೆಯೇ? ಅಥವಾ ಆ ಹುಡುಕಾಟಕ್ಕೆ ನಿಜಕ್ಕೂ ಅರ್ಥವಿದೆಯೇ? ಬಹುಷಃ ಎಲ್ಲದಕ್ಕೂ ಅರ್ಥವಿದೆ, ನಮ್ಮ ಮಾತು - ನಡವಳಿಕೆಗೆಲ್ಲ ಅರ್ಥವಿರಬೇಕು, ಬದುಕಿಗೊಂದು ಗುರಿಯಿರಬೇಕು ಎಂದೆಲ್ಲ ಹಿರಿಯರು ನಮ್ಮ ಸಣ್ಣಂದಿನಲ್ಲಿ ಹೇಳಿದ್ದು ನಮ್ಮ ಈ ನಂಬಿಕೆಗೆ ಕಾರಣವಿರಬಹುದು. ಬದುಕಿಗೆ "ಇದು ಇಷ್ಟೇ" ಎಂದು ಹೇಳುವಂಥ ಅರ್ಥವಿದ್ದರೆ, ಮತ್ತೆ ಮತ್ತೆ ಎಲ್ಲರೂ ಬದುಕಬೇಕಾದ ಅವಶ್ಯಕತೆಯಿಲ್ಲ , ಬಹುಷಃ ಅರ್ಥ ಗೊತ್ತಾದ ನಂತರ ಮನುಕುಲದ ಅವಶ್ಯಕತೆಯೂ ಇಲ್ಲ!

ನಾನು ಎದುರಿಸುತ್ತಿರುವ ಸಮಸ್ಯೆ, ಬವಣೆ ಎಲ್ಲ ಕ್ಷಣಿಕ, ಅರ್ಥವಿಲ್ಲದ್ದು, ಮುಂದೊಂದು ದಿನ ಸತ್ಯದ ಬೆಳಕು ಪ್ರಕಾಶಿಸುತ್ತದೆ - ಎಂಬುದು ಶುದ್ಧ ಪಲಾಯನವಾದ. ಬದುಕು ಇರುವುದೇ ಇಂಥ ನಿರರ್ಥಕ ಇಂದಿನಲ್ಲಿ, ಈ ಕ್ಷಣವೊಂದೇ ಸತ್ಯ. ನಾಳೆ ಬೆಳಕಾಗುತ್ತದೆ, ಸತ್ಯ ದರ್ಶನವಾಗುತ್ತದೆ, ನನ್ನನ್ನು ನಾನು ಕಂಡುಕೊಳ್ಳುತ್ತೇನೆ, ಅರ್ಥದ ಬೀಗ ಒಡೆಯುತ್ತೇನೆ ಎಂಬುದೆಲ್ಲ ಭ್ರಮೆ.
ಬದುಕೆಂಬುದು ಈ ಕ್ಷಣದಲ್ಲಷ್ಟೇ ಇದೆ. ನಾಳೆ ಬದುಕುತ್ತೇನೆ, ಅರ್ಥ ತಿಳಿದ ನಂತರ ಎಂದುಕೊಂಡರೆ ಬದುಕೆಲ್ಲ ಬರಿಯ ಅನ್ವೇಷಣೆಯಲ್ಲೇ ಕಳೆದು ಹೋಗುತ್ತದೆ. ಇಡಿಯ ಬದುಕನ್ನು ಒಂದು "temporary" ಭಾವದಲ್ಲಿ ಕಳೆಯಬೇಕಾಗುತ್ತದೆ.

