Sep 28, 2013

ಅಪ್ಪ ಬಂದಿದ್ದಾಗ


This is part 1 of a 3-post series.
Jump to Part 2
Jump to Part 3


Part 1: ಅಪ್ಪ ಬರುವುದು ನನಗೆ ಮೊದಲೇ ಗೊತ್ತಿತ್ತು. ನಿನ್ನೆ ಮನೆಗೆ ಕಾಲ್ ಮಾಡಿದಾಗ ತಾಯಿ ಹೇಳಿದ್ದರು, "ನಿನ್ನ ಡೈರಿ ಓದಿದ್ದಾರೆ. ಓದಿ ಬೇಜಾರಾಗಿದೆ.". ಆದರೆ ನನ್ನ ರೂಮಿನಲ್ಲಿ ಫ್ಯಾನ್ ಸರಿಯಿಲ್ಲವೆಂದು ರೂಂ ನಂ '308' ರಲ್ಲಿ ಮಲಗಿದ್ದವನಿಗೆ ಎಚ್ಚರವಾದಾಗ ಗಂಟೆ ಏಳಾಗಿತ್ತು. ದಡಬಡಿಸಿ ಎದ್ದು ನನ್ನ ರೂಮು '312' ಕ್ಕೆ ಹೋದರೆ ಅಲ್ಲಿ ಯಾರೂ ಇರಲಿಲ್ಲ. ಅಪ್ಪ ಬರುವುದು ತಡವಾಗುತ್ತದೇನೋ ಎಂದುಕೊಂಡವನಿಗೆ ರೂಂ ಬಾಯ್ ಬಂದು 'ವಿಸಿಟರ್' ಇದ್ದಾರೆ ಎಂದಾಗ ಅದು ಅಪ್ಪನೇ ಹೌದೆಂದೆನಿಸಿತು. ಮೆಟ್ಟಿಲಿಳಿದು ರಿಸೆಪ್ಷನ್ ಪಕ್ಕ ಹೋದರೆ ಅಪ್ಪ ಅಲ್ಲಿ ಕುಳಿತಿದ್ದರು. ಅಪ್ಪ ಹಿಂದಿನ ರಾತ್ರಿ ಬಂದವರು ನನ್ನ ರೂಮಿಗೆ ಹೋಗಿ ನಾನಿಲ್ಲವೆಂದಾದಾಗ ಅಲ್ಲೇ ಮಲಗಿ ಮುಂಜಾನೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ ನನಗಾಗಿ ಕಾಯುತ್ತ ಕುಳಿತಿದ್ದರು. ನಮ್ಮ ಟ್ರೈನಿಂಗು ಅಪ ಸಮಯಗಳಲ್ಲಿ ನಡೆಯುತ್ತಿತ್ತು, ಇದು ಅವರಿಗೆ ಗೊತ್ತಿದ್ದುದರಿಂದ ನಾನು ಟ್ರೇನಿಂಗ್ ಕ್ಲಾಸಿಗೆ ಹೋಗಿರಬಹುದೆಂದೇ ಅಂದುಕೊಂಡಿದ್ದರು. "ರೂಮಿಗೆ ಬೀಗ ಹಾಕಿರಬೇಕಿತ್ತು. ಯಾರಾದರೂ ನುಗ್ಗಿ ಏನಾದರೂ ಕದ್ದರೆ?", ಎಂದರು. ವಾಸ್ತವದಲ್ಲಿ ಅವರು ಬರುವರೆಂದೇ ಬೀಗ ಹಾಕಿರಲಿಲ್ಲ. ಒಬ್ಬರಿಗೊಬ್ಬರು ಮಾತಾಡಲಿಕ್ಕೆ ಇಬ್ಬರಲ್ಲೂ ಮೊಬೈಲ್ ಫೋನ್ ಇರಲಿಲ್ಲ. ಇದನ್ನೇ ಹೇಳಿದಾಗ ತಲೆಯಾಡಿಸಿ ಸುಮ್ಮನಾದರು.