ಬದುಕಿನ ಸ್ವಚ್ಛ ಸಂತೋಷವಿರುವುದು ಅದರ ಸಣ್ಣ ಸಣ್ಣ ಸುಖಗಳಲ್ಲಿ. ನಿನ್ನೆ-ನಾಳೆ , ನಾನು-ಅವನೆಂಬ, ನನ್ನದು-ಪರರದ್ದು ಎಂಬ ಭೇದವಿಲ್ಲದೆ, ಇದ್ದದ್ದನ್ನು ಇದ್ದಂತೆ ನೋಡುವ ಶುದ್ಧ ದೃಷ್ಟಿ ಇದ್ದರೆ, ಸಣ್ಣ ಸಣ್ಣ , silly ಎನ್ನಬಹುದಾದ ವಿಷಯಗಳೂ ಸಂತೋಷ ಕೊಡುತ್ತವೆ. ಎಲ್ಲವನ್ನೂ ಸ್ವಂತ ಮಾಡಿಕೊಳ್ಳಲು ಹೊರಟರೆ ಕೊನೆಗೆ ಉಳಿಯುವುದು ಒಂದು ರೀತಿಯ ಅನಾಥ ಭಾವ, ಖಾಲಿತನ. ಸ್ವಂತವಾದ ಮೇಲೂ ಸ್ವಾರ್ಥ, ಅಪನಂಬಿಕೆ ಬದುಕನ್ನು ಅಸಹ್ಯವಾಗಿಸುತ್ತವೆ.

-- ಇದನ್ನೆಲ್ಲಾ ಒಂದು ಕಥೆಯಲ್ಲಿ ಹಿಡಿದಿಡಲು ಸಾಧ್ಯವೇ ಎಂದು ಯೋಚಿಸುತ್ತಿದ್ದೇನೆ! ಮತ್ತೆ ನಿರರ್ಥಕತೆಯಲ್ಲಿ ಅರ್ಥ ಹುಡುಕುವ ನನ್ನ ಅಸೆ - ಎಂದು ನಗು ಬರುತ್ತದೆ.

Aug 8, 2009

ಯಾತನೆಗೆ ಮುಗುಳ್ನಗು ಬರಲು...


"ಗಾಳಿಪಟ" ಸಿನೆಮಾದಲ್ಲಿ "ಒಂದೇ ಸಮನೆ ನಿಟ್ಟುಸಿರು" ಎಂದು ತೊಡಗುವ ಒಂದು ಹಾಡಿದೆ. ಒಂದು ರೀತಿಯ ವಿಚಿತ್ರ ಪ್ರತಿಮೆಗಳಿಂದಾಗಿ ಈ ಹಾಡು ಇಷ್ಟವಾಗುತ್ತದೆ. ಸಾಧಾರಣವಾಗಿ "ಕಾಮನಬಿಲ್ಲು, "ಕನಸಿನ ಬಣ್ಣ", "ಅಮೃತ", "ಹೊಂಗನಸು" ಮುಂತಾದ ಶಬ್ದಗಳು ಉತ್ಸಾಹ, ಪ್ರೇಮ, ಸಂತೋಷ ಮುಂತಾದ ಭಾವಗಳನ್ನು ಹುಟ್ಟಿಸಲು ಬಳಕೆಯಾಗುತ್ತವೆ. ಆದರೆ ಈ ಹಾಡಿನಲ್ಲಿ ಇದೆ ಪದಗಳನ್ನುಪಯೋಗಿಸಿ ದುಃಖ, ವಿರಹಗಳನ್ನು ಚಿತ್ರಿಸಲಾಗಿದೆ.
"ಕರಗುತಿದೆ ಕನಸಿನ ಬಣ್ಣ", "ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು", "ಜೀವ ಕಳೆವ ಅಮೃತ", "ಪ್ರಾಣ ಉಳಿಸೋ ಖಾಯಿಲೆ", "ಮುಳ್ಳಿನ ಹಾಸಿಗೆ", "ಯಾತನೆಗೆ ಮುಗುಳ್ನಗೆ", "ನಗುತಲಿದೆ ಮಡಿದ ಕವನ" - ಇಂಥ ವಿಚಿತ್ರ ಪದ ಪ್ರಯೋಗದಿಂದ ಒಂದು ರೀತಿಯ ವಿಚಿತ್ರ ಭಾವ ಸೃಷ್ಟಿಸಿದ್ದಾರೆ ಕವಿ. ಈ ವಿಚಿತ್ರ ಪ್ರತಿಮೆಗಳಿಂದಾಗಿ ಈ ಹಾಡು ಕುತೂಹಲ ಮೂಡಿಸುತ್ತದೆ.

ಹಾಡಿನ ಕೊನೆಯಲ್ಲಿ, "ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ? ಮೂರು ಸ್ವರದ ಹಾಡಿನಲ್ಲಿ ಹೃದಯವನು ಹರಿ ಬಿಡಬಹುದೇ?" ಎಂಬ ಪ್ರಶ್ನೆಯಿದೆ. ಇದು ಒಂದು ರೀತಿಯಲ್ಲಿ ಕವಿಯ "ಸೆಲ್ಫ್ ಡೌಟ್" ಎಂದನ್ನಿಸುತ್ತದೆ. ಈ ಹಾಡಿನಲ್ಲಿ ನಿಜವಾಗಿಯು ನೋವನ್ನು ಚಿತ್ರಿಸಿದ್ದೇನೋ ಅಥವಾ ವ್ಯರ್ಥ ಪದಗಳಲ್ಲಿ ಕಳೆದು ಹೋಗಿದ್ದೇನೋ - ಎಂಬ ಕವಿಯ ಸಂದೇಹ ಇಲ್ಲಿ ಕಾಣುತ್ತದೆ. ಇದೇ ಪ್ರಶ್ನೆ ಕೇಳುಗನಲ್ಲಿ ಮೂರು ಭಾವಗಳನ್ನು ಹುಟ್ಟು ಹಾಕಬಹುದು :
೧. ಸಾಧ್ಯವಿದೆಯೇ ಎಂಬ ಪ್ರಶ್ನೆ.
೨. ಸಾಧ್ಯವಿಲ್ಲ ಎಂಬ ನಿರ್ಧಾರ.
೩. ಸಾಧ್ಯವಿರಬಹುದು ಎಂಬ ಭಾವ.

ಮೇಲಿನ ಮೂರೂ ಭಾವಗಳಲ್ಲಿ ಅಲೆದಾಡಿ ಕೊನೆಯಲ್ಲಿ ಮತ್ತೆ ಪ್ರಶ್ನೆಯಾಗಿ ಉಳಿಯುತ್ತದೆ.
ಒಂದು ಸಾಧಾರಣ ವಿರಹ ಗೀತೆಗೆ ಇಷ್ಟೆಲ್ಲಾ ಭಾವ ಹುಟ್ಟಿಸುವ ಶಕ್ತಿ ಇದೆಯಲ್ಲ ಎಂದು ಆಶ್ಚರ್ಯವಾಗುತ್ತದೆ!

Jun 27, 2009

ಸಿಟ್ಟು

ತುಂಬ ಹಿಂದೆ ಬಿ.ಎಂ.ಟಿ.ಸಿ ಯಲ್ಲಿ ಆಫೀಸಿಗೆ ಹೋಗುತ್ತಿದ್ದಾಗ ಒಮ್ಮೆ, ಯಾವುದೋ ಸ್ಟಾಪಿನಲ್ಲಿ ಒಬ್ಬ ಪ್ರಯಾಣಿಕ ಬಾಗಿಲಿನ ಪಕ್ಕ ನಿಂತು ಹತ್ತುವವರಿಗೆ ಕಿರಿಕಿರಿ ಕೊಡುತ್ತಿದ್ದ ಒಬ್ಬ ಯುವಕನಿಗೆ, "ಡೋರ್ ಪಕ್ಕ ಯಾಕೆ ನಿಲ್ತೀರ? ಒಳಗೆ ಹೋಗಿ ಸಾಯಲಿಕ್ಕೆ ಏನು ನಿಮಗೆ?", ಎಂದು ಬಯ್ದ. ಯುವಕನಿಗೆ ಸಿಟ್ಟು ನೆತ್ತಿಗೇರಿತು, "ಬೆಳಿಗ್ಗೆ ಬೆಳಿಗ್ಗೆ ಸಾಯೋ ಮಾತು ಯಾಕೆ ಆಡ್ತೀರ?", ಎಂದು ಅವನು ಕಿರುಚಿದ. ಇದು ಇನ್ನೂ ಜೋರಾಗುತ್ತಿತ್ತು, ಅಷ್ಟರಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಧ್ಯ ವಯಸ್ಕನೊಬ್ಬ, "ಇಕೊಳ್ಳಿ, ಇಲ್ಲಿ ಬನ್ನಿ, ಕೂರಿ", ಎಂದು ಈಗ ತಾನೇ ಬಸ್ಸು ಹತ್ತಿದವನಿಗೆ ತನ್ನ ಪಕ್ಕ ಸೀಟು ತೋರಿಸಿ, "ನೀವು ಕಿರುಚಿದರೆ ನಿಮಗೆ ಮಾತ್ರ, ನಮಗೆ ಏನೂ ಆಗೋಲ್ಲ.", ಎಂದ. ಇವನು ಏನೋ ಸಮಜಾಯಿಷಿ ಹೇಳ ಹೊರಟವನಿಗೆ ಮಧ್ಯ ವಯಸ್ಕ, "ಎಲ್ಲಿಯವರು ನೀವು? ಕನ್ನಡ ಅಲ್ವ? ಮತ್ತೆ, ಕನ್ನಡದವರಾಗಿ ನೀವು ಹೀಗೆ ಮಾಡುವುದ?", ಎಂದು ಬುದ್ಧಿ ಮಾತು ಹೇಳಿದ.
ವ್ಯರ್ಥ ಜಗಳವಾಡುತ್ತಿದ್ದ ವ್ಯಕ್ತಿಗಳಿಬ್ಬರು ಈ ಮಧ್ಯ ವಯಸ್ಕನ ಪ್ರವೇಶದಿಂದ ಶಾಂತವಾದರು. ಕದನ ನಿಂತಿತು.