"ಹೇಗಾಗ್ತಾ ಇದೆ ಟ್ರೈನಿಂಗ್?", ಎಂದರು ಅಪ್ಪ. ನಾನು ಏನೋ ಕಚಪಚ ಉತ್ತರಿಸಿದೆ. ನನ್ನ ಸ್ನಾನ ಮುಗಿಸಿ ಇಬ್ಬರೂ ತಿಂಡಿಗೆ ಹೋದೆವು. ನನ್ನ ಸಹೋದ್ಯೋಗಿ ಮತ್ತು ಟ್ರೈನಿಂಗ್ ನಲ್ಲಿ ನನ್ನ ಸಹಪಾಠಿಯಾದ ವಸಂತ ಸಿಕ್ಕಿದ. ಅವನಿಗೆ ತಂದೆಯನ್ನೂ ತಂದೆಗೆ ಅವನನನ್ನೂ ಪರಿಚಯಿಸಿದೆ. ಉಭಯ ಕುಶಲೋಪರಿ ಆಯಿತು. ತಿಂಡಿ ಮುಗಿಸಿದಾಗ ದುಡ್ಡು ತಾವೇ ಕೊಟ್ಟರು, ನಾನೆಷ್ಟು ಹೇಳಿದರೂ ಕೇಳದೆ. ತಿಂಡಿ ಮುಗಿಸಿ ಇಬ್ಬರೂ ನನ್ನ ಟ್ರೈನಿಂಗ್ ಸೆಂಟರ್ ನತ್ತ ನಡೆದೆವು. ತಂದೆ ವಸಂತನ ಬಗ್ಗೆ ವಿಚಾರಿಸಿದರು; "ಅವನು ಐ.ಐ.ಟಿ ಖರಗಪುರ್ ನಲ್ಲಿ  ಓದಿದವನು", ಎಂದೆ. ಜೊತೆಗಿರುವವರು ಹೆಚ್ಚಿನವರೂ ಇಂಥ ಹೆಸರಾಂತ ಕಾಲೇಜುಗಳಲ್ಲಿ ಓದಿದವರು,  ಅವರೆಲ್ಲ ಹತ್ತನೇ ತರಗತಿಯಲ್ಲೇ ಎಂಟ್ರೆನ್ಸ್ ಪರೀಕ್ಷೆಗಳಿಗೆ ತಯರಾಗುತ್ತಾರೆ ಎಂದೆ. ಅಪ್ಪ ಒಮ್ಮೆ ಮೆಲ್ಲಗೆ ಕೆಮ್ಮಿ ಹೇಳಿದರು, "ನಮಗೆಲ್ಲ ಅದು ಏನು ಅಂತಲೇ ಗೊತ್ತಿಲ್ಲ. ನಮಗೆ ಹೇಳಿ ಕೊಡುವವರು ಯಾರಿದ್ದರು! ನಿನ್ನ ಕಾಲೇಜು ಲೆಕ್ಚರರ್ ಗಳಿಗೇ ಇದೆಲ್ಲ ಗೊತ್ತಿರಲಿಲ್ಲ ಅನಿಸುತ್ತೆ". ನಾನು ಹೂಂಗುಟ್ಟಿದೆ. "ಇಷ್ಟು ಆದದ್ದೇ ದೊಡ್ಡದು ನಮಗೆ", ಅಂದರು ಅಪ್ಪ.
******************************************************************************
ಪದವಿ ಪೂರ್ವ ಮೊದಲನೇ ವರ್ಷದ ರಜೆಯಲ್ಲಿ ಇಂಜಿನಿಯರಿಂಗ್ ಕೋರ್ಸಿನ ಪ್ರವೇಶ ಪರೀಕ್ಷೆಯ ಮಾದರಿ ಪತ್ರಿಕೆಗಳನ್ನು ಹಿಡಿದುಕೊಂಡು ಕುಳಿತಿದ್ದೆ. ತಂದೆ ನೋಡಿದವರು, "ಅದೆಲ್ಲ ನಮಗಾಗುತ್ತಾ ?", ಎಂದರು. ನಾನು ಸರಿ ಎಂದು ಪುಸ್ತಕ ಮುಚ್ಚಿಟ್ಟೆ . ಮತ್ತೆ ಎರಡನೇ ವರ್ಷದಲ್ಲಿದ್ದಾಗ ಪ್ರಪಂಚವೆಲ್ಲ 'ಸಿ.ಇ.ಟಿ, ಸಿ.ಇ.ಟಿ', ಎಂದು ಕುಣಿಯಿತು. ಅಪ್ಪನೂ ಕುಣಿದರು. ಸರಿ ಎಂದು ಸಿ.ಇ .ಟಿ ಬರೆದದ್ದಾಯಿತು, ranking ಬಂದದ್ದೂ ಆಯಿತು. ಆಗ ಪ್ರಪಂಚವೆಲ್ಲ "Electronics ever-green subject", ಎಂದಿತು. ತಂದೆಯೂ ಅಂದರು, ನಾನೂ ಸರಿ ಎಂದೆ. ಮನೆಯಿಂದ ಹದಿನೈದು ಕಿಲೋಮೀಟರ್ ದೂರದಲ್ಲಿದ್ದ ಕಾಲೇಜು ಶ್ರೇಷ್ಠ ಎಂದಿತು ಪ್ರಪಂಚ, ತಂದೆಯೂ ಅಂದರು.
ಈಗ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ನನ್ನನ್ನು ದುರುಗುಟ್ಟಿ ನೋಡುವುದೇಕೆ? ನನ್ನ ನಿರ್ಧಾರ ಅಲ್ಲ ಇದು, ನೀವು ಕುಣಿಸಿದ್ದು - ನಾನು ಕುಣಿದದ್ದಲ್ಲ! ನಿರ್ಧಾರ ತಪ್ಪಾಗಿದ್ದರೆ ನಿಮ್ಮದು, ನನ್ನದಲ್ಲ!

-- ಎಂದೆಲ್ಲ ಅಪ್ಪನ ಮೇಲಿನ ಸಿಟ್ಟಿನಲ್ಲಿ ಡೈರಿಯಲ್ಲಿ ಗೀಚಿದ್ದೆ. ಇದನ್ನೆಲ್ಲಾ ಅಪ್ಪ ಓದಿರುತ್ತಾರಲ್ಲ ಎಂದು ದಿಗಿಲಾಯಿತು. ಅವರು ಈಗ ತಾನೇ ಹೇಳಿದ ಮಾತು ನನ್ನ ಡೈರಿಯಲ್ಲಿದ್ದ ಪ್ರಶ್ನೆಗಳಿಗೆ ಸೂಕ್ಷ್ಮವಾಗಿ ಕೊಡುತ್ತಿರುವ ಉತ್ತರ ಎಂದೆನಿಸಿತು - "ನಮಗೆಲ್ಲ ಅದು ಏನು ಅಂತಲೇ ಗೊತ್ತಿಲ್ಲ. ನಮಗೆ ಹೇಳಿ ಕೊಡುವವರು ಯಾರಿದ್ದರು! ನಿನ್ನ ಕಾಲೇಜು ಲೆಕ್ಚರರ್ ಗಳಿಗೇ ಇದೆಲ್ಲ ಗೊತ್ತಿರಲಿಲ್ಲ ಅನಿಸುತ್ತೆ. ಮೊದಲಿನಿಂದಲೂ ಹೀಗೇ ಆಯಿತು, ಹೇಳಿ ಪ್ರಯೋಜನವಿಲ್ಲ. ನಮ್ಮ ನೆಂಟರಲ್ಲಾದರೂ ಯಾರಾದರೂ ಗೊತ್ತಿದ್ದವರಿದ್ದರೆ ಆಗುತ್ತಿತ್ತು." ನಾನು ಏನೂ ಹೇಳಲಿಲ್ಲ.