ಇವತ್ತು ಮನೆಗೆ ಬರುತ್ತಿದ್ದಾಗ, ರಸ್ತೆಯಲ್ಲಿ ಒಬ್ಬ ಆಟೋ ರಿಕ್ಷ ಚಾಲಕ ಮತ್ತೊಬ್ಬನೊಂದಿಗೆ ಜೋರು ಜೋರಾಗಿ ಕಿರುಚಾಡುತ್ತಿದ್ದ. "ಲೋಫಾರ್", "ಎಲ.ಕೆ.ಬಿ." ಎಂದೆಲ್ಲ ಮಾತು ನಡೆಯುತ್ತಿತ್ತು. ಇವರ ಹಿಂದೆ ಉದ್ದಕ್ಕೆ ಟ್ರಾಫಿಕ್ ಸ್ಥಗಿತಗೊಂಡಿತ್ತು. ಯಾರೂ ಸಮಾಧಾನ ಮಾಡುವ ಗೋಜಿಗೆ ಹೋಗಲಿಲ್ಲ. ಇಬ್ಬರೂ ಮುಷ್ಟಿ ಬಿಗಿದುಕೊಂಡು ಕೂದಲೆಳೆಯ ಅಂತರದಲ್ಲಿ ನಿಂತುಕೊಂಡು ಕಿರುಚಾಡುತ್ತಿದ್ದರು. ತಮ್ಮ ಪೌರುಷವೆಲ್ಲ ಇಷ್ಟಕ್ಕೇ, ಹೊಡೆಯುವ ಧೈರ್ಯ ತಮಗಿಲ್ಲ ಎಂಬುದು ಇಬ್ಬರಿಗೂ ಗೊತ್ತಿದ್ದಂತಿತ್ತು! "ಹೊಡೆದೇ ಬಿಡ್ತೀನಿ ನೋಡು!", ಎಂದು ಇಬ್ಬರೂ ಪರಸ್ಪರ ಬೆದರಿಕೆ ಹಾಕುತ್ತಿದ್ದರು!