 ನಾನು ಮೊದಲಿನಿಂದಲೂ ಅಪ್ಪನೊಂದಿಗೆ ಹೆಚ್ಚು ಮಾತಾಡುತ್ತಿರಲಿಲ್ಲ. ಅವರೂ ನನ್ನಲ್ಲಿ ಅಷ್ಟಕ್ಕಷ್ಟೆ. ನಾನು ಎರಡನೆ ತರಗತಿಯಲ್ಲಿದ್ದಾಗ, ಯಾವುದೋ ಪುಸ್ತಕಗಳನ್ನ್ನು ನೋಡಿ ಚಿತ್ರ ಬಿಡಿಸಿ ಬಣ್ಣ ಹಚ್ಚಲು ಶುರು ಮಾಡಿದ್ದೆ. ಅಪ್ಪ ಅದನ್ನೆಲ್ಲ  ನೋಡಿ, "ಓದಿ first rank ಬಾ. ಚಿತ್ರ ಬಿಡಿಸಿದ್ದು ಸಾಕು." ಎಂದರು. ನಾನು ಕದ್ದು ಚಿತ್ರ ಬಿಡಿಸುವ ಅಭ್ಯಾಸ ಮುಂದುವರಿಸಿದ್ದೆನಾದರೂ ಅಪ್ಪನ ಬೆಂಬಲವಿಲ್ಲದ್ದು ನನ್ನಲ್ಲಿ ಒಂದು ರೀತಿಯ ಅಧೈರ್ಯ ಮೂಡಿಸಿತ್ತು. ಕತೆ, ಕವನ ಎಲ್ಲವೂ ಕದ್ದು ಮುಚ್ಚಿಯೇ ಬರೆಯುತ್ತಿದ್ದೆ. ಆದರೆ ಭಾಷಣ, ಚರ್ಚಾಕೂಟಗಳಲ್ಲಿ ಭಾಗವಹಿಸಲು ಒತ್ತಾಯಿಸುತ್ತಿದ್ದರು. ಮನಸಿಲ್ಲದ ಮನಸಿನಿಂದ ಭಾಗವಹಿಸುತ್ತಿದ್ದ ನನಗೆ ಮಾತು ಮರೆತು ಹೋಗುತ್ತಿತ್ತು. ಸಭೆಯ ಮುಂದೆ ಎಂದಲ್ಲ, ನಾನು ಯಾರಲ್ಲೂ ಮಾತೇ ಆಡುತ್ತಿರಲಿಲ್ಲ. ಅಪ್ಪನ ಜೊತೆ ಮೊದಲೇ ಇಲ್ಲ!

ಈಗಲೂ ಅಪ್ಪ ಮಾತಾಡುತ್ತಿದ್ದರೆ ನಾನು ಹೂಂಗುಟ್ಟುತ್ತಿದ್ದೆನಷ್ಟೆ. "ಈಗೀಗ ವ್ಯಾಪಾರವೇ ಇಲ್ಲ. ಈಗ ಊರೆಲ್ಲ ಜವಳಿ ಅಂಗಡಿಗಳು. ಸಾಲದ್ದಕ್ಕೆ ನನ್ನ ಅಂಗಡಿಗೆ ಬರುವವರೆಲ್ಲ ಸಾಲ ಕೇಳುವವರೆ.", ಎಂದರು. ನಾನು ಹೂಂಗುಟ್ಟಿದೆ. ಅಪ್ಪನ ಅಣ್ಣಂದಿರೆಲ್ಲ ಸರಕಾರೀ ನೌಕರಿ ಹುಡುಕಿ ಹೋದರೆ, ಅಪ್ಪ ವ್ಯಾಪಾರಕ್ಕೆ ಕೈ ಹಾಕಿದ್ದರು. ಹಾಕಿದ್ದಷ್ಟೆ ಅಲ್ಲ, ತಕ್ಕ ಮಟ್ಟಿಗೆ ಲಾಭದಲ್ಲೇ ನಡೆಸಿದರು ಎಂಬ ಬಗ್ಗೆ ಮನಸಿನಲ್ಲೇ ಅಭಿಮಾನ, ಹೆಮ್ಮೆ ಇಟ್ಟುಕೊಂಡಿದ್ದೆ. ಇದ್ದ ಒಂದು ಸ್ಕೂಟರನ್ನು ಮಾರಿ ಅದೇ ಹಣವನ್ನು ಬಂಡವಾಳವಾಗಿಟ್ಟುಕೊಂಡು ವ್ಯಾಪಾರ ಶುರು ಮಾಡಿದ್ದು, ಪ್ರಾರಂಭದಲ್ಲಿ ವ್ಯವಹಾರ ಕೈ ಹಿಡಿಯದೆ ಮನೆ ಖರ್ಚಿಗೂ ಒದ್ದಾಡುತ್ತಿದ್ದದ್ದು - ಎಲ್ಲವೂ ಚಿಕ್ಕವನಿದ್ದ ನನ್ನ ಮನಸಿನಲ್ಲಿ ಗಾಢ ಪರಿಣಾಮ ಬೀರಿದ್ದವು. ಪೈಸೆ ಪೈಸೆಗೂ ಲೆಕ್ಕವಿಡುವ ಅಪ್ಪನ ಗುಣದ ಬಗ್ಗೆ ಗೌರವವಿದೆ. ಅವರ ಆ ಗುಣಕ್ಕೆ ಕಾರಣವೂ ಗೊತ್ತಿದ್ದರಿಂದ ಸುಲಭವಾಗಿ ಅರ್ಥವಾಗುತ್ತಿತ್ತು. ನಾನೂ ಕೂಡ ಅವರ ಹಣವನ್ನು ವೃಥಾ ಪೋಲು ಮಾಡುತ್ತಿರಲಿಲ್ಲ. ಅವರು ನನ್ನ ಖರ್ಚಿಗೆ ಕೊಡುತ್ತಿದ್ದ ದುಡ್ಡಿನಲ್ಲಿ ಪೈಸೆ ಪೈಸೆಗೂ ಲೆಕ್ಕವಿಟ್ಟಿದ್ದೆ. ಆದರೆ ಲೆಕ್ಕಾಚಾರ ಹೆಚ್ಚಾಗಿ ತಾಯಿಯ ಆಸ್ಪತ್ರೆ ಖರ್ಚಿಗೂ ಅಪ್ಪ ಕೈ ಬಿಚ್ಚದಿರುವುದನ್ನು ಕಂಡಾಗ ಅವರ ದುರಾಸೆಯ ಬಗ್ಗೆ ಬೇಜಾರು ಹುಟ್ಟಿತ್ತು. ಈ ಬೇಜಾರನ್ನು ಡೈರಿಯಲ್ಲೂ ಇಳಿಸಿದ್ದೆ. ಮನುಷ್ಯನಿಗೆ ಹಣದ ಕೊರತೆ ಇದ್ದಾರೆ ಸಂಪಾದಿಸಿ ನೀಗಿಸಬಹುದು, ಆದರೆ ಬಡತನ ಮನಸಿನಲ್ಲಿ ಕುಳಿತಿದ್ದರೆ ಯಾವ ಸಂಪಾದನೆಯಿಂದಲೂ ನೀಗಿಸಲು ಸಾಧ್ಯವಿಲ್ಲ!

*********************************************************************************
Part 2 : ನಾನು ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿದ್ದಾಗ ನಮ್ಮ ಬಾವಿಯಲ್ಲಿ ನೀರು ಬತ್ತಿ ಹೋಗಿ, ಮನೆಯಿಂದ ಫ಼ರ್ಲಾಂಗು ದೂರದಲ್ಲಿದ್ದ ಸಾರ್ವಜನಿಕ ಬೋರ್ವೆಲ್ ನಿಂದ ನೀರು ತರುವಂತಾಯಿತು. ಆ ಬೋರ್ವೆಲ್ ಇದ್ದದ್ದು ಊರಿನ ಸಾರಾಯಿ ಅಂಗಡಿಯ ಮುಂದೆ. ಹೀಗಾಗಿ ಅಪ್ಪ ಸ್ವಂತಕ್ಕೆ ಒಂದು ಬೋರ್ವೆಲ್ ತೆಗೆಸುವುದೆಂದು ತೀರ್ಮಾನಿಸಿದರು.ಹೀಗೆ ಬೋರ್ವೆಲ್ ತೋಡಿಸುವಾಗ ನಮ್ಮ ದಂಡ ಕೊಟ್ಟಿಗೆಗೆ ಪ್ರತ್ಯೇಕವಾಗಿದ್ದ ಗೇಟನ್ನು ಮುರಿಯಬೇಕಾಗಿ ಬಂತು. ವಾಸ್ತವದಲ್ಲಿ ಊರಿನವರೆಲ್ಲ  ತಮ್ಮ ತಮ್ಮ ಹೊಲಗಳಿಗೆ ಬೇಲಿ ಹಾಕಿಕೊಂಡ ನಂತರ, ನಮಗೆ ದನಗಳಿಗೆ ಮೇವು ಹಾಕಲು ಆಗದೆ ದನಗಳನ್ನೆಲ್ಲ ಮಾರಿದ್ದೆವು. ಹೀಗಾಗಿ, ಬೋರ್ವೆಲ್ ತೆಗೆಸಿದ ನಂತರ ದನಗಳಿಲ್ಲದ ದನದ ಕೊಟ್ಟಿಗೆಗೆ ಗೇಟಿನ ಅವಶ್ಯಕತೆ ಇರಲಿಲ್ಲವಾದ್ದರಿಂದ ಅಲ್ಲಿಗೆ ಬೇಲಿ ಕಟ್ಟಿಸುವುದೆಂದು ತೀರ್ಮಾನವಾಯಿತು. ಈ ಕೆಲಸವನ್ನು ನಮ್ಮ ಎದುರು ಮನೆಯಲ್ಲಿದ್ದ ಮುದುಕನಿಗೆ ವಹಿಸಲಾಯಿತು. ಬೋರ್ವೆಲ್ ಗೆ ಮೋಟರ್ ಅಳವಡಿಸುವಾಗ ಚಿಲ್ಲರೆ ಕೆಲಸಗಳನ್ನೂ ಇದೇ ಮುದುಕನಿಂದ ಮಾಡಿಸಲಾಯಿತು.

ಇದಾದ ನಂತರ ತಾಯಿ-ತಂದೆ ನೆಂಟರೊಬ್ಬರ ಮನೆಯ ಸಮಾರಂಭವೊಂದಕ್ಕೆ ಹೋಗಿದ್ದಾಗ ಮುದುಕ ನನ್ನಲ್ಲಿ ಕೆಲಸದ ದುಡ್ಡು ಕೇಳಿದ. ನಾನು ಎಷ್ಟು ಕೊಡಬೇಕೆಂದು ತಿಳಿಯದೆ ಐವತ್ತು ರುಪಾಯಿ ಕೊಟ್ಟೆ. ತಂದೆ ತಾಯಿ ಮರಳಿದ ರಾತ್ರಿ ಊಟವಾದ ಮೇಲೆ ನಾನು, "ಎದುರು ಮನೆ ಮುದುಕನ ಕೆಲಸದ ದುಡ್ಡು ಕೇಳಿದ್ದ ನೀವು ಹೋಗಿದ್ದಾಗ", ಎಂದೆ. ಇಷ್ಟಕ್ಕೆ ಏನೋ ನಡೆಯಬಾರದ್ದು ನಡೆದಂತೆ ಅಪ್ಪ, "ನಾನೇನೂ ಓಡಿ ಹೋಗಿಲ್ಲ. ದುಡ್ಡು ಬೇಕು ಅಂತ ಯಾರೂ ಬೊಗಳಿಲ್ಲ. ನನ್ನ ಹತ್ತಿರ ಕೇಳಿದ್ರೆ ನಾನು ಕೊಡುವುದಿಲ್ವಾ?", ಎಂದೆಲ್ಲ ಹೇಳತೊಡಗಿದರು. ಮರುದಿನ ನನಗೆ ಪರೀಕ್ಷೆ ಇತ್ತು, ಮಾತು ಸುಮ್ಮನೆ ಬೆಳೆಯುತ್ತಿದೆಯೆಂದು ನಾನು, "ದುಡ್ಡು ಕೊಟ್ಟಿದ್ದೇನೆ ಅವನಿಗೆ.", ಎಂದೆ. "ನಿನಗೇನು ಅವಸರವಿತ್ತು? ಎಷ್ಟು ಕೊಟ್ಟೆ?", ಎಂದು ಗುಡುಗಿ ಪ್ರಶ್ನಿಸಿದರು ಅಪ್ಪ.
"ಐವತ್ತು ರುಪಾಯಿ.", ಎಂದೆ. ಒಡನೆ ಯಾವುದರಿಂದಲೋ ಕಚ್ಚಿಸಿಕೊಂಡವರಂತೆ ಓಡೋಡಿ ಬಂದರು, ನನಗೆ ಹೊಡೆಯಲಿಕ್ಕೆ. ನಾನು ಏಟು ತಡೆಯುವುದಕ್ಕೆ ಕೈ ಅಡ್ಡ ಹಿಡಿದು, "ಬೇಡ, ಬೇಡ", ಎಂದ ಸಿಟ್ಟು ಮತ್ತು ಉದ್ವೇಗದಲ್ಲಿ. ಯೋಚಿಸುವದರೊಳಗೆ ತಂದೆಯ ಬಲಗೈ ನನ್ನ ಎಡಗೆನ್ನೆಗೆ ಅಪ್ಪಳಿಸಿತು - ಎಲ್ಲಕ್ಕೂ ಒಂದು ಕ್ಷಣ ಫುಲ್ ಸ್ಟಾಪ್ ಬಿದ್ದಂತೆನಿಸಿತು. ತಾಯಿ ಅಳತೊಡಗಿದರು - "ಅವನು ತಿರುಗಿ ಹೊಡೆದರೆ ಏನು ಮಾಡುತ್ತೀರಿ?", ಎಂದರು, "ವಯಸ್ಸಿಗೆ ಬಂದ ಮಗನ ಮೇಲೆ ಯಾರಾದ್ರೂ ಕೈ ಮಾಡ್ತಾರ?"

ಮರುದಿನ  ಪರೀಕ್ಷೆ ಇದ್ದರೂ ನಾನು ಸುಮ್ಮನೆ ಮಲಗಿಕೊಂಡೆ. ತಾಯಿ ಬಂದು ಸಮಾಧಾನ ಮಾಡಿದರು. ನಾನು, "ಏನಿಲ್ಲ, ಹೋಗು. ಗುಡ್ ನೈಟ್.", ಎಂದೆ. ಪರೀಕ್ಷೆ ಬರೆಯುವುದಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದೆ ಎಂದೆನಿಸುತ್ತದೆ. ವಿಚಿತ್ರವೆಂದರೆ ದುಃಖ ಪಡುವ ಬದಲು ಮನಸು ಹಗುರಾದಂತೆನಿಸಿತ್ತು. ಈ ಘಟನೆಯ ಬೆಳಕಿನಲ್ಲಿ ನನ್ನ ಎಲ್ಲ ಸಮಸ್ಯೆಗಳಿಗೂ ಉತ್ತರ ಸಿಕ್ಕಿದಂತೆ ಭಾಸವಾಗುತ್ತಿತ್ತು.

ಅಪ್ಪ ನನಗೆ ಹೊಡೆಯುವುದು ಹೊಸತೇನಲ್ಲ. ಹಿಂದೆ ನಾನು ಮೂರನೇ ತರಗತಿಯಲ್ಲಿದ್ದಾಗ ತಂದೆಯ HMT ಕೈಗಡಿಯಾರ ಕೈ ಕೊಟ್ಟಿತೆಂದು ಅವರು ಹೊಸತೊಂದನ್ನು ಖರೀದಿಸಿದರು. ಹಳೆಯದು ಅವರ ಕೋಣೆಯಲ್ಲಿತ್ತು. ನಾನು ಕುತೂಹಲದಿಂದ ಅದನ್ನು ಬಿಚ್ಚಿ ನೋಡುತ್ತಿದ್ದೆ. ನನ್ನ ಕುತೂಹಲ ಅಷ್ಟಕ್ಕೇ ನಿಲ್ಲದೆ, ಒಮ್ಮೆ ನಾನು ಅದನ್ನು ಸಂಪೂರ್ಣ ಬಿಚ್ಚಿ ಅದರ ಮುಳ್ಳುಗಳನ್ನು ಒಂದೊಂದಾಗಿ ತೆಗೆದಿಟ್ಟೆ. ಮರಳಿ ಅದನ್ನೆಲ್ಲ ಜೋಡಿಸುವುದು ಅಸಾಧ್ಯವೆನಿಸುವ ಮಟ್ಟಿಗೆ ಅದರ ರೂಪವನ್ನು ಕೆಡಿಸಿಟ್ಟೆ! ಮುಂದೇನು ಮಾಡುವುದೆಂದು ತಿಳಿಯದೆ ಅದನ್ನೆಲ್ಲ ಯಥಾಸ್ಥಾನದಲ್ಲಿಟ್ಟು ನಾನು ನನ್ನ ಪಾಡಿಗಿದ್ದೆ. ಮುಂದೆ ಯಾವತ್ತೋ ಅಪ್ಪ ತಮ್ಮ ಹಳೆಯ ಕೈಗಡಿಯಾರದ ಹೊಸ ಅವತಾರವನ್ನು ಕಂಡು ಕೆರಳಿ, ಅದನ್ನು ಹಾಗೆ ಮಾಡಿದವನು ನಾನೇ ಎಂದೂ ತೀರ್ಮಾನಿಸಿ, ಅಡುಗೆ ಮನೆಯಲ್ಲಿ ಸೌದೆಯಾಗಿ ಬಳಸಲು ಇಟ್ಟಿದ್ದ ಕೋಲೊಂದರಲ್ಲಿ ನನಗೆ ಬಡಿದರು. ಆ ಕೋಲು ನನ್ನ ಎಡಗೈ ಮೂಳೆಗೆ ಬಡಿದದ್ದು ನನಗಿನ್ನೂ ನೆನಪಿದೆ.

ಇದಕ್ಕೂ ಮೊದಲು ತಂದೆ ಹೊಡೆದದ್ದುಂಟು. Social Science ಅಂತಿಮ ಪರೀಕ್ಷೆಯ ರಾತ್ರಿ ಊಟವಾಗಿ ಮಲಗಿದ್ದವನನ್ನೆಬ್ಬಿಸಿ ಪ್ರಶ್ನೆ ಪತ್ರಿಕೆ ನೋಡಿ ಪ್ರಶ್ನೆ ಹಾಕತೊಡಗಿದರು. ಎಲ್ಲವನ್ನೂ ಸರಿಯಾಗಿ ಹೇಳಿದವನು, ನಿದ್ದೆಯ ಅಮಲಿನಲ್ಲಿ cash crops ಮತ್ತು food crops ಅನ್ನು ಅದಲು ಬದಲು ಮಾಡಿ ವಿವರಣೆಯನ್ನೂ ಉದಾಹರಣೆಯನ್ನೂ ಕೊಟ್ಟುಬಿಟ್ಟೆ. ಇದಕ್ಕಾಗಿ ಹೊಡೆದದ್ದರ ಪರಿಣಾಮವಾಗಿ ಮರುದಿನ ನನಗೆ ಮೈಕೈ ನೋವು ಶುರುವಾಗಿತ್ತು!

ಒಮ್ಮೆ ತರಗತಿಗೆ ಮೂರನೇ ಸ್ಥಾನ ಬಂದಿದ್ದರೂ, ಹಿಂದಿಯಲ್ಲಿ ಹತ್ತಕ್ಕೆ ಒಂಬತ್ತೂವರೆ ಬಂದದ್ದಕ್ಕೆ ಕಾಗ ಹೂವಿನ ಗಿಡದ ಕೊಂಬೆಯಲ್ಲಿ ಹೊಡೆದರು. ಅಂದು ನಾನು ಶಾಲೆಯಿಂದ ಬಂದಾಗ ಅಪ್ಪ ಕಾಗದ ಹೂವಿನ ಗಿಡದ ಕೊಂಬೆಗಳನ್ನು ಕಡಿಯುತ್ತಿದ್ದರು. ಶಾಲೆಯಿಂದ ಬಂದವನನ್ನು ಮನೆಯ ಹೊರಗೇ ಅಂಕ ಪಟ್ಟಿ ನೋಡಿ ಕಡಿಯುತಿದ್ದ ಗಿಡದ ಕೊಂಬೆಯಲ್ಲಿಯೇ ಮಂಡಿಯ ಕೆಳಗೆ ಹೊಡೆದರು.

ಒಂದನೆ ತರಗತಿಯಿಂದ ಸುಮಾರು ಹತ್ತನೇ ತರಗತಿಯವರೆಗೆ ಈ ರೀತಿ ಹೊಡೆಯುತ್ತಿದ್ದರು. ನಂತರ ಸಿಗುತ್ತಿದ್ದದ್ದು ಹೊಡೆತವಲ್ಲ, ಬಯ್ಗುಳ. 'ಏನು ಸಾಧಿಸಿದೆ ನಿನ್ನ ಜನ್ಮದಲ್ಲಿ?', 'ಕತ್ತೆ', 'ಹ್ಯಾಪ', 'ಮೂರ್ಖ' - ಇನ್ನೂ ಎಷ್ಟೋ ಇದೇ ಜಾತಿಯ ಪದಗಳು.
'ನನಗೆ ಯಾರೂ ಹೇಳಿಕೊಟ್ಟು ಕಲಿತದ್ದಲ್ಲ. ನಾನು ಸ್ವಪ್ರಯತ್ನದಿಂದ ಓದಿದವನು.' ಎಂಬ 'ನೀನು ನನ್ನಂತಾಗಲು ಸಾಧ್ಯವಿಲ್ಲ. ಅಷ್ಟೇ ಏಕೆ ನಿನಗೆ ನನ್ನ ಅರ್ಧದಷ್ಟೂ ಯೋಗ್ಯತೆಯಿಲ್ಲ.' ಎಂಬರ್ಥದ ಎಷ್ಟೋ ಮಾತುಗಳು. ಈ ಮಾತುಗಳು ನನ್ನಲ್ಲಿ ದ್ವೇಷದ ಬದಲು ಕೀಳರಿಮೆಯನ್ನು ಹುಟ್ಟಿಸಿದವು. ಇತರರೊಂದಿಗೆ ಮಾತಾಡಲು, ಬೆರೆಯಲು ನನಗೆ ಸಾಧ್ಯವಾಗದೆ ಇದ್ದದ್ದು ನಾಚಿಕೆಯಿಂದಾಗಿ ಅಲ್ಲ, ತಲೆ ಎತ್ತಲು ಕೂಡ ಸಾಧ್ಯವಾಗದಂತೆ ಮಾಡುವ ಕೀಳರಿಮೆಯಿಂದಾಗಿ! ಈ ಕೀಳರಿಮೆ ಮತ್ತು ಭಯದ ಮೂಲ ಅಪ್ಪನ ಹೊಡೆತ ಮತ್ತು ಬಯ್ಗುಳ ಎಂದು ಈಗ ನನಗೆ ಅನಿಸುತ್ತದೆ.
*********************************************************************************
Part 3 : ಇಂಥ ಎಷ್ಟೋ ವಿಷಯಗಳನ್ನು ನನ್ನ ಡೈರಿಯಲ್ಲಿ ಬರೆದಿದ್ದೆ. ಬೆಂಗಳೂರಿನ ಐ.ಟಿ. ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿ ಕೊಯಿಂಬತ್ತೂರಿಗೆ ಟ್ರೈನಿಂಗಿಗೆ ಹೋಗಬೇಕಾಗಿ ಬಂದಾಗ ಹೊರಡುವ ಅವಸರದಲ್ಲಿ ಡೈರಿಯನ್ನು ಮನೆಯಲ್ಲೇ ಬಿಟ್ಟಿದ್ದೆ. ನಾನು ಟ್ರೈನಿಂಗಿಗೆ ಬಂದು ಒಂದು ತಿಂಗಳ ಮೇಲಾಗಿತ್ತು.
ತಾಯಿ,"ಅಪ್ಪ ನಿನ್ನ ಡೈರಿ ಓದಿದ್ದಾರೆ. ಓದಿ ಬೇಜಾರಾಗಿದೆ.", ಎಂದಾಗ ಒಂದು ಕ್ಷಣ ನನಗೆ ಭಯವಾಗಿತ್ತು. ಅಪ್ಪ ನನ್ನನ್ನು ನೋಡಲಿಕ್ಕೆ ಬರುತ್ತಿರುವುದು ಡೈರಿಯಲ್ಲಿ ನಾನು ಬರೆದಿರುವ ವಿಷಯಗಳನ್ನು ಚರ್ಚಿಸಲಿಕ್ಕೆ, ತಮ್ಮನ್ನು ತಾವೇ ಸಮರ್ಥಿಸಿಕೊಳ್ಳಲಿಕ್ಕೆ ಎಂಬುದು ನನಗೆ ಖಾತ್ರಿಯಾಗಿತ್ತು. ನಾನು ಬರೆದದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ, ನಾನು ಬರೆದದ್ದೆಲ್ಲವೂ ಸರಿ ಎಂದು ನಾನು ಅವರಿಗೆ ಮನದಟ್ಟಾಗುವಂತೆ ವಾದಿಸಬೇಕು ಎಂದು ಮನಸಿನಲ್ಲಿ ಗಟ್ಟಿ ನಿರ್ಧಾರ ಮಾಡಿಕೊಂಡಿದ್ದೆ.
*************************************************************************************
ಟ್ರೈನಿಂಗ್ ಸೆಂಟರ್ ನೋಡಿಕೊಂಡು ಸುಮ್ಮನೆ ಪಕ್ಕದ ರಸ್ತೆಯಲ್ಲಿ ನಡೆದೆವು. ಮಧ್ಯಾಹ್ನದ ಬಿಸಿಲಿಗೆ ಇಬ್ಬರೂ ಬೆವರುತ್ತಿದ್ದೆವು. ಅಪ್ಪನ ಬೊಕ್ಕತಲೆಯಲ್ಲಿ ಬೆವರು ಮೂಡಿತ್ತು. ಒಂದಷ್ಟು ಅಡ್ಡಾಡಿದ ನಂತರ ಮತ್ತೆ ನನ್ನ ಹೋಟೇಲಿನ ರೂಮಿಗೆ ಬಂದೆವು. ಅಪ್ಪ ಬ್ಯಾಗು ತೆರೆದು ತಾಯಿ ಕೊಟ್ಟು ಕಳಿಸಿದ್ದ ತಿಂಡಿಗಳನ್ನೆಲ್ಲ ನನಗೊಪ್ಪಿಸಿದರು. ಒಮ್ಮೆ ಬಾತ್ ರೂಮಿಗೆ ಹೋಗಿ ಬಂದರು. ರೂಮಿನ ಕಿಟಿಕಿಯ ಬಳಿ ನಡೆದು ಹೊರಗೆ ದಿಟ್ಟಿಸಿದರು.
"ಡೈಲಿ ನ್ಯೂಸ್ ಪೇಪರ್ ಓದ್ತಾ ಇದ್ದೀಯ?" ಎಂದು ಕೇಳಿದರು. ನಾನು ಹೂಂಗುಟ್ಟಿದೆ. ಮೇಜಿನ ಮೇಲಿದ್ದ "ಹಿಂದೂ" ಪತ್ರಿಕೆಯನ್ನೊಮ್ಮೆ ದಿಟ್ಟಿಸಿದರು. ನಂತರ, "ನಾನಿನ್ನು ಹೊರಡ್ತೀನಿ." ಎಂದರು. ನಾನು, "ಇಷ್ಟು ಬೇಗ?" ಎಂದೆ. ಅಪ್ಪ, "ನಾನು ಏನು ಮಾಡೋದು ಇಲ್ಲಿ? ನೋಡಬೇಕೆನಿಸಿತು - ಬಂದೆ. ಅಷ್ಟೆ, ಮತ್ತೇನಿಲ್ಲ.", ಎಂದರು. Nervous ಆಗಿ ಮೆಲುನಗೆ ಬೀರಿ, "ಬರ್ತೀಯ bus stand ವರೆಗೆ?", ಅಪ್ಪ ಕೇಳಿದರು. ನಾನು ಜೊತೆಗೆ ಹೊರಟೆ. ಇಬ್ಬರೂ ಮತ್ತೆ bus stand ನಟ್ಟ ನಡೆದೆವು. "ಇಲ್ಲಿಂದ ಯಾವುದು ಬಸ್ಸು?", ಎಂದೆ ನಾನು. "ಇಲ್ಲಿಂದ ಸತ್ಯಮಂಗಲ. ಅಲ್ಲಿಂದ ಮೈಸೂರಿಗೆ ಬಸ್ಸು ಸಿಗುತ್ತದೆ." ಅಂದರು, "ನಾನು ಎಷ್ಟೋ ಸಲ ಬಂದಿದ್ದೇನೆ ಇಲ್ಲಿಗೆ." ಎಂದರು 'ನಾನು ನೋಡದ ಊರೇನಲ್ಲ.' ಎಂಬ ಧಾಟಿಯಲ್ಲಿ. ನಾನು ತಲೆಯಾಡಿಸಿದೆ.
Bus stand ನ ಪಕ್ಕ ತಲುಪಿದಾಗ, "ನೀನಿನ್ನು ಹೋಗು." ಎಂದರು. ನಾನು ನಿಂತಿದ್ದೆ, ಸತ್ಯಮಂಗಲಕ್ಕೆ ಯಾವುದೋ ಬಸ್ಸು ಬಂತು. ಅಪ್ಪ, "ಸರಿ. ನಾನು ಹೋಗ್ತೀನಿ. ನೀನು ಹೊರಡು." ಎಂದರು. ನಾನು bus stand ನ ಹೊರಗೆ ನಿಂತೆ. ಹತ್ತಿಪ್ಪತ್ತು ನಿಮಿಷಗಳಲ್ಲಿ ಅಪ್ಪ ಕುಳಿತಿದ್ದ ಬಸ್ಸು ಮೆಲ್ಲನೆ ಹೊರಟಿತು. ಬಸ್ಸು ದೃಷ್ಟಿಯಿಂದ ಮರೆಯಾಗುವವರೆಗೂ ಅಲುಗಾಡದೆ ನಿಂತಿದ್ದವನಿಗೆ ಒಮ್ಮೆಲೇ ಅಪ್ಪ ಬಂದದ್ದು ಕನಸಿನಲ್ಲಿ ನಡೆದಂತೆನಿಸಿ ಆಡದೆ ಉಳಿದ ಮಾತುಗಳೆಲ್ಲ ಉಕ್ಕುಕ್ಕಿ ಬಂದು ಗಂಟಲು ಕಟ್ಟಿದಂತೆನಿಸಿ ಬಿಕ್ಕಿಬಿಕ್ಕಿ ಅಳತೊಡಗಿದೆ, bus stand ಎಂಬುದನ್ನೂ ಮರೆತು. ಅಪ್ಪನ ಬೊಕ್ಕತಲೆಯಲ್ಲಿ ಕುಳಿತಿದ್ದ ಬೆವರಸಾಲು ಮತ್ತೆ ಮತ್ತೆ ಕಣ್ಣಿಗೆ ಕಟ್ಟಿದವು. ನಾನವನ್ನು ಒರೆಸಿ ತೆಗೆಯಬೇಕಿತ್ತು! 'ಆದದ್ದೆಲ್ಲ ಒಳ್ಳೆಯದಕ್ಕೆ. ಪರವಾಗಿಲ್ಲ ಬಿಡಿ.' ಎನ್ನಬೇಕಿತ್ತು. ಹೊರಡುವಾಗ ಕೈಯನ್ನಾದರೂ ಹಿಡಿದುಕೊಳ್ಳಬೇಕಿತ್ತು. ಭುಜ ಅದುಮಬಹುದಿತ್ತು. ಕೊನೆ ಪಕ್ಷ ಟಾಟಾ ಆದರೂ ಮಾಡಬೇಕಿತ್ತು. 'ಬಂದದ್ದು ಖುಷಿಯಾಯಿತು' ಎನ್ನಬೇಕಿತ್ತು, ಬೆವರಿದವರಿಗೆ ಒಂದು ಗ್ಲಾಸು ನಿಂಬೆ ಷರಬತ್ತಾದರೂ....!
************************************************************************************

You might also like: ಹಾಗಲಕಾಯಿ