ಇಂಥ ಸಿಟ್ಟು ನಿಜಕ್ಕೂ ಮುಂದಿರುವವರ ಮೇಲಲ್ಲ, ನಮ್ಮ ಬಗ್ಗೆ ನಮಗೇ ಇರುವ ಸಿಟ್ಟು ಈ ರೀತಿಯಲ್ಲಿ ಹೊರ ಬರುತ್ತದೇನೋ ಎನಿಸುತ್ತದೆ. ಕೂಡಿಟ್ಟ frustration ಈ ಬಗೆಯಲ್ಲಿ ಹೊರ ಬರುತ್ತದೆ. ಸಮಾಜದ ಬಗ್ಗೆ, ನಮ್ಮ ಹಣೆಬರಹದ ಬಗ್ಗೆ, ಬದಲಾಗದ ಪರಿಸ್ಥಿತಿಗಳ ಬಗ್ಗೆ, ಹದಗೆಟ್ಟ ಸಂಬಂಧಗಳ ಬಗ್ಗೆ, ಹೊಟ್ಟೆ ಹೊರೆಯಲಿಕ್ಕೆ ಇಲ್ಲದ ವೇಷ ಕಟ್ಟಿ ಆತ್ಮ ಮಾರಿಕೊಳ್ಳುತ್ತಿರುವ ಬಗ್ಗೆ ಒಳಗೇ ಇರುವ ಸಿಟ್ಟು, ಜಿಗುಪ್ಸೆ, ಹೇಸಿಗೆಗಳು ಒಂದು ಹೊರ ದಾರಿ ಸಿಕ್ಕಿದ ಖುಷಿಯಲ್ಲಿ ಒಮ್ಮೆಗೇ ಈ ರೀತಿಯಾಗಿ ಕಾಣಿಸಿಕೊಳ್ಳುತ್ತದೆಯೋ ಏನೋ! ಎಲ್ಲೋ ತೋರಿಸಬೇಕಾಗಿದ್ದ ಪ್ರತಿರೋಧ ರಸ್ತೆ ಮಧ್ಯೆಯ ಕಿತ್ತಾಟದಲ್ಲಿ ಹೀಗೆ ಖರ್ಚಾಗಿ ಹೋಗುತ್ತದೆ. ಎಲ್ಲೋ ಎತ್ತಬೇಕಾಗಿದ್ದ ದನಿ ಇಲ್ಲಿ ಹೀಗೆ ವ್ಯರ್ಥ ಜಗಳದಲ್ಲಿ ಹಾಳಾಗುತ್ತದೆ. ಇಂಥ ಸಿಟ್ಟನ್ನೆಲ್ಲಾ ಸರಿಯಾದ ದಿಕ್ಕಿನಲ್ಲಿ ನಿರ್ದೇಶಿಸಿದರೆ ಬಹುಷಃ ಒಂದಿಷ್ಟು ಪ್ರಯೋಜನವಾಗುತ್ತದೋ ಏನೋ?!

May 7, 2009

ಹೊಡಿ ಮಗ!

ಕೆಲವು ಹೊಸ ಕನ್ನಡ ಚಲನ ಚಿತ್ರಗಳು :
೧. ದಬ್ ಹಾಕು
೨. ಮಟಾಶ್ ಮಾಡು
೩. ಕೊಚ್ಚಿ ಹಾಕು
೪. ತಲೆ ಉರುಳಿಸು

ನಮ್ಮಲ್ಲಿ ಜನಪ್ರಿಯ ಗೀತೆಗಳನ್ನು ಚಲನ ಚಿತ್ರಕ್ಕೆ ಹೆಸರಾಗಿ ಇಡುವ ಸಂಪ್ರದಾಯ ಇರುವುದರಿಂದ ಈ ಹೆಸರುಗಳನ್ನೂ ನೋಡಬಹುದು:
೧. ತಲೆ ಬಾಚ್ಕೊಳ್ಳೋ ಪೌಡರ ಹಾಕ್ಕೊಳ್ಳೋ
೨. ಹಳೆ ಪಾತ್ರೆ, ತಗಡು, ರದ್ದಿ ಪೇಪರ್ ಇತ್ಯಾದಿ
೩. ಜಿಂಕೆ ಮರೀನಾ ಜಿಂಕೆ ಮರೀನಾ ನೀ ಜಿಂಕೆ ಜಿಂಕೆ ಮರೀನಾ...
೪. ಏನೋ ಒಂಥರಾ ಥರಾ, ಕೆರೆವೆ ನಾ ಪರಾ ಪರ.

ಪ್ಯಾಪಿಯ ಪತಂಗ | Pyapiya Patanga

ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